ಶುಕ್ರವಾರ, ಮಾರ್ಚ್ 17, 2017

ದೇವಾಲಯಗಳು ಮತ್ತು ಮನಸ್ಸಮಾಧಾನ
ಲೇಖಕರು-  ಡಾ ಆರತಿ ವಿ ಬಿ, # ೮೪೬, ೪ನೆ ಮುಖ್ಯ ರಸ್ತೆ, ೪ನೆ ಅಡ್ಡರಸ್ತೆ, ವಿಜಯನಗರ, ಬೆಂಗಳೂರು-೪೦
ಮನಃಶಾಂತಿ ಎನ್ನುವುದು ಮನುಷ್ಯ ಸತತವಾಗಿ ಹುಡುಕುವ ವಸ್ತುವೇ ಸರಿ. ಅದನ್ನು ಪಡೆಯಲು ಆತ ಬಗೆ ಬಗೆಯಾಗಿ ಯತ್ನಿಸುತ್ತಾನೆ. ತನ್ನ ಜೀವನದ ಗುರಿಯನ್ನು ಸಾಧಿಸುವುದರ ಮೂಲಕ ಶಾಂತಿ ಸಂತೃಪ್ತಿಗಳು ದೊರಕಿಯಾವು ಎಂದು ನಂಬುತ್ತಾನೆ. ತನ್ನ ಮನೆಯನ್ನು ಸುಖ-ಸೊಲಭ್ಯಗಳಿಂದ ತುಂಬಿಸಿಕೊಂದರೆ ಶಾಂತಿ ಸಿಕ್ಕೀತು ಎಂದು ವಸ್ತು ಸಂಗ್ರಹ, ಧನ ಸಂಗ್ರಹಗಳಲ್ಲಿ ತೊಡಗುತ್ತಾನೆ. ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಸರಳ ಸುಲಭಗೊಳಿಸಿಕೊಳ್ಳುವುದರ ಮೂಲಕ ನೆಮ್ಮದಿ ಸಿಕ್ಕೀತೆಂದು  ತಾಂತ್ರಿಕ ಸಲಕರಣೆಗಳನ್ನು ಸಂಗ್ರಹಿಸುತ್ತಾನೆ. ಮನೆ ಮಂದಿಯೊಂದಿಗೆ ಹಾಗೂ ಬಂಧು ಮಿತ್ರರೊದಾನೆ ಔತಣ ಕೂಟಗಳಲ್ಲಿ ತೊಡಗುತ್ತಾನೆ. ಕಲೆ, ಸಾಹಿತ್ಯ, ಸೇವಾಕಲಾಪಗಳು, ಪ್ರವಾಸ ಮುಂತಾದ ಮಾಧ್ಯಮಗಳಲ್ಲೂ ಶಾಂತಿಯನ್ನು ಅರಸುತ್ತಾನೆ. ಇವುಗಳೆಲ್ಲ ಅವನಿಗೆ ಸುಖ ಶಾಂತಿಗಳನ್ನು ಕೊಡುತ್ತವೆ, ಇಲ್ಲವೆಂದಲ್ಲ. ಆದರೆ ಅದು ತಾತ್ಕಾಲಿಕವಾದದ್ದು, ಐಹಿಕವಾದದ್ದು. ಮನುಷ್ಯನ ವ್ಯಕ್ತಿತ್ವ ಕೇವಲ ಹೊರಗಡೆಯ ಪರಿವಾರ, ಸಮಾಜ, ಧನ ವ್ಯವಹಾರಗಳಿಗೆ ಸೀಮಿತವಲ್ಲ. ಅವನ ಅಂತಾಂಗದ ಬದುಕು ಇನ್ನೂ ವಿಶಾಲ ವಿಸ್ತೃತ. ಆದರೆ ಅದರತ್ತ ಗಮನ ಹರಿಸುವ ಸಹನೆ, ಬಿಡುವು ಉತ್ಸಾಹಗಳು ಅಷ್ಟು ಬೇಗ ಮನುಷ್ಯನಿಗೆ ಉಂಟಾಗುವುದಿಲ್ಲ. ಆದರೆ ತನ್ನ ಒಳಗಿನ ಜೀವನದತ್ತ ಒಂದಷ್ಟು  ಗಮನ ಹರಿಸದಿದ್ದರೆ, ಪ್ರಾಪಂಚಿಕತೆಯ ಬೇಗೆಯಲ್ಲಿ ಅವನ ಅಂತರಂಗ ಬಾಡಿ ಬರಡಾಗುತ್ತ ಹೋಗುತ್ತದೆ. ಉದ್ವಿಗ್ನತೆ, ಅತೃಪ್ತಿ ಹಾಗೂ ಅಷಾಂತಿಗಳು ಕಾಡುತ್ತವೆ. ತನ್ನನ್ನು ತಾನು ಅರಿಯದ ಮನುಷ್ಯ ಜಗತ್ತಿನ ಯಾವುದನ್ನು ಅರಿತರು ಗೆದ್ದರೂ ಅವನ ಜೀವನ ಅಪೂರ್ಣವೇ. ಹಾಗಾಗಿ ಆಗಾಗ ಮನುಷ್ಯ ತನ್ನ ಬಾಹ್ಯ ವಿವರಗಳಿಂದ ಕಳಚಿಕೊಂಡು ಅಂತರ್ಮುಖವಾಗಬೇಕು. ಶ್ರೀ ರಾಮಕೃಷ್ಣ ಪರಮಹಂಸರು ನೆಮ್ಮದಿಯನ್ನು ಅರಸಿ ಬಂದ ಗೃಹಸ್ಥರಿಗೆ 'ಆಗಾಗ ನಿರ್ಜನ ಪ್ರದೇಷದಲ್ಲಿ ಕುಳಿತು ದೇವರನ್ನು ಧ್ಯಾನಿಸು' ಎಂದು ನಿರ್ದೇಶಿಸುತ್ತಿದ್ದರು. ಮನೆಯಿಂದ, ಮನುಷ್ಯರ ಸಂಪರ್ಕದಿಂದ ಸ್ವಲ್ಪಕಾಲ (ದಿನದ ಒಂದರ್ಧ ಘಂಟೆಯಾದರೂ) ದೂರವಿದ್ದು ಆತ್ಮಾನುಸಂಧಾನದಲ್ಲಿ ತೊಡಗಬೇಕು. ಆದರೆ ನಗರ, ಗ್ರಾಮ ಜೀವನಗಳಲ್ಲಿ ಜನದಟ್ಟನೆಯ ನಡುವೆ ಮನೆ ಮಾಡಿಕೊಂಡು, ದೇವರ ಕೊಣೆಯಲ್ಲೂ ಏಕಾಂತವಿಲ್ಲದಷ್ಟು ಜಂಜಾಟವನ್ನು ನಿರ್ಮಿಸಿಕೊಂಡಿರುವ ನಮಗೆ, ದಿನಾಲು ಊರು ಬಿಟ್ಟು ಏಕಾಂತಕ್ಕೆ ಹೋಗುವುದು ದುಸ್ಸಾಧ್ಯ. ಆದರೆ ಆ ನಿರ್ಜನ ಪ್ರದೇಷದ, ಏಕಾಂತದ, ಅಂತರ್ಮುಖತೆಯ ಅನುಭವವನ್ನು  ನಮ್ಮ ಮಧ್ಯದಲ್ಲೇ ನಿರ್ಮಿಸಿಕೊಡುವ ಸಲುವಾಗಿ ನಮ್ಮ ಪೂರ್ವಜರು ದೇಗುಲಗಳ ಕಲ್ಪನೆಯನ್ನು ತಂದುಕೊಟ್ಟರು.
ದೇವಾಲಯಗಳ ಪರಿಸರದಲ್ಲಿ ಕಲಾಭಿವ್ಯಕ್ತಿ, ಸೇವಾಭಾವ, ಸೌಹಾರ್ದತೆ, ಸರಳತೆ, ಸೌಜನ್ಯ, ದಾನ, ಧರ್ಮ, ಅಧ್ಯಾತ್ಮ ಮುಂತಾದ ಎಲ್ಲ ಅಂಷಗಳು ಮಧುರವಾಗಿ ಸಂಗಮಿಸಿದ್ದು,ಎಲ್ಲರಿಗೂ ಶಾಂತಿಯನ್ನು ಕೊಡುತ್ತದೆ. ಉಲ್ಲಾಸವನ್ನು ಹೆಚ್ಚಿಸುತ್ತದೆ. ದೇವಾಲಯವು ತತ್ತ್ವ ಸ್ವರೂಪಿಯಾದ ಭಗವಂತನ ಅನಂತ ವಿಭೂತಿಗಳನ್ನು ಸ್ವರೂಪವನ್ನು ಧ್ಯಾನಿಸಲು  ಕೊಡಲು ಸುಂದರ ಸಾಕಾರ ರೂಪವನ್ನು ನಮ್ಮ ಮುಂದೆ ತೋರುತ್ತವೆ. ಭಕ್ತರು ತಮ್ಮ ಪ್ರೇಮ ಭಾವವನ್ನು, ಗೌರವ, ಸೇವಾ ನಿಷ್ಟೆಗಳನ್ನು ಅಲ್ಲಿ ವ್ಯಕ್ತಪಡಿಸಿ  ತಮ್ಮ ಜನ್ಮಸಾರ್ಥಕ್ಯವನ್ನು ಕಂಡು ಕೊಳ್ಳುತ್ತಾರೆ.
ಮನುಷ್ಯ ನರಲೋಕದಲ್ಲಿ ತನ್ನ ಹಿರಿಮೆ, ಅಂತಸ್ತು ಐಶ್ವರ್ಯಗಳನ್ನು  ತೋರಿಕೊಂಡು ಅದೆಷ್ಟ ಬೀಗಿದರು ಅದು ಅವನಿಗೆ ನಿಜವಾದ ನೆಮ್ಮದಿಯನ್ನು ನೀಡಲಾಗದು. ಆದರೆ ನಮ್ಮ ಜೀವದ ಒಡೆಯನಾದ, ನಮ್ಮ ಅಂತರಂಗದ ನೈಜ ಗೆಳೆಯನಾದ ಭಗವಂತನಲ್ಲಿ ಶರಣಾಗಿ ಮನಸ್ಸಿನ ಎಲ್ಲ ದುಗುಡ ದುಃಖಗಳನ್ನೂ, ಆಸೆ ಆಕಾಂಕ್ಷೆಗಳನ್ನೂ ಹೇಳಿಕೊಂಡಾಗ, ನಮ್ರತೆa, ಸೇವಾಭಾವಗಳನ್ನು ಅಭಿವ್ಯಂಜಿಸಿದಾಗ ಆಗುವ ಸಾತ್ವಿಕ ಆನಂದ ಅನುಪಮವಾದದ್ದು, ಮನಃ ಶಾಂತಿಕಾರವಾದದ್ದು. ಇದಕ್ಕೆಲ್ಲ ಆಧಾರಗಳೇ ದೇವಾಲಯಗಳು. ದೇವಾಲಯದಲ್ಲಿ ಕುಳಿತ ಕೆಲವು ನಿಮಿಷಗಳು, ಅಂತರ್ಮುಖವಾಗಿ ಧ್ಯಾನಗೈದ ಕೆಲ ಕ್ಷಣಗಳು ನಮ್ಮ ಜೀವವನ್ನು ತಣ್ಣಗಾಗಿಸುತ್ತಾದೆ. ಮನಸ್ಸು ತಿಳಿಯಾಗುತ್ತದೆ. ಹೃದಯ ಹಗುರವಾಗುತ್ತದೆ.
ಸದಾ ದೇವರ ಧ್ಯಾನದಲ್ಲೇ ತೊಡಗುವ ಸಜ್ಜನರು ಸಂತರು ಎಲ್ಲಿ ಇದ್ದರೂ ಅವರಲ್ಲಿ ಈ ಭಾವವಿರುತ್ತದೆ. ಆದರೆ ವಿಷೇಷವಾಗಿ ಪ್ರಾಪಂಚಿಕ ತುಮುಲಗಳಲ್ಲಿ ತೊಡಗುವ ಸಾಮಾನ್ಯರಿಗಂತೂ ದೇಗುಲದ ಪರಿಸರ ನೀಡುವ ಸಾರ್ಥಕ್ಯ ಭಾವ ತುಂಬ ದೊಡ್ಡದು.  ದೇಗುಲದ ವಾಸ್ತುವಿನ್ಯಾಸ, ಶಿಲ್ಪಕಲೆ, ಸೌಂದರ್ಯ, ವೈಶಾಲ್ಯಗಳು ಹಾಗು ಅಲ್ಲಿ ಸಹಜವಾಗಿ ಎಲ್ಲರು ಪಾಲಿಸುವ ಸೌಜನ್ಯದ ವರ್ತನೆ, ಪೂಜಾದಿ ಕೈಂಕರ್ಯಗಳು ನಮ್ಮ ಮನಸ್ಸನ್ನು ಪರತತ್ವದೆಡೆಗೆ ತಿರುಗಿಸಿ ಮುದವೀಯುತ್ತವೆ. ಅಲ್ಲಿನ ಗಂಭೀರವಾದ ಘಂಟಾನಾದ, ಜಾಗಟೆ, ನಗಾರಿಗಳ ಸದ್ದು, ದಿವ್ಯಮಂಗಳ ಮಂತರ ಘೋಷ, ಸ್ತೋತ್ರ ಹಾಗೂ ಭಕ್ತಿಗೀತೆಗಳ ಇನಿದನಿಗಳು ಆಪ್ಯಾಯಮಾನವಾದವು. ಇನ್ನು ದೇವರ ಸನ್ನಿಧಿಯಿಂದ ಹೊಮ್ಮುವ ಹೂವುಗಳ ಪರಿಮಳ, ಧೂಪದ ಸುವಾಸನೆ, ದೀಪದ ಮಂಗಳ ಹೊಳಪು ಹಾಗೂ ಅಲಂಕಾರಗಳು ಮನಸ್ಸಿಗೆ ಅಪೂರ್ವ ಸಂತಿ ತರುತ್ತವೆ. ಗರ್ಭಗುಡಿಯಲ್ಲಿನ ದೇವರ ಭವ್ಯ ಮೂರ್ತಿ, ಅಲಂಕಾರ, ಪೂಜಾದಿ ಕೈಂಕರ್ಯಗಳು, ಸ್ತ್ರೋತ್ರಾದಿಗಳನ್ನು ವೀಕ್ಷಿಸುವಾಗಲಂತೂ  ಆನಂದ ಭಕ್ತಿಗಳು ಭುಗಿಲೆದ್ದು ಮನಸ್ಸನ್ನು ಉದ್ಧರಿಸುತ್ತವೆ. ನಮ್ಮ ಮನೆಯ ತಾಪತ್ರಯಗಳು, ನಿರಾಸೆ ದುಃಖಗಳು, ಬಿಂಕ-ಬಿಮ್ಮಾನಗಳೂ ಎಲ್ಲೋ ಕೊಚ್ಚಿ ಹೋಗಿ ವಿನಮ್ರತೆ, ಭಕ್ತಿಗಳು ಉಕ್ಕಿಬರುತ್ತವೆ. ಅಂತೂ ನಮ್ಮ ಸಕಲೇಂದ್ರೊಇಯಗಳ ಚೇಷ್ಟೆಗಲನ್ನು ತಾತ್ಕಾಲಿಕವಾಗಿಯಾದರೂ ನಿಲ್ಲಿಸಿ, ಒಂದೆಡೆ ಕೇಂದ್ರೀಕರಿಸುವ ಶಕ್ತಿ ದೇಗುಲಗಳ ಪರಿಸರಕ್ಕಿರುತ್ತದೆ. ಅಲ್ಲಿರುವಷ್ಟು ಹೊತ್ತಾದರೂ, 'ನಾನು ನನ್ನದು' ಎನ್ನುವ ಮುಗಿಯದ ಮಮಕಾರವನ್ನು ಕೈಬಿಟ್ಟು ದೇವರನ್ನು ಧ್ಯಾನಿಸುತ್ತೇವೆ. ಆ ಕ್ಷಣಗಳಲ್ಲಿ ಮನಸ್ಸು ಅನುಭವಿಸುವ ಆನಂದ ಶಾಂತಿಗಳು ಅಪೂರ್ವವಾದವುಗಳು. ಎಂತಹ ದುಷ್ಟನಿಗೂ ಎಲ್ಲವನ್ನೂ ಮರೆಸಿ ಸಮಾಧಾನವನ್ನು ಈಯಬಲ್ಲುದು ದೇಗುಲದ ಪರಿಸರ. ಅದರಲ್ಲೂ ನಮ್ಮ ಪ್ರಾಚೀನ ದೇವಾಲಯಗಳು ಇಂತಹ ಪ್ರಭಾವವನ್ನು ಬೀರುವುದು ಹೆಚ್ಚು. ಏಕೆಂದರೆ, ಅಲ್ಲಿನ ಆ ದೇಗುಲ ನಿರ್ಮಾಣಗಳ ಹಿಂದೆ ಇದ್ದದ್ದು ಇಂತಹ ಪರಿಸರವನ್ನು ಒದಗಿಸುವ ಉದ್ದೇಷವೆ.
ಆದರೆ ಇಂದು ನಾವೊಂದು ಆತ್ಮನಿರೀಕ್ಷಣೆಯನ್ನೂ ಮಾಡಿಕೊಳ್ಳಬೇಕಾಗಿದೆ. ಬರಬರುತ್ತ ನಮ್ಮ ದೇಗುಲಗಳಲ್ಲಿ ಶಾಂತಿ-ಸರಳತೆಗಳಿಗಿಂತ ಆಡಂಬರ, ಜನಾಕರ್ಷಣೆಯ ಕಸರತ್ತುಗಳೇ ಜಾಸ್ತಿಯಾತುತ್ತಿದೆ. ಪೂಜೆಗೆ ಸೇರುವ ಜನರಾದರೂ ತಾವು ದೇವರ ಸನ್ನಿಧಿಯಲ್ಲಿದ್ದೇವೆ ಎನ್ನುವುದನ್ನು ಗಣಿಸದೆ ಅಲ್ಲಿಯೂ, ಹರಟೆ, ಕಿರುಚಾಟ, ಸಾಂಸಾರಿಕ ವಿಚಾರಗಳ ಚರ್ಚೆ, ಒಯ್ಯಾರ, ಬಿನ್ನಾಣಗಳಲ್ಲಿ ತೊಡಗುವ ದೃಶ್ಯಗಳು ಕಾಣುತ್ತವೆ. ಅಶ್ಲೀಲ ಉಡುಗೆ, ಉದ್ಧಟತನದ ವರ್ತನೆಗಳು ಇಲ್ಲದಿಲ್ಲ. ದೇಗುಲಕ್ಕೆ ಹೇಗೆ ಹೋಗಬೇಕು, ಅಲ್ಲಿ ಹೇಗೆ ವರ್ತಿಸಬೇಕು ಎನ್ನುವ ಶಿಕ್ಷಣವನ್ನು ಸಂಸ್ಕಾರವನ್ನು ಇಂದಿನ ಪೋಷಕರು ಶಿಕ್ಷಕರು ಕೊಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದರೆ ತಪ್ಪಲ್ಲ. ದೇವಾಲಯವೇ 'ಮೀಟೀಂಗ್ ಪ್ಲೇಸ್' ಎಂಬಂತೆ ವರ್ತಿಸುವ ಭಾವ ಬೆಳೆಯುತ್ತಿದೆ. ದೇವರ ಅರ್ಚನೆ ಆರತಿ ಆಗುವಾಗ ಮಾತ್ರ ಒಂದಷ್ಟು ಸುಮ್ಮನಿದ್ದು ಆ ಬಳಿಕ ಅದೇ ಅಸಡ್ಡೆಯ ಭಾವವನ್ನು ತೋರುವುದು ಕುಸಂಸ್ಕೃತಿ. ಇದರಿಂದ ದೇಗುಲ  ಸಂದರ್ಷನದಿಂದ ಆಗಬೇಕಾದ ಲಾಭ, ಮನಃಶಾಂತಿಗಳೂ ಸಿಗುವುದಿಲ್ಲ. ಜೊತೆಗೆ ಅಂತಹ ಮಂಗಳಪರಿಸರವನ್ನು ನಮ್ಮ ಅಪಮಾನ ಮಾಡಿದಂತಾಗುತ್ತದೆ. ದೇಗುಲಗಳಲ್ಲಿ ಆದಷ್ಟು ಮೌನವನ್ನು ಪಾಲಿಸುವುದು, ದೇವರ ನಾಮ ಜಪ, ಸ್ತೋತ್ರಾದಿಗಳಲ್ಲಿ ತೊಡಗುವುದು, ಸಾಧ್ಯವಾದಷ್ಟು ಸೇವೆ ಕೈಂಕೈರ್ಯಗಳನ್ನು ಸಲ್ಲಿಸುವುದು, ಆತ್ಮಧ್ಯಾನವನ್ನು ಎರಡು ನಿಮಿಷಗಳಾದರೂ ಮಾಡುವುದು, --ಇದೆಲ್ಲ ಮಾಡಿದಾಗ ಆಗುವ ಮನೋನ್ನತಿ ಗಣನೀಯ.
ಹಿಂದೆ ದೇಗುಲಗಳ ವಿಶಾಲ ಆವರಣಗಳಲ್ಲಿ ಯಾತ್ರಿಕರಿಗೆ ಸೌಲಭ್ಗ್ಯ, ಊರ ಜಾತ್ರೆಗಳು, ಉತ್ಸವಗಳು, ಸಾಧು ಸಂತರಿಗೆ ಆಶ್ರಯ, ಧ್ಯಾನಾಭ್ಯಾಸಕ್ಕೆ ಏಕಾಂತ, ವಿದ್ಯಾಭ್ಯಾಸಕ್ಕೆ ಅನುಕೂಲ ಪರಿಸರ, ಹಾಗೂ ಪಂಚಾಯತಿ ಸೇರಿ ನ್ಯಾಯಾನ್ಯಾಯಗಳ ನಿರ್ಣಯ ಮಾಡಲೂ ಅವಕಾಶವಿರುತ್ತಿತ್ತು. 'ದೇಗುಲದಲ್ಲಿ ಯಾರೂ ಸುಳ್ಳು ಹೇಳುವುದಿಲ್ಲ. ಅಲ್ಲಿ ನಡೆಯುವುದೆಲ್ಲ ಸತ್ಯ ಹಾಗೂ ಧರ್ಮಗಳ ಕಲಾಪಗಳು' ಎನ್ನುವ ವಿಶ್ವಾಸವಿತ್ತು.  ಈ ಭಾವವನ್ನು, ವರ್ತನೆಯನ್ನು ನಾವು ಇಂದಿಗೂ ಬಹು ಮಟ್ಟಿಗೆ ಉಳಿಸಿದ್ದೇವೆ ನಿಜ. ಆದರೂ ದೇವರ ಸನ್ನಿಧಿಯಲ್ಲೇ ಯಥೇಚ್ಚವಾಗಿ ಸುಳ್ಳು ಹೇಳುವ, ಹರಟುವ, ಮೋಸ-ಭ್ರಷ್ಟಾಚಾರಗಳನ್ನು ಆಚರಿಸುವ 'ಭಕ್ತರ' ಸಂಖ್ಯೆಯೂ ಕಡಿಮೆಯೇನಿಲ್ಲ.

ಇಂಥ ಕುಸಂಸ್ಕೃತಿಗೆ ಕಡಿವಾಣವಿತ್ತು ದೇಗುಲಗಳ ಪರಿಸರವನ್ನು ಕಾಪಾಡಿದಲ್ಲಿ, ಅಲ್ಲಿ ಕಾಲಿಟ್ಟ ಯಾರಿಗಾದರೂ ಅನುಕ್ಷಣವೇ ಮನಃ ಶಾಂತಿ ಲಭಿಸುವುದು ಖಂಡಿತ. ದೇಗುಲಗಳ ಪರಿಸರವನ್ನು ಜಾಣ್ಮೆಯಿಂದ ಗೌರವದಿಂದ ಉಳಿಸಿ ಬೆಳೆಸಿ ನಮ್ಮ ಸಮಾಜದ ಆತ್ಮಬಲವನ್ನು, ಮನಃ ಶಾಂತಿಯನ್ನು ಹಾಗೂ ಕೂಡಿ ಬದುಕುವ ಉಲ್ಲಾಸ ಸೌಹಾರ್ದತೆಗಳನ್ನು ನಿರ್ಮಿಸೋಣ. ತನ್ಮೂಲಕ ಭಾರತದ ಸನಾತನ ಸಂಸ್ಕೃತಿ ಉಳಿದು, ಬೆಳೆದು ಅರಳಲಿ, ತನ್ನ ಕಂಪನ್ನು ವಿಷ್ವದೆಲ್ಲೆಡೆಗೆ ಸೂಸಿ ಶಾಂತಿಯನ್ನು ಬೀರಲಿ.

Publsihed in souvenir Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ