ಶುಕ್ರವಾರ, ಮಾರ್ಚ್ 17, 2017

ಮಾಘಮಾಸ
ಡಾ ಆರತಿ
ಮಾಘಮಾಸಕ್ಕೆ ಹಿಂದು ಸಂಸ್ಕೃತಿಯಲ್ಲಿ  ತುಂಬ ಪ್ರಾಶಸ್ತ್ಯವಿದೆ. ಮಾಘಮಾಸವು ವಸಂತಋತುವಿನ ಪ್ರಾರಂಭಕಾಲ ಎನ್ನಬಹುದು, ಆಗತಾನೆ ಮಾರ್ಗಶೀರ್ಷದ ಚಳಿಯು ತಗ್ಗಲಾರಂಭಿಸಿದ್ದು, ಸಂಕ್ರಾಂತನಾದ ಸೂರ್ಯನು ತನ್ನ ಬೆಚ್ಚನೆಯ ರಶ್ಮಿಗಳನ್ನು ಹೆಚ್ಚುಹೆಚ್ಚಾಗಿ ಚಾಚುತ್ತ, ದಿನಗಳ ಅವಧಿಯನ್ನು ಹೆಚ್ಚಿಸುತ್ತ ಹೋಗುವ ಉತ್ತರಾಯಣಪುಣ್ಯಕಾಲದ ಪ್ರಾರಂಭದ ಭಾಗ ಇದು. ಮಾಸದ ಅಧಿದೇವನು ಸೂರ್ಯ. ಇದನ್ನು ಮಾಧವನ ಮಾಸ ಎಂದು ಕರೆದರೂ, ಅಲ್ಲಿ ಮಾಧವನೂ ಸೂರ್ಯನಾರಾಯಣನಾಗಿಯೇ ಕಂಗೊಳಿಸುವನು. ಮಾಘಭಾನುವಾರಗಳು ತೀರ್ಥಾಟನ, ತೀರ್ಥಸ್ನಾನ, ಧ್ಯಾನ, ಜಪ, ತಪ, ದಾನ, ಧರ್ಮಗಳಿಗೆ ತುಂಬ ಪ್ರಶಸ್ತ ಎಂದು ಆಸ್ತಿಕರು ನಂಬುತ್ತಾರೆ. ಮಾಘಮಾಸದ ಹುಣ್ಣಿಮೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವಿದೆ. ದಿನವಿಡೀ ಮಹಾವಿಷ್ಣುವು ಚಿನ್ಬ್ಮಯನಾಗಿ ಗಂಗಾಜಲದಲ್ಲಿ ವಾಸಿಸುತ್ತಾನೆಂದು ನಂಬಿಕೆ. ಹಾಗಾಗಿ ಗಂಗಾಸ್ನಾನ ಅಥವಾ ಗಂಗಾಸ್ಪರ್ಶವನ್ನಾದರೂ ಮಾಡುವುದು ಪದ್ಧತಿ. ಹುಣ್ಣಿಮೆಯಂದು ಪಿತೃತರ್ಪಣಾದಿಗಳನ್ನೂ ಹಲವರು ಮಾಡುತ್ತಾರೆ
ನದಿಗಳ ತಟಗಳಲ್ಲಿನ ಉತ್ತರಭಾರತದ ಕ್ಷೇತ್ರಗಳಲ್ಲಿ ಗಂಗಾದಿ ತೀರ್ಥಗಳ ಸ್ನಾನವು ಪ್ರಸಿದ್ಧವಾಗಿರುವಂತೆ, ದಕ್ಷಿಣಭಾರತದಲ್ಲಿ ಸತ್ಯನಾರಾಯಣ ಫುಜೆ, ಕಥಾಶ್ರವಣಗಳು ಹೆಚ್ಚು ಪ್ರಸಿದ್ಧ. ಪ್ರಯಾಗಕ್ಷೇತ್ರದಲ್ಲಿ ಆಚರಿಸಲಾಗುವ ಮಾಘ-ಉತ್ಸವದಲ್ಲಿ ಜನಸ್ತೋಮವೇ ನೆರೆಯುತ್ತದೆ. ಕಲ್ಪವಾಸಎಂಬ ವ್ರತವನ್ನು ಮಾಘಮಾಸದುದ್ದಕ್ಕೂ ಆಚರಿಸುವ ಆಸ್ತಿಕರಿದ್ದಾರೆ.
ಮಾಘಮಾಸದ ಪ್ರಾರಂಭದಲ್ಲೇ ಮಕರಸಂಕ್ರಾಂತಿ ಹಬ್ಬ ಬರುತ್ತದೆ. ಭಾರತದಾದ್ಯಂತ ಅತ್ಯಂತ ಪ್ರಶಸ್ತವೆನಿಸಿರುವ ದಿನ, ಹಲವಾರೌ ಬಗೆಯ ಧಾರ್ಮಿಕ ಸಾಂಸ್ಕೃತಿಕ ಕಲಾಪಗಳಿಗೆ ಪ್ರಸಿದ್ಧ. ಧಾನ್ಯಪೂಜೆ, ಗೋಪೂಜೆ, ಸೂರ್ಯ ಪೂಜೆ, ಭೂಮಿ ಪೂಜೆ, ಮೆರವಣಿಗೆ, ಇತ್ಯಾದಿಗಳು ನಡೆಯುವ ಸುಗ್ಗಿಯ ಹಬ್ಬ ಇಂದಿಗೂ ಸರ್ವರಿಗೂ ಅತ್ಯಂತ ಪ್ರಿಯವಾದದ್ದು. ಕರ್ನಾಟಕದಲ್ಲಿ ಎಳ್ಳು ಕೊಟ್ಟು ಒಳ್ಳೆಯ ಮಾತನಾಡಿ ಸಂಬಂಧಗಳನ್ನು ಸುಂದರವೂ ಸುದೃಢವೂ ಮಾಡಿಕೊಳ್ಳುವ ಪುಣ್ಯಕರದಿವಸ ಇದು,
ಮಾಘಮಾಸದ ಪ್ರಮುಖ ಸೂರ್ಯನ ಹಬ್ಬಗಳಲ್ಲಿ ಮತ್ತೊಂದು ರಥಸಪ್ತಮಿ. ಹಲವು ಪ್ರದೇಶಗಳಲ್ಲಿ ಇದನ್ನು ಸೂರ್ಯಜಯಂತೀ ಎಂದು ಕರೆಯಲಾಗುತ್ತದೆ. ದಿನದಂದು ಸೂರ್ಯನ ಕಿರಣಗಳು ಅತ್ಯಂತ ಆರೋಗ್ಯವರ್ಧಕ ಎಂದು ನಂಬಲಾಗುತ್ತದೆ. ಸೂರ್ಯನಿಗೆ ಪ್ರತೀಕವಾದ ಅರ್ಕ (ಎಕ್ಕ) ಎಲೆಗಲನ್ನು ತಲೆ, ಭುಜ, ತೊಡೆಗಳ ಮೇಲಿಟ್ಟುಕೊಂದು ಅಭ್ಯಂಗಸ್ನಾನ ಮಾಡುವ ಪದ್ಧತಿ ಭಾರತದ ಬಹುಭಾಗಗಳಲ್ಲಿ ಸರ್ವೇಸಾಮಾನ್ಯ.
ಮಾಘಮಾಸದ ಮತ್ತೊಂದು ಪ್ರಸಿದ್ಧ ಆಚರಣೆ ಮಹಾಶಿವರಾತ್ರಿ. ವರ್ಷದ ಪ್ರತಿಮಾಸದ ತ್ರಯೋದಶಿಯೂ ಮಾಸಶಿವರಾತ್ರಿಯಾಗಿ ಆಚರಣೆಯಲ್ಲಿದ್ದರೂ, ಮಾಘಮಸದ ಶಿವರಾತ್ರಿಗೆ ಅತ್ಯುನ್ನತ ಪ್ರಾಶಸ್ತ್ಯ. ತ್ಯಾಗ, ವಿರಕ್ತಿ, ಆತ್ಮಧ್ಯಾನಾದಿಗಳನ್ನು ಪ್ರತೀಕಿಸುವ ಪರಶಿವನನ್ನು ಅದೇ ಕಲಾಪಗಳ ಮೂಲಕ ಆರಾಧಿಸಲಾಗುತ್ತದೆ. ಆದಿನ ಉಪವಾಸ, ದಿನರಾತ್ರಿ ಹ್ಜಾಗರಣೆ, ನಾಲ್ಕು ಜಾವಗಳ ಶಿವಪೂಜೆ, ಉತ್ಸವ, ಜಪತಪಗಳ ಮೂಲಕ ಮಹಾಶಿವರಾತ್ರಿಯನ್ನು ಆಚರಿಸುವ ಆಸ್ತಿಕರೂ ಇಂದಿಗೂ ಅಸಂಖ್ಯರಿದ್ದಾರೆ. ಹಗಲುರಾತ್ರಿಗಳ ಭೇದವನ್ನು ಹೋಗಲಾಡಿಸಿ ಎಲ್ಲೆಲ್ಲೂ ದಿವ್ಯಾನಂದದ ಚಟುಇವಟಿಕೆಗಳಿಂದ ಕಂಗೊಳಿಸುವ ದಿನವಿದು-ಮಹಾಶಿವರಾತ್ರಿ.
ಮಾಘಮಾಸದ ಶುಕ್ಲ ಪಂಚಮಿಯು ವಸಂತಪಂಚಮೀ ಅಥವಾ ಶ್ರೀಪಂಚಮೀ ಎಂದು ಪ್ರಸಿದ್ಧ. ಉತ್ತರಭಾರತದಲ್ಲಿ ಇದು ಸರಸ್ವತೀ ಪೂಜೆಯ ದಿನ. (ದಕ್ಷಿಣಭಾರತದಲ್ಲಿ ಶರನ್ನವರಾತ್ರದಲ್ಲಿ ಸರಸ್ವತಿಯನ್ನು ಪೂಜಿಸುವಂತೆ) ದಿನ ಪೂರ್ವೋತ್ತರ ಭಾರತದಲ್ಲಿ ಪುಸ್ತಕ ಲೇಖನಿಗಳನ್ನು ಒರೆಸಿ, / ತೊಳೆದಿಟ್ಟು ಪೂಜಿಸಲಾಗುತ್ತದೆ. ದಿನ ಯಾವ ಅಧ್ಯಯನ ಅಥವಾ ಅಥವಾ ಬರವಣಿಗೆ ಮಾಡಲಾಗುವುದಿಲ್ಲ, ಸರಸ್ವತಿಯ ಹೋಮ, ಪೂಜೆ, ಭಜನೆ, ಗೀತವಾದ್ಯನೃತ್ಯಸೇವೆ, ದಾನ, ಧ್ಯಾನ, ಪಾರಾಯಣ, ಭೋಜನಕೂಟಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆಸರಸ್ವತೀ ದೇವಿಗೂ ಹಳದಿಯ ಉಡುಪನ್ನು ತೊಡಿಸಿ, ಕೇಸರಿಯ ಗಂಧ ಹಾಗೂ ಬಣ್ಣಗಳುಳ್ಳ ಅನ್ನವನ್ನೇ ನಿವೇದಿಸಿ, ಹಳದಿಯ ಹೂವುಗಳನ್ನು ತೊಡಿಸಿ ಪೂಜಿಸಿ ಭಕ್ತರೂ ತಾವೂ ಹಳದಿ ಉಡುಪನ್ನೂ, ಹೂವುಗಳನ್ನೂ, ಹಳದಿ ಬಣ್ಣದ ತಿನಿಸು, ಸಿಹಿಗಳನ್ನೇ ತಿನ್ನುತ್ತಾರೆ. ಸ್ತ್ರೀಯರು ’ಯವ’ ಪರಾಗ ಮತ್ತು ಕಾಷ್ಠಗಳನ್ನು(ಹಳದಿ ಹೂವುಗಳ ಕಡ್ಡಿಗಳು) ನೆಲದ ಮೇಲೆ ಹರಡಿ ಅದರ ಮೇಲೆ ಹೊರಲಾಡಿ, ಸಂತಾನಭಾಗಕ್ಕಾಗಿ ಮನ್ಮಥನನ್ನು ಪ್ರಾರ್ಥಿಸುತ್ತಿದ್ದರಂತೆ. ಈ ದಿನದಂದು ಸಾಸಿವೆ ಎಣ್ಣೆಯನ್ನು ಅಥವಾ ಸಾಸಿವೆಯನ್ನು ಅರಿದು ಅದನ್ನು ಮೈಗೆ ಲೇಪಿಸಿ ಸೂರ್ಯನ ಬಿಸಿಲಲ್ಲಿ ನದೀಸ್ನಾನ ಮಾಡುವುದು ಸರ್ವರೋಗನಿವಾರಕ ಎಂಬ ನಂಬಿಕೆ ಇದೆ
ಸೂರ್ಯನನ್ನು, ಸರಸ್ವತಿಯನ್ನು, ವಿಷ್ಣುವನ್ನು ಒಲಿಸಲು ಜನರು ತಮ್ಮ ಅಭೀಷ್ಟವನ್ನು ಮೆಲುದನಿಯನ್ನು ಗಾಳಿಪಟಕ್ಕೆಹೇಳಿ’ , ಅವುಗಳನ್ನು ಎತ್ತರೆತ್ತರಕ್ಕೆ ಹಾಯಿಸುತ್ತಾರೆ. ಬಿಹಾರ, ಪಂಜಾಬ್, ನೇಪಾಳ ಮುಂತಾದ ಹಲವು ಪ್ರದೇಶಗಳಲ್ಲಿ ಇದೂ ಸಂಕ್ರಂತಿಯಂತೆಯೇ ಸುಗ್ಗಿಯ ಹಬ್ಬದ ಮುಂದುವರೆದ ಭಾಗ
ಪ್ರಾಚೀನಕಾಲದ ಜನಪ್ರಿಯ ಹಬ್ಬಗಳ ಪೈಕಿ ಇದು ಒಂದು. ತಮ್ಮ ಶೃಂಗಾರಪ್ರಸಂಗಗಳನ್ನು ಹೆಣೆಯಲು ಕವಿಗಳು ವಸಂತಪಂಚಮಿ ಹಾಗೂ ವಸಂತದ ಇತರ ಹಬ್ಬಗಳನ್ನು ವೇದಿಕೆಯಾಗಿ ಬಳಸುವ ಪ್ರಸಂಗಗಳು ಬಹಳ. ರತಿಮನ್ಮಥರ ಆರಾಧನೆಗೆ ಪ್ರಶಸ್ತ ಕಾಲ ಇದು. ಕಾಮದೇವನ ಆರಾಧಕರಾದ ನಟನರ್ತಕಿಯರಿಗೂ ದೇವಾಂಗನೆಯರಿಗೂ ಕಾಲದಲ್ಲಿ ಪ್ರಶಸ್ತಿಗಳು, ಕಾಣಿಕೆ ಭೋಜನಾದಿಗಳನ್ನು ನೀಡಲಾಗಿ, ಅವರ ಪ್ರತಿಭೆಯನ್ನು ಪುರಸ್ಕರಿಸಲಾಗುತ್ತಿತ್ತು. ಕವಿ, ಕಲಾವಿದರನ್ನು ಆಹ್ವಾನಿಸಿ ಗೀತನೃತ್ಯಕಾವ್ಯವಿನೋದಗಳನ್ನು ಏರ್ಪಡಿಸಿ ಸಾವಿರಾರು ನಾಗರಕರು ಸೇರಿ ನಕ್ಕು ನಲಿದು ಸಂಭ್ರಮಿಸುತ್ತಿದ್ದ ಉಲ್ಲೇಖಗಳನ್ನು ಹೇರಳವಾಗಿ ಕಾಣಬಹುದು. ಇಂತಹ ವಸಂತೋತ್ಸವಗಳನ್ನು ನಾಗರಕರು ಆಚರಿಸಬೇಕಾದ ವಿಧಾನ ಹಾಗೂ ವಿವರಗಳನ್ನೇ ಒಳಗೊಂಡಂತಹ ಪ್ರತ್ಯೇಕ ಅಧ್ಯಾಯವೇ ವಾತ್ಸ್ಯಾಯನ ಮಹರ್ಷಿಯ ಕಾಮಸೂತ್ರದಲ್ಲಿದೆ, ಎಂದ ಮೇಲೆ, ಆಚರಣೆಗಳ ಜನಪ್ರಿಯತೆ ಸುಸ್ಪಷ್ಟವಾಗುತ್ತದೆ. ಮಾನಿನಿಯರು, ಗುಂಪುಗಟ್ಟಿ ಹಾಡುತ್ತ ಕುಣಿಯುತ್ತ, ಅರಮನೆಯಂಗಳದ ಮಾವಿನ ತಳಿರುಮಂಜರಿಗಳನ್ನು ಬಿಡಿಸಿ, ಹಿತ್ತಾಳೆಯ ಪಾತ್ರೆಗಳಲ್ಲಿ ತುಂಬಿ, ಮನ್ಮಥಸ್ವರೂಪಿಯಾದ ರಾಜನಿಗೆ/ ಅಥವಾ ತಮ್ಮ ಯಜಮಾನನಿಗೆ ಅರ್ಪಿಸಿ ಅವನ ಆಶೀರ್ವಾದವನ್ನು ಪಡೆಯುತ್ತಿದ್ದರಂತೆ. ಮದುವೆಗಳಿಗೂ, ಮೊದಲ ಮಿಲನಕ್ಕೂ, ನವವಧೂವರರ ಮನೋರಂಜನೆಗೂ, ಗೀತನೃತ್ಯವಿನೋದಾದಿಗಳಿಗೂ ಹೇಳಿಮಾಡಿಸಿದ ಕಾಲ ಇದು, ಇಲ್ಲಿಂದ ಪ್ರಾರಂಭವಾಗುವ ವಸಂತದ ಸಂಭ್ರಮವು ಹೆಚ್ಚುಕಡಿಮೆ ವೈಶಾಖಮಾಸದ ವರೆಗೂ ಅವಿರತವಾಗಿ ಒಂದಲ್ಲ ಒಂದು ಹಬ್ಬವಾಗಿ ಮರುಕಳಿಸುತ್ತಲೇ ಹೋಗುತ್ತದೆ.
ವಸಂತಪಂಚಮಿಗಾಗಿಯೇ ತಯಾರಿಸುವವಾಸಂತಿ-ವಸ್ತ್ರಭೂಷಗಳೆಂದು’  ಹೆಂಗಳೆಯರು ಧರಿಸುತ್ತ, ವಾಸಂತೀ ರಾಗಗಳ ವಾಸಂತಿ ಗೀತೆಗಳನ್ನು ಹಾಡುತ್ತಿದ್ದರೆನ್ನುವ ಉಲ್ಲೇಖಗಳಿವೆ. ಇಂದಿಗೂ ವಸಂತ, ಬಸಂತ್ ಮಧುಮಾದ್, ಹಿಂದೋಳ ಮುಂತಾದ ರಾಗಗಳ ನಾಮಾಂಕಿತಗಳು ಇವು ವಸಂತಸಂಬಂಧಿಯಾದವು ಎನ್ನುವುದನ್ನು ಧ್ವನಿಸುತ್ತವೆ. ವಸಂತಮಾಸದಲ್ಲಿ ಎಲ್ಲೆಲ್ಲೂ ಕಾಣುವ ಸಾಸಿವೆ ಹೂವುಗಳ ಪರಾಗದ ಹಳದಿಯನ್ನೇ ಸಂಕೇತಿಸುವ ಹಳದಿ ಬಣ್ಣದ ಉಡುಪು ವಾಸಂತೀವಸ್ತ್ರಗಳೆನಿಸುತ್ತವೆ. ವಸಂತ ಪಂಚಮಿಯಂದು ಹಳದೀ ಬಣ್ಣದ ಕೆಂಪು ಅಂಚಿನ ಅಥವಾ ಕೆಂಪು ಚುಕ್ಕೆಗಳುಳ್ಳ ಸೀರೆಯನ್ನೇ ಉಟ್ಟು, ಕನ್ಯಾಮಣಿಗಳು ಸರಸ್ವತಿಯ ಕಲಶದ ಸುತ್ತ ನರ್ತಿಸುವ ಸಂಭ್ರಮದ ಆಚರಣೆ ಪೂರ್ವಭಾರತದಲ್ಲಿ ಇಂದಿಗೂ ಕಾಣಬರುತ್ತದೆ.
ವಸಂತಪಂಚಮಿಯಿಂದ ಹಿಡಿದು ಹೋಳಿಹಬ್ಬದ ಹುಣ್ಣಿಮೆಯ ವರೆಗೂ ರತೀದೇವಿಯು ತಪಸ್ಸನ್ನು ಮಾಡಿ, ಶಿವನ ನೇತ್ರಾಗ್ನಿಯಿಂದ ಸುಟ್ಟು ಹೋದ ತನ್ನ ಗಂಡ ಮನ್ಮಥನನ್ನು ಮರಳಿ ಬದುಕಿಸಿಕೊಂಡಳು ಎನ್ನುವ ಕಥೆಯೂ ಜನಜನಿತವಾಗಿದೆ. ವಸಂತಪಂಚಮಿಯಂದು ಹೋಳಕೆಯ ಮೂರ್ತಿಯನ್ನು ಕಟ್ಟಿಗೆ, ಹತ್ತಿ, ಬಟ್ಟೆ, ಮೇಣ ಇತ್ಯಾದಿ ವಸ್ತುಗಳಿಂದ ಮಾಡಿ, ಅದಕ್ಕೆ ದಿನ ದಿನವೂ ಹೆಚ್ಚು ಕಟ್ಟಿಗೆ ಕಾಷ್ಠಗಳನ್ನು ಸೇರಿಸುತ್ತ ದೊಡ್ಡ ರಾಶಿಯನ್ನೇ ಮಾಡುತ್ತ , ಕೊನೆಗೆ ಹೋಳಿಯ ದಿನ ಅದನ್ನೆಲ್ಲ ಸುಟ್ಟು, ’ಕೆಟ್ಟಕಾಮವನ್ನು ಸುಟ್ಟು’ ,’ ದಿವ್ಯನಾದ ಕಾಮನನ್ನು ಮರಳಿ ಪಡೆಯುವ’ ಪದ್ಧತಿ ಇದೆ! ಕೊಳಕು ಕಾಮವು ನಾಶವಾದಾಗ, ಹುಟ್ಟುವುದೇ ಸುಸಂಸ್ಕೃತವಾದ ಕಾಮ ಸರ್ವದಾ ಸ್ವೀಕಾರ್ಯ ಎಂಬ ಬಂದುರವಾದ ಭಾವ ಇಲ್ಲಿದೆ.
 ಮಾಘಮಾಸದ ಹುಣ್ಣಿಮೆಯು ಭಾರತಹುಣ್ಣಿಮೆ ಎಂದೂ ಪ್ರಸಿದ್ಧ. ಮಾಘಹುಣ್ಣಿಮೆಯಂದು ಕೃಷ್ಣರಾಧೆಯರ ರಾಸನೃತ್ಯಕೇಳಿಗಳನ್ನು ಅಭಿನಯಿಸುತ್ತ ರಾತ್ರಿಗಳನ್ನು ಉತ್ಸವದಲ್ಲಿ ಕಳೆಯುವ ಪದ್ಧತಿ ಸಾಕಷ್ಟು ಪುರಾತನವಾದದ್ದು. ಇಂದಿಗೂ ಬೃಂದಾವನ, ಮಥುರಾ, ದ್ವಾರಕಾ ಮುಂತಾದ ಕ್ಷೇತ್ರಗಳಲ್ಲಿ ರಾತ್ರಿ ಇಡೀ ಉತ್ಸವಗಳು ಜರುಗುತ್ತವೆ. ಈ ಹುಣ್ಣಿಮೆ ಬೌದ್ಧರಿಗೆ ತುಂಬ ವಿಶೇಷವಾದದ್ದು.
ಬೌದ್ಧರು ಸೂರ್ಯಾಸ್ತದ ನಂತರ ಗುಂಪುಗಳಲ್ಲಿ ಸೇರಿ ಮೇಣದ ಬತ್ತಿಗಳನ್ನು ಬೆಳಗಿ, ಬುದ್ಧನ ಸಂದೇಶಗಳ ಧ್ಯಾನ, ಪ್ರವಚನ, ಸಹಭೋಜನ, ಪಾರಾಯಣ, ಭಜನ ಮುಂತಾದ ಕಲಾಪಗಳಲ್ಲಿ ತೊದಗುತ್ತಾರೆ. ಥಾಯ್ಲೆಂಡ್ ಮುಂತಾದ ಬೌದ್ಧದೇಶಗಳಲ್ಲಿ ದಿನವೂ ದೊಡ್ಡ ಹಬ್ಬವು ರಜದಿನವೂ ಆಗಿದೆಯಂತೆ. ಇದನ್ನು ಮಾಖಾ ಭೂಚಾ (ಮಾಘ ಪೂಜಾ ಎಂಬುದರ ಅಪಭ್ರಂಶ) ಎಂದು ಕರೆಯುತ್ತಾರೆ. ಭಿಕ್ಷುಗಳು ತಮ್ಮ ಸಂಘಸಂಸ್ಥೆಗಳ ಪ್ರಧಾನ ಸಭೆಗಳನ್ನು ದಿನ ನಡೆಸುತ್ತಾರೆ, ನೂತನ ಕಾಯಿದೆಗಳನ್ನು ಜಾರಿಗೆ ತರುತ್ತಾರೆ, ಹೊಸಸಂಕಲ್ಪಗಳನ್ನು ಮಾಡುತ್ತಾರೆ ಕೂಡ.
ಒಟ್ಟಿನಲ್ಲಿ ಮಾಘಮಾಸದಲ್ಲಿ ಚಳಿಗಾಲದಲ್ಲಿ ಆವರಿಸಿದ ತಮಸ್ಸು ಕಳಚಿ, ಲವಲವಿಕೆಯ ನವಚೈತನ್ಯ ತುಂಬಿಬರುತ್ತದೆ. ಮಾಘಭಾನುವು ನಮ್ಮನ್ನೆಲ್ಲ ತನ್ನ ಕೃಪಾಕಿರಣಗಳಿಂದ ನಮ್ಮ ಒಳಹಿರಗಿನ ತಮಸ್ಸನ್ನು ಅಳಿಸಿ ಉದ್ಧರಿಸಲಿ ಎಂದು ಪ್ರಾರ್ಥಿಸೋಣ
Published in  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ