ಶುಕ್ರವಾರ, ಮಾರ್ಚ್ 17, 2017

ತನ್ನ ಏಳ್ಗೆಗೆ ತಾನೆ ಶಿಲ್ಪಿ
'ಜೀವನದಲ್ಲಿ ಮೇಲೆ ಬರಬೇಕಾದರೆ ಹೊರಗಡೆಯ ಪರಿಸ್ಥಿತಿ, ಅನುಕೂಲಗಳು, ಪ್ರೋತ್ಸಾಹ, ಅವಕಾಶಗಳು ಮೆಚ್ಚುಗೆ ಇತ್ಯಾದಿ ಎಲ್ಲ ಕೂಡಿಬರಬೇಕು, ಇಲ್ಲದಿದ್ದಲ್ಲಿ ಏನೂ ಸಾಧಿಸಲಾಗದು' ಎಂಬುದು ಬಹುಜನರ ವಾದ. ಸ್ವಲ್ಪ ಮಟ್ಟಿಗೆ ಅವಕಾಶಗಳು, ಪ್ರೋತ್ಸಾಹಗಳು ಸಹಾಯಕವಾದಾವು, ನಿಜ. ಆದರೆ ಮನುಷ್ಯನಿಗೆ ಅದಕ್ಕಿಂತ ಮುಖ್ಯವಾಗಿ ಬೇಕಾದದ್ದು ಉತ್ಸಾಹ, ಛಲ ಮತ್ತು ಪರಿಶ್ರಮಶೀಲಸ್ವಭಾವ. ಅವಕಾಶಗಳು ಬರಲಿ, ಬಿಡಲಿ, ಪ್ರೋತ್ಸಾಹ ಸಿಗಲಿ ಸಿಗದಿರಲಿ, ಮನುಷ್ಯ ತನ್ನ ಧ್ಯೇಯ ಸಾಧನೆಯತ್ತ ಎಡಬಿಡದೆ ಸಾಗುತ್ತಲೇ ಇರಬೇಕು. ತನ್ನ ಗುರಿಯ ಸ್ಪಷ್ಟ ಕಲ್ಪನೆ, ತನ್ನ ಸತ್ವ ಸಾಮರ್ಥ್ಯಗಳಲ್ಲಿ ನಂಬಿಕೆ, ಸೋಲುಗಳಿಂದ ಕಲಿಯುವ ಚಾತುರ್ಯ ಹಾಗೂ ಛಲಬಿಡದೆ ಮುನ್ನಡೆಯುವ ಸ್ಥೈರ್ಯ- ಇವೆಲ್ಲವೂ ಇದ್ದಲ್ಲಿ ಬೇರೆಲ್ಲ ಅನುಕೂಲಗಳೂ ಕಾಲಕ್ರಮದಲ್ಲಿ ಕೂಡಿಬರುತ್ತವೆ. ಆದರೆ ಸಾಮರ್ಥ್ಯ, ಪ್ರತಿಭೆ, ಆನುಕೂಲ್ಯಗಳು ಇದ್ದೂ ಮೇಲ್ಕಂಡ ಗುಣವಿಶೇಷಗಳಿಲ್ಲದಿದ್ದಲ್ಲಿ ಮನುಷ್ಯನ ಜೀವನ ನಿಷ್ಪ್ರಯೋಜಕವಾಗಿ ಉಳಿಯುತ್ತದೆ. ಸಾಧನೆ, ಪರಿಶ್ರಮಗಳೊಡನೆ ಮತ್ತೊಂದು ಮುಖ್ಯವಾದ ಗುಣ ಬೇಕಾಗುತ್ತದೆ- ಅದೇ ಸಹನೆ. ಮಾಡಬೇಕಾದ್ದನ್ನು ಮಾಡುತ್ತ ಸಾಗಬೇಕು, ಏನಾಯಿತು, ಎನ್ನುವುದನ್ನು ಪರೀಕ್ಷಾತ್ಮಕವಾಗಿ ನೋಡಬೇಕು, ತಿದ್ದಿಕೊಳ್ಳಬೇಕು, ನಿಜ, ಆದರೆ ಫಲವು ಬೆಳಗಾಗುವುದರೊಳಗೆ ಬರುವುದೆಂದು ಭಾವಿಸಬಾರದು, ಅದಕ್ಕೆ ಸಕಾಲ ಬಂದೊದಗಬೇಕಾಗುತ್ತದೆ. ಅಲ್ಲಿಯವರೆಗೂ ಕಾಯುವ ತಾಳ್ಮೆ, ಗಟ್ಟಿತನ ಸಾಧಕನಲ್ಲಿರಬೇಕು. ‘ತಾನೆಷ್ಟು ಮೇಲೇರಿದ್ದೇನೆ’ ಎನ್ನುವ ಪರಾಮರ್ಶೆಯಲ್ಲಿ ತೊಡಗಿಕೊಂಡಲ್ಲಿ ಸಾಧನೆ ಮತ್ತೆ ಕೆಡುತ್ತದೆ. “ತಾನು 'ಏನಾಗಬೇಕು' ಎನ್ನುವುದಕ್ಕಿಂತ ತಾನು 'ಏನನ್ನು ಮಾಡಬೇಕು' ಎನ್ನುವತ್ತ ಗಮನಹರಿಸಬೇಕು" ಎನ್ನುತ್ತಾರೆ ನಮ್ಮ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿರವರು. ಮಾತು ಅದೆಷ್ಟು ಅರ್ಥಪೂರ್ಣ!
ಬಡತನ ಹಾಗೂ ಕಷ್ಟ ಕಾರ್ಪಣ್ಯಗಳ ಮಧ್ಯದಲ್ಲೇ ಬೆಳೆದೂ ತಮ್ಮ ಸ್ವಪ್ರಯತ್ನದಿಂದ ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನೂ ಮೆಟ್ಟಿನಿಂತು ಸಾಫಲ್ಯದ ಸಿಂಹಾಸನ್ನವನ್ನೇರಿದವರು ಹಲವರು. ಅಬ್ರಹಿಂ ಲಿಂಕನ್, ನೆಲ್ಸನ್ ಮಂಡೇಳಾ ಹಾಗೂ ನಮ್ಮ ಭಾರತದವರೇ ಆದ ಧೀರೂಬಾಯಿ ಅಂಬಾನಿ ಮುಂತಾದವರು ಇಲ್ಲಿ ಸ್ಮರಣೀಯ.  ಸ್ವತಃ ನರೇಂದ್ರ ಮೋದಿಯವರೇ ಒಂದು ಭವ್ಯ  ಉದಾಹರಣೆ ಎನ್ನಬಹುದು. ಉದಾತ್ತ ಸಾಧನೆಗಳ ಮೂಲಕ ಅವರು ಹೆಸರಿಗೆ ತಕ್ಕಂತೆ 'ನರಾಣಾಂ ಇಂದ್ರಃ' (ಜನರ ನಾಯಕ) ‘ನರೇಂದ್ರನೇ’ ಆಗಿದ್ದಾರೆ. ಮಕ್ಕಳು  ಹಾಗೂ ಯುವಜನತೆ ಇವರ ಜ್ವಲಂತ ಬದುಕಿನಿಂದ ಸ್ಫೂರ್ತಿಯನ್ನು ಪಡೆಯಬೇಕು.
ಆಳಾಗಬಲ್ಲವನೇ ಅರಸನಾಗಬಲ್ಲ’
ಆಳಾಗಬಲ್ಲವನೇ ಅರಸನಾಗಬಲ್ಲ’ ಎಂಬ ಗಾದೆಮಾತಿದೆ. ನಾಯಕನಾದವನಿಗೆ ಅತ್ಯಂತ ನೆಲಮಟ್ಟದಿಂದ ಹಿಡಿದು ಶಿಖರಮಟ್ಟದವರೆಗೂ ತನ್ನ ಕಾರ್ಯಕ್ಷೇತ್ರದ ಪೂರ್ಣ ಪರಿಚಯವಾಗಬೇಕು; ಆತ ಪ್ರತಿ ಹಂತದ ಸ್ವರೂಪವನ್ನೂ, ಸವಾಲುಗಳನ್ನೂ ಸ್ವಾನುಭವದಿಂದ ಕಂಡುಕೊಂಡಿರಬೇಕು, ಹಂತ ಹಂತವಾಗಿ ಎಲ್ಲ ಸ್ತರಗಳ ಅನುಭವಜ್ಞಾನವನ್ನೂ ಮೈಗೂಡಿಸಿಕೊಂಡಿರಬೇಕು. ಆಗ ಮಾತ್ರ ಆತನಲ್ಲಿ ಅನುಭವಶ್ರೀಮಂತಿಕೆ, ವ್ಯವಹಾರಜ್ಞಾನ ಹಾಗೂ ಕಾರ್ಯಸ್ವರೂಪ-ವಿಧಾನಗಳ ಸಮಗ್ರಜ್ಞಾನ ಹಾಗೂ ಆಯಾ ಕೆಲಸಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳೆಲ್ಲರ ಸ್ವಭಾವ-ಸಾಮರ್ಥ್ಯಗಳ ಪರಿಚಯವೂ ಚೆನ್ನಾಗಿ ಮೂಡುತ್ತದೆ. ಇಂತಹ ನಾಯಕನು ಯಾವುದೇ ಪರಿಸ್ಥಿತಿ, ಸಂಘರ್ಷ, ಸವಾಲು ಅಥವಾ ನಿಂದಾಸ್ತುತಿಗಳಿಗೆ ಎದೆಗುಂದುವುದಾಗಲಿ, ಭಾವುಕತೆ-ಭೀತಿಗಳಿಗೆ ಎಡೆಗೊಡುವುಇದಾಗಲಿ, ಗಡಿಬಿಡಿಗೊಳ್ಳುವುದಾಗಲಿ ಮಾಡದೆ, ಶಾಂತವಾಗಿ ನಿರ್ಣಯವನ್ನು ತೆಗೆದುಕೊಳ್ಳುವ ಸ್ಥಿರಮನೋಭಾವವನ್ನು ಬೆಳೆಸಿಕೊಳ್ಳುತ್ತಾನೆ. ಯಾರನ್ನೋ ಮೆಚ್ಚಿಸುವ ಅನಿವಾರ್ಯತೆ ಅವನಿಗೆ ಅಷ್ಟಾಗಿ ಇರುವುದಿಲ್ಲ. ಎಲ್ಲರಂತಲ್ಲದ ಬೇರೆಯೇ ನವೀನ ಮಾರ್ಗವನ್ನು ಹಿಡಿಯುವಾಗ ಆತಂಕ ಅಸುರಕ್ಷತೆಗಳೂ ಅವನನ್ನು ಅಷ್ಟಾಗಿ ಕಾಡುವುದಿಲ್ಲ. ಈ ಎಲ್ಲ ಗುಣಗಳಿಂದಾಗಿ ಆತ ಎಂತಾದರೂ ಎಂದಾದರೂ ಅದನ್ನು ಸಾಧಿಸಿಯೇ ತೀರುತ್ತಾನೆ. ಕೀರ್ತಿ, ಅಧಿಕಾರ, ಸಾಫಲ್ಯಗಳು ಅವನನ್ನರಸಿ ತಾವಾಗಿ ಬರುತ್ತವೆ. ಆದರೆ ಅವನ ಅಂತರಂಗ ದೈವೀ ಸಂಸ್ಕಾರಸಂಪನ್ನವಾಗಿದ್ದ ಪಕ್ಷದಲ್ಲಿ ಆ ಅಪ್ರತಿಮ ಯಶಸ್ಸ್ನ ನಡುವೆಯ್ ಕೂಡ ಆತ ದರ್ಪಾಹಂಕಾರಗಳಿಗೆ ವಶವಾಗುವುದಿಲ್ಲ. ಬದಲಾಗಿ, ಅವನನ್ನು ಇನ್ನಷ್ಟು ಅಂತರ್ಮುಖವೂ ಉದಾರವೂ ನಿಃಸ್ಪೃಹವೂ ಆಗಿಸುತ್ತದೆ, ಕರ್ಮರಂಗದಲ್ಲಿದ್ದೂ ಶುದ್ಧಚಾರಿತ್ರ್ಯವನ್ನು ಕಾಪಾಡಿಕೊಳ್ಳುವ ರಾಜರ್ಷಿಯಾಗುತ್ತಾನೆ. ಶ್ರೀರಾಮ, ಶ್ರೀಕೃಷ್ಣ, ಭಗವಾನ್ ಚಾಣಕ್ಯ, ಭಗವಾನ್ ವಿದ್ಯಾರಣ್ಯರು, ಬಸವಣ್ಣ, ಸ್ವಾಮಿ ವಿವೇಕಾನಂದ, ಸರ್ ಎಂ ವಿಶ್ವೇಶ್ವರಯ್ಯನವರು, ನಾರಾಯಣ ಗುರು, ಮುಂತಾದ ನೂರಾರು ಜ್ವಲಂತ ರಾಜರ್ಷಿಗಳನ್ನು ಹೊಂದಿದ ಖ್ಯಾತಿ ನಮ್ಮ ಭಾರತದ್ದು.
ನಮ್ಮ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ನಾಯಕತ್ವದ ಹಲವು ಸುಗುಣಗಳಿಂದ ಭೂಷಿತರು, ನಮಗೆಲ್ಲ ಆದರ್ಶಪ್ರಾಯರು. ಅವರು ನಾಯಕನಾಗಿ ಅರಳಿದ ಪರಿಯು ನಮ್ಮೆಲ್ಲರಿಗೂ ಮನನೀಯವಾದ ಚರಿತೆ-  
ನರೇಂದ್ರ ಮೋದಿಯವರ ಹಿನ್ನಲೆ-
ತುಂಬ ಸಾಮಾನ್ಯವೆನಿಸುವ ಮನೆತನ, ಪರಿಸರ, ಆರ್ಥಿಕ ಸ್ಥಿತಿಗತಿ ಹಾಗೂ ಆಶಯಗಳು ಇದ್ದ ಕುಟುಂಬ ಅವರದು. ತಂದೆ ರೈಲುನಿಲ್ದಾಣದ ಬಳಿ ಚಪ್ಪರದಂಗಡಿಯಿಟ್ಟುಕೊಂಡ ಸಾಮಾನ್ಯ ಚಹಾ ವ್ಯಾಪಾರಿ, ತಾಯಿ ಮನೆಯಾಳು ಕೆಲಸಮಾಡುತ್ತ ಒಂದಷ್ಟು ಹಣಕಾಸು ಸಂಪಾದಿಸುತ್ತಿದ್ದಾಕೆ, ಸರ್ಕಾರೀ ಶಾಲೆಯಲ್ಲಿ ಸಾಮಾನ್ಯ ಶಿಕ್ಷಣವಾಯಿತು, ಏತನ್ಮಧ್ಯೆ ಸ್ವಯಂ ಪ್ರೀತಿಯಿಂದ ಒಂದಷ್ಟು ಅಧ್ಯಯನ, ನಾಟಕ, ಮಾತುಗಾರಿಕೆ ಹಾಗೂ ಸಣ್ಣ ಪುಟ್ಟ ಸೇವಕಲಾಪಗಳಲ್ಲಿ ತೊಡಗಿಕೊಳ್ಳುವ ಉತ್ಸಾಹ - ಇವೇ ಚಿಕ್ಕವಯಸ್ಸಿನಲ್ಲಿ ನರೇಂದ್ರಮೋದಿಯವರಿಗೆ ಸಿಕ್ಕ ಅವಕಾಶಗಳು. ಯುವಾವಸ್ಥೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪರ್ಕ ಹಾಗೂ ಸ್ವಾಮಿವಿವೇಕಾನಂದರ ಜೀವನಸಂದೇಶಗಳ ಅಧ್ಯಯನ ಇವರಿಗೆ ಸಿಕ್ಕ ಮುಂಬಾಳಿನ ಬೆಳಕು.
ಆ ಎಸ್ ಎಸ್ ನಲ್ಲಿ ಅವರು ತಮಗೆ ಸಿಕ್ಕ ಸಾರ್ವಜನಿಕ ಜೀವನದ ಅನುಭವ ಹಾಗೂ ಅವಿರತ ಸೇವಾವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಅರಳಿದರು. ನಿರಂತರ ಪ್ರವಾಸ, ಜನಸಂಪರ್ಕ, ಜನಜಾಗೃತಿ, ಸಂಘಟನೆ, ಅಧ್ಯಯನ ಹಾಗೂ ಬಗೆಬಗೆಯ ಸೇವಾಕಲಾಪಗಳೂ ಅವರಲ್ಲಿ ಕಾರ್ಯಕೌಶಲ, ಸಮಾಜದ ನೇರ ಪರಿಚಯ, ವ್ಯವಹಾರ ಜ್ಞಾನ, ತಾಳ್ಮೆ, ವಾಕ್ಕೌಶಲ, ಹಾಗೂ ಸಂಘಟನಸಾಮರ್ಥ್ಯಗಳನ್ನು ಅರಳಿಸಿದವು. ಸಂಬಳ, ಸುರಕ್ಷೆ, ಪರಿವಾರದ ಚೌಕಟ್ಟು, ತನ್ನದೆಂಬ ಒಂದು ನೆಲೆ, ಆಸ್ತಿ, ಇತ್ಯಾದಿ ಯಾವ ಮೂಲಭೂತ ಸೌಕರ್ಯಗಳೂ ಇಲ್ಲದೆ ಕೇವಲ ಅಲೆಮಾರೀ ಬದುಕಿನಲ್ಲೂ ಸ್ವಾಭಿಮಾನ, ನೆಮ್ಮದಿ ಹಾಗೂ ಆತ್ಮವಿಶ್ವಾಸದ ಬಾಳನ್ನು ಬದುಕುವುದನ್ನು ಕಲಿತರು. ಯಾವ ಊರು ಕೇರಿ ಹಳ್ಳಿಯೇ ಆಗಲಿ, ಯಾವ ಕಾರ್ಯಕ್ಷೇತ್ರವೇ ಆಗಲಿ, ಯಾವ ಸವಾಲೇ ಆಗಲಿ, ಹಿಂದೆ ಮುಂದೆ ನೋಡದೆ ಸೇವೆಗೆ ನುಗ್ಗುವುದಷ್ಟೇ ಮೋದಿಯವರ ವಿಧಾನ. ಹೋದಲ್ಲೆಲ್ಲ ಜನರಲ್ಲಿ ಸ್ವಾಸ್ಥ್ಯ, ಚಿಕಿತ್ಸೆ, ಶಿಕ್ಷಣ, ಸರ್ಕಾರೀ ಸವಲತ್ತುಗಳ ಕುರಿತಾದ ಮಾಹಿತಿ, ನ್ಯಾಯ, ಧರ್ಮಗಳ ಭಾವಜಾಗೃತಿ ಮುಂತಾದುವನ್ನು ಮಾಡುವುದರಲ್ಲಿ ಮಗ್ನರಾದರು. ನರೇಂದ್ರಮೋದಿಯವರ ಸಂಘಟನಾಸಾಮರ್ಥ್ಯ ಅವರನ್ನು ಹಂತ ಹಂತವಾಗಿ ದೊಡ್ದ ದೊಡ್ಡ ಜವಾಬ್ದಾರಿಗಳತ್ತ ಕೊಂಡೊಯ್ಯಿತು. ಕೊನೆಗೆ ಗುಜರಾತಿನ ಮುಖ್ಯಮಂತ್ರಿಯ ಪದವಿಯನ್ನೂ ಅನಿರೀಕ್ಷಿತವಾಗಿ ತಂದಿತು. ಅತ್ಯಂತ ಅತಂತ್ರವೂ ಅವ್ಯವಸ್ಥಿತವೂ ಆಗಿದ್ದ ಅಂದಿನ ಗುಜರಾತಿನ ಭಾಜಪಾ ಪಕ್ಷ ಹಾಗೂ ಸರ್ಕಾರ, ರಾಜ್ಯದಲ್ಲಿ ಕ್ಷಾಮದ ತಾಂಡವ, ಕೋಮುಗಲಿಬ್ಗಳ ವಾತಾವರಣದಲ್ಲಿದ್ದ ಗುಜರಾತನ್ನು ನಿರಂತರ ಪ್ರಯತ್ನದಿಂದ ಕ್ರಮೇಣ ಸಮೃದ್ಧಿಯ ಮಾರ್ಗಕ್ಕೆ ಕರೆತಂದ ಅವರ ಅಸಾಮಾನ್ಯ ಸಾಧನೆ ಇಂದು ಒಂದು ಜಗನ್ಮಾನ್ಯವಾದ ಗಾಥೆಯೇ ಆಗಿದೆ.
ಭಾರತೀಯ ಮೌಲ್ಯಗಳನ್ನು ಉಳಿಸುವ ಪೋಷಿಸುವ ದೇಶಿಭಾವದೊಂದಿಗೆ ವಿಶ್ವದ ಅತ್ಯಾಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣ (social media)ಗಳ ಉಪಯೋಗವನ್ನೂ ಗುರುತಿಸಿ ಅವನ್ನು ಚೆನ್ನಾಗಿ ಬಳಸಿಕೊಂಡು ಜನಮಾನಸವನ್ನು ಮುಟ್ಟುವ ನೈಪುಣ್ಯದಲ್ಲೂ ಮೋದಿರವರು ಮುಂದಾಳಾದರು. ಅಂತೂ ನೋಡನೋಡುತ್ತಿದ್ದಂತೆ ಎಲ್ಲೆಲ್ಲೂ ‘ಅಬ್ ಕೀ ಬಾರ್ ಮೋದಿ ಸರ್ಕಾರ್’ ಹಾಗೂ ‘ಸಬ್ ಕೆ ಸಾಥ್ ಸಬ್ ಕಾ ವಿಕಾಸ್’ ಎಂಬ ತಮ್ಮ ಮಾತುಗಳೇ ಜನಮಾನಸದಲ್ಲಿ ಮೊಳಗುವಂತೆ ಮಾಡಿದ ಮಾಂತ್ರಿಕ ಇವರು. ಚುನಾವಣಾಪೂರ್ವದಲ್ಲಿ ೪ ಲಕ್ಷಕ್ಕೂ ಹೆಚ್ಚು ಕಿ ಮಿ ಗಳಷ್ಟು ಅತಿ ಹೆಚ್ಚಿನ ಹಾಗೂ ಆಯಾಸಕಾರಿ ಪ್ರಯಾನವನ್ನು ಮಾಡಿ ನಿರಂತರ ಪರಿಶ್ರಮದಿಂದ ದೇಶದಲ್ಲೆಲ್ಲ ಅಭೂತಪೂರ್ವ ಜಾಗೃತಿಯನ್ನು ಮೂಡಿಸಿದರು, ಜನಮನವನ್ನು ಗೆದ್ದು ದೇಶದ ಅತ್ಯುನ್ನತ ಅಧಿಕಾರದ ಗದ್ದುಗೆಯೇರಿದರು. ದಶಕಗಳಿಂದ ಕಳಪೆ ರಾಜಕೀಯದಲ್ಲಿ ನುರಿತವರಾದ ಅವರ ವಿರೋಧಿಗಳು ಏನೆಲ್ಲ ಕುತಂತ್ರ ನಡೆಸಿದರೂ ಎದೆಗುಂದದೆ, ಸೋಲೊಪ್ಪದೆ ಮುನ್ನಡೆದು ಜಯಗಳಿಸಿದ ಧೀರ ಇವರು. ಇದಕ್ಕೆಲ್ಲ ಅವರ ದೂರದೃಷ್ಟಿ ಹಾಗೂ ಮನಃಸ್ಥೈರ್ಯಗಳೇ ಕಾರಣ. ಜೊತೆಗೆ ಫಲಾಫಲಗಳಿಗಿಂತ ಕಾರ್ಯವೈಖರಿಗೇ ಹೆಚ್ಚು ಗಮನಕೊಡುವ ಅವರ ಒಮ್ಮನದ ಕಾರ್ಯಶೈಲಿಯೂ ಕಾರಣ. ಸಂದರ್ಶನವೊಂದರಲ್ಲಿ ಮೋದಿಯವರೇ ಹೇಳಿಕೊಂಡಿದ್ದಾರೆ- “ನಾನು 'ಏನಾಗಬೇಕು' ಎನ್ನುವುದಕ್ಕಿಂತ ನಾನು 'ಏನನ್ನು ಮಾಡಬೇಕು' ಎನ್ನುವತ್ತ ಗಮನಹರಿಸುತ್ತ ಮುಂದುವರಿದೆ, ಯಾರಾದರೂ ಅಷ್ಟೇ, ‘ತಾನು ಏನಾಗಬೇಕು’ ಎಂದಲ್ಲ ಬದಲಾಗಿ ‘ತಾನು ಏನು ಸಾಧಿಸಬೇಕು’ ಎಂಬುದರತ್ತ ಗಮನಹರಿಸಬೇಕು’”. ಇವರ ಈ ಗುಣವ್ಶೇಷಗಳಿಂದಾಗಿ, ಭಾಗ್ಯವೇ ಇವರಿಗೆ ಕಾಲಾಂತರದಲ್ಲಿ ಪದವಿ, ಅಧಿಕಾರ ಹಾಗೂ ಅಪಾರ ಯಶಸ್ಸನ್ನು ತಾನಾಗಿ ತಂದುಕುಟ್ಟಿದೆ.
ಇದೀಗ ಜಗತ್ತಿನ ಬಹುಮಾನ್ಯ ರಾಷ್ಟ್ರವಾದ ಭಾರತ ಚುಕ್ಕಾಣಿಯನ್ನು ಹಿಡಿದು ನಡೆಸಬೇಕಾದ ಹಿರಿಯ ಜವಾಬ್ದಾರಿ ನರೇಂದ್ರಮೋದಿಯವರಿಗೆ ಒದಗಿದೆ. ವಿಕಾಸದ ಹಾದಿಯಲ್ಲಿ ಜನತೆಯನ್ನು ಮುನ್ನಡೆಸುವ ನೇತಾರ ಕೊನೆಗೂ ಬಂದಿದ್ದಾನೆ ಎನ್ನುವ ಹಿರಿಯ ಭರವಸೆಯಿಂದ ಜನರು ಇವರನ್ನು ಆಯ್ದುಕೊಂಡಿದ್ದಾರೆ. ಅದನ್ನು ನೆನಸಾಗಿಸುವ ಕೆಲಸವಷ್ಟೇನೂ ಸುಲಭವಲ್ಲ. ಆದರೆ ಮೋದಿಯವರ ಪೂರ್ವ ಚರಿತೆಯನ್ನು ಗಮನಿಸದಾಗ ಹಿಂದಿರುಗದೆ ಮುಂದುವರೆಯುವ ವಿಶೇಷಗುಣ ಅವರಲ್ಲಿ ಎದ್ದು ಕಾಣುತ್ತದೆ.
ಎಲ್ಲರ ನಾಯಕ-
ನಾಯಕನಲ್ಲಿ ಸಾಮಾನ್ಯರ ಸುಖದುಃಖಗಳಿಗೆ ಸ್ಪಂದಿಸುವ ಸಂವೇದನಶಿಲತೆಯಿರಬೇಕು- ಹಿಂದೆ ಮಾಧವರಾವ್ ಸಿಂದಿಯಾ ಅವರು ದುರ್ಘಟನೆಯೊಂದರಲ್ಲಿ ಸಾವನ್ನಪ್ಪಿದಾಗ, ಮರುದಿನ ಸಕಲ ಸರ್ಕಾರಿ ಮಾರ್ಯಾದೆಗಳೊಂದಿಗೆ ಹಲವು ಗಣ್ಯರ ಸಮ್ಮುಖದಲ್ಲಿ ಅವರ ಅಂತ್ಯೇಷ್ಟಿ ನಡೆಯುತ್ತಿತ್ತು. ಆದರೆ ಅದೇ ದುರ್ಘಟನೆಯಲ್ಲಿ ಸಿಂದಿಯಾ ಅವರೊಂದಿಗೆ ಸಾವನ್ನಪ್ಪಿದ ಛಾಯಾಗ್ರಾಹಕ ಗೋಪಿನಾಥ್ ಅವರ ಅಂತ್ಯೇಷ್ಟಿಯ ಬಗ್ಗೆ ಯಾರಿಗೂ ಗಮನವೇ ಹರಿಯಲಿಲ್ಲ! ಆ ಕುಟುಂಬದವರು ಮೌನವಾಗಿ ನೋವನ್ನು ಅನುಭವಿಸುತ್ತ ಸರಳ ಅಂತ್ಯಸಂಸ್ಕಾರವನ್ನು ಮಾಡಿಕೊಳ್ಳುತ್ತಿದ್ದರು. ಅವರೊಂದಿಗೆ ಆ ಸಂದರ್ಭದಲ್ಲಿ ಯಾವ ಪತ್ರಕರ್ತರೂ, ರಾಜಕೀಯ ವ್ಯಕ್ತಿಗಳು ಇರಲಿಲ್ಲ. ಆ ಸಂದರ್ಭದಲ್ಲಿ ಅವರೊಡನೆ ಇದ್ದು ಸಾಂತ್ವನ ಗೈದದ್ದು ಅಷ್ಟೇನೂ ಪ್ರಸಿದ್ಧವಲ್ಲದ ಬೀ ಜೇ ಪೀ ಕಾರ್ಯಕರ್ತನೊಬ್ಬನೇ- ಆತನೇ ನರೇಂದ್ರ ಮೋದಿ.
ಕೇದಾರನಾಥದಲ್ಲಿ ಚಂದಮಾರುತಕ್ಕೆ ನೂರಾರು ಜನ ಬಲಿಯಾಗುತ್ತಿದ್ದಾಗ, ಹೆಚ್ಚು ಕಡಿಮೆ ಸೈನ್ಯದವರ ವೇಗದಲ್ಲೇ ಅಲ್ಲಿಗೆ ಹೋಗಿ ತುರ್ತುವ್ಯವಸ್ಥೆಗಳನ್ನು ಮಾಡಿಸಿ, ವಿಶೇಷ ಶೋಧ, ದೂರವಾಣಿ ವ್ಯವಸ್ಥೆ, ಪೀಡಿತರ ಪುನರ್ವಸತಿ ಕಾರ್ಯಕ್ರಮಗಳೂ ಇತ್ಯಾದಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿಸಿದವರು ಮೋದಿರವರು. ಮುಖ್ಯಮಂತ್ರಿಯಾದರೂ ತಮ್ಮ ವೈಯಕ್ತಿಕ ಹೆಲಿಕಾಫ್ಟರ್ ನಲ್ಲೂ ಪೀಡಿತರನ್ನು ತುಂಬಿಕೊಂಡು ಸುರಕ್ಷಿತ ತಾಣಗಳಿಗೆ ಸಾಗಿಸುವಲ್ಲಿ ಹಿಂದು ಮುಂದು ನೋಡಲಿಲ್ಲ! ‘ಇವರದು ರಾಜಕೀಯ ಲಾಭದ ಹುನ್ನಾರ, ನಾಟಕ’ ಇತ್ಯಾದಿಯಾಗಿ ಯಾರು ಏನೇ ಜರಿದರೂ ತಮ್ಮ ಪಾಡಿಗೆ ಮಾಡಬಹುದಾದಷ್ಟು ಕೆಲಸವನ್ನು ಮಾಡುತ್ತ ಸಾಗಿದರು, ನೂರಾರು ಜನರ ನೋವನ್ನು ನೀಗಿಸಿದರು, ಹೃದಯಗಳನ್ನು ಗೆದ್ದರು.  ಜನಸಾಮಾನ್ಯರ ನೋವಿಗೆ ಸ್ಪಂದಿಸುವ, ಸಕಾಲದಲ್ಲಿ ನೆರವಾಗುವ ಅವರ ಈ ಗುಣವೇ ಅವರನ್ನು ಬಹಳ ಜನಪ್ರಿಯವಾಗಿಸಿತು.
ಅಂತೂ ಹೇಳುತ್ತ ಹೋದರೆ ಹಲವಾರು ಅಂಶಗಳನ್ನು ಉತ್ತಮ ನಾಯಕನಲ್ಲಿ ಕಾಣಬಹುದು. ತಾನೊಬ್ಬನೆ ಬೆಳೆದು ಮೆರೆಯುವ ಕನಸು ಕಾಣುವವನು ಬಹುಕಾಲ ಜನರ ಹೃದಯದಲ್ಲಿ ನಿಲ್ಲಲಾರ, ಅಧಿಕಾರದಲ್ಲೂ ನಿಲ್ಲಲಾರ. ಅದರೆ ಜನರೆಲ್ಲರನ್ನು ಜೊತೆಗೆ ಮುನ್ನಡೇಸುವ ಉದಾರಹೃದಯಿ ಮಾತ್ರವೇ ಜನಮನದ ನಿಜವಾದ ನಾಯಕನಾಗುತ್ತಾನೆ. ಅಂತಹವನು ಅಧಿಕಾರಾವಧಿಯವರೆಗೂ ಅಷ್ಟೇ ಅಲ್ಲ, ಬದುಕಿರುವವರೆಗೂ ಹಾಗೂ ಆ ಬಳಿಕವೂ ಜನಮಾನಸದಲ್ಲಿ ವಿಶಿಷ್ಟಗೌರವಕ್ಕೆ ಪಾತ್ರನಾಗಿರುತ್ತಾನೆ.
ಯುವಜನಕ್ಕೆ ಮಾದರಿ
ನಮ್ಮ ಯುವಜನತೆ ಜಾಹಿರಾತುಗಳಲ್ಲಿ ಕಾಣುವ ಕೃತಕ ಸೌಂದರ್ಯವರ್ಧನೆಯ ಮೃಗಜಾಲವನ್ನು ಅರಸುತ್ತ ಕೇವಲ ಪ್ರಸಾದನಗಳು, ಆಟೂಟಗಳಲ್ಲೇ ಸಮಯವನ್ನು ಕಳೆಯುತ್ತ ‘ಅಮೇರಿಕಕ್ಕೆ ಹಾರಿಬಿಟ್ಟರಾಯ್ತು ಅದೇ ಸಾಫಲ್ಯ’ ಎನ್ನುವ ಭ್ರಮೆಯಲ್ಲಿ ಕಣ್ಮುಚ್ಚಿ ಓಡುತ್ತಿದ್ದಾರೆ. ಆದರೆ ಬಡತನ ಕಷ್ಟ ಸವಾಲುಗಳ ನಡುವೆಯೂ ‘ತನ್ನ ಜೀವನ ನೆಲೆಗಂಡರೆ ಸಾಕಪ್ಪ’ ಎನ್ನುವ ಭಾವವನ್ನೂ ಬಿಟ್ಟು, ಸಮಾಜಕ್ಕಾಗಿ, ದೇಶಕ್ಕಾಗಿ ಸರ್ವಸಮರ್ಪಣೆ ಮಾಡಿಕೊಂಡ ಈ ಭವ್ಯ ನಾಯಕನ ಆದರ್ಶವನ್ನು ಈ ಯುವಸಮೂಹ ನೋಡಬೇಕು ನೋಡೀ ಕಲಿಯಬೇಕು. ಕೇವಲ ಮಜಾ, ಒನಪು ಬಿನ್ನಾಣ ವಿಲಾಸಗಳಿಗಿಂತ ದೇಶ, ಧರ್ಮ, ಸಂಸ್ಕೃತಿ, ಸೇವೆ ಹಾಗೂ ಧ್ಯೇಯಗಳನ್ನು ಅರಸುವ ಬದುಕು ತುಂಬ ಹಿರಿದು ಎನ್ನುವ ಸತ್ಯವನ್ನು ಅವರಲ್ಲಿ ಮೂಡಿಸಬೇಕಿದೆ. ‘ಯಥಾ ರಾಜಾ ತಥಾ ಪ್ರಜಾ’ ಎಂಬ ಮಾತಿನಂತೆ, ಇಂತಹ ಉತ್ತಮ, ದಕ್ಷ ನಿಃಸ್ವಾರ್ಥನಾಯಕನನ್ನು ಹೊಂದಿದ ನಾವೆಲ್ಲರೂ ಅಂತೆಯೇ ಉದಯೋನ್ಮುಖರಾಗೋಣ, ದೇಶವೆಂಬ ದೇವನನ್ನು ಸರ್ವತೋಮುಖಪ್ರಗತಿಯತ್ತ ಸಾಗುವಂತೆ ಬೆಳೆಸೋಣ, ಬೆಳಗೋಣ.       
ಡಾ ಆರತಿ ವಿ ಬಿ
॑೮೪೬, ೪ನೆ ಮುಖ್ಯ ರಸ್ತೆ, ೪ನೆ ಅಡ್ಡರಸ್ತೆ, ವಿಜಯನಗರ, ಬೆಂಗಳೂಋ-೪೦, Email=  arathi.vbr@gmail.com

 Published in Aamruta Sparsha Magazine 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ