ಶುಕ್ರವಾರ, ಮಾರ್ಚ್ 17, 2017

ಮಾತೆಯ ಮಡಿಲೇ ಮೊದಲ ಗುರುಕುಲ
ವ್ಯಕ್ತಿಯೊಬ್ಬ ಉನ್ನತಸ್ತರದ ಸಾಧನೆಗಳನ್ನು ಮಾಡಿದರೂ, ಅತ್ಯಂತ ಕೀಳು ಮಟ್ಟದ ಪತನಕ್ಕಿಳಿದರೂ ಜನರ ಉದ್ಗಾರ "ಯಾವ ತಾಯಿ ಹಡೆದ ಮಗನಪ್ಪ ಇವನು?!" ಎಂದು ! ನಿಜ! ತಾಯ ಗರ್ಭದಲ್ಲಿ ಭ್ರೂಣವು ಚಿಗುರೊಡೆದಾಗಲೇ ಅದಕ್ಕೆ ’ಶಿಕ್ಷಣ’ ಪ್ರಾರಂಭವಾಗುತ್ತದೆ. ಮಗುವು ಹುಟ್ಟಿದ ಮೊದಲ ಕೆಲವು ತಿಂಗಳು, ವರ್ಷಗಳು ತಾಯಿಯು ಮಗುವಿನ ದೇಹಮನೋಬಲಗಳನ್ನು ವರ್ಧಿಸುವ ಮಹತ್ತರ ಜವಾಬ್ದಾರಿಯನ್ನು ವಹಿಸುತ್ತಾಳೆ. ಮಗುವನ್ನು ಎದೆಗೆ ಅಪ್ಪಿ, ಸ್ತನ್ಯಪಾನ ಮಾಡಿಸುವ ಪ್ರಕ್ರಿಯೆ ಮಗುವಿನ ಜೀವನದಲ್ಲೇ ಬಹಳ ಮುಖ್ಯವಾದ ಪಾತ್ರವಹಿಸುತ್ತದೆ ಎನ್ನುವ ನಿರ್ಣಯಕ್ಕೆ ಇಂದು ಜಗತ್ತೇ ಬಂದು ನಿಂತಿದೆ. ತಾಯಿಯು ಸ್ತನ್ಯವನ್ನು ನೀಡುವಾಗಲೂ ವೇದಮಂತ್ರಗಳನ್ನು ಪಠಿಸುವ ಅಥವಾ ಮೃದುಮಧುರವಾಗಿ ಹಾಡುವಂತೆಯೂ ಸೂಚಿಸಲಾಗು ತ್ತದೆ. ಮಗುವನ್ನೇ ವಾತ್ಸಲ್ಯದಿಂದ ಸವರುತ್ತ, ಲಾಲಿಸುತ್ತ ಹರಸುತ್ತ ಹಾಲ್ಗುಡಿಸಬೇಕು. ಈ ಸಂದರ್ಭದಲ್ಲಿ ಕಾಡುಹರಟೆ, ಚಾಡಿಮಾತು, ಕಾಡುಹರಟೆ ಅಥವಾ ಉದ್ವಿಗ್ನಗೊಳಿಸುವಂತಹ ಚಲನಚಿತ್ರಗಳನ್ನೋ, ಧಾರಾವಾಹಿಗಳನ್ನೋ ನೋಡುವುದು ಅತ್ಯಂತ ಕೆಟ್ಟಚಾಳಿ. ತಾಯಿಯು ಈ ಸಂದರ್ಭದಲ್ಲಿ ಹೇಳುವ ಕೇಳುವ ಮಾಡುವ ಎಲ್ಲ ಕಾರ್ಯವೂ ಮಗುವಿನ ಮುಗ್ಧ ಮನೋಭಾವದ ಮೇಲೆ ಪರಿಣಾಮವನ್ನು ಬೀರುತ್ತದೆ ಎನ್ನುವ ಎಚ್ಚರವಿರುವ ಯಾವ ಒಳ್ಳೆಯ ತಾಯಿಯೂ ಹೀಗೆ ಮಾಡಬಾರದು.  ತಾಯಿಯು ಮಗುವಿಗೆ ಹಾರೈಸಬಹುದಾದ ಎಲ್ಲ ಸದ್ಭಾವನೆಳನ್ನು ಆ ಸಂದರ್ಭದಲ್ಲಿ ತಾಳಬೇಕು. ಸ್ತನ್ಯಪಾನವು ಮಗುವು ತಾಯಿಯಿಂದ ಪಡೆಯು ಭೌತಿಕ ಅಮೃತವಷ್ಟೇ ಅಲ್ಲ, ಅದು ಅವಳ ಭಾವನಾಮೃತವನ್ನೂ ಜ್ಞಾನವನ್ನೂ ಅದಕ್ಕೆ ತಲುಪಿಸುವ ಸಾಧನವಾಗಿದೆ.
ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿಯು ಶಿವಾಜಿಯು ಶಿಶುವಾಗಿರುವಾಗ ಸ್ತನ್ಯವನ್ನುಣಿಸುವಾಗ ಸತತ ತುಳಜಾಭವಾನಿಯ ನಾಮಮಂತ್ರವನ್ನು ಪಠಿಸುತ್ತ, "ಸೋಲರಿಯದ ಧೀರನಾಗು ಮಗ, ಹಿಂದುಸಮಾಜ್ರ್ಯವನ್ನು ಸ್ಥಾಪಿಸುವ ಛತ್ರಪತಿಯಾಗು" ಎಂದು ಹರಸುತ್ತ ಏಕಾಗ್ರತೆಯಿಂದ ಹಾಲು ಕುಡಿಸುತ್ತಿದ್ದಳಂತೆ! ಮುಂದೆ ಬಾಲಕ ಶಿವಾಜಿಗೆ ಅರಮನೆಯ ಕಿಟಕಿಯ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಊಟಮಾಡಿಸುತ್ತ ಪ್ರತಿದಿನವೂ ಹೇಳುತ್ತದ್ದಳಂತೆ "ಶಿವ, ಅಲ್ಲಿ ನೋಡು! ಪರಂಪರಾಗತವಾಗಿ ಮರಾಠರ ಧ್ವಜ ಹಾರುತ್ತಿದ್ದ ಆ ’ಸಿಂಹಗಡ ಮತ್ತು ’ರಾಯಗಡಗಳ ಕೋಟೆಗಳ ಮೇಲೆ ದುಷ್ಟಮುಘಲರ ಧ್ವಜ ಹಾರುತ್ತಿದೆ. ಪಾರತಂತ್ರ್ಯದ ಸಂಕೇತವಾದ ಆ ಧ್ವಜಗಳನ್ನು ಕೆಡವಿ ಆ ಸ್ಥಾನದಲ್ಲಿ ಸ್ವಾತಂತ್ರ್ಯದ ಪ್ರತೀಕವಾದ ಮರಾಠರ ಧ್ವಜವನ್ನು ಸ್ಥಾಪಿಸುವುದು ನಿನ್ನ ಕರ್ತವ್ಯ! ಹಿಂದು ಸಾಮ್ರಾಜ್ಯವನ್ನು ಸಂಸ್ಥಾಪಿಸಿ ಪರಕೀರಯರ ಧಾಳಿಯಿಂದಾಗಿ ಅತಂತ್ರವಾಗಿರುವ ನಮ್ಮ ಧರ್ಮಕರ್ಮಗಳಿಗೆ ರಕ್ಷಣೆ ಒದಗಿಸುವುದು ನಿನ್ನ ಕರ್ತವ್ಯ" ಎಂದು.  
ಇಂತಹ ಧೀಮಂತ ತಾಯಿಯ ಕನಸು ನೆನಸಾದದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ! ಮಕ್ಕಳ ಮನದಲ್ಲಿ ತಮ್ಮ ಜೀವನಾದರ್ಶದ ಕಡೆಗೆ ಗಮನವನ್ನು ಹರಿಯಿಸುವ ಕೆಲಸವನ್ನು ಮಾಡಬಲ್ಲ ಮಾತೆಯರು ಮಾತ್ರವೇ ಮಹಾಮಾತೆಯರು.
ತಾನಿರುವ ನಾಡಿನಾದ್ಯಂತ ಕೆರೆ-ಭಾವಿ-ಘಟ್ಟಗಳನ್ನು ಕಟ್ಟಿಸಿ ಅಪಾರ ದಾನಧರ್ಮಗಳನ್ನು ಮಾಡಿ ಧನ್ಯನೆನಿಸಿದ ಲಕ್ಷ್ಮೀಧರ ಎಂಬ ಅಮಾತ್ಯನ ಕುರಿತಾದ ಶಾಸನದ ಪದ್ಯ ಆತನ ತಾಯಿಯನ್ನು ಪ್ರಸ್ತಾಪಿಸುತ್ತದೆ- ‘ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದ | ರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ || ಆತನ ಉದಾರಮನೋಭಾವವನ್ನು ರೂಪಿಸುವಲ್ಲಿ ಆತನ ತಾಯಿ ನೀಡುದ ಭಾವಪುಷ್ಟಿಯತ್ತ ಈ ಪದ್ಯವು ನಮ್ಮ ಗಮನವನ್ನು ಸೆಳೆಯುತ್ತದೆ!
ಭರತರತ್ನ II ಸರ್ ಎಂ. ವಿಶ್ವೇಶ್ವರೈಯ್ಯನವರು ಪುಟ್ಟ ಬಾಲಕನಾಗಿದ್ದಾಗ ಒಮ್ಮೆ ಆತನ ಪುಟ್ಟ ಹಸ್ತವನ್ನು ತನ್ನ ಹಸ್ತದಲ್ಲಿಟ್ಟುಕೊಂಡು ತಾಯಿ - "ವಿಶ್ವೇಶ್ವರ, ನೀನು ದೊಡ್ಡವನಾದ ಮೇಲೆ ಈ ಹಳ್ಳಿಗೆಲ್ಲ ನೀರು ಸಿಗುವಂತೆ ಮಾಡುತ್ತೇನೆಂದು ಮಾತುಕೊಡು" ಎಂದಳಂತೆ! ತಾಯಿಯ ಈ ಮಾತೆ ವಿಶ್ವೇಶ್ವರಯ್ಯನವರಿಗೆ ಹಲವಾರು ಜನೋಪಯೋಗಿಯಾದ ಹಲವಾರು ಪ್ರಕಲ್ಪಗಳನ್ನು ಯೋಜಿಸುವಲ್ಲಿ ಮೂಲಸ್ಫೂರ್ತಿಯಾಗಿತ್ತು.  
ಮಕ್ಕಳು ‘ಆರೋಗ್ಯಶಾಲಿಗಳಾಗಿರಲಿ, ಚೆನ್ನಾಗಿ ಓದಿ ಸ್ಥಾನಮಾನಗಳಿಸಿ ಸುಖ-ಸಂಪದಗಳಿಂದ ಬದುಕಲಿ’ ಎಂದು ಹಾರೈಸುವುದು ಎಲ್ಲ ತಾಯಿಗಳ ಸಹಜಗುಣವೇ. ಆದರೆ ಇದರಾಚೆಗೂ ತಾಯ್ತನವನ್ನು ಮೆರೆಯುವ ಮಹಾತಾಯಂದಿರು ಅಪರೂಪ. ಒಮ್ಮೆ ಆರೇಳು ವರ್ಷದ ಪುಟ್ಟ ನರೇಂದ್ರನು (ವಿವೇಕಾನಂದರ ಪೂರ್ವಾಶ್ರಮದ ನಾಮಧೇಯ) ರಸ್ತೆಯಲ್ಲಿ ವೇಗದ ಸಾರೋಟಿಗೆ ಸಿಕ್ಕಿ ಸಾಯುವ ಶಿಶುವನ್ನು ಕಾಪಾಡಲು ಮುನ್ನುಗ್ಗಿದ. ಶಿಶುವನ್ನು ಕಾಪಾಡಿದನಾದರೂ, ತಾನು ಬಿದ್ದು ಮಯ್ಯೆಲ್ಲ ಗಾಯ ಮಾಡಿಕೊಂಡ. ಈ ಸಂದರ್ಭದಲ್ಲಿ ಸಾಮನ್ಯ ತಾಯಿಯಾಗಿದ್ದರೆ "ಇನ್ನೊಮ್ಮೆ ಹೀಗೆಲ್ಲ risk ತೆಗೆದುಕೋ ಬೇಡ; ಎಂದು ಬುದ್ಧಿಹೇಳಿದ್ದಾಳಲ್ಲವೆ? ಆದರೆ ಮಗನು ಲೋಕೋತ್ತರ ವ್ಯಕ್ತಿಯಾಗಬೇಕೆಂದು ಹಾರೈಸುತ್ತಿದ್ದ ಆ ಮಹಾತಾಯಿ ಭುವನೇಶ್ವರಿ, ಮಗನ ಪರೋಪಕಾರ ಸ್ವಭಾವವನ್ನು ಮೆಚ್ಚಿ ಬಾಚಿತಬ್ಬಿ ಹರಸಿ ಹೇಳುತ್ತಾಳೆ "ಮಗ ಹೀಗೆಯೇ ಯಾವಾಗಲೂ ಪರೋಪಕಾರಿಯಾಗಿರು!" ಎಂದು! ಮಹಾಭಾರತದಲ್ಲಿನ ಒಂದು ಪ್ರಸಂಗ - ಸಂಜಯ ಎಂಬ ಯುವಕ ರಾಜ. ಯುದ್ಧದಲ್ಲಿ ಸೋಲಿನ ಸೂಚನೆ ಸಿಕ್ಕಿತು, ಸರಿ ಮಿಕ್ಕುಳಿದ ಸೈನಿಕರೊಂದಿಗೆ ರಾಜ್ಯಕ್ಕೆ ಓಡಿಬಂದುಬಿಟ್ಟ. ಆದರೆ ಅರಮನೆಯ ಬಾಗಿಲಲ್ಲಿ ಆತನ ತಾಯಿ ರಾಜಮಾತೆ ವಿದುಲಾ ಗದರಿಸಿ ಹೇಳುತ್ತಾಳೆ "ನೀನು ಯುದ್ಧದಲ್ಲಿ ವೀರನಂತೆ ಹೋರಾಡಿ ಸತ್ತರೂ ನಾನು ದುಃಖಿಸುವುದಿಲ್ಲ. ಆದರೆ ಹೀಗೆ ಹೇಡಿಯಂತೆ ವಾಪಸ್ಸು ಬಂದರೆ ಸಹಿಸಲಾರೆ, ಹೋಗು ಯುದ್ಧ ಮುಗಿಸಿ ಬಾ!" ಎಂದು! ಸಂಜಯನು ಬೇರೆ ದಾರಿ ಗಾಣದೆ ಕಾಡಿಗೆ ಹೋಗಿ, ಸೇನೆಯನ್ನು ಕಟ್ಟಿಕೊಂಡು ಮತ್ತೊಮ್ಮೆ ಯುದ್ಧಮಾಡಿ, ಗೆದ್ದು ಬರುತ್ತಾನಂತೆ! ವೀರಮಾತೆ ಎಂದರೆ ಹೀಗಿರುತ್ತಾಳೆ!
ಮಕ್ಕಳು ಬಾಯ್ತುಂಬ Chocolate ತಿನ್ನಲಿ ಬಿಡಿ ಖುಶುಪಡಲಿ ಬಿಡಿ ಎನ್ನುವುದು ಸಾಮಾನ್ಯ ತಾಯಿಯ ಭಾವವಾದರೆ. ಮಗುವು ಏನೇ ತಿಂದರೂ ಹಂಚಿಕೊಳ್ಳಲಿ, ಹಿತದಲ್ಲಿ ಮಿತದಲ್ಲಿ ತಿನ್ನಲಿ, ತಿನ್ನದೇ ಇರುವುದನ್ನೂ ಕಲಿಯಲಿ ಎಂದು ನೀತಿಯನ್ನು ಅಸಾಮಾನ್ಯ ತಾಯಿಯು ಕಲಿಸುತ್ತಾಳೆ. ಪುಟ್ಟಮಕ್ಕಳಿಗೆ ನಾವು ಕಲಿಸುವ ಹಂಚಿಕೊಳ್ಳುವ ಗುಣ, ಸತ್ಯಸಂಧತೆ, ಪ್ರಾಮಾಣಿಕತೆ, ದೇಶಭಕ್ತಿ, ಶುಚಿತ್ವ ಮುಂತಾದ ಗುಣಗಳು ಆ ಮಕ್ಕಳ ಸ್ವಭಾವದಲ್ಲಿ ಬೆರೆತುಹೋಗುತ್ತವೆ. ಮುಂದೆ ಅವರ ವ್ಯಕ್ತಿತ್ವದಲ್ಲಿ ಅವುಗಳೇ ಶಿಸ್ತು ಪ್ರಾಮಾಣಿಕತೆಗಳಾಗಿ ವ್ಯಕ್ತವಾಗುತ್ತವೆ. ಬಾಲ್ಯದಲ್ಲಿ ತಿದ್ದದೆ ಬಿಟ್ಟ ದುರ್ಗುಣಗಳು ಬೆಳೆದ ವ್ಯಕ್ತಿತ್ವದ ಪ್ರಮುಖ ದೋಷಗಳಾಗಿ ಪರಿಣಮಿಸಿ ಅವರಿಗೇ ಮಾರಕವಾಗುತ್ತವೆ.
ಮಗುವಿಗೆ ಊಟ-ಬಟ್ಟೆ ಕೊಟ್ಟು ಶಾಲೆ ಸೇರಿಸಿದರಾಯ್ತು, ನನ್ನ ಜವಾಬ್ದಾರಿ ಮುಗಿಯುವುದಿಲ್ಲ. ‘ಮಗುವಿಗೇನು ಅರ್ಥವಾಗುತ್ತದೆ? ಬಿಡಿ!” ಎಂದು ಬಗೆದು ಅದರ ಸಮ್ಮುಖದಲ್ಲೇ ಜಗಳ, ಚಾಡಿ ಮಾತು, ಹರಟೆ, ಅಪಹಾಸ್ಯ ಮುಂತಾದವನ್ನು ಮಾಡುವವಳ ತಾಯ್ತಂದೆಯರು ಎಚ್ಚರಗೇಡಿಗಳು. ತಾನು ತಿಳಿದೋ ತಿಳಿಯದೆಯೋ ಮಗುವಿನ ಪಾಲಿಗೆ Role model (ಆದರ್ಶಪ್ರಾಯ) ಎನ್ನುವುದನ್ನು ಪ್ರತಿಯೋರ್ವ ತಾಯಿಯೂ ಅರಿತಿರಬೇಕಾಗುತ್ತದೆ. ಮಕ್ಕಳ ಮೂಲಕ ಸುಳ್ಳು ಹೇಳಿಸುವುದು, ಮಕ್ಕಳನ್ನೇ ಕುಳ್ಳಿರಿಸಿಕೊಂಡು ತನ್ನ ಗೋಳನ್ನು ಹೇಳುವುದು, ಮತ್ತೊಬ್ಬರ ಕುರಿತಾಗಿ ತೀವ್ರ ಕೋಪ ಅಸಹನೆಗಳನ್ನು ವ್ಯಕ್ತಪಡಿಸುವುದು ಇತ್ಯಾದಿಗಳು ಅವಿವೇಕಿಯಾದ ತಾಯಿಯ ವರ್ತನೆ.
ಬೆಳಗಾನೆ "ಪ್ರಸನ್ನಚಿತ್ತದೊಂದಿಗೆ, ದೇವರ ಸ್ಮರಣೆ ಮಾಡುತ್ತ, ನಗುನಗುತ್ತ ಗಡಿಬಿಡಿಯಿಲ್ಲದೆ ಏಳುವ’ ಕಲೆಯನ್ನು ಮಕ್ಕಳಿಗೆ ಕಲಿಸಬೇಕಾದವಳು ತಾಯಿಯೇ! ತಾಯಿಗೆ ಈ ಪ್ರಜ್ಞೆ ಇಲ್ಲದಿದ್ದಲ್ಲಿ, ಮಕ್ಕಳು ಪ್ರತಿದಿನವೂ ಬೆಳಿಗ್ಗೆ ಗಡಿಬಿಡಿ, ಆತಂಕ, ನಿರಾಸಕ್ತಿಗಳೊಂದಿಗೇ ಏಳುವಂತಾಗುತ್ತದೆ. ಆ ಮನಃ ಕ್ಷೋಭೆ ಇಡೀ ದಿನವೂ ಅವರ Mood ಆಗಿ ಪರಿಣಮಿಸದಿರುತ್ತದೆಯೆ?
ಇನ್ನು ಪರೀಕ್ಷಾ ವಿಷಯದಲ್ಲಿ- "ನಿನಗೆ ಪರೀಕ್ಷೆ ಇದೆ! ಹುಷಾರ್!" "ಬಿಡು, ಈ ಸಲ ನೀನು ಖಂಡಿತ ಫೇಲ್!" ಇಂತಹ ಮಾತುಗಳನ್ನು ಪಠಿಸುವ ತಾಯಂದಿರು ಮರು ಯೋಚಿಸಬೇಕು. ಒಮ್ಮೆ ಮರದ ಕೊಂಬೆಗೆ ನೇತು ಹಾಕಿಕೊಂಡು ಮರಕೋತಿಯಾಟ ಆಡುತ್ತಿದ್ದರು ಇಬ್ಬರು ಪುಟ್ಟ ಹುಡುಗರು. ಒಂದು ಹುಡುಗನ ತಾಯಿ ಕೂಗಿ ಹೇಳಿದಳು- "ಅಯ್ಯೊ! ಏನೋ ಇದು?! ಯಾಕೋ ಹತ್ತಿದೆ? ಬಿದ್ದೇ ಹೋಗ್ತೀಯಾ!" ಮತ್ತೊಂದು ತಾಯಿ ಕೂಗಿ ಹೇಳಿದಳಂತೆ- "ಗಾಬರಿಯಾಗಬೇಡ! ಬಿಗಿಯಾಗಿ ಹಿಡಿದುಕೋ! ಹುಶಾರಾಗಿ ಇಳಿ!" ಅಂತ. ಮೊದಲ ತಾಯಿಯ ಮಗ ಕೆಳಗಿ ಬಿದ್ದು ಗಾಯಮಾಡಿಕೊಂಡ, ಎರಡನೆಯ ತಾಯಿಯ ಮಗು ಹುಶಾರಾಗಿ ಇಳಿದು ಬಂದ! ಇಲ್ಲಿ ಸಂದರ್ಭವೊಂದೆ, ಆದರೆ ಅದನ್ನು ಎದುರಿಸುವಾಗ ತಾಯಿ ಕೊಡಬಹುದಾದ ಮನಃಸ್ಥೈರ್ಯ ಬಹಳ ದೊಡ್ಡದು. ಮಕ್ಕಳು ಎದುರಿಸುವ ಶಾಲಾ ಪರೀಕ್ಷೆಗಳಾಗಲಿ, ಸಣ್ಣಪುಟ್ಟ ಸುಖದುಃಖ, ಸೋಗೆಲುವುಗಳಾಗಲಿ, ಆಶೆನಿರಾಶೆಗಳಾಗಲಿ ಕೀರ್ತಿ-ಅಪಕೀರ್ತಿಗಳಾಗಲಿ, ತಾಯಿಯು ಮಗುವಿಗೆ ಅವೆಲ್ಲವನ್ನೂ ಜೀರ್ಣಿಸಿಕೊಂಡು ಉತ್ಸಾಹಗೆಡದೆ ಜೀವನವನ್ನು ಎದುರಿಸುವ ಕಲೆಯನ್ನು ಕಲಿಸಬೇಕು. ಈ ಪ್ರಸನ್ನಚಿತ್ತತೆಯ ಮಹತ್ತರ ’ಆಸ್ತಿ’ಯನ್ನು ಮಗುವಿಗೆ ಜನ್ಮಜಾತವಾಗಿ ಒದಗುವಂತೆ ಮಾಡುವ ಹೆಜ್ಜವಾಬ್ದಾರಿಯು ಮುಖ್ಯವಾಗಿ ತಾಯಿಯದೆ!
ಮನುಷ್ಯನ ವ್ಯಕ್ತಿತ್ವದಲ್ಲಿ ದೇಹವಷ್ಟೇ ಅಲ್ಲ, ಮನಸ್ಸು, ಬುದ್ಧಿ, ಗುಣ, ಸಾಮರ್ಥ್ಯ, ಸ್ವಭಾವ ಮುಂತಾದ ಹಲವಾರು ಪದರಗಳಿವೆ. ಇವೆಲ್ಲ ಆತನ ಜೀವನದ ಗುಣಮಟ್ಟ, ಸುಖಸಂತೋಷ ಸಾಫಲ್ಯಗಳನ್ನು ನಿರ್ಣಯಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಈ ವ್ಯಕ್ತಿತ್ವವನ್ನು ಕೊಡುವಲ್ಲಿ ಮೊದಲು ತಾಯಿ, ತಂದೆಯರು ಆ ಬಳಿಕ ಮನೆಯ ಹಿರಿಯರು ಶಿಕ್ಷಕರೂ ಪ್ರಮುಖರು. ಇದು ಪುಷ್ಟವಾಗಿ ಸಿಕ್ಕಲ್ಲಿ, ಹೊರಗಡೆಯ ಜೀವನಾನುಭವಗಳು ಮನುಷ್ಯನನ್ನು ಅಷ್ಟು ಸುಲಭವಾಗಿ ಕಂಗೆಡಿಸಲಾರವು. ಅದಕ್ಕೆ ಹೇಳುವುದು ಮಾತೆಯ ಮಡಿಲೇ ಮೊದಲ ಗುರುಕುಲ ಎಂದು. 
ಡಾ ಆರತೀ ವಿ ಬಿ
Published in souvenier, Lady teachers association of Govt schools of Karnataka, March 2016

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ