ಶುಕ್ರವಾರ, ಮಾರ್ಚ್ 17, 2017

ಶ್ರಾವಣಪೂರ್ಣಿಮಾ
ಸನಾತನ ಸಂಸ್ಕೃತಿಯ ದೃಷ್ಟಿಯಲ್ಲಿ ಹುಣ್ಣಿಮೆ ಕೇವಲ ನೈಸರ್ಗಿಕ ಪ್ರಕ್ರಿಯೆಯಾಗಿರದೆ ಕಾವ್ಯಾತ್ಮಕ ಹಾಗೂ ಪಾರಮಾರ್ಥಿಕ ಸ್ವಾರಸ್ಯಗಳ ಕೇಂದ್ರವೂ ಆಗಿದೆ. ಹುಣ್ಣಿಮೆ ಪರ್ವಕಾಲ ಎನಿಸಿದ್ದು ಚಂದ್ರನು ಪೂರ್ಣಕಳೆಯಿಂದ ಶೋಭಿಸುತ್ತ, ದೈವೀಸೌಂದರ್ಯವನ್ನು ಚಿಮ್ಮುತ್ತ, ಕಡಲನ್ನುಕ್ಕಿಸುತ್ತಾನೆ, ವನಸ್ಪತಿಗಳನ್ನು ಜೀವರಸದಿಂದ ಹರಸುತ್ತಾನೆ. ಭಗವಂತನ ಷೋಡಶಕಲೆಗಳು ಅಭಿವ್ಯಕ್ತವಾಗಿ ಸಾಧಕರ ಅನುಭೂತಿಗೆ ಬರುವ ಪ್ರಶಸ್ತಕಾಲವಿದು ಎಂದು ಯೋಗಶಾಸ್ತ್ರಗಳು ಸಾರುತ್ತವೆ. ವರ್ಷದ ಹನ್ನೆರಡೂ ಹುಣ್ಣಿಮೆಗಳಿಗೂ ಒಂದಲ್ಲ ಒಂದು ವಿಶೇಷವಿದ್ದೇ ಇದೆ. ಹುಣ್ಣಿಮೆತಿಥಿಯ ಅಧಿದೇವತೆಯಾದ ವಿಷ್ಣುವಿಗೆ ಎಲ್ಲ ಹುಣ್ಣಿಮೆಗಳಂದು ವಿಶೇಷ ಪೂಜೆ ಸಲ್ಲುತ್ತದೆ, ತಿಂಗಳು ತಿಂಗಳು ಸತ್ಯನಾರಾಯಣಪೂಜೆ ಜರುಗುವ ದೃಶ್ಯ ಕರ್ನಾಟಕದಲ್ಲಂತೂ ಸರ್ವೇಸಾಮಾನ್ಯ.  
ಚಿತ್ರಾಪೂರ್ಣಿಮಾ ದೇವೀ ಆರಧನೆಗೂ ಹನುಮಜಯಂತಿಗೂ ಚಿತ್ರಗುಪ್ತನ ಆರಾಧನೆಗೂ ಪ್ರಸಿದ್ಧ. ವೈಶಾಖಹುಣ್ಣಿಮೆ ಬುದ್ಧಪೂರ್ಣಿಮೆಯೆಂದು ಪ್ರಖ್ಯಾತ. ಗೌತಮ ಬುದ್ಧನು ಜನ್ಮವನ್ನೂ, ಬೋಧಿಯನ್ನೂ ಹಾಗೂ ಕೊನೆಗೆ ನಿರ್ವಾಣವನ್ನೂ ಪಡೆದ ಬಹಳ ವಿಶೇಷ ದಿನವಿದು. ಜ್ಯೇಷ್ಟಪೂರ್ಣಿಮೆಯು ‘ಸ್ನಾನಪೂರ್ಣಿಮಾ’ ಅಥವಾ ‘ಜಗನ್ನಾಥ-ಪೂರ್ಣಿಮಾ’ ಎಂದೂ ಪ್ರಸಿದ್ಧ. ಪುರೀಜಗನ್ನಾಥನ ಸನ್ನಿಧಿಯಲ್ಲಿ ಬಹಲ ವಿಶೇಷ ಜಾತ್ರೆ ನಡೆಯುತ್ತದೆ. ಸಾವಿರಾರು ಜನರು ಗಂಗಾಸ್ನಾನವನ್ನು ಮಾಡುವ ದಿನವೂ ಹೌದು. ಆಷಢದಮಾಸದ ವ್ಯಾಸಪೂರ್ಣಿಮಾ ಅಥವಾ ಗುರುಪೂರ್ಣಿಮಾ ಬಲುಮಾನ್ಯ. ಭಾದ್ರಪದಪೂರ್ಣಿಮಾ ನಾರಾಯಣನ ಪೂಜೆಗೆ ಪ್ರಶಸ್ತ. ಆಶಿನಮಾಸದ ಸೀಗೆಹುಣ್ಣಿಮೆಯೆನಿಸಿ ಗೌರಿಪೂಜೆಗೆ ಪ್ರಶಸ್ತವೆನಿಸಿದೆ. ಇದನ್ನು ಕೌಮುದೀ, ರಾಸಪೂರ್ಣಿಮಾ, ಶರತ್ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. ಕೌಮುದೀಮಹೋತ್ಸವದ ವರ್ಣನೆಯನ್ನು ಕವಿಗಳು ಹೇರಳವಾಗಿ ಮಾಡುತ್ತಾರೆ. ಶಿವನು ತ್ರಿಪುರಾಸುರರನ್ನು ಸಂಹರಿಸಿದ ದಿವಸವೆಂದು ನಂಬಲಾದ ಕಾರ್ತೀಕಹುಣ್ಣಿಮೆ ತ್ರೈಪುರೀ-ಪೂರ್ಣಿಮಾ ಎಂದೂ ದೇವ-ದೀಪಾವಲೀ ಎಂದು ಪ್ರಸಿದ್ಧ. ಇದು ಕಾರ್ತಿಕೇಯಪೂಜೆಗೂ ವಿಶೇಷದಿನ. ಮಾರ್ಗಶಿರದ ಬಟ್ಟೇಸಿ-ಪೂರ್ಣಿಮಾ ಕೃಷ್ಣಪೂಜೆಗೆ ಪ್ರಶಸ್ತ. ಈ ದಿನ ಮಾಡುವ ಸೇವಾಕಾರ್ಯಗಳು ಬೇರಾವುದೇ ದಿವಸ ಮಾಡುವುದಕ್ಕಿಂತ ಮೂವತ್ತೆರಡು ಪಟ್ಟು ಹೆಚ್ಚು ಫಲವನ್ನು ತರುತ್ತದೆಂದು ನಂಬಿಕೆ. ಪುಷ್ಯಮಾಸದ ಶಾಖಂಬರೀ ಹುಣ್ಣಿಮೆ ದೇವಿ ಆರಾಧನೆಗೂ ತೀರ್ಥಸ್ನಾನಕ್ಕೂ ಪ್ರಶಸ್ತ. ಮಾಘಪೌರ್ಣಮಿಯಂದು ಪಾರ್ವತಿಯನ್ನೂ ಬೃಹಸ್ಪತಿಯನ್ನೂ ಆರಾಧಿಸಲಾಗುತ್ತದೆ. ಜಗದ್ವಿಖ್ಯಾತವಾದ  ಫಾಲ್ಗುಣಪೂರ್ಣಿಮ್ಯ ಹೋಳೀಹಬ್ಬ ಕೃಷ್ನ ಹಾಗೂ ಲಕ್ಶ್ಮಿಯರ ಆರಾಧನೆಗೆ ಪ್ರಶಸ್ತ.
ಈ ಎಲ್ಲ ಹುಣ್ಣಿಮೆಗಳ ಪೈಕಿ ಶ್ರವಾಣಹುಣ್ಣಿಮೆಗೆ ಒಂದು ವಿಶಿಷ್ಟ ಸ್ಥಾನ. ಈ ದಿನಕ್ಕೆ ಹಲವು ವಿಶೇಷ ಆಚರಣೆಗಳ ನಂಟಿದೆ. ಕೆಲವನ್ನಿಲ್ಲಿ ನೋಡೋಣ-
ಶ್ರಾವಣಹುಣ್ಣಿಮೆ ಬಹಳ ಪ್ರಾಚೀನ ಹಬ್ಬ. ವೇದಕಾಲದಿಂದಲೂ ಉಪಾಕರ್ಮ. ವೇದಾಧ್ಯಯನ, ಗಾಯತ್ರೀಜಪಾನುಷ್ಠಾನಗಳು ಈ ದಿನ ನಡೆಯುತ್ತವೆ. ವೇದಾಧ್ಯಯನದ ಪ್ರಾರಂಭವನ್ನೂ ಸಮಾರೋಪವನ್ನೂ (ಉತ್ಸರ್ಜನವಿಧಿ) ಈ ದಿನವೇ ಮಾಡುವುದು ಸಂಪ್ರದಾಯ. ವೇದಾಧ್ಯಯನ ನಿರತರಾಗಿರುವವರು ಅಲ್ಲಿಯ ತನಕ ಕಲಿತವಿದ್ಯೆಯನ್ನು ಪುನರವಲೋಕನ ಮಾಡಿ, ವೇದಜ್ಞಾನವನ್ನು ಕೊಟ್ಟ ಋಷಿಗಳಿಗೆ ತರ್ಪಣವಿತ್ತು, ಕಲಿಕೆಯ ಪ್ರಕ್ರಿಯಲ್ಲಿನ ಅಶ್ರದ್ಧೆ, ಆಲಸ್ಯ, ಪ್ರಮಾದಾದಿ ಲೋಪದೋಷಗಳಿಗಾಗಿ ಪ್ರಾಯಶ್ಚಿತ್ತವನ್ನು ಮಾಡುತ್ತಾರೆ. ಅದಲ್ಲದೆ ವರ್ಷವಿಡೀ ಮಾಡಿರಬಹುದಾದ ಸುಳ್ಳು, ಕಪಟ, ಧರ್ಮಕರ್ಪಲೋಪ, ಪರಪೀಡನೆ ಮುಂತಾದ ಪಾಪಗಳಿಗಾಗಿ ಪ್ರಾಯಶ್ಚಿತ್ತವಾಗಿ ಗಾಯತ್ರೀಪುರಶ್ಚರಣವನ್ನು ಮಾಡಲಾಗುತ್ತದೆ. ಅದನ್ನು ಸೂಚಿಸಲು ಹಳೆಯ ಉಪವೀತವನ್ನು (ಜನಿವಾರ) ವಿಸರ್ಜಿಸಿ ಹೊಸತನ್ನು ಧರಿಸಲಾಗುತ್ತದೆ. ಮರುದಿನವೂ ಗಾಯತ್ರೀ ಜಪಪುರಶ್ಚರಣವನ್ನು ಮುಂದುವರೆಸಲಾಗುತ್ತದೆ. ಆ ದಿನ ಆಚಾರಶೀಲರಾಗಿದ್ದು ದಾನವನ್ನು, ಪವಿತ್ರಾರೋಪಣ ಎನ್ನುವ ವಿಧಿಯನ್ನು ಹಾಗೂ ಗಾಯತ್ರೀಪುರಶ್ಚರಣಗಳನ್ನು ಯಥಾಶಕ್ತಿ ಮಾಡಲಾಗುತ್ತದೆ. ಉಪಾಕರ್ಮದ ಹೋಮ ಮಾಡಲಾಗುತ್ತದೆ. ಕಾಶ್ಯಪ, ಅತ್ರಿ, ಭಾರದ್ವಾಜ, ಗೌತಮ, ಜಮದಗ್ನಿ, ವಿಶ್ವಾಮಿತ್ರ, ವಸಿಷ್ಟ ಹಾಗೂ ವಸಿಷ್ಟರ ಪತ್ನಿಯಾದ ಅರುಂಧತಿಯರನ್ನು ಅಡಕೆಯ ಚೂರುಗಳಲ್ಲಿ ಆವಾಹನೆ ಮಾಡಿ ಅದರ ಸುತ್ತಲೂ ಏಳು ವೃತ್ತಗಳನ್ನು ಬರೆದು ಪೂಜಿಸಿ ಋಷಿತರ್ಪಣವನ್ನು ನೀಡಲಾಗುತ್ತದೆ. ಸಕಲ ಲೋಕಗಳ ಶ್ರೇಯಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಉಪನಯನವಾದ ವಟುಗಳಿಗೆ ಮೊದಲವರ್ಷದ ಉಪಾಕರ್ಮ ತುಂಬ ವಿಶೇಷ ದಿನವಾಗಿದ್ದು ಪ್ರತ್ಯೇಕ ಹೋಮ ಪೂಜೆ ಜಪ ಪುರಶ್ಚರಣಗಳನ್ನು ಮಾಡಿಸಲಾಗುತ್ತದೆ.
ಶ್ರಾವಣಹುಣ್ಣಿಮೆಯಮತ್ತೊಂದು ಪ್ರಸಿದ್ಧ ಆಚರಣೆ ರಕ್ಷಾಬಂಧನ್ (ರಾಖೀಹಬ್ಬ). ಉತ್ತರಭಾರತದಲ್ಲಂತೂ ಇದು ಅತೀವ ಸಂತಸ-ಸಂಭ್ರಮಗಳ ದಿನ. ಶ್ರಾವಣಹುಣ್ಣಿಮೆಯ ದಿನ ಒಡಹುಟ್ಟಿದ ಸೋದರರಿಗೂ ಹಾಗೂ ಸೋದರಸಮಾನರಾದ ಬಂಧುಮಿತ್ರರಿಗೂ ಹೆಣ್ಣುಮಕ್ಕಳು ತಿಲಕ ಹಚ್ಚಿ, ರಕ್ಷಾಬಂಧನ (ಹಿಂದೂಸ್ಥಾನೀ ಭಾಷೆಯಲ್ಲಿ ‘ರಾಖೀ’)ವನ್ನು ಬಲಗೈಗೆ ಕಟ್ಟುತ್ತಾರೆ. ಸೋದರರು ಪ್ರತಿಯಾಗಿ ಹಣ-ಕಾಣಿಕೆಗಳನ್ನು ಇತ್ತು ಹಾರೈಸುತ್ತಾರೆ. ಆ ದಿನ ಸೋದರ-ಸೋದರಿಯರು ಸಿಹಿ ಹಂಚಿಕೊಳ್ಳುತ್ತ ಗೀತನೃತ್ಯ ವಿನೋದಗಳಲ್ಲಿ ತೊಡಗುತ್ತ ಸಹಭೋಜನ ಮಾಡುತ್ತಾರೆ.
ಇದಕ್ಕೊಂದು ಕಥೆ ಇದೆ- ಬಲಿಚಕ್ರವರ್ತಿಯ ಭಕ್ತಿಗೆ ಒಲಿದು ಆತನ ಮನೆಯ ಬಾಗಿಲನ್ನು ಕಾಯಲು ಒಪ್ಪಿ ವಿಷ್ಣುವು ಪಾತಾಳ ಸೇರಿದಾಗ ವೈಕುಂಠದಲ್ಲಿ ಲಕ್ಷ್ಮಿಯು ತಬ್ಬಿಬ್ಬಾದಳಂತೆ. ಧರ್ಮಾತ್ಮನಾದ ಬಲಿಚಕ್ರವರ್ತಿಯನ್ನು ಸಮೀಪಿಸಿ ಸೋದರೀಸ್ನೇಹದಿಂದ ಆತನ ಕೈಗೆ ರಕ್ಷಾಬಂಧನವನ್ನು ಕಟ್ಟಿದಳಂತೆ. ಪ್ರತಿಯಾಗಿ ವರ ಕೋರುವಂತೆ ಬಲಿಯು ತನ್ನ ‘ಸೋದರಿ’ ಲಕ್ಷ್ಮಿಯನ್ನು ಕೇಳಿದಾಗ, ಗಂಡನನ್ನು ಬಿಟ್ಟುಕೊಡುವಂತೆ ಕೋರಿದಳಂತೆ! ಆದ್ದರಿಂದ ರಾಖೀ ಕಟ್ಟುವಾಗ ಈ ಕೆಳಕಂಡ ಶ್ಲೋಕವನ್ನು ಹೇಳುವ ಸಂಪ್ರದಾಯವಿದೆ-     
ಯೇನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ  | ತೇನ ತ್ವಾಂ ಪ್ರತಿಬಧ್ನಾಮಿ ರಕ್ಷೇ ಮಾ ಚಲ ಮಾ ಚಲ ||
ಹೀಗೆ ಸೋದರೀ ಸ್ನೇಹದಿಂದ ಲಕ್ಷ್ಮೀದೇವಿಯು ಸಾಧಿಸಿದ ಉಪಾಯವೇ ಲೋಕಗಳಿಗೆ ಸೋದರ-ಸೋದರೀ ಪ್ರೇಮದ ಆದರ್ಶವಾಗಿ, ರಾಖೀಹಬ್ಬದ ಹಿನ್ನಲೆಯಾಗಿದೆ. ಇನ್ನೊಂದು ಕಥೆ ಪ್ರಚಲಿತವಿದೆ- ಶಿಶುಪಾಲನನ್ನು ವಧಿಸುವಾಗ ಶ್ರೀಕೃಷ್ಣನಿಗೆ ಚಕ್ರದ ತುದಿ ತಾಕಿ ರಕ್ತಸ್ರಾವವಾಯಿತಂತೆ. ಅಲ್ಲೇ ಇದ್ದ ದ್ರೌಪದಿ ಧಾವಿಸಿ ತನ್ನ ಸೆರಗಿನ ಅಂಚನ್ನೇ ಹರಿದು ಗಾಯಕ್ಕೆ ಕಟ್ಟಿ ರಕ್ತಸ್ರಾವವನ್ನು ತಡೆದಳಂತೆ. ಸಂತೋಷಗೊಂಡ ಕೃಷ್ಣನು ಅವಳಿಗೆ ಆಜನ್ಮವೂ ರಕ್ಷಣೆ ನೀಡುವುದಾಗಿ ಭರವಸೆ ಇತ್ತನಂತೆ. ಮುಂದೆ ಕುರುಸಭೆಯಲ್ಲಿ ಅವಳಿಗೆ ಅಕ್ಷಯಾಂಬರವಿತ್ತು ಮಾನಸಂರಕ್ಷಣೆ ಮಾಡಿದ ಪ್ರಸಂಗ ನಮಗೆಲ್ಲ ಗೊತ್ತೇ ಇದೆ.
ಶ್ರಾವಣ ಹುಣ್ಣಿಮೆಯನ್ನು ನಾರಾಲಿ ಪೂರ್ಣಿಮಾ ಎಂದು ಬೆಸ್ತರು ಆಚರಿಸುತ್ತಾರೆ. ನೈರುತ್ಯದ ಮುಂಗಾರು ತಣ್ಣಗಾಗುವ ಈ ವೇಳೆಯಲ್ಲಿ ಮೀನುಗಾರರು ತಮ್ಮ ವೃತ್ತಿಯನ್ನು ಪುನರಾರಂಭಿಸುವ ಮುನ್ನ ಸಮುದ್ರಕ್ಕೆ ತೆಂಗಿನಕಾಯಿಗಳನ್ನು ಎಸೆದು ತಮಗೆ ವರ್ಷವಿಡೀ ಉತ್ತಮ ಆಹಾರ ಕೊಡುವಂತೆ ವರುಣನನ್ನು ಪ್ರಾರ್ಥಿಸುತ್ತಾರೆ.
ಶ್ರಾವಣದ ಹುಣ್ಣಿಮೆಯ ಮತ್ತೊಮ್ದು ಆಚರಣೆ ಪೋಲಾ. ಎತ್ತುಗಳಿಗೆ ಅಲಂಕಾರ ಹಾಗೂ ಪೂಜೆಯನ್ನು ಸಲ್ಲಿಸಿ, ತಿನ್ನಿಸಿ ಸಂಪೂರ್ಣ ವಿಶ್ರಾಂತಿ ನೀಡುತ್ತಾರೆ. ವರ್ಷದ ಆ ಋತುವಿನ ಬೆಳೆಯನ್ನು ಪಡೆದ ರೈತರುಗಳು ಧಾನ್ಯಗಳನ್ನು ಪೂಜಿಸಿ ದಾನ ಮಾಡಿ ಆ ಬಳಿಕ ವ್ಯಾಪಾರಕ್ಕೆ ತೊಡಗುತ್ತಾರೆ.
ಶ್ರಾವಣ ಹುಣ್ಣಿಮೆಯನ್ನು ಪಾಣಿನೀಮಹರ್ಷಿಗಳ ಪುಣ್ಯದಿನವೆಂದು ಸಂಸ್ಕೃತ ದಿವಸವೆಂದೂ ಮಾನ್ಯ. ಸಂಸ್ಕೃತವ್ಯಾಕರಣದ ಮುಖ್ಯಗ್ರಂಥವಾದ ಅಷ್ಟಾಧ್ಯಾಯಿಯನ್ನು ರಚಿಸುವುದರ ಮೂಲಕ ವಿಶ್ವಭಾಷಾಪ್ರಪಂಚಕ್ಕೆ ಅದ್ವಿತೀಯ ಯೋಗದಾನವನ್ನು ಗೈದ ಹೆಗ್ಗಳಿಗೆ ಪಾಣಿನೀಮಹರ್ಷಿಗಳದ್ದು. ವಿಶ್ವಭಾಷೆಗಳೆಲ್ಲಕೂ ಮಾತೃಸದೃಶವಾದ ಪ್ರಾಚೀನತಮವೂ ವಿಶೇಷವೂ ಆದ ಸಂಸ್ಕೃತಭಾಷೆ ಹಾಗೂ ಸಾಹಿತ್ಯಗಳ ಪ್ರಚಾರದ ನಿಮಿತ್ತ ಶ್ರಾವನಹುಣ್ಣಿಮೆಯಂದು ಹಲವು ವೈಚಾರಿಕ ಹಾಗೂ ಸಾಂಸ್ಕೃತಿಕ ಕಲಾಪಗಳನ್ನು ವಿಶ್ವಾದ್ಯಂತ ಹಮ್ಮಿಕೊಳ್ಳಲಾಗುತ್ತದೆ.
ಅನನ್ಯಸಾಧಾರವೂ, ಏಕಾಮೇವಾದ್ವಿತೀಯವೂ, ಸಾರ್ವಕಾಲಿಕವೂ ಆದ ನಾಲ್ಕುಸಾವಿರಕ್ಕೆ ಹತ್ತಿರವಾದ ಸಂಖ್ಯೆಯ ಅತ್ಯುಚ್ಛ ಮೌಲ್ಯಮಟ್ಟದ ವ್ಯಾಕರಣಸೂತ್ರಗಳನ್ನು ರಚಿಸಿದ ಅದ್ವಿತೀಯರು ಪಾಣಿನೀಮಹರ್ಷಿಗಳು. ವಿದ್ಯಾರ್ಜನೆ ಹಾಗೂ ವಿದ್ಯಾದಾನಗಳನ್ನೇ ಜೀವನವ್ರತವನ್ನಾಗಿಸಿಕೊಡಿದ್ದ ಪಾಣಿನೀಮಹರ್ಷಿಗಳ ಕೊನೆ ಹೇಗಾಯಿತು ಎನ್ನುವುದನ್ನು ಸಾರುವ ಈ ಕಥೆ ಅವರ ಕಾರ್ಯನಿಷ್ಟೆಹೆ ಕನ್ನಡಿಯಾಗಿದೆ- ಪಾಣಿನೀಮಹರ್ಷಿಗಳು ವನ್ಯಪ್ರದೇಶದಲ್ಲಿ ಕುಳಿತು ಶಿಷ್ಯರಿಗೆ ವ್ಯಾಕರಣಸೂತ್ರಗಳನ್ನು ವ್ಯಾಖ್ಯಾನಿಸುತ್ತಿದ್ದರಂತೆ. ಇದ್ದಕ್ಕಿದ್ದಂತೆ ಹುಲಿ ಬಂದಿತಂತೆ. ಎಲ್ಲರೂ “ವ್ಯಾಘ್ರಃ ವ್ಯಾಘ್ರಃ” (ಹುಲಿ ಹುಲಿ) ಎಂದು ಕೂಗುತ್ತ ದಿಕ್ಕುದಿಕ್ಕಿನಲ್ಲಿ ಓಡಿ ಮರಗಳನ್ನೇರಿಬಿಟ್ಟರಂತೆ. ತಾನೂ ಮರೆವೇರಲು ಹೊರಟ ಪಾಣಿನೀಮಹರ್ಷಿಗಳ ಮನಸ್ಸು ಹಠಾತ್ತನೆ ‘ವ್ಯಾಘ್ರ’ ಶಬ್ದದ ವ್ಯುತ್ಪತ್ತಿಯ ಬಗ್ಗೆ ಆಲೋಚಿಸತೊಡಗಿತಂತೆ! ಹುಲಿಗೆ ಆ ಹೆಸರು ಬರಲು ಕಾರಣ, ಹಿನ್ನಲೆಗಳನ್ನು ಆಲೋಚಿಸುತ್ತಿರಲು ಹುಲಿಯು ಬಂದೇ ಬಿಟ್ಟಿತಂತೆ, ಮಹರ್ಷಿಗಳ ಮೇಲೆ ಎರಗಿ ನೆಲಕ್ಕೆ ಬೀಳಿಸಿತಂತೆ. ಕ್ರೂರವಾಗಿ ಗರ್ಜಿಸುತ್ತ ತನ್ನ ನಾಸಾಪುಟಗಳನ್ನು ಅರಳಿಸಿ ಮೂಸಿತಂತೆ. ಮೃತ್ಯುಭೀತಿಯನ್ನು ಮರೆತು ಈ ಸಂದರ್ಭದಲ್ಲೂ ಕೇವಲ ‘ವ್ಯಾಘ್ರ’ ಶಬ್ದದ ವ್ಯುತ್ಪತ್ತಿಯನ್ನಷ್ಟೇ ಚಿಂತಿಸುತ್ತಿದ್ದ ಪಾಣಿನಿಮಹರ್ಷಿಗಳಿಗೆ ಹುಲಿಯ ಈ ವರ್ತನೆಯಿಂದ ಒಂದು ಹೊಲಹು ಸಿಕ್ಕಿತಂತೆ- “ವ್ಯಾವೃತ್ಯ ಜಿಘ್ರಾತೀತಿ ವ್ಯಾಘ್ರಃ’ (ತನ್ನ ಬಲಿಯನ್ನು ತಿನ್ನುವ ಮುನ್ನ ಮೂಗಿನ ಹೊಳ್ಳಗಳನ್ನು ಅರಳಿಸಿ ಮೂಸುವುದರಿಂದ ಇದಕ್ಕೆ ವ್ಯಾಘ್ರ ಎಂದು ಹೆಸರು ಬಂದಿರಬಹುದು) ಎಂದು ಸೂತ್ರವನ್ನು ನಿಂತಲ್ಲೇ ರಚಿಸಿ, ಶಿಷ್ಯರಿಗೆ ಕೂಗಿ ಹೇಳಿದರಂತೆ. ಮರುಕ್ಷಣ ಹುಲಿರಾಯ ಮಹರ್ಷಿಗಳನ್ನು ಬಲಿ ತೆಗೆದುಕೊಂಡಿತಂತೆ! ಇತಿಹಾಸಸಿದ್ಧವಲ್ಲದಿದ್ದರೂ ಈ ಕಥೆ ಪಾಣಿನೀ ಮಹರ್ಷಿಗಳ ಅಪಾರವಿದ್ಯಾಪ್ರೀತಿಯನ್ನು ಸಾರುವಂತಹದ್ದಾಗಿದ್. ಸಾವಿನ ಕ್ಷಣದಲ್ಲೂ ತನ್ನ ಧ್ಯೇಯವನ್ನೇ ಸ್ಮರಿಸುತ್ತ ಮನುಕುಲಕ್ಕೆ ಜ್ಞಾನದ ಬಿಂದುವನ್ನು ಪ್ರಸಾದಿಸಿ ಮಡಿದ ಪಾಣಿನೀ ಮಹರ್ಷಿಗಳು ಸರ್ವಕಾಲದಲ್ಲೂ ಆದರ್ಶಪ್ರಾಯ.
ಶ್ರಾವಣಹುಣ್ಣಿಮೆಯ ಪ್ರಶಸ್ತದಿನದಂದು ಭಗವಂತನು ಸರ್ವರಿಗೂ ಶುಭವನ್ನೀಯಲಿ.
ಡಾ ಆರತಿ ವಿ ಬಿ


Publshed in VIjayavani Newspaper, 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ