ಶುಕ್ರವಾರ, ಮಾರ್ಚ್ 17, 2017

ಬ್ರಹ್ಮಚರ್ಯ
ಬ್ರಹ್ಮಚರ್ಯ ಎನ್ನುವುದು ಸನಾತನಧರ್ಮದಲ್ಲಿ ಬಹಳ ಮಾನ್ಯವಾದ ಆಚಾರ. ವೇದವಾಙ್ಮಯವೂ ಸೇರಿದಂತೆ ಅನೇಕ ಪ್ರಾಚೀನಾರ್ವಾಚೀನ ಶಾಸ್ತ್ರಗಳಲ್ಲಿ ಬ್ರಹ್ಮಚರ್ಯದ ಮಹಿಮೆಯನ್ನು ಕೊಂಡಾಡಲಾಗಿದೆ. ‘ಪರತತ್ವವನ್ನು ಅನುಸಂಧಾನ ಮಾಡಲಿಚ್ಛಿಸುವ ಯೋಗಿಗಳು ಬ್ರಹ್ಮಚರ್ಯವನ್ನು ಆಚರಿಸುತ್ತಾರೆ ಎನ್ನುತ್ತದೆ ಕಠೋಪನಿಷತ್. ಲೈಂಗಿಕ ಆಕರ್ಷಣೆಯನ್ನು ಗೆಲ್ಲುವುದು ಸುಲಭದ ಮಾತಲ್ಲ. ಎಲ್ಲ ಪ್ರಾಣಿಗಳ ದೇಹಮನಸ್ಸುಗಳು ನೈಸರ್ಗಿಕವಾಗಿಯೇ ಅದಕ್ಕೆ ಸ್ಪಂದಿಸುತ್ತದೆ. ಚಪಲಮಾನವನ ವಿಷಯದಲ್ಲಂತೂ ಈ ಕಾಮದ ಅಪಾಯ ಅತಿಹೆಚ್ಚು. ಯೋಗಿಗಳೂ ಸಾಧಕರೂ ಕೂಡ ಕಾಮದೇಟಿಗೆ ತತ್ತರಿಸಿದ ಹಲವಾರು ಉದಾಹರಣೆಗಳು ಸಿಗುತ್ತವೆ. “ಕೇವಲ ಗಾಳಿ, ನೀರು, ಎಲೆಗಳಲನ್ನು ಸೇವಿಸುತ್ತ ಕಠಿಣ ತಪಸ್ಸನ್ನಾಚರಿಸಿದಂತಹ ವಿಶ್ವಾಮಿತ್ರಪರಾಶರಾದಿ ಮುನಿಗಳೂ ನಾರಿಯ ಮೋಹಕ್ಕೆ ಬಲಿಯಾದರು. ಹಾಗಿರುವಾಗ, ಹಾಲು-ಮೊಸರು-ತುಪ್ಪ-ಶಾಲ್ಯಾಗಳನ್ನು ಯಥೇಚ್ಛವಾಗಿ ಉಣ್ಣುವ ಸಾಮಾನ್ಯರಿಗೆ ಇಂದ್ರಿಯನಿಗ್ರಹ ಸಾಧ್ಯವಾದಲ್ಲಿ ವಿಂಧ್ಯಗಿರಿಯು ಸಾಗರದಲ್ಲಿ ಧುಮುಕಿ ಬಿಡುತ್ತದಷ್ಟೆ!" ಎನ್ನುತ್ತದೆ ಸುಭಾಷಿತ.
ಬ್ರಹ್ಮಚರ್ಯವೆನ್ನುವುದು ಶಾರೀರಿಕ ಹಾಗೂ ಮಾನಸಿಕ ತಪಸ್ಸು ಎರಡೂ ಆಗಿದೆ. ’ಬ್ರಹ್ಮಶಬ್ದವು ಪರಬ್ರಹ್ಮ, ವೀರ್ಯ, ವೇದ, ಯಜ್ಞ, ಗುರು ಎನ್ನುವ ಅರ್ಥವಿಶೇಷಗಳನ್ನು ಹೊಂದಿದೆ. ಹಾಗಾಗಿಬ್ರಹ್ಮಚರ್ಯಎಂದರೆ ವೀರ್ಯರಕ್ಷಣೆ ಮಾಡುವುದು, ಗುರುಸೇವೆ ಗೈಯುವುದು, ವೇದಾಧ್ಯಯನ, ಯಜ್ಞಾಚರಣೆ, ಪರಬ್ರಹ್ಮದ ಅನುಸಂಧಾನ ಮಾಡುವುದು ಎನ್ನುವ ಅನೇಕಾರ್ಥಗಳನ್ನು ಹೊಂದಿದೆ. ಬ್ರಹ್ಮಚರ್ಯ ಶಬ್ದವನ್ನುವೀರ್ಯರಕ್ಷಣೆ ಮಾಡಿಕೊಳ್ಳುವುದುಎನ್ನುವ ಅರ್ಥದಲ್ಲೇ ಬಳಸುವುದು ಲೋಕರೂಢಿ.
ಮದುವೆಯಾಗದಿದ್ದ ಮಾತ್ರಕ್ಕೇ ಬ್ರಹ್ಮಚರ್ಯ ಸಿದ್ಧಿಸದು. ದೇಹಮಟ್ಟದ ಬ್ರಹ್ಮಚರ್ಯವನ್ನು ಪಾಲಿಸಿ ಮನಸ್ಸಿನಲ್ಲಿ ಮಂಡಿಗೆ ಚಪ್ಪರಿಸುವವರು ಮಿಥ್ಯಾಚಾರಿಗಳು. ’ಸ್ಮರಣೆ, ಕಾಮಿಸಿದ ವ್ಯಕ್ತಿಯನ್ನೇ ಕೊಂಡಾಡುವುದು, ಚೆಲ್ಲಾಟ, ಆಸೆಯಿಂದ ನೋಡುತ್ತಿರುವುದು, ಗುಟ್ಟಾಗಿ ಮಾತುಕತೆಯಾಡುವುದು, ಮನಸ್ಸಿನಲ್ಲೇ ಸಂಕಲ್ಪಿಸುವುದು, ಆ ವ್ಯಕ್ತಿಯ ವಸ್ತುಗಳನ್ನು ಬಳಿ ಇಟ್ಟುಕೊಳ್ಳುವುದು ಹಾಗೂ ಸಾಕ್ಷಾತ್ ಮೈಥುನ’- ಇವುಗಳೆಲ್ಲ ಮೈಥುನಗಳೆ ಎಂದು ಎಚ್ಚರಿಸುತ್ತದೆ ಶಾಸ್ತ್ರ!
ವಿವಾಹವಾಗುವವರೆಗೂ ಪ್ರತಿಯೊಬ್ಬರೂ ಬ್ರಹ್ಮಚರ್ಯವನ್ನು ಪಾಲಿಸಬೇಕು, ‘ಬ್ರಹ್ಮಚಾರಿಯಾದವನಿಗೆ ಮಾತ್ರವೇ ಕನ್ಯೆಯನ್ನು ಕೊಟ್ಟು ಮದುವೆ ಮಾಡಬೇಕು, ‘ಮದುವೆಯಾದ ಮೇಲೂ ಸಭ್ಯ-ಸುಂದರ-ಸಂಯಮಯುತ ಸಂಬಂಧವನ್ನು ಸತಿಪತಿಯರು ಹೊಂದಿರಬೇಕು -ಎನ್ನುವುದು ಆರ್ಷನೀತಿ. ಸಂಯಮದ ನಯವಿದ್ದಾಗ ಮಾತ್ರ ಪ್ರೇಮದ ನೈಜಸ್ವಾರಸ್ಯ ಅರ್ಥವಾಗುವುದು. ವಿವಾಹವಾದ ಮೊದಲ ಮೂರುರಾತ್ರಿಗಳು ಸತಿಪತಿಯರು ಬ್ರಹ್ಮಚರ್ಯವನ್ನು ಪಾಲಿಸುವ ಪದ್ಧತಿಯಿದೆ. ಬಯಸಿದ ವಸ್ತು ಕಣ್ಣ ಮುಂದಿದ್ದರೂ ಕಾಯುವಿಕೆಯಲ್ಲಿ ಮನಶ್ಶಕ್ತಿಯ ಅಭಿವ್ಯಕ್ತಿಯು ಒಂದಂಶವಾದರೆ, ನವದಂಪತಿಗಳ ನವಾನುರಾಗದ ಉತ್ಕಟತೆಯೂ ಹೆಚ್ಚಿ ಮಿಲನವು ಸುಂದರವಾಗುತ್ತದೆ. ವ್ರತ-ಯಜ್ಞಾದಿಗಳ ಕಾಲದಲ್ಲಿ ಸತಿಪತಿಯರು ನಿಯಮಿತವಾಗಿ ಬ್ರಹ್ಮಚರ್ಯವನ್ನು ಪಾಲಿಸಬೇಕಾಗುತ್ತದೆ.
ವ್ರತಗಳಲ್ಲೇ ಮೇರುಪ್ರಾಯವಾದದ್ದುಆಸಿಧಾರವ್ರತ’. ಹೆಸರೇ ಸೂಚಿಸುವಂತೆ ಇದುಕತ್ತಿಯ ಅಲುಗಿನ ದಾರಿ’. ಈ ವ್ರತದ ಪ್ರಕಾರ ಸತಿಪತಿಯರು ಹನ್ನೆರಡು ವರ್ಷಗಳ ಕಾಲ ನಿಯಮಪಾಲನೆ ಮಾಡಬೇಕು. ಅವುಗಳಲ್ಲಿ ಅತಿಕಠಿಣವಾದದ್ದುಆಲಿಂಗನದಲ್ಲೇ ಮಲಗಿಯೂ ಮೈಥುನಕ್ಕೆ ಅವಕಾಶಕೊಡದಿರುವುದು’! ಇಂತಹ ವ್ರತಗಳನ್ನು ಆಚರಿಸಿ ಗೆದ್ದ ಧೀರರೂ ನಮ್ಮಲ್ಲಿದ್ದರು, ಇಂದಿಗೂ ಇರಲು ಸಾಧ್ಯ. ಶ್ರೀರಾಮಕೃಷ್ಣ ಪರಮಹಂಸ-ಶಾರದಾದೇವಿಯವರ ಅನನ್ಯಸಾಧಾರಣ ದಾಂಪತ್ಯವೂ ಅಖಂಡಬ್ರಹ್ಮಚರ್ಯಕ್ಕೆ ಉಜ್ವಲ ಉದಾಹರಣೆಯಾಗಿದೆ.  
ಬ್ರಹ್ಮಚರ್ಯದ ಪ್ರಯೋಜನಗಳು
ಇಂದ್ರಿಯಮನಸ್ಸುಗಳ ಮೂಲಕ ಹರಿದು ಹಂಚಿಹೋಗುವ ಆತ್ಮಶಕ್ತಿಯನ್ನು ಸಂರಕ್ಷಿಸಲು, ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಲು ಹಾಗೂ ಊರ್ಧ್ವಮುಖವಾದ ಚಿಂತನೆಯನ್ನು ಬೆಳೆಸಿಕೊಳ್ಳಲು ಬ್ರಹ್ಮಚರ್ಯ ಉತ್ತಮಸಾಧನೆ. ಇಂದ್ರಿಯಾತೀತವಾದ ಸೂಕ್ಷ್ಮಸತ್ಯಗಳನ್ನು ಗ್ರಹಿಸಲು ಸಾಧ್ಯವಾಗಬೇಕಾದರೆ ಮನಸ್ಸು ಮತ್ತು ಇಂದ್ರಿಯಗಳ ಮೇಲೆ ಸ್ವಾಮ್ಯ ಸಾಧಿಸುವುದು ಅತ್ಯಗತ್ಯ. ಮೋಕ್ಷಸಾಧನೆಯ ಮಾರ್ಗದಲ್ಲಂತೂ ತ್ಯಾಗವೇ ಅತ್ಯುನ್ನತ ಆದರ್ಶ- "ನ ಕರ್ಮಣಾ ನ ಪ್ರಜಯಾ ಧನೇನ ರ್ತ್ಯಾಗೇನೈಕೇ ಅಮೃತತ್ವ ಮಾನಷುಃ". ಅಂತರಂಗವು ಸರ್ವ ಸಂಕಲ್ಪವಿಕಲ್ಪಗಳಿಂದಲೂ ಮುಕ್ತವಾದಾಗಲೇ ಮೋಕ್ಷ.
ಒಂದಷ್ಟು ವರ್ಷಗಳ ಕಾಲ ಅಖಂಡಬ್ರಹ್ಮಚರ್ಯವನ್ನು ಪಾಲಿಸಿದವರಿಗೆ ಕುತ್ತಿಗೆಯ ಹಿಂಭಾಗದಲ್ಲಿರುವ (ಸಾಮಾನ್ಯರಲ್ಲಿ ಸುಪ್ತವಾಗಿರುವ) ಮೇಧಾನಾಡಿಯು ಜಾಗೃತವಾಗಿ, ತತ್ಪರಿಣಾಮವಾಗಿ ಆ ವ್ಯಕ್ತಿ  ಉನ್ನತ ಸತ್ಯಗಳನ್ನು ಗ್ರಹಿಸುವ ಪ್ರಜ್ಞಾಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದೆರಡು ಬಾರಿ Encyclopeadia Brittanicaನ್ನು ಸಮಗ್ರವಾಗಿ ಓದಿ ಮುಗಿಸಿದ ಸ್ವಾಮಿ ವಿವೇಕಾನಂದರು ಅದರ ಪುಟಪುಟದಲ್ಲಿನ ಸರ್ವಮಾಹಿತಿಯನ್ನೂ, ಪುಂಖಾನುಪುಂಖವಾಗಿ ಒಪ್ಪಿಸಬಲ್ಲವರಾಗಿದ್ದರು! ಅವರ ಈ ಅಸಾಧಾರಣ ಶಕ್ತಿಯ ಗುಟ್ಟೇನೆಂದು ಕೇಳಿದಾಗ ಅವರು ಕೊಟ್ಟ ಉತ್ತರ "ಹನ್ನೆರಡು ವರ್ಷಗಳ ಕಾಲ ಅಖಂಡಬ್ರಹ್ಮಚರ್ಯವನ್ನು ಪಾಲಿಸಿದರೆ ಈ ಬಗೆಯ ಮೇಧಾಶಕ್ತಿ ಲಭಿಸುತ್ತದೆ!"
ವಿದ್ಯಾಭ್ಯಾದ ಅವಧಿಯಲ್ಲಿ ಕಟ್ಟುನಿಟ್ಟಾದ ಬ್ರಹ್ಮಚರ್ಯವನ್ನು ಪಾಲಿಸುವುದು ನಿಯಮ. ಎಳೆಯ ವಯಸ್ಸಿನಲ್ಲೇ ದೈಹಿಕ ಆಕರ್ಷಣೆಯನ್ನು ಹದ್ದಿಕ್ಕಬಲ್ಲ ಸ್ತ್ರೀಪುರುಷರು ಮುಂದೇ ಜೀವನದ ಬೇರಾವ ಸವಾಲನ್ನಾದರೂ ಎದುರಿಸುವುದು ಸುಲಭವಾಗುತ್ತದೆ. ಕನ್ನಡಿಯ ಮುಂದೆಯೋ, ಕಾಲ್ಪನಿಕ ಪ್ರಿಯನ/ಪ್ರಿಯೆಯ ಕನಸನ್ನು ಕಾಣುತ್ತಲೋ, Dating ಮಾಡುತ್ತಲೋ, Disco-ಧೂಮಪಾನ-ಮದ್ಯಪಾನಾದಿಗಳಲ್ಲೋ ಮೈಮರವ ಯುವಜನತೆ ಜೀವನದ ಗುರಿಯನ್ನೇ ಮರೆತು ಸಮಯ, ಹಣ, ಯೌವನ, ಆರೋಗ್ಯ, ಆಯಸ್ಸು, ನೆಮ್ಮದಿ ಎಲ್ಲವನ್ನೂ ಹಾಳುಮಾಡಿಕೊಳ್ಳುತ್ತಿರುವುದನ್ನು ನೋಡಿದಾಗ, ನಮ್ಮ ಎಳೆಯರಲ್ಲಿ ಏಕೆ ಅಧ್ಯಯನದಲ್ಲಿ ಆಸಕ್ತಿಯಿಲ್ಲ, ಏಕಾಗ್ರತೆಯಿಲ್ಲ, ಒಂದೆಡೆ ಕುಳಿತು ಓದುವ-ಆಲೋಚಿಸುವ ತಾಳ್ಮೆಯಿಲ್ಲ, ಮನಶ್ಶಕ್ತಿಯಿಲ್ಲ ಎನ್ನುವುದು ಸ್ಪಷ್ಟವಾಗುತ್ತದಲ್ಲವೆ? Filmiಕಥೆಗಳ ಭ್ರಮೆಗೊಳಗಾಗಿ ತಮ್ಮ ಕೊಳಕು ಆಸೆಗಳಿಗೆ ಅಮರ ಪ್ರೇಮದ ನಾಮಕರಣ ಮಾಡಿ ಎಳೆಯವಯಸ್ಸಿನಲ್ಲೇ ಲಂಗುಲಗಾಮಿಲ್ಲದ ಕಾಮಕ್ಕೆ ಬಲಿಯಾಗಿ ಆ ಬಳಿಕ ಕೈಸುಟ್ಟುಕೊಂಡು ಗೋಳಾಡುವ ಸ್ವೇಚ್ಛಾಚಾರೀ ಯುವಕಯುವತಿಯರನ್ನು ಕಂಡಾಗ ಬ್ರಹ್ಮಚರ್ಯನಿಯಮ ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತ ಎನಿಸದಿರದು.
ಹಲವರಿಗೆ ಬ್ರಹ್ಮಚರ್ಯ ಎಂದಾಕ್ಷಣ ತಮ್ಮ ಸುಖಸಂತೋಷಗಳನ್ನೆಲ್ಲ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಕಳವಳ. ಭೋಗದಲ್ಲಿ ಮುಳುಗಿ ಅದರಿಂದ ಬಿಡಿಸಿಕೊಳ್ಳಲಾಗದ ದುರ್ಬಲ ವ್ಯಕ್ತಿ ಆರೋಗ್ಯ, ನೆಮ್ಮದಿ, ಮಾನ, ಸಮಯ, ಸೌಂದರ್ಯ ಹಾಗೂ ವಿತ್ತಗಳನ್ನು ಕಳೆದುಕೊಂಡು ನಿಸ್ತೇಜನಾಗುತ್ತ ಹೋಗುತ್ತಾನೆ.

ವೈದಿಕ ಸಂಸ್ಕೃತಿಯಲ್ಲಿಕಾಮಎಂಬ ಪುರುಷಾರ್ಥಕ್ಕೆ ತುಂಬ ಗೌರವವಿದೆ. ಧರ್ಮಕ್ಕೆ ವಿರೋಧವಲ್ಲದ ಕಾಮವನ್ನು ಸರಿ ಎಂದು ಭಗವದ್ಗೀತೆ ಮನ್ನಿಸುತ್ತದೆ. ಸತ್ಪ್ರಜೆಗಳನ್ನು ಪಡೆಯುವುದು ಮಾನವರಿಗೆ ಒಂದು ಕರ್ತವ್ಯವೇ ಆಗಿದೆ ಎನ್ನುತ್ತವೆ ಧರ್ಮಶಾಸ್ತ್ರಗಳು. ತಮ್ಮ ಸ್ವಪತಿ/ಸ್ವಪತ್ನಿಯೊಂದಿಗೆ ಮಾತ್ರವೇ ಸಂಬಂಧವುಳ್ಳವರಾದ ಶುದ್ಧಚರಿತರನ್ನೂ ಸ್ಮೃತಿಗಳುಬ್ರಹ್ಮಚಾರಿಗಳೆಂದೇ ಪರಿಗಣಿಸುತ್ತದೆ. ಗೃಹಸ್ಥಧರ್ಮಕ್ಕೆ ಕಾಮವು ಭೂಷಣಪ್ರಾಯ. ಅದಿಲ್ಲದಿದ್ದಲಿ ಸಂಬಂಧವೇ ನೀರಸವೂ ಕಹಿಯೂ ಆದೀತು. ಆದರೆ ಸತಿಪತಿಯರು ಅನೈತಿಕ ಕಾಮಕ್ಕೆ ಬಿದ್ದು ಪರಸ್ಪರರಿಗೆ ದ್ರೋಹವೆಸಗಿದಾಗ ಆ ಸಂಬಂಧವೇ ದ್ವೇಷದಲ್ಲಿ ಬೆಂದುಹೋಗುತ್ತದೆ. ಹಾಗಾಗಿ ಯಾವುದೇ ಆಶ್ರಮದಲ್ಲಿರಲಿ (ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಅಥವಾ ಸಂನ್ಯಾಸ), ಎಲ್ಲರೂ ಕಾಮದ ವಿಷಯದಲ್ಲಿ ಸಂಯಮಿಗಳಾಗಿರಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ