ಶುಕ್ರವಾರ, ಮಾರ್ಚ್ 17, 2017

ಮಳೆ ಬಂತು ಮಳೆ..…..

ನಿಸರ್ಗಪ್ರಿಯರಾದ ಭಾರತೀಯರು ಋತುಚಕ್ರದಲ್ಲಿ ದೈವೀ ಸ್ವಾರಸ್ಯಗಳನ್ನು ಅನ್ವೇಷಿಸುತ್ತ, ತಮ್ಮದೇ ಕಾವ್ಯಮಯ ಕಲ್ಪನೆಗಳಲ್ಲಿ ಲಾಲಿಸುತ್ತ ಬಂದಿದ್ದಾರೆ. ಅದರಲ್ಲೂ ಮಳೆಗಾಲವೆಂದರೆ ಅದೇನೋ ಪ್ರೀತಿ ನಮಗೆ! ಪರಸ್ಪರ ಸಂಧಿಸಿದಾಗಲೂ “ನಿಮ್ಮೂರಲ್ಲಿ ಮಳೆಬೆಳೆ ಹೇಗಾಗುತ್ತಿದೆ?" ಎಂದೇ ವಿಚಾರಿಸುವುದು ಶಿಷ್ಟಾಚಾರ! ಕೃಷಿ-ಪ್ರಮುಖವಾದ ನಮ್ಮ ದೇಶದಲ್ಲಿ ಮಳೆಗೆ ವಿಶೇಷ ಆದ್ಯತೆ. "ಉಯ್ಯೋ ಉಯ್ಯೋ ಮಳೆರಾಯ ಬಾಳೆತೋಟಕೆ ನೀರಿಲ್ಲ---" ಮುಂತಾದ ಶಿಶುಗೀತೆಗಳನ್ನು ಕಲಿಸುತ್ತ ಪುಟ್ಟಮಕ್ಕಳ ಮನದಲ್ಲೂ ಮಳೆಯನ್ನು ಸ್ವಾಗತಿಸುವ ಭಾವವನ್ನು ಬೆಳೆಸುತ್ತೇವೆ. ಅದೇ, ಸದಾ ಮೋಡಕವಿದಿದ್ದು ಆಟೋಟಗಳಿಗೆ ವರ್ಷದ ಬಹುಭಾಗ ಅನನುಕೂಲವಾಗಿರುವ ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ತಮ್ಮ ಮಕಳಿಗೆ ’Rain Rain Go away---— little tommy wants to play” ಎಂದು ಕಲಿಸುತ್ತಾರೆ! ಇದೆಲ್ಲ ದೇಶಕಾಲಸಂದರ್ಭಗಳ ವಿಶೇಷಗಳು ಅನ್ನಿ. ಭಾರತದಲ್ಲಂತೂ ಬಿರುಬೇಸಿಗೆಯ ನಡುವೆಯೂ ಅಡ್ಡಮಳೆ ಬಿದ್ದೀತು, ತಂಪಾಗಿಸೀತು ಎಂದೇ ಇದಿರು ನೋಡುತ್ತೇವೆ! ‘ಮಳೆಬೆಳೆ ಚೆನ್ನಾಗಿ ಆಗಬೇಕು’ ಎನ್ನುವ ಭಾವ ಅತಿಪ್ರಾಚೀನ ವೇದ ಮಂತ್ರಗಳಿಂದ ಹಿಡಿದು, ಪುರಾಣ, ಕಾವ್ಯಸಾಹಿತ್ಯ, ಜಾನಪದ ಸಾಹಿತ್ಯ, ಹಾಡು, ನೃತ್ಯ, ನಾಟಕ, ಧರ್ಮಾಚಾರ, ಕೃಷಿ, ವ್ಯಾಪಾರಾ ಮುಂತಾದ ಎಲ್ಲ ರಂಗಗಳಲ್ಲೂ ಎದ್ದು ಕಾಣುವ ಭಾವ. ಮಳೆಯಾಗಲಿ ಎಂದು ಧಾರ್ಮಿಕ ಪರಿಸರಸ್ನೇಹಿ-ದ್ರವ್ಯಗಳನ್ನು ಬಳಸಿ ಹೋಮ-ಹವನಾದಿಗಳನ್ನು ಮಾಡಿದರೆ, ಕೆಲವು ಆಸ್ತಿಕರು ಉಪವಾಸ, ವ್ರತ, ದಾನಾದಿ ಸಾತ್ವಿಕ ಕರ್ಮಗಳನ್ನೂ ಆಚರಿಸುತ್ತಾರೆ.
ಮಳೆಗರೆಯುವ ಮೋಡಗಳು ನಮ್ಮ ಪಾಲಿಗೆ ಸಾಕ್ಷಾತ್ ಭಗವಂತನ ಅನುಗ್ರಹದ ಪ್ರತ್ಯಕ್ಷರೂಪಗಳು! ಮೋಡವನ್ನು ’ಪರ್ಜನ್ಯ’ನೆಂಬ ದೇವತಾರೂಪದಲ್ಲಿ ಆರಾಧಿಸುವವರು ನಾವು. ಮೋಡ-ಮಳೆಗಳ ಹಿನ್ನಲೆಯಲ್ಲಿನ ವೈಜ್ಞಾನಿಕ ಪ್ರಕ್ರಿಯೆಗಳನ್ನೂ, ಅದರಲ್ಲಿನ ಸೌಂದರ್ಯವನ್ನೂ, ಲೋಕೋಪಕಾರಕತ್ವವನ್ನೂ, ಕಾಲ-ವಿನ್ಯಾಸಾದಿಗಳನ್ನೂ, ಗುಣ-ವಿಶೇಷಗಳನ್ನೂ ತನ್ಮಯಚಿತ್ತದಿಂದ ಗಮನಿಸುತ್ತ ಬಂದ ನಮ್ಮ ಪ್ರಾಜ್ಞರು, ಅದರಲ್ಲಿ ಭಕ್ತಿ, ಕುತೂಹಲ, ಅರಿವು, ಭಾವನೆ, ಜಾಣ್ಮೆಗಳನ್ನೆಲ್ಲ ಒಟ್ಟೊಟ್ಟಿಗೆ ಬೆಳೆಸಿಕೊಂಡಿದ್ದಾರೆ. ಹಾಗಾಗಿ ನಮ್ಮ ಪ್ರಾಚೀನ ಮಂತ್ರಗಳಲ್ಲಿ ಈ ಎಲ್ಲ ದೃಷ್ಟಿಕೋನಗಳ ಅವರ ವಿಚಾರಗಳು ಅಡಗಿರುವುದನ್ನು ಕಾಣಬಹುದಾಗಿದೆ.
ಭಾರತೀಯರ ಪಾಲಿಗೆ ಆಷಾಢದಿಂದ ಆಶ್ವಿನದವರೆಗೂ ನಾಲ್ಕು ತಿಂಗಳೂ ಮಳೆಗಾಲ ಎಂದೇ ಲೆಕ್ಕ. ಭಾರತದಲ್ಲಿ ಎರಡು ಮುಂಗಾರುಗಳಿವೆ- ಮೇ-ಜೂನ್ ಮಾಸಗಳಲ್ಲಿ ನೈರುತ್ಯದಿಂದ ಬಂದು ಉತ್ತರಕ್ಕೆ ಸಾಗುವ ಮುಂಗಾರು ಒಂದಾದರೆ, ನವೆಂಬರ್-ಡಿಸೆಂಬರ್ ಮಾಸಗಳಲ್ಲಿ ಈಶಾನ್ಯದಿಂದ ಬರುವ ಮುಂಗಾರು ಮತ್ತೊಂದು.
ಮೋಡವೇ ಪ್ರಧಾನವಾಗಿ ಕಾಣಿಸಿಕೊಳ್ಳುವ ಮಳೆಗಾಲದ ಶ್ರಾವಣವನ್ನು ‘ನಭಸ್ಯ ಮಾಸ’ ಎಂದೇ ಕರೆಯುವುದುಂಟು. (ನಭಸ್ ಅಥವಾ ನಭಸ್ಯ ಎಂದರೆ ಇಬ್ಬನಿ / ಮೋಡ ಅಥವಾ ಆಕಾಶ ಎಂದರ್ಥಗಳಿವೆ). ಮೋಡಕ್ಕೆ ಅಮರಕೋಶದಲ್ಲೇ ೧೬ ಪರ್ಯಾಯಪದಗಳಿವೆ ಎಂದಮೇಲೆ, ನಾವು ಅದೆಷ್ಟು ಅದನ್ನು ಪ್ರೀತಿಸುತ್ತೇವೆ, ಅದರ  ಬಗ್ಗೆ ಮಾತನಾಡುತ್ತಲೇ ಇರುತ್ತೇವೆ ಎನ್ನುವುದನ್ನು ಊಹಿಸಬಹುದಲ್ಲವೆ?!
ಇದಲ್ಲದೆ ಅನೇಕ ಪರ್ಯಾಯ ರೂಪಗಳಲ್ಲಿ ವಿಶೇಷಣಗಳಲ್ಲಿ ಧ್ವನಿತ ಅರ್ಥಗಳಲ್ಲಿ ಮೋಡಗಳನ್ನು ಸೂಚಿಸುವ, ಸ್ತುತಿಸುವ, ವರ್ಣಿಸುವ ನಮ್ಮ ಕವಿಗಳ, ರಸಿಕರ ಚಪಲವಂತೂ ಎಲ್ಲೆ ಮೀರಿದ್ದು! ಹಾಗೇ ಒಂದು ಮಾತು- ಆಂಗ್ಲದಲ್ಲಿ Cloud ಎಂಬ ಪದದ ಹೊರತು ಬೇರಾವುದೂ ಇಲ್ಲ! ವರ್ಷದ ಹೆಚ್ಚಿನ ಭಾಗವು ಬಿಸಿಲಿನ ಬೆಚ್ಚನೆಯ ಸ್ಪರ್ಶಕ್ಕೆ, ಹಗುರ ವೇಷಭೂಷಗಳಲ್ಲಿ ಲವಲವಿಕೆಯಿಂದ ಓಡಾಟ ಮಾಡುವುದಕ್ಕೆ ಆಸ್ಪದ ಕೊಡದ ಮೋಡಗಳ ಮೇಲೆ ಇಂಗ್ಲೆಂಡ್ ಜನರಿಗೆ ಸ್ವಲ್ಪ ಮುನಿಸೋ ಎನೋ! J

ಮಳೆಯ ಪ್ರಕ್ರಿಯೆಯ ಕುರಿತಾದ ಚಿಂತನ ಸಂಶೋಧನ
ಸೂರ್ಯನು ವರ್ಷವಿಡೀ, ಅದರಲ್ಲೂ ಗ್ರೀಷ್ಮಕಾಲದಲ್ಲಿ ವಿಶೇಷವಾಗಿ ಹೆಚ್ಚಾಗಿ ನೀರನ್ನು ಹೀರುತ್ತಾನೆ’,ಸೂರ್ಯನು ಮಿತಿಮೀರಿ ಕುಡಿದಾಗ ಮುಂಗಾರು’ ಎನ್ನುವ ಮಾತು ಮಂತ್ರಗಳಲ್ಲಿ ಬರುತ್ತದೆ. ಇಂತಹ ಹಲವು ಮಂತ್ರಗಳಲ್ಲಿ ನಮ್ಮ ಪ್ರಾಚೀನರು ಮಳೆಯ ಪ್ರಕ್ರಿಯೆಯನ್ನು ತೀಕ್ಷ್ಣವಾಗಿ ಗಮನಿಸಿದರು ದಾಖಲಿಸಿದರು ಎನ್ನುವುದು ಸ್ಪಷ್ಟವಾಗುತ್ತದೆ. “ಸೂರ್ಯನಿಂದ ಕಾವುಗೊಂಡು, ಭೂಮಿಯ ಮೇಲಿನ ಎಲ್ಲ ಬಗೆಯ ತೇವಾಂಶಗಳೂ ಆವಿಯಾಗುತ್ತವೆ, ವಾಯುವನ್ನು ಅವಲಂಬಿಸಿ ಅಂತರೀಕ್ಷಕ್ಕೇರುತ್ತವೆ, ಅಲ್ಲಿ ಒಟ್ಟು ಸೇರಿ ಮೋಡವಾಗುತ್ತವೆ. ಹೀಗೆ ಜಲ, ವಾಯು ಹಾಗೂ ಆಗ್ನಿತತ್ವಗಳ ಸಹಕಾರದಿಂದ ಮೋಡವುಂಟಾಗುತ್ತದೆ. ಸಾವಿರ ಕಣ್ಣುಗಳುಳ್ಳ ಇಂದ್ರನ ನಿರ್ದೇಶನದಂತೆ ಮೋಡಗಳು ಮಳೆಗರೆಯುತ್ತವೆ” ಎನ್ನುವುದು ಲಿಂಗಪುರಾಣದ ಒಂದು ಶ್ಲೋಕ. ವಾಲ್ಮೀಕಿ ರಾಮಾಯಣದಲ್ಲಿಸೂರ್ಯನು ಒಂಭತ್ತು ತಿಂಗಳಕಾಲ ಸಾಗರದ ನೀರನ್ನು ತನ್ನ ಕಿರಣಗಳಿಂದ ಕುಡಿದಿದ್ದು, ಇದೀಗ ಅವನಿಂದ ಜೀವನಕ್ಕೆ ಅಮೃತೋಪಮವೆನಿಸುವಂತಹ ಜಲರೂಪದ ಸಂತಾನವು ಭುವುಗಿಳಿದಿದೆಎನ್ನುವ ಮಾತು ಬರುತ್ತದೆ.

ವೇದ ಪುರಾಣಗಳಲ್ಲಿ ಮಳೆಯ ವರ್ಣನೆಗಳು
ವೇದದಲ್ಲಿ ‘ಪರ್ಜನ್ಯಸೂಕ್ತ’ ಎಂಬ ಸೂಕ್ತವೇ ಇದೆ. ಅದು ಮೋಡವು ತರುವ ಹರ್ಷವನ್ನು ಕುರಿತಾಗಿ ಹೇಳುತ್ತದೆ. ಪರ್ಜನ್ಯನು ವೇದದ ದೇವತೆಗಳ ಜೊತೆಗೆ ಉನ್ನತ ಸ್ಥಾನವನ್ನೇ ಪಡೆದಿದ್ದಾನೆ. ಋಗ್ದೇವದಲ್ಲಿ ಮಳೆಯನ್ನುಮೋಡಗಳೆಂಬ ಕೆಚ್ಚಲನ್ನು, ಮಿಂಚು, ಗುಡುಗು ಹಾಗೂ ಮಳೆ ಎಂಬ ಮೂರು ಕಂಠಗಳುಳ್ಳ ಹಸು’ ಎಂದು ಉಪಮಿಸಲಾಗಿದೆ. ಮಂತ್ರಗಳಲ್ಲಿಮಳೆಯನ್ನು ಕೊಡು, ಆದರೆ ಅತಿ ಹೆಚ್ಚಾಗಿ ಬೇಡ’ ಎಂದು ಅರ್ಥಪೂರ್ಣವಾಗಿ ಪ್ರಾರ್ಥಿಸಲಾಗಿದೆ! ಯಾವುದೂ ಅತಿಯಾದರೆ ಒಳಿತಲ್ಲ ಎನ್ನುವ ಅರ್ಥದಲ್ಲಿ ಅತಿವೃಷ್ಟಿ-ಅನಾವೃಷ್ಟಿಎಂಬ ಪದಗಳನ್ನು ಬಳಸುವುದು ಸರ್ವೇಸಾಮಾನ್ಯ.
ಸುಮಾರು ಹತ್ತುವರ್ಷಗಳ ಕಾಲ ಮಳೆಯಾಗದೆ ಕ್ಷಾಮವುಂಟಾದಾಗ, ಲೋಕಜನರ ನೋವಿಗೆ ಮರುಗಿದ ಮಹಾಸಾಧ್ವಿ ಅನಸೂಯಾದೇವಿಯು ಅಮೋಘ ತಪಸ್ಸನ್ನಾಚರಿಸಿ, ಹಣ್ಣು-ತರಕಾರಿಗಳನ್ನು ಸೃಷ್ಟಿಸಿದ್ದಲ್ಲದೆ, ಮಂದಾಕಿನಿಯ ಜಲವನ್ನು ಉತ್ಪತ್ತಿ ಗೈದಳಂತೆ! ಸುದೀರ್ಘಕಾಲದ ಬರಗಾಲವನ್ನು ಕೊನೆಗೊಳಿಸಲು, ರೋಮಪಾದ ರಾಜಾ ಮತ್ತು ಮಂತ್ರಿಗಳು, ಬಾಲ್ಯದಿಂದಲೂ ಅಖಂಡ-ಬ್ರಹ್ಮಚರ್ಯವನ್ನು ಎಸಗಿದ್ದ ಋಷ್ಯಶೃಂಗಮುನಿಗಳನ್ನು ಬರಮಾಡಿಕೊಂಡು, ತನ್ಮೂಲಕ ಮಳೆಯಾಗುವಂತೆ ಮಾಡಿಕೊಂಡ ಪ್ರಸಂಗ ವಾಲ್ಮೀಕಿ ರಾಮಾಯಣದಲ್ಲಿದೆ. ತನ್ನನ್ನು ಆರಾಧಿಸುವ ಬದಲು ಗೋವರ್ಧನವನ್ನು ಪೂಜಿಸಲು ಹತ್ತಿದ ಮುಗ್ಧಗೊಲ್ಲರ ಮೇಲೆ ಕುಪಿತನಾದ ಗರ್ವಿಷ್ಟ ಇಂದ್ರನು, ಏಳು ದಿವಸಗಳ ಕಾಲ ಸತತ ಚಂಡಮಾರುತ ಮಳೆಗಳನ್ನುಂಟು ಮಾಡಿದ್ದು, ಶ್ರೀಕೃಷ್ಣನು ಬುದ್ಧಿವಂತಿಕೆ ಹಾಗೂ ಛಲಬಲಗಳಿಂದ ಗೋವರ್ಧನವನ್ನು ತನ್ನ ಕಿರುಬೆರಳಲ್ಲಿ ಎತ್ತಿ ಹಿಡಿದು ಗೊಲ್ಲರಿಗೂ ಗೋಸಂಪತ್ತಿಗೂ ಆಶ್ರಯ ನೀಡಿ ರಕ್ಷಿಸಿದ ಪುರಾಣದ ಕಥೆಗಳು ಸುಪ್ರಸಿದ್ದ.
ವಾಲ್ಮೀಕಿರಾಮಾಯಣದಲ್ಲಿ ಷಡೃತುಗಳ ವರ್ಣನೆಯನ್ನು ಸವಿವರವಾಗಿ ಮಾಡಲಾಗಿದೆ. ಅಲ್ಲಿ ಮಳೆಗಾಲದ ವರ್ಣನೆಯೂ ವಿಶೀಷ್ಟವಾಗಿದೆ. “ದುಂಬಿಗಳ ವೀಣಾವಾದನಕ್ಕೆ, ವಾನರಗಳ ಚೀರಾಟವು ತಾಳಬದ್ಧವಾಗಿ ಕೂಡಲು, ಮೋಡಗಳು ಮೃದಂಗಗಳನ್ನು ನುಡಿಸುತ್ತಿರಲು, ಪಕ್ಷಿಗಳು ಮುದ್ದಾಗಿ ದನಿಗೂಡಿಸಲು, ಕಾಡೆಲ್ಲ ಮಾಡುತ್ತಿರುವ ಆ ದಿವ್ಯ ಸಂಗೀತೋತ್ಸವಕ್ಕೆ ಸಂತಸಗೊಂಡ ನವಿಲುಗಳು ಗರಿಗೆದರಿ ನರ್ತಿಸುತ್ತವೆ” ಎಂದು ಉಪಮಿಸುತ್ತಾರೆ ವಾಲ್ಮೀಕಿ ಮಹರ್ಷಿಗಳು.
ವಾಲಿಯನ್ನು ಸಂಹರಿಸಿದ ನಂತರ, ಸುಗ್ರೀವ-ಹನುಮ-ರಾಮಾದಿಗಳು ಕೂಡಿ ಕೈಗೊಂಡ ಸೀತಾನ್ವೇಷಣೆಯ ಕಾರ್ಯವು, ಮಳೆಗಾಲ ಬಂದಾಗ ತಾತ್ಕಾಲಿಕವಾಗಿ ಸ್ಥಗಿತವಾಗಬೇಕಾಗುತ್ತದೆ. ವಿರಹಿಯಾದ ರಾಮನಿಗೆ ಆ ಮೋಡ ಕವಿದ ಪರಿಸರದಲ್ಲಿ ಎಲ್ಲೆಲ್ಲೂ ವಿರಹವೇ ಕಾಣಬರುತ್ತದೆ! ಕಾದ ಭೂಮಿಯ ಮೇಲೆ ಬಿದ್ದು ಬಿಸಿಯಾಗಿ ಚಿಮ್ಮುವ ಮಳೆನೀರಿನ ಹನಿಗಳು ಸೀತೆಯ ದುಃಖದಬಿಸಿ ಕಣ್ಣೀರಿ’ನಂತೆ ತೋರುತ್ತದೆ! ಎಲ್ಲೆಲ್ಲೂ ತುಂಬಿದ ನೀರು ಸೀತೆಯಶೊಕದ ಕಡಲಾ’ಗಿ ಭಾಸವಾಗುತ್ತದೆ! ಚಂದ್ರನ ಹೃದಯದಲ್ಲಿನ ಕರೆಯನ್ನು ನೋಡುತ್ತ ಆತನೂ ತನ್ನಂತೆಯೇ ‘ವಿರಹ’ವನ್ನು ಅನುಭವಿಸುತ್ತಿರಬೇಕು ಎಂದು ಉದ್ಗರಿಸುತ್ತಾನೆ ರಾಮ! ಬೆಟ್ಟದ ತುದಿಯಲ್ಲಿ ಕುಳಿತು ಲಕ್ಷ್ಮಣನೊಂದಿಗೆ ತನ್ನ ದುಃಖವನ್ನು ತೋಡಿಕೊಳ್ಳುತ್ತಾನೆ.

ಕಾವ್ಯವರ್ಣನೆಗಳು
ಮೋಡವು ತರುವ ಆನಂದವನ್ನು ಪರ್ಜನ್ಯ ಸೂಕ್ತವು ಉಲ್ಲೇಖಿಸಿದಿದರೆ, ಕಾಳಿದಾಸಾದಿ ಕವಿಗಳು ಆನಂದವೆಂಬ ಅಂಶವನ್ನೇ ಹಿಡಿದು ಕಲ್ಪನಾಸ್ರೋತದಲ್ಲಿ ತಮ್ಮ ಕಾವ್ಯವನ್ನು ತೇಲಿಬಿಡುತ್ತಾರೆ! ಕಾವ್ಯಸಾಹಿತ್ಯದ ಪುಟಗಳಲ್ಲಿ ಪ್ರವೇಶಿ ಹೊಕ್ಕು ನೋಡಿದರೆ ಸಿಗುವ ಮಳೆ-ಮೋಡಗಳ ವರ್ಣನೆ ಹಾಗೂ ತತ್ಸಂಬಂಧಿತ ರಸಭಾವವಿಶೇಷಗಳು ಅಸಂಖ್ಯ. ಇಲ್ಲಿ ಕೇವಲ ಒಂದೆರಡು ಝಲಕ್ ಗಳನ್ನು ನೋಡೋಣ.
ಕಾವ್ಯಲೋಕದಲ್ಲಿ ಸೀಮಾತೀತ ಕಲ್ಪನಾ ವಿಲಾಸವನ್ನು ಕಾಣಬಹುದು. ಇಡೀ ದಿನ, ಬಿಸಿಲಿಗೆ ಬೆಂದ ಜೀವಕ್ಕೆ ಮೋಡ ತರುವ ತಂಪು, ನೆರಳು, ಆಕಾಶದಲ್ಲಿ ನಿರ್ಮಿಸುವ ರುದ್ರಮನೋಹರತಾಂಡವದ ದೃಶ್ಯ, ವನಸ್ಪತಿಗಳಿಗೆ ನೀರು, ಜಲಾಶಯಗಳಿಗೆ ಸೌಭಾಗ್ಯ, ಭೂಮಿಗೆ ಮಂಗಳ ಸ್ನಾನ, ನವಿಲುಗಳಿಗೆ ಆನಂದೋನ್ಮಾದ ಇತ್ಯಾದಿಗಳು ಕಾವ್ಯವಿಷಯಗಳಾಗುತ್ತವೆ. ಕಪ್ಪು ಮೋಡದ ಮುಂದೆ ಸಾಲು ಸಾಲು ಬೆಳ್ಳಕ್ಕಿಗಳು ನಿರ್ದಿಷ್ಟ ವೇಗ-ವಿನ್ಯಾಸಗಳಲ್ಲಿ ಹಾರುವ ದೃಶ್ಯ ಅದೆಷ್ಟು ಮುಗ್ಧಸುಂದರ ಬಲಾಕಪಕ್ಷಿಗಳ ಸಾಲು ಸ್ವರ್ಗಲೋಕದ ಬಾಗಿಲಿಗೆ ಕಟ್ಟಿದತೋರಣ’ ಎಂದು ಒಬ್ಬ ಕವಿ ಹೇಳಿದರೆ, ಅದು ಭಗವಂತ ಸುಂದರ ಸೃಷ್ಟಿಯೆಂಬ ಕಲಾಕೃತಿಯ ಮೇಲೆ ತಾನು ಮಾಡಿದಹಸ್ತಾಕ್ಷರ’ ಎನ್ನುತಾನೆ ಮತ್ತೊಬ್ಬ ಕವಿ! ದಿಕ್ಕುಗಳನ್ನು ಸಮರ್ಥವಾಗಿ ಕಾಯುವ ಗಜಗಳಿಗೆ ನಿಸರ್ಗವೇಹಾರ ಹಾಕಿ ಸಮ್ಮಾನಿಸು’ವಂತಿದೆ’….. ಹೀಗೆ ಕವಿಗಳ ಕಲ್ಪನಾವಿಲಾಸ ಸಾಗುತ್ತದೆ... 
ಅಧುನಿಕ ಸಾರಿಗೆ ವ್ಯವಸ್ಥೆಗಳಿಲ್ಲದಿದ್ದ ಪ್ರಾಚೀನಕಾಲದಲ್ಲಿ ಎಲ್ಲ ಬಗೆಯ ಪ್ರವಾಸ, ಯುದ್ಧ, ವ್ಯಾಪಾರಾದಿಗಳನ್ನು ಮಳೆಗಾಲದಲ್ಲಿ ಸ್ಥಗಿತ/ ಮಿತಗೊಳಿಸಲಾಗುತ್ತಿತ್ತು, ಗಂಡಸರು ಮನೆಯಲ್ಲೇ ಹೆಚ್ಚು ಸಮಯ ಇರುವ ಸಾಧ್ಯತೆ. ಹಾಗಾಗಿ ಮಳೆಗಾಲ ದಂಪತಿಗಳ ಮಿಲನಕ್ಕೆ ಹೇಳಿ ಮಾಡಿಸಿದ ಕಾಲ! ಕೂಡಿ ಸರಸವಾಡುವುದು ಅಥವಾ ವ್ರತೋಪವಾಸಾದಿಗಳನ್ನು ಆಚರಿಸುವುದು, ಮನೆಮಂದಿಯೆಲ್ಲ ಕೂಡಿ ಊಟ-ಸಲ್ಲಾಪ ನಡೆಸುವುದು ಇತ್ಯಾದಿಗೆ ಅನುಕೂಲಕರ ಕಾಲ. ಹಾಗಾಗಿ ಮಳೆಗಾಲ ಪ್ರಿಯಪ್ರಿಯೆಯರಿಗೆ ಸಂತಸದ ಕಾಲ. ಆದರೆ ಮಳೆಗಾಲದಲ್ಲಿ ವಿರಹಿಗಳಿಗೆ ಹೆಚ್ಚು ಹೆಚ್ಚು ಸಂಕಟವೇ ಆಗುತ್ತದೆಯಂತೆ! ಗಂಡನೇನಾದರೂ ಪ್ರವಾಸ ಹೊರಟಿದ್ದರೇ, ಅದೇ ಮಳೆಗಾಲ ವಿರಹಿಣಿಯರಿಗೆ ದುಃಖತಮವಾಗುತ್ತದೆ ! ವರ್ಷಾಕಾಲವಾದ್ದರಿಂದ ಮರಳಿ ಊರಿಗೆ ತಕ್ಷಣ ಪಯಣಿಸುವಂತಿಲ್ಲ, ಹಾಗಾಗಿ ‘ಆತ ಅಲ್ಲಿ ಈಕೆ ಇಲ್ಲಿ….’ ದೂರ ದೂರ ಉಳಿದು ವಿರಹಿಸುವುದೇ ಗತಿ! ಅಂತಹವರ ಪಾಲಿಗೆ ಮೋಡ, ಚಳಿಗಾಳಿ ಹಾಗೂ ಮೋಡದ ಮರೆಯಲ್ಲಿ ಕದ್ದು ನೋಡುವ ಚಂದ್ರಮನು ವಿರಹ ತಾಪವನ್ನು ಮತ್ತಷ್ಟು ಹೆಚ್ಚಿಸುವ ‘ದುಷ್ಟ’ರಂತೆ ! ಕವಿಯ ಕಲ್ಪನೆಯಲ್ಲಿ ಮೋಡಗಳ ಗರ್ಜನೆಯು ಅವುಗಳಕೋಪ’ವನ್ನು, ಮಳೆಗರೆಯುವಿಕೆ ಅವುಗಳಅಶ್ರುಧಾರೆ’ಯನ್ನೂ, ಮಿಂಚು ಅವುಗಳಅಟ್ಟಹಾಸದ ಹಲ್ಲಿನ ಹೊಳಪ’ನ್ನೂ, ಕಾಳಕತ್ತಲೆಯುವಿರಹ’ವನ್ನೂ ಪ್ರತಿನಿಧಿಸುತ್ತವೆ! ಕೆಲವರು ಮಳೆಯನ್ನು ಸಕಲ ವೈಭವಗಳೊಂದಿಗೆ ಸಡಗರದ  ಸದ್ದುಗದ್ದಲಗಳೊಂದಿಗೆ ಆಗಮಿಸುವಚಕ್ರವರ್ತಿ’ಗೆ ಹೋಲಿಸಿದರೆ, ಕೆಲವರುಕೆಸರಲ್ಲಿ ನುಗ್ಗಿ ಬರುವ ಮದಿಸಿದ ಯುವ ಸಲಗ’’ಕ್ಕೆ ಹೋಲಿಸುತ್ತಾರೆ. ಕೆಲವೊಮ್ಮೆ ಅದೇ ಬೆಳ್ಳಿಯಂಚಿನ ಮೋಡವು ಯುವತಿಯಬೆಳ್ಳಿಯ ಕಾಡಿಗೆಯ ಭರಣಿ’ಯೂ ಆಗುತ್ತದೆ, ನೀರಲ್ಲಿ ಒದ್ದೆಯಾದಎಮ್ಮೆಯ ಕೆಚ್ಚಲೂ’ ಆಗುತ್ತದೆ,ಬಾಣಂತಿಯ ವಕ್ಷಸ್ಥಲವೂ’ ಆಗುತ್ತದೆ! ವಿರಹಿಗಳಿಗೆ ಮೋಡವು ಪ್ರಿಯೆಯ ಚದರಿದ ಕಣ್ಣ ಕಾಡಿಗೆಯನ್ನು ನೆನಪಿಸುತ್ತದೆ. ಮಳೆಯ ಹಿನ್ನಲೆಯಲ್ಲಿ ಮೂಡುವ ಅಣಬೆಗಳನ್ನುಹುಲ್ಲುಗಳು ತಮ್ಮನ್ನು ತಾವು ಮಳೆಯಿಂದ ರಕ್ಷಿಸಿಕೊಳ್ಳಲು ಎತ್ತಿ ಹಿಡಿದ ಛತ್ರಿ’ಗಳೂ ಆಗಿ ಕಾಣುತ್ತವೆ!
ಕವಿಯ ಮಾತುಗಳಲ್ಲಿ ವಿರಹಿಗೆ ಕಪ್ಪು ಮೋಡವುಪ್ರೇಯಸಿಯನ್ನು ಸೇರುವ ಹಾದಿಯಲ್ಲಿ, ಅಡ್ಡಗಟ್ಟಿನಿಂತ ಕಠಿಣ ಬೆಟ್ಟ’ದಂತೆ ತೋರುತ್ತದೆ! ಇನ್ನೊಮ್ಮೆದೊಡ್ದ ಕಪ್ಪು ಆನೆ’ಯಂತೆ ಕಾಣಬರುತ್ತದೆ! ಮಗದೊಮ್ಮೆಯಮನ  ವಾಹನವಾದ ಕಪ್ಪು ಮಹಿಷ’ದಂತೆಯೂ ಕಾಣುತ್ತದೆ! ಸಂಭೋಗಶೃಂಗರಾದ ಪ್ರಸಂಗಗಳಲ್ಲಿ ಅದೇ ಮೋಡಪ್ರಿಯಪ್ರಿಯೆಯರ ಮಿಲನದ ಗುಟ್ಟನ್ನು ಕಾಪಾಡಿ ಕೊಡುವ ಕರಿಯ ಪರದೆಯೂ’ ಆಗುತ್ತದೆ, ನಿಸರ್ಗವೇ ಇತ್ತ ರಕ್ಷಣೆಯಾಗುತ್ತದೆ, ಇವರ ಪ್ರಣಯಕ್ಕೆ ದೇವತೆಗಳೇ ಮಾಡುತ್ತಿರುವ ಕೃಪಾವಿಶೇಷವೂ ಆಗುತ್ತದೆ!
ಮೇಘದೂತದಲ್ಲಿ ಕವಿಗೆ ಮೋಡವು ಒಮ್ಮೆಕೃಷ್ಣನ ಮುಡಿಯ ನವಿಲುಗರಿ’ಯಂತೆ ಕಂಡರೆ, ಮತ್ತೊಮ್ಮೆತನ್ವಿಯ ವಕ್ಷಸ್ಥಳ’ದಂತೆ’ಯೂ ಮಗದೊಮ್ಮೆಆಕಾಶವನ್ನು ಕಾಯುತ್ತ ನಿಂತ ದಿಗ್ಗಜಗಳಂ’ತೆಯೂ, ‘ಆಕಾಶಪಥದಲ್ಲಿ ಶಿವನ ನಂದಿಯು ಎಬ್ಬಿಸಿದ ಕೆಸರಿನ ಮಾರ್ಗ’ದಂತೆಯೂ, ‘ಬಲಿಯನ್ನು ಆಕ್ರಮಿಸುವ ಸಲುವಾಗಿ ವಿಷ್ಣು ಎತ್ತಿದ ಪಾದದ ಗುರುತಾ’ಗಿಯೂ, ‘ಸ್ವರ್ಗಲೋಕಕ್ಕೆ ಸೋಪಾನ’ವಾಗಿಯೂ, ‘ಮಿಂಚೆಂಬ ದೀವಟಿಗೆಯನ್ನು ಹಿಡಿದು ಅಭಿಸಾರಿಕೆಯರಿಗೆ ದಾರಿತೋರುವ ಸಹಾಯಕ’ನಾಗಿಯೂ ಕಾಣುತ್ತದೆ! ಕೆಲವೊಮ್ಮೆಕಂಠಭರ್ತಿ ಕುಡಿದು ಮತ್ತೇರಿದ ವ್ಯಕ್ತಿ’ಯಂತೆಯೂ ಮೋಡ ಕಾಣಬರುತ್ತದೆಮೇಘದೂತದಲ್ಲಿ ಉತ್ತರಾಭಿಮುಖವಾಗಿ ಪಯಣಿಸುವ ಮುಂಗಾರಿನ ಮೋಡವೇ ವಿರಹಿಯ ಸಂದೇಶವನ್ನು ಪ್ರೇಯಸಿಗೆ ಒಯ್ಯುವ ದೂತನಾಗುವ ಸ್ವಾರಸ್ಯವನ್ನು ಕಾಣಬಹುದು. ಕವಿಕಲ್ಪನೆಗೆ ಸೀಮೆಯೆಲ್ಲಿ?!
ಮೃಚ್ಛಕಟಿಕಾ ನಾಟಕದಲ್ಲಿ  ಮೋಡಗಳ ವರ್ಣನೆ ಹೀಗೆದೆ- “ಮಿಂಚುಗಳೆಂಬ ಹಗ್ಗಗಳಿಂದ ಕಟ್ಟಲ್ಪಟ್ಟ ಕಪ್ಪು ಮೋಡಗಳೆಂಬ ಆನೆಗಳು ಇಂದ್ರನ ಆಜ್ಞೆಯಂತೆ ಭೂಮಿಯನ್ನು ತಮ್ಮ ಬೆಳ್ಳಿಯ ರಜ್ಜುಗಳಿಂದ ಅಗೆಯಲಾರಂಭಿಸಿವೆಯೇನೋ ಎಂಬಂತಿದೆ…” ‘ಋತುಸಂಹಾರ’ದಲ್ಲಿ ಷಡ್ರುತುಗಳನ್ನೂ ವರ್ಣಿಸುತ್ತಾನೆ ಕವಿಕಾಳಿದಾಸ. "ಮಳೆಯಲ್ಲಿ ಚೆನ್ನಾಗಿ ’ಸ್ನಾನ’ ಮಾಡಿದ ಭೂಮಿ ಎಂಬ ಅಂಗನೆಯು, ಧೂಳಿಯೆಲ್ಲ ತೊಳೆಯಲ್ಪಟ್ಟು ಶುಭ್ರವಾಗಿ ನಳನಳಿಸುತಾಳೆ. ಕಪ್ಪು ಮೋಡಗಳು, ಗುಡುಗಿನ ದನಿಯು ಪರಿಸರಕ್ಕೆ ಅನನ್ಯ ವೈಶಿಷ್ಟ್ಯವನ್ನು ತರುತ್ತವೆ. ಹಗಲೂ ರಾತ್ರಿ ಮೋಡ ಕವಿದಿದ್ದು ಸದಾ ಮಂಕಾಗಿಯೇ ಇರುತ್ತದೆ. ಪ್ರಾಣಿಪಕ್ಷಿಗಳಿಗೆ ಲವಲವಿಕೆ ಸಂತೋಷಗಳೆಲ್ಲ ಕುಗ್ಗಿಹೋಗುತ್ತದೆ. ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆದಿದ್ದಕ್ಕೆ ತುಂಬ ಸಂತೋಷ ಪಡುವಂತಹವು ನವಿಲುಗಳು, ಎಲ್ಲ ಕಡೆಗಳಿಂದಲೂ ನೀರಿನ ಝರಿಗಳು ಹರಿದು ಬಂದಿದ್ದು, ನದಿಗಳು ತುಂಬಿ ಹರಿಯುತ್ತವೆ. ಎಲ್ಲ ಕಡೆಗಳಿಂದಲೂ ನೀರಿನ ಸ್ರೋತಗಳು ಹರಿದು ಬಂದಿದ್ದು ನದಿಯು ಹೆಚ್ಚಿನ ನೀರಿನಿಂದ ತುಂಬಿದ್ದು ವೇಗವಾಗಿ ಹರಿಯುತ್ತವೆ. ನದಿಗಳು ತಮ್ಮ ನೀರಿನ ರಭಸದಿಂದ ಗಿಡಮರಗಳನ್ನು ಬೇರು ಸಮೇತ ಕಿತ್ತೊಗೆಯುತ್ತ ಸಾಗರದತ್ತ ನುಗ್ಗುತ್ತವೆ. ಅರಣ್ಯವು ಹಚ್ಚಹಸಿರಾಗಿ ಹೂ-ಬಳ್ಳಿಗಳಿಂದ ಶೋಭಿಸುತ್ತವೆ. ಗುಡುಗು-ಮಿಂಚುಗಳಿಗೆ ಹೆದರಿ ಬೆಚ್ಚಿದ ಅಂಗನೆಯರು ಓಡಿ ಹೋಗಿ ತಮ್ಮ ಪ್ರಿಯಕರನನ್ನು ಸೇರುತ್ತಾರೆ! ಮಳೆಗಾಲದ ಹೂಗಳನ್ನು ಮುಡಿದು ಅವುಗಳ ಸುಗಂಧವನ್ನೇ ಮೈಗೆ ಪೂಸಿಕೊಂಡಿರುತ್ತಾರೆ. ವಿರಹಿಣಿಯರು, ತಮ್ಮ ಪ್ರಿಯಕರನು ಇನ್ನೂ ಮನೆಗೆ ಹಿಂದಿರುಗದಿರಲು, ಮನೆಯ ಮುಂದೆ ಕುಳಿತು ಕಾಯುತ್ತ ಗುಡುಗುವ ಮೋಡಗಳನ್ನೇ ದಿಟ್ಟಿಸುತ್ತ ಭಾವನೆಯನ್ನು ತೋಡಿಕೊಳ್ಳುತ್ತಾರೆ!"- ಇದಿಷ್ಟು ಕಾಳಿದಾಸನ ಋತುಸಂಹಾರದಲ್ಲಿನ ಮಳೆಗಾಲದ ಪರಿಸರದ ವರ್ಣನೆಯ ಸಾರಾಂಶ ಎನ್ನಬಹುದು.   
ಸೀತಾವಿರಹದಿಂದ ಬಳಲುತ್ತಿದ್ದ ರಾಮನ ಅವಸ್ಥೆಯನ್ನು ಅವನ ಬಾಯಲ್ಲೇ ಒಂದು ಶ್ಲೋಕ ಹೀಗೆ ವರ್ಣಿಸುತ್ತದೆ- “ಸ್ನಿಗ್ಧ-ಶ್ಯಾಮಲ-ಕಾಂತಿ-ಲಿಪ್ತವಾದ ಆಕಾಶವು, ಮೋಡಗಳು, ಮಳೆ ಮುಂತಾದ ಮಳೆಗಾಲದ ಲಕ್ಷಣಗಳು ‘ಕಠಿಣಹೃದಯಿ’ಯಾದ ನನ್ನನ್ನೇ ಹೀಗೆ ಬಾಧಿಸುತ್ತಿವೆ! ಇನ್ನು ಮೃದುಹೃದಯದ ಸೀತೆ ಹೇಗೆ ತಾನೆ ವಿರಹವನ್ನು ಸಹಿಸಿಯಾಳು? ಹಾ ದೇವಿ! ಧೈರ್ಯ ತಾಳು!"
ಮೃಚ್ಛಕಟಿಕಾ ನಾಟಕದಲ್ಲಿ ಮಳೆಗಾಲವು ವಸಂತಸೇನೆ ಹಾಗೂ ಚಾರುದತ್ತರ ಮಿಲನಕ್ಕೆ ಉತ್ತಮ ವೇದಿಕೆಯೂ ಆಗುತ್ತದೆ. ಅಭಿಸಾರಿಕೆಯಾಗಿ ಹೊರಟ ವಸಂತಸೇನೆ, ಮಿಂಚು-ಗುಡುಗು-ಮಳೆಗಳ ಆರ್ಭಟವನ್ನೂ ಲೆಕ್ಕಿಸದೆ, ಮಳೆಯಲ್ಲಿ ಸಂಪೂರ್ಣ ಒದ್ದೆಯಾಗಿ, ಪಾದಮುಂಗಾಲುಗಳು ಕೆಸರಾಗಿದ್ದು, ಒದ್ದೆ ಸೀರೆಯಲ್ಲಿ ನಡುಗುತ್ತ ಚಾರುದತ್ತನ ಮನೆಗೆ ಬಂದು ನಿಲ್ಲುತ್ತಾಳೆ. ಅವರ ತನ್ಮಯ ಮಿಲನಕ್ಕೆ ಭಂಗ ತರುವುದೇ ಕೆಲಸದವರಮಳೆಗಾಲದಕುರಿತಾದ ಮಾತುಕತೆ- "ಐರಾವತವೇ ಮೋಡವಾಗಿ ಚಲಿಸುತ್ತಿದೆ, ತನ್ನ ಕಣ್ಣುಗಳಂತಿರುವಕಮಲಗಳನ್ನು ಮುಚ್ಚಿಕೊಂಡು (ಮಳೆ/ ರಾತ್ರಿಗೆ ಕಮಲ  ಮುದುಡುತ್ತದಲ್ಲವೆ!) ಭೂಮಿ (ಎಂಬ ಯುವತಿ) ಮಲಗಿರಲು, ಇಂದ್ರನ ಸಿಡಿಲಿಗೆ ದ್ರವಿಸಿ, ಮಿಂಚೆಂಬ ತನ್ನ ಕೊರಳ ಚಿನ್ನದ ಹಾರವೇ ಜಾರಿಬೀಳುತ್ತಿದೆ!” ಕೆಲಸದವರೂ ಇಷ್ಟು ಸುಂದರವಾಗಿ ಕಾವ್ಯಮಯವಾಗಿ ಪ್ರಕೃತಿವರ್ಣನೆ ಮಾಡಬಲ್ಲುದು ಭಾರತೀಯ ಕಾವ್ಯಲೋಕದಲ್ಲಿ ಮಾತ್ರ! ಅಂಕದ ಕೊನೆಯಲ್ಲಿ ಚಾರುದತ್ತನು ವಸಂತಸೇನೆಯನ್ನು ಮನೆಯೊಳಕ್ಕೆ ಕರೆದೊಯ್ಯುವಾಗ ಮತ್ತೊಮ್ಮೆ ವರ್ಣನೆ ಸಾಗುತ್ತದೆ- “ಸಂಗೀತದ ವೀಣೆಯಂತೆ ತಾಳ ಪತ್ರಗಳ ಮೇಲೆ ತಾರ-ಶ್ರುತಿಯಲ್ಲೂ, ಕೊಂಬೆಗಳ  ಮೇಲೆ ಮಂದ್ರ-ಶ್ರುತಿಯಲ್ಲೂ, ಶಿಲೆಗಳ ಮೇಲೆ ಋಕ್ಷಧ್ವನಿಯಲ್ಲೂ, ನೀರಿನ ಮೇಲೆ ಚಂಡಧ್ವನಿಯಲ್ಲೂ, ತಾಲಾನುಸಾರವಾಗಿ ಹೊಡೆಯಲ್ಪಡುತ್ತಿದೆ ವರ್ಷಾಧಾರೆ”
ಸದುಕ್ತಿ-ಕರ್ಣಾಮೃತದಲ್ಲಿ ಮಳೆಗಾಲದ ಭೂಮಿಯ ಬೆಟ್ಟವೊಂದರ ವರ್ಣನೆ - ಪ್ರಿಯನನ್ನು ಸೇರಿದಾಗ ರೋಮಾಂಚನ ಆಗುವಂತೆ, ಮೈತುಂಬ ಹುಲ್ಲು ಚಿಗುರುಗಳು ಹಾಗೂ ಬಿರಿಯುತ್ತಿರುವ ಕುಟಜ-ಮೊಗ್ಗುಗಳನ್ನು ಹೊಂದಿರುವ ಬೆಟ್ಟವೆಂಬ ಭಾಮಿನಿಯು ತನ್ನ ಜಲಧಾರೆಗಳ ಮೂಲಕ ಬೆವರನ್ನು ಸ್ರವಿಸುತ್ತಿದ್ದಾಳೆ!” ಸುಭಾಷಿತಭಾಂಡಾಗಾರದ ವರ್ಷಾ ವಿಭಾಗದಲ್ಲಿ, ಮಳೆಗಾಲದಲ್ಲಿ ಕೆಲಸಕಾರ್ಯಗಳ ನಿಮಿತ್ತ ಮನೆಯಿಂದ ದೂರಹೋದ ಸ್ತ್ರೀಯರ ಅವಸ್ಥೆಯನ್ನು ವರ್ಣಿಸುವ ಶ್ಲೋಕ ಹೀಗಿದೆ- "ದೇವತೆಗಳು ಮಳೆಗರೆದಾಗ ನಾರಿಯರು ಬೀಸುವ ಗಾಲಿಯನ್ನು ತಡೆಯುತ್ತ, ತಮ್ಮ ತಲೆಗಳನ್ನು ಬಿದುರಿನ ಮೊರಗಳಿಂದ ರಕ್ಷಿಸಿಕೊಳ್ಳುತ್ತ, ಕೈಗೆ ಸಿಕ್ಕ ಮಾಡನ್ನೋ ಅಟ್ಟವನ್ನೋ ಬಿಗಿಯಾಗಿ ಹಿಡಿದುಕೊಳ್ಳುತ್ತ, ಕೆಸರನ್ನು ದಾಟಲು ಮರದ ಹಲಗೆಗಳಸೇತುವಿನ ಮೇಲೆ ನಡೆಯುತ್ತ, (ಚಳಿಯಲ್ಲಿ ನರಳಿದ್ದು) ಒಂದಿಷ್ಟು ಶಾಖ ಪಡೆಯುವ ಸಲುವಾಗಿ ಮನೆಯಿಂದ ಮನೆಗೆ ಓಗುತ್ತಾರೆ.

ಮಳೆ ಮತ್ತು ಭಾವನೆಗಳು-

ಎಲ್ಲ ಬಗೆಯ ಆಕಾರಗಳನ್ನು ತಾಳುವ ಮೋಡಗಳು ಸಾಕಾರವೂ ಹೌದು ನಿರಾಕಾರವೂ ಹೌದು!
ಮಳೆಗೆ, ಮೋಡಕ್ಕೆ ಮನುಷ್ಯ ಮಾತ್ರವೇ ಅಲ್ಲದೆ, ಪ್ರಾಣಿಪಕ್ಷಿಗಳು ಸ್ಪಂದಿಸುತ್ತವೆ, ಇನ್ನೂ ಹೆಚ್ಚು ಸಂವೇದನಾಶಿಲವಾಗಿಯೇ ಸ್ಪಂದಿಸುತ್ತವೆ ಎನ್ನಬಹುದುಮೋಡವನ್ನು ಕಂಡಾಗ, ಮಳೆ ಹನಿದಾಗ ನವಿಲುಗಳು ಗರಿಗೆದರಿ ನರ್ತಿಸುವ ಅನುಪಮ ದೃಶ್ಯ ಯಾರಿಗೆ ತಾನೆ ನವಿರೇಳಿಸುವುದಿಲ್ಲ?! ನವಿಲುಗಳಿಗಂತೂ ಉನ್ಮಾದವುಂಟಾಗಿ ಗರಿ ಗೆದರಿ ತಮ್ಮ ಪ್ರಿಯೆಯರನ್ನು ಆಕರ್ಷಿಸುತ್ತ ನರ್ತಿಸುವ ದೄಶ್ಯ ಸರ್ವ-ಹೃದಯಾಹ್ಲಾದಕಾರಿ. ನವಿಲಿಗೆಘನೋತ್ಕಂಠಿತ’ಪರ್ಜನ್ಯ ಮಿತ್ರ’ ಮುಂತಾದ ಹೆಸರುಗಳಿಂದಲೂ ವಿಶೇಷಣಗಳಿಂದಲೂ ಸೂಚಿಸುವ ವಾಡಿಕೆ ಇಂದುನೆನ್ನೆಯದಲ್ಲ. ಮಳೆಗೆ ಮುನ್ನ ಏಳುವ ಮಣ್ಣಿನ ವಾಸನೆಗೆ ಸಂತಸದಲ್ಲಿ ಹುಚ್ಚೆದ್ದು ಆನೆಗಳು ಅತ್ತಿತ್ತ ಧಾವಿಸುತ್ತವೆ! ಕಪ್ಪೆಗಳಿಗಂತೂ ಅದೇನು ಸಂಭ್ರಮವೋ, ಮೂಲೆ ಮೂಲೆಗಳಿಂದ ಹಿಂದುಹಿಂಡಾಗಿ ಉತ್ಸಾಹದಿಂದ ಕೂಗಲಾರಂಭಿಸುವುದನ್ನು ವೇದಮಂತ್ರಗಳು ವರ್ಣಿಸುತ್ತವೆ! ಮಳೆಗಾಲದಲ್ಲಿ ಕಾಣಿಸಿಕೊಳ್ಳುವಇಂದ್ರಗೋಪ’ ಎಂಬ ರೆಕ್ಕೆಯುಳ್ಳ ಕೆಂಪುಬಣ್ಣದ ಕೀಟಗಳ ಬಗ್ಗೆ ಸಂಸ್ಕೃತ ಸಾಹಿತ್ಯದಲ್ಲಿ ಉಲ್ಲೇಖಗಳಿವೆ. ಒಂದು ಜನಪ್ರಿಯ ಪ್ರತೀತಿ (ಸತ್ಯವೋ ಏನೋ ತಿಳಿಯದು)- ‘ಸ್ವಾತಿ’ ನಕ್ಷತ್ರಕ್ಕೆ ಮಳೆಯೇ ಆಗುವುದಿಲ್ಲ, ಅಕಸ್ಮಾತ್ತಾಗಿ ಮಳೆಯಾದರೂ ಕೆಲವೇ ಹನಿಗಳು ಬೀಳುತ್ತದಂತೆ,ಚಾತಕಎಂಬ ಒಂದು ಪಕ್ಷಿ-ಜಾತಿಯು ಅದೆಷ್ಟೇ ಬಾಯಾರಿಕೆಯಾದರೂ, ಸುತ್ತಲೂ ನೀರಿದ್ದರೂ ಸೇವಿಸದೆ, ಸ್ವಾತಿ ನಕ್ಷತ್ರದ ಮಳೆಯ ಒಂದೆರಡು ಹನಿಗಾಗಿಯೇ ಜೀವನವಿಡೀ ಕಾಯುತ್ತದಂತೆ!
ಕಪ್ಪು ಮೋಡವನ್ನು ಕಂಡಾಗ ಬಲಾಕ ಪಕ್ಷಿಗಳು (ಬೆಳ್ಲಕ್ಕಿಗಳು) ಉತ್ಕಂಠಿತವಾಗಿ ಆಕಾಶಕ್ಕೆ ಹಾರಿ ವಿಹರಿಸುತ್ತವೆ. ಮಳೆಗಾಳಿಗಳಿಗೆ ಆನಂದದಿಂದ ತೂರಾಡುವ ಗಿದಮರಗಳ ದೃಶ್ಯವೂ, ಮಳೆನೀರಿನಿಂದ ತೊಯ್ಯಲ್ಪಟ್ಟು ಶುದ್ಧವಾಗಿ ನಳನಳಿಸುವ ವನಸ್ಪತಿಗಳ ದೃಶ್ಯವೂ ಯಾರನ್ನು ತಾನೆ ಮನತಣಿಸುವುದಿಲ್ಲ?!
ಮಳೆಗಾಲದ ರಾತ್ರಿಗಳಲ್ಲಿ ತೇವಾಂಶವುಳ್ಳ ಪರಿಸರದಲ್ಲಿ ಮಿಂಚುಳಗಳು ಸಂಭ್ರಮಿಸುತ್ತವೆ. ಮಳೆಯ ಮಿಂಚು ಹೋದ ಮೇಲೆಯೇ ಕದಂಬ ಮುಂತಾದ ಮರಗಳು ಹೂಗಳನ್ನು ತಳೆಯುವುದು.
ಕಾಳಿದಾಸನಮೇಘದೂತ’ದಲ್ಲಂತೂ ನಾಯಕನು ಉತ್ತರಾಭಿಮುಖವಾಗಿ ಗಮಿಸುತ್ತಿರುವ ಮೋಡವನ್ನೇ ತನ್ನದೂತ’ನನ್ನಾಗಿಸಿಕೊಳ್ಳುವುದನ್ನು ಕಾಣುತ್ತೇವೆ. ದೂರದ ಹಿಮಾಲಯದ ಅಲಕಾಪುರಿಯಲ್ಲಿರುವ ತನ್ನ ಪ್ರಿಯೆಗೆ ತನ್ನ ಸಂದೇಶವನ್ನೂ ವಿರಹ-ವ್ಯಥೆಯನ್ನೂ ತಿಳಿಸುವಂತೆ ಕೋರುತ್ತಾನೆ, ವಿಳಾಸವನ್ನೂ ವರ್ಣಿಸುತ್ತ ಗಿರಿ, ದರಿ, ನೆಲ, ಜಲ, ಗ್ರಾಮ ನಗರಗಳ  ವರ್ಣನೆಗೆ ತೊಡಗುತ್ತಾನೆ!

ಮೋಡ-ಮಳೆಗಳ ಕುರಿತಾದ ಸಂಶೋಧನಾತ್ಮಕ ವಿಚಾರಗಳು
ಮಳೆಗೆ, ಮೋಡಕ್ಕೆ ಸಂಬಂಧಿಸಿದ ಮಂತ್ರಾರ್ಥಗಳು ಸ್ವಾರಸ್ಯವಾಗಿವೆ- “ಓ ಮಳೆಗರೆಯುವ ಮೋಡವೆ ನಿನ್ನ ತಂಡದಲ್ಲಿ(ಮೋದಗಳ ಸಮೂಹದಲ್ಲಿ) ಸಾಕಷ್ಟು ನೀರಿದೆ, ಅವು ನಮ್ಮ ಜೀವನಕ್ಕೆ ಬಲಕೊಡುವಂತಹದ್ದು, ನಿಮ್ಮನ್ನು ಬೆಸೆಯುವ ಶಕ್ತಿಗಳೂ ಆಗಿವೆ, ಅವುಗಳು ನೀರನ್ನೂಡಿ ಅನ್ನವನ್ನು ವರ್ಧಿಸುತ್ತವೆ, ಅಲೆಗಳಲ್ಲಿ ಲಾಲಿಸಲ್ಪಟ್ಟು ಎಲ್ಲೆಲ್ಲೂ ಹರಡುತ್ತವೆ, ವಾಯು-ಮಿಂಚುಗಳೊಡನೆ ಕೂಡಿ (ಮೋಡಗಳು) ಗರ್ಜಿಸುತ್ತವೆ ಬಳಿಕ ಮಳೇಯಾಗಿ ಭೂಮಿಗೆ ಬೀಳುತ್ತವೆ", “ಸೂರ್ಯನ ಶಾಖದ ಬೆಂಬಲದಿಂದ ವಾಯುವಿನ ಮುಖಾಂತರ ಅಂತರೀಕ್ಷಕ್ಕೇರುವ ಜಲವು ಅಲ್ಲಿ ಶಿತಲೀಕರಣಗೊಳ್ಳುತ್ತವೆ. ಮೋಡಗಳಾಗಿ ನಿಂತ ಅವು ಅಡೇ ವಾಯುವಿನ ಬೆಂಬಲದಿಂದ ಮಳೆಯಾಗಿ ಭೂಮಿಗೆ ಬೀಳುತ್ತವೆ. ನೀರು ಎಂದೂ ವ್ಯಯವಾಗುವುದಿಲ್ಲ, ರೂಪಾಂತರವನ್ನು ಹೊಂದುತ್ತದೆ ಅಷ್ಟೆ ( ನಾಶಂ ಉದಕಸ್ಯಸ್ತಿ ತದೇವ ಪರಿವರ್ತತೆ--’-ವಾಯುಪುರಾಣ)ಋಗ್ವೇದದ ಪ್ರಕಾರ ನೀರು ವಾಯುವಿನ ಸಹಾಯದಿಂದ ಅಂತರೀಕ್ಷಕ್ಕೇರಿ ಮೋಡವಾಗಿ, ಅದೇ ಸೂರ್ಯನ ಶಾಖಕ್ಕೆ ಕರಗಿ ಮಳೆಯಾಗಿ ಭೂಮಿಗೆ ಬಿದ್ದು ಕೆರೆ, ನದಿ ಸಾಗರಗಳನ್ನು ತುಂಬುತ್ತದೆ.
ನೀರಿನ ಆವಿಯಾಗುವಿಕೆ, ಹೆಪ್ಪುಗಟ್ಟುವಿಕೆ, ಮೋಡವಾಗಿ ರೂಪಗೊಳ್ಳುವಿಕೆ, ಅಲ್ಲಿ ಮತ್ತೆ ಶಾಖಕ್ಕೆ ಒಳಪಡುವಿಕೆ, ಹಾಗೂ ಅದರ ಪರಿಮಾಣ ಮಾಪನ ಮುಂತಾದ ಹಲವು ವಿಚಾರಗಳ ಬಗ್ಗೆ ವೇದ, ಪುರಾಣ ಹಾಗೂ ಅನೇಕ ಶಾಸ್ತ್ರಗಲಲ್ಲಿ ಉಲ್ಲೇಖಗಳಿವೆ. ಮಳೆಯನ್ನು ಪ್ರಚೋದಿಸುವ ಸಲುವಾಗಿ ವೇದಕಾಲದಿಂದಲೂ ಪ್ರಯತ್ನಗಳು ನಡೆದಿವೆ ಎನ್ನುವುದನ್ನು ಇದು ಸೂಚಿಸುತ್ತದೆ. ತುಪ್ಪ, ಗಿದಮೂಲಿಕೆಗಳು ಮುಂತಾದ ನಿಸರ್ಗಪ್ರೇಮಿ ದ್ರವ್ಯಗಳನ್ನೇ ಬಳಸಿ ಮಾಡುವ ಹೋಮಹವನಗಳಿಂದ ವಾತಾವರಣವು ಪ್ರಭಾವಗೊಂಡು ಸೂಕ್ತಕಾಲಕ್ಕೆ ಮಳೆಬೆಳೆಗಳಾಗುತ್ತವೆ ಎನ್ನುವುದು ಪರಂಪರೆಯ ನಂಬಿಕೆ. ಕೌಟಿಲ್ಯನ ಕಾಲದಲ್ಲೇ (೪ನೆ ಶತಮಾನ) ಮಳೆಯನ್ನು ಮಾಪನ ಮಾಡುವವರ್ಷಮಾನ್ಯಂತ್ರವು ಆವುಷ್ಕಾರಗೊಂಡಿತ್ತು. ಅರ್ಥಶಾಸ್ತ್ರದಲ್ಲಿ ಯಂತ್ರವನ್ನು ನಿರ್ಮಿಸುವ ವಿಧಾನವನ್ನು ವಿವರಿಸಲಾಗಿದೆ. ಇಲ್ಲಿನ ಮಾಪನದ ಸಂಜ್ಞೆಗಳ ವಿನ್ಯಾಸ ಬೇರೆಯಾಗಿತ್ತೇ ಹೊರತು, ವೈಜ್ಞಾನಿಕ ಸಿದ್ಧಾಂತವು ಎಲ್ಲ ರೀತಿಯಲ್ಲೂ ಇಂದಿನ ಪದ್ಧತಿಯನ್ನೇ ಹೋಲುತ್ತದೆ! ಮರುಭೂಮಿ, ರಸವತ್ತಾದ ಮಣ್ಣುಳ್ಳ ಭೂಪ್ರದೇಶ, ಮಹಾರಾಷ್ಟ್ರರಾಜ್ಯದ ಪ್ರದೇಶ, ಅವಂತಿಯ ಪ್ರದೇಶ, ಕೆಲವು ಪಾಶ್ಚಾತ್ಯ ರಾಷ್ಟ್ರಗಳು, ಹಿಮಾಲಯದ ಅಂಚಿನ ಪ್ರದೇಶಗಳು ಮುಂತಾದ ವಿವಿಧ ಪ್ರದೇಶಗಳಲ್ಲಿನ ಮಳೆಯ ಮಾಪನವನ್ನು ಮಾಡಿದ್ದರ ದಾಖಲೆಗಳನ್ನೂ ಇಲ್ಲಿ ಕಾಣಬಹುದಾಗಿದೆ!
ಒಟ್ಟಿನಲ್ಲಿ  ನಮ್ಮ ಪ್ರಾಚೀನ ಕಾಲದಿಂದಲೇ ಭಾರತದಲ್ಲಿ Hydrology ಶಾಸ್ತ್ರದ ಕುರಿತಾದ ಸಾಕಷ್ಟು ಸಂಶೋಧನೆ, ಆಲೋಚನೆಗಳು ಹಾಗೂ ವ್ಯಾಖ್ಯಾನಗಳು ವೇದಕಾಲದಿಂದಲೂ ನಡೆದಿತ್ತು, ಮಧ್ಯಯುಗದಲ್ಲೂ ಮುಂದುವರೆದುಕೊಂಡೇ ಬಂದಿದೆ. ಕೃಷಿ ಅರಣ್ಯಾದಿ ಕ್ಷೇತ್ರಗಳ ನಿಕಟಪರಿಚಯ ಇರುವವರಿಗೆ ಈಗಲೂ ಮಳೆ, ಮೋಡ, ಋತುಚಕ್ರ, ನಿಸರ್ಗ, ಭೂಮಿ ಮೇಲಿನ ಅದರ ಪ್ರಭಾವ, ಅದಕ್ಕೆ ಸಂಬಂಧಿಸಿದ ಪ್ರಾಣಿಪಕ್ಷಿಗಳ ವರ್ತನೆ ಮುಂತಾದವುಗಳ ಜ್ಞಾನ, ಸಂಶೋಧನೆ ವ್ಯಾಖ್ಯಾನಗಳು ಚಿರಪರಿಚಿತ. ಆದರೆ ದುಃಖದ ವಿಷಯವೇನೆಂದರೆ ಇದಾವುದೂ ನಮ್ಮ ಪಠ್ಯಪುಸ್ತಕಗಳಲ್ಲಿ ಮಾತ್ರ ಎಂದೂ ಪ್ರಕಟವಾಗುವುದಿಲ್ಲ! ಏಕೆಂದರೆ ಇವುಗಳನ್ನು ಗಮನಿಸಿ ವ್ಯಾಖ್ಯಾನಿಸುವವರುಬಿಳಿಯ ಚರ್ಮದ ಪಾಶ್ಚಾತ್ಯರೂ ಅಲ್ಲ, ಅಥವಾ ಅವರ Cheap imitationsಆದ ’Tie-coatಧಾರೀ English ಬಲ್ಲ Professorಗಳೂ ಅಲ್ಲ! ಈ ವೈಜ್ಞಾನಿಕಜ್ಞಾನವನ್ನೂ, ಕಾವ್ಯಮಯ ಕಲ್ಪನಾಸ್ವಾರಸ್ಯಗಳನ್ನೂ, ಭಕ್ತಿಭಾವವನ್ನೂ ನಿಸರ್ಗಪ್ರೇಮವನ್ನೂ ಸಹಸ್ರಮಾನಗಳಿಂದ ಉಳಿಸಿ ಬೆಳೆಸುತ್ತ ಬಂದವರು ನಿಜವಾದಮಣ್ಣಿನ ಮಕ್ಕಳಾದತೀಕ್ಷ್ಣಮತಿಗಳೂ ಸಹೃದಯ-ಹೃದಯಿಗಳೂ ಆದ ಸಾಮಾನ್ಯ ಗ್ರಾಮೀಣ ಜನರು. ಹಾಗಾಗಿಯೇ ಮಳೆಗಾಲ ಇಂದಿಗೂ ಹಳ್ಳಿಜನರಿಗೆ ಅತೀವ ಸಂತಸ ತರುತ್ತದೆ. ಆದರೆ ಆ ಸುಂದರ ಸಂವೇದನೆಗಳನ್ನು ಕಳೆದುಕೊಳ್ಳುತ್ತಿರುವನಾಗರೀಕರಿಗೆ ಮಾತ್ರ ಮಳೆಯು ತಮ್ಮ ಕಾರ್ಯಕಲಾಪಗಳಿಗೆ ಅಡ್ಡಿ ತರುವ ’Nuisance’ ಆಗಿ ಕಾಣಬರುತ್ತದೆ!
೧೦ನೆ ಶತಮಾನಕ್ಕಿಂತ ಮುಂಚೆಯೇ ಅರಣ್ಯಸಂಪತ್ತು, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಮಳೆ-ಗಾಳಿ-ಬಿಸಿಲು ಮುಂತಾದವುಗಳ ಸಂಬಂಧ, ಋತುಚಕ್ರ, ಮೋಡಗಳ ವೈವಿಧ್ಯಗಳು, ಬಣ್ಣಗಳು, ಮಳೆಗರೆಯುವ ಸಾಮರ್ಥ್ಯ, ಸಹಜ ಮಳೆ, ಅಸಹಜ ಮಳೆ, ಆಕಾಶದ ಬಣ್ಣಕ್ಕೂ ಮಳೆಗೂ ಸಂಬಂಧ, ಸಿಡಿಲು, ಅದಕ್ಕೆ ಸಂಬಂಧಿಸಿದ ಪ್ರಾಣಿಸಂಕುಲದ ವರ್ತನೆ ಇತ್ಯಾದಿ ಹಲವು ವಿಚಾರಗಳ ಸಂಶೋಧನೆ, ಚರ್ಚೆ, ಚಿಂತನ-ಮಂಥನಗಳು ಶಾಸ್ತ್ರರಚನೆಗಳು ನಡೆದುಬಂದಿವೆ. ನಿರಂತರ ಆಕ್ರಮಣಗಳ ಪರಿಸರದಲ್ಲಿ ಅದೆಷ್ಟೂ ಅಧ್ಯಯನ ಪರಂಪರೆಗಳು, ದಾಖಲೆಗಳೂ, ಗ್ರಂಥನಿಧಿಯೂ ನಾಶವಾದ್ದರಿಂದ, ಎಲ್ಲವೂ ನಮಗೆ ಯಥಾವತ್ತಾಗಿ ಹಸ್ತಾಂತರವಾಗಿಲ್ಲದಿದ್ದರೂ, ಸಿಕ್ಕಿರುವ ಮಾಹಿತಿಯೂ ಕಡಿಮೆಯದೇನಲ್ಲ.
ಲೇಖಕರು
ಡಾ ಆರತಿ ವಿ ಬಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ