ಶುಕ್ರವಾರ, ಮಾರ್ಚ್ 17, 2017

ಉಡುಪುಗಳು ಮತ್ತು ಅತ್ಯಾಚಾರ- ಒಂದು ಸಮೀಕ್ಷೆ
ಸಮಾಜದಲ್ಲಿ ಬದುಕುವ ಮನುಷ್ಯನಿಗೆ 'ವ್ಯಷ್ಟಿ-ಸಮಷ್ಟಿಗಳ ಸಾಮರಸ್ಯ'ವನ್ನು ಕಾಪಾಡಿಕೊಳ್ಳುವಂತೆ ಸನಾತನ ಧರ್ಮವು ನಿರ್ದೇಶಿಸುತ್ತದೆ. 'ವ್ಯಷ್ಟಿ' ಎಂದರೆ ವೈಯಕ್ತಿಕ ಜೀವನಶೈಲಿ, ಹಕ್ಕು-ಬಾಧ್ಯತೆಗಳು, ಆಯ್ಕೆ-ಅಭಿರುಚಿಗಳು. 'ಸಮಷ್ಟಿ' ಎಂದರೆ ಸಾಮೂಹಿಕ ನೆಲಯಲ್ಲಿನ (ಸಮಾಜ-ಪ್ರದೇಶ-ದೇಶ-ವಿಶ್ವದ ಮಟ್ಟಕ್ಕೂ ಇದರ ವ್ಯಾಪ್ತಿ) ಸಾರ್ವಜನಿಕ ನ್ಯಾಯ, ಸಾಮರಸ್ಯ, ಶಾಂತಿ, ಉನ್ನತಿ, ಸುರಕ್ಷೆ ಇತ್ಯಾದಿ. ‘ವ್ಯಷ್ಟಿ’ಯೇ ಎಲ್ಲರಿಗೂ ಹೆಚ್ಚು ಪ್ರಿಯ. ಆದರೆ ಅದು ಸಮಷ್ಟಿಗೆ ಕಂಟಕವಾಗದಂತೆ ಎಚ್ಚರವಹಿಸಬೇಕು. ಒಂದು ವ್ಯಕ್ತಿಯ ಆಸೆ, ಆಯ್ಕೆಗಳಿಂದಾಗಿ ಸಮಾಜಕ್ಕೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅನನುಕೂಲತೆಗೆಯುಂಟಾಗಬಾರದು. ವ್ಯಷ್ಟಿಯನ್ನು ಸದಾ ಸಮಷ್ಟಿಗೆ ಪೂರಕವಾಗಿಯೂ ಸಮರಸವಾಗಿಯೂ ಇರುವಂತೆ ನಿಯಂತ್ರಿಸುತ್ತಿರಬೇಕು ಎನ್ನುವುದು ಸಕಲ ಶಾಸ್ತ್ರಗಳ, ಪ್ರಾಜ್ಞರ ಸ್ಪಷ್ಟ ನಿಲುವು. ಓರ್ವ ವ್ಯಕ್ತಿ ಎಲ್ಲೆಂದರಲ್ಲಿ Cigarette ಸೇದುವಾಗ ಅವನಿಗಷ್ಟೇ ಅಲ್ಲ, ಸೇದದಿದ್ದವರಿಗೂ ಹಾನಿಯಾಗುತ್ತದೆ. ಒಬ್ಬನು signal jump ಮಾಡಿ ವೇಗವಾಗಿ ವಾಹನ ಚಲಾಯಿಸಿದಾಗ, ಅಮಾಯಕನೊಬ್ಬನ ಸಾವೂ ಸಂಭವಿಸಿಬಿಡಬಹುದು. ಕುಡುಕನೊಬ್ಬನ ಹುಚ್ಚಾಟಗಳು ಅವನ ಮನೆಯವರಿಗೂ ನೆರೆಕೆರೆಯವರಿಗೂ ನಿದ್ದೆಗೆಡಿಸುತ್ತವೆ. ಇದನ್ನೆಲ್ಲ ನೋಡಿದಾಗ ಮನುಷ್ಯನು 'ನನ್ನ ಜೀವನ' 'ನನ್ನಿಷ್ಟ' ಎಂದು ಮುಂದಾಲೋಚನೆಯಿಲ್ಲದೆ ವ್ಯವಹರಿಸುವವರಿಂದಾಗಿ ಸಮಾಜದಲ್ಲಿ ಏನೆಲ್ಲ ಅನಾಹುತಗಳಾದಾವು ಎಂಬುದನ್ನು ಊಹಿಸಬಹುದು.
ಸಮಾಜದ ಶೋಭೆ ಹೆಣ್ಣು. ಆಯಾ ದೇಶ-ಪ್ರದೇಶ-ಪರಂಪರೆಗಳ ಸ್ವಾರಸ್ಯಕರ ಸಂಕೇತಗಳನ್ನೆಲ್ಲ ತನ್ನ ವೇಷಭೂಷ ನಡೆನುಡಿಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ಅವಿಚ್ಛಿನ್ನವಾಗಿ ತರುವ ವಿಷಯದಲ್ಲಿ ಹೆಣ್ಣೇ ಪ್ರಧಾನ ಪಾತ್ರ ವಹಿಸುತ್ತ ಬಂದಿದ್ದಾಳೆ. ತನ್ನ ವೇಶಭೂಷ-ಹಾವಭಾವಗಳಿಂದ ಆಕೆ ಮೆಚ್ಚುಗೆ, ಗೌರವ, ಸ್ನೇಹಭಾವಗಳನ್ನು ಮೂಡಿಸಬಲ್ಲಳು. ಅಥವಾ ವಿಕೃತ ಚೇಷ್ಟೆಗಳಿಂದಲೂ ಪ್ರಚೋದಕ ಉಡುಪುಗಳಿಂದಲೂ ಕಾಮವನ್ನೂ ಕೆರಳಿಸಬಲ್ಲಳು! 'ತನ್ನನ್ನು ಸಾಮಾಜಿಕರು ಹೇಗೆ ಕಾಣಬೇಕು' ಎನ್ನುವುದನ್ನು ಬಹುಮಟ್ಟಿಗೆ ನಿರ್ಧರಿಸುವುದು ಸ್ವತಃ ಆಯಾ ನಾರಿಯ ವೇಷ-ಭೂಷ-ನಡೆ-ನುಡಿಗಳೇ ಎನ್ನುವುದಂತೂ ನಿರ್ವಿವಾದ. ‘ನನ್ನ ದೇಹ’ ‘ನನ್ನ ಇಷ್ಟ!’ ಎಂದು ಭಾವಿಸುವುದು ವ್ಯಷ್ಟಿಯ ನೆಲೆಯಲ್ಲಿ ಸರಿಯೇ ಇರಬಹುದು. ಅದನ್ನು ತಾರ್ಕಿಕವಾಗಿ ಖಂಡಿಸುವುದೂ ಕಷ್ಟ. ಆದರೆ ನಮ್ಮಿಂದ ಸಮಾಜಕ್ಕೂ ಸಮಾಜದಿಂದ ನಮಗೂ ವಿನಿಮಯವಾಗುವ ಸೂಕ್ಷ್ಮವಾದರೂ ಪ್ರಭಾವಶಾಲಿ ಭಾವತರಂಗಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅದನ್ನೇ ‘ಸಮಷ್ಟಿಪ್ರಜ್ಞೆ’ ಎನ್ನುವುದು. ಅದನ್ನುಳ್ಳ ಸ್ತ್ರೀಪುರುಷರ ಆಲೋಚನೆ ಎಂದೂ “ನಾನು ! ನನ್ನಿಷ್ಟ..!” ಎಂಬ ಧಾಟಿಯಲ್ಲಿ ಸಾಗದು. ಇರಲಿ, ಇದನ್ನು ಅರ್ಥಮಾಡಿಕೊಳ್ಳಲು ಒಂದು ಮಟ್ಟದ ಪಕ್ವತೆ, ಸಹನೆ ಹಾಗೂ ದೂರಾಲೋಚನೆ ಬೇಕಾಗುತ್ತದೆ. ಗಳಿಕೆ-ಬಳಕೆಗಳ ಹುಚ್ಚಿನಲ್ಲಿ ಧಾವಿಸುತ್ತಿರುವ ’ನಾಗರೀಕ’ರಿಗೆ ಕೆಟ್ಟಮೇಲೆಯೇ ಬುದ್ಧಿ ಬರುವುದು.
ಭೀಕರ ಅತ್ಯಾಚಾರಗಳ ಸರಣಿಯನ್ನು ನೋಡಿ ನೋಡಿ ಅಸಹ್ಯವನ್ನೂ ಅಸುರಕ್ಷೆಗಳನ್ನು ಅನುಭವಿಸುತ್ತಿರುವ ಈ ಯುಗದ ನಾರೀಕುಲದ ಮುಂದೆ ಹಲವು ಸವಾಲುಗಳು ಇವೆ. ಕುತ್ಸಿತ ಸಮಾಜಿಕರೇ ಒಡ್ಡುತ್ತಿರುವ ಸಮಸ್ಯೆಗಳು ಹಲವಾದರೆ, ಹೆಣ್ಣು ತನ್ನದೇ ಬಾಲಿಷತನದಿಂದಾಗಿಯೂ ದುಡುಕುತನದಿಂದಾಗಿ ತಂದುಕೊಳ್ಳುತ್ತಿರುವ ಸಮಸ್ಯೆಗಳೂ ಕೆಲವು. ಕಾಡಲ್ಲಿ ಹುಟ್ಟಿಬೆಳೆದ  ಪಶುಪಕ್ಷಿಗಳೂ ಆಜನ್ಮವೂ ಆತ್ಮರಕ್ಷಣೆಗಾಗಿ ಎಚ್ಚರವಾಗಿರುವುದು ತಪ್ಪದು. ಕಾಮುಕರೂ ನಯವಂಚಕರೂ ಪುರುಷಶ್ರೇಷ್ಠತೆಯ ಹಠವಾದಿಗಳೂ ಹುಟ್ಟಿಬರುತ್ತಲೇ ಇರುವ ಮಾನವ ಸಮಾಜದಲ್ಲಿ, ಪ್ರತಿಯೋರ್ವ ಸ್ತ್ರೀಯು ತನ್ನ ಎಚ್ಚರ-ಧೈರ್ಯ-ಸುರಕ್ಷೋಪಾಯಗಳನ್ನು ಕಲಿಯುವುದು ಅತ್ಯಗತ್ಯ. ‘ತನ್ನ ಜೀವನಲಕ್ಷ್ಯವೇನು? ತನ್ನ ಸುತ್ತಲೂ ಜನರೆಂತಹವರು? ಅಪಾಯಗಳೇನು? ಸುರಕ್ಷೆಯ ಉಪಾಯಗಳೇನು?’ ಎನ್ನುವುದನ್ನು ಮನನ ಮಾಡದೆ, ’ನನ್ನ ತಂಟೆಗೇ ಯಾರು ಬರಲೇಬಾರದು!’ ಎಂದು ಆಶಿಸುವುದು ಕಟುವಾಸ್ತವದಿಂದ ಬಹು ದೂರ. ’ಆತ್ಮಾನಮಾತನಾ ಯಾಸ್ತು ರಕ್ಷೇಯುಸ್ತಾಃ ಸುರಕ್ಷಿತಾಃ (ತನ್ನನ್ನು ತಾನು ರಕ್ಷಿಸಿಕೊಳ್ಳಲು ತಿಳಿದಿರುವ ಸ್ತ್ರೀಯು ಮಾತ್ರವೇ ನಿಜಕ್ಕೂ ಸುರಕ್ಷಿತಳು) ಎಂಬುದು ಸ್ಮೃತಿವಾಕ್ಯ. ಯಾವ ಪ್ರಚೋದನೆಯಿಲ್ಲದೆಯೂ ಬಂದೆರಗುವ ವಿಕೃತಕಾಮುಕರಿರುವ ಸಮಾಜದಲ್ಲಿ, ಪ್ರಚೋದನೆಗೊಳಿಸುವಂತಹ ವೇಷ-ಭೂಷ-ಹಾವ-ಭಾವಗಳನ್ನು ಮೆರೆದೂ ‘ತಾನು ಸುರಕ್ಷಿತವಾಗಿರಬೇಕು’ ಎಂದು ಬಯಸುವುದು ಪ್ರಾಯೋಗಿಕ ಸತ್ಯವಲ್ಲ. ಇಲ್ಲಿ ಭಾವನೆ ಹಕ್ಕುಗಳ ಪ್ರಶ್ನೆಗಿಂತ ಸುರಕ್ಷತೆಯ ಪ್ರಶ್ನೆಯೇ ದೊಡ್ಡದು. ಎಲ್ಲ ದೇಶಗಳೂ ಅವರವರ ಗಡಿಯೊಳಗೆ ಮರ್ಯಾದೆಯಿಂದಿರಬೇಕೆನ್ನುವುದು ವೈಶ್ವಿಕ ನೀತಿ. ಆದರೂ ಸೈನಿಕರು ಹಗಲೂ ರಾತ್ರಿ ಸೀಮೆಗಳನ್ನು ಕಾಯುವುದು ಎಂದಾದರೂ ತಪ್ಪುವುದೆ?
ಸ್ವಾತ್ರಂತ್ರ್ಯದೊಂದಿಗೆ ಬರುವ ಜವಾಬ್ದಾರಿಯ ಬಗ್ಗೆಗೂ ಗಮನವಿದ್ದರೇ, ಸ್ತ್ರೀಪುರುಷರ ವರ್ತನೆ ಪ್ರೌಢವಾಗಿರುತ್ತದೆ. ತಮ್ಮ ತನು-ಮನ-ಧನಳನ್ನು ಶುದ್ಧವಾಗಿಯೂ ಶಕ್ತವಾಗಿಯೂ ಇಟ್ಟುಕೊಳ್ಳುತ್ತಾರೆ. ಹಾಗೂ, ಸಮಾಜದಲ್ಲಿ ಅತಿಶಯ ಸ್ವಾತಂತ್ರ್ಯವನ್ನು  ಬಯಸುವ ನಾರಿಯರು. ಝಾನ್ಸೀ ರಾಣಿಯಂತೆ, ಕಿತ್ತೂರಿನ ಚೆನ್ನಮ್ಮಳಂತೆ ಕರಾಟೆ-ಕುಸ್ತಿಗಳ ಮೂಲಕ ದೇಹ-ಮನೋ-ಬಲಗಳನ್ನೂ ವರ್ಧಿಸಿಕೊಳ್ಳಬೇಕೇ ಹೊರತು ಅಂಜಿ ಅಳಲಬಾರದು.
‘ತರುಣಿಯರ ಉಡುಗೆತೊಡುಗೆಗಳೇ ಎಲ್ಲ ಅತ್ಯಾಚಾರಗಳಿಗೂ ನೇರ ಕಾರಣ’ ಎನ್ನಲಾಗದಾದರೂ, ಆದರೆ ಅದೂ ಬಲವಾದ ಕಾರಣಗಳಲ್ಲೊಂದು ಎನ್ನುವುದನ್ನಂತೂ ಅಲ್ಲಗಳೆಯಲಾಗದು. “ಅಲ್ಲ! 6 ವರ್ಷದ ಬಾಲಕಿಯನ್ನೂ 80 ವರ್ಷದ ಮುದುಕಿಯನ್ನೂ ಬಿಡುವುದಿಲ್ಲ ಈ ಕಾಮಪಿಶಾಚಿಗಳು. ನಮ್ಮ ಉಡುಪನ್ನೇ ಯಾಕೆ ಕಾರಣವನ್ನಾಗಿಸುತ್ತೀರಿ?” ಎಂದು ಸಾಗುತ್ತದೆ ವಾದಸರಣಿ. ನಿಜ, ಕಾಮಾಂಧರ ವಿಕೃತದೃಷ್ಟಿಯು ಮೈತುಂಬ ಬಟ್ಟೆ ಹೊದ್ದು ಕೂತ ಸಾಧ್ವಿಯನ್ನೂ ಕಬಳಿಸುತದೆ. ಆದರೂ ಈ ಮನೋವಿಕಾರವು ಹೆಚ್ಚುತ್ತಿರುವುದಕ್ಕೆ ಕಾರಣಗಳನ್ನು ಪುಷ್ಟಿಕೊಡುತ್ತಿರುವ ಹಲವು ಮೂಲಗಳನ್ನು ಶೋಧಿಸಿನೋಡಬೇಕಾಗಿದೆ. ಸ್ತ್ರೀಯ ಅಂಗಾಂಗಪ್ರದರ್ಶನವನ್ನೇ ತಮ್ಮ ಚಲನಚಿತ್ರಗಳ, ಜಾಹೀರಾತುಗಳ ಬಂಡವಾಳವನ್ನಾಗಿಸಿಕೊಂಡಿರುವ ಉದ್ಯಮಗಳು ಅವುಗಳಲ್ಲೊಂದು. ಇವರು ಬಿತ್ತರಿಸುವ ಅಶ್ಲೀಲ posterಗಳು ಮೊದಲೇ ಕಾಮುಕರಾದವರನ್ನು ಹುಚ್ಚಿಬ್ಬಿಸುವಂತಿರುತ್ತವೆ. ದುಡ್ಡಿಗಾಗಿ Limelightಗಾಗಿ ಮರ್ಯಾದೆಯ ಸೀಮೆಗಳನ್ನು ಮೀರಿ ಮೈಮಾಟವನ್ನು ಅಶ್ಲೀಲವಾಗಿ ಬಿಂಬಿಸುವ ನಟನಟಿಯರು ಎಂತಹ ಸಪ್ಪೆ ಮನಸ್ಸುಗಳಲ್ಲೂ ಕಾಮಜ್ವರವನ್ನೇರಿಸಿಬಿಡುತ್ತಾರೆ! ಈ ಚಲನಚಿತ್ರ-ಜಾಹೀರಾತುಗಳ ಕೃತಕ-ಸೌಂದರ್ಯ-ವಿಲಾಸಗಳನ್ನೇ ಭಕ್ತಿಯಿಂದ ಅನುಕರಿಸುತ್ತ, ತಾವೂ ಮೈಮಾಟವನ್ನು ಪ್ರದರ್ಶಿಸುವ ಉಡುಪುಗಳನ್ನು ಹಾವಭಾವಗಳನ್ನೂ ಮೈಗೂಡಿಸಿಕೊಳ್ಳುತ್ತಾರೆ ವಿಲಾಸೀ ಯುವಜನರು. ಇಂತಹವರು ಅಶ್ಲೀಲತೆಯನ್ನು ಮೆರೆಯುತ್ತ ಬೀದಿಗಳಲ್ಲಿ ತಿರುಗಾಡಿದಾಗ, ನೋಡುವ ಮತಿಮನಗಳಲ್ಲಿ ವಿಕೃತಕಾಮವು ಮೂಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇದು ಸಾಲದೆಂಬಂತೆ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಲ್ಲೂ ಅಶ್ಲೀಲ ಮಾಹಿತಿ, ಚಿತ್ರಗಳ, Jokesಗಳ, Porn sitesಗಳ, ಸಂಭಾಷಣೆಗಳ ಪುಷ್ಟಿಯೂ ಈ ಮನೋವಿಕಾರವನ್ನು ಬಲಗೊಳಿಸುತ್ತವೆ. ಹೀಗೆ ಕಾಮಪ್ರಚೋದನೆಯ ಮೂಲಗಳು ಅಸಂಖ್ಯ! ವಾಸ್ತವವೇನೆಂದರೆ ಹೀಗೆ ನಿರಂತರ ಮತಿಗೆಡಿಸುವ Poster ನಟನಟಿಯರಾಗಲಿ, ಜಾಲತಾಣದ ಬೆಡಗಿಯರಾಗಲಿ ಈ ಕಾಮುಕರಿಗೆ ಸಿಗುವುದಿಲ್ಲ. ಆದರೆ ಅಲ್ಲೆಲ್ಲೋ ಬೀದಿಯಲ್ಲಿ ತಮ್ಮ ಪಾಡಿಗೆ ನಡೆದುಹೋಗುವ ಬಡಯುವತಿಯೋ, ಆಟವಾಡುತ್ತಿರುವ ಮುಗ್ಧ ಮಗುವೋ, ಅಸಹಾಯಕಳಾದ ಅಜ್ಜಿಯೋ ಸುಲಭವಾಗಿ ಸಿಕ್ಕಿಬಿಡುತ್ತಾಳೆ! ಅದಾರಿಂದಲೋ ಕೆರಳಿದ ಕಾಮವು ಇಲ್ಲಿ ಮತ್ತಾರಲ್ಲೋ ತೃಪ್ತಿಪಟ್ಟುಕೊಳ್ಳಲು ಹುಚ್ಚೆದ್ದು ನುಗ್ಗುತ್ತದೆ! ಅದಾರೋ ತಿಂದು ಎಸೆದ ಬಾಳೆಹಣ್ಣಿನ ಸಿಪ್ಪೆಯಿಂದಾಗಿ ಮತ್ತಾರೋ ಬಿದ್ದು ಕಾಲು ಮುರಿದುಕೊಳ್ಳುತ್ತಾರಲ್ಲ! ಹಾಗೆ!
ಹೀಗೆ ’ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೋ ನಮ್ಮ ಉಡುಗೆ-ತೊಡುಗೆ-ಉದ್ಯಮ-ಬರಹಗಳಿಂದಾಗಿ ಯಾರ್ಯಾರು ಯಾವ ವಿಕಾರವನ್ನು ಮೈಗೂಡಿಸಿಕೊಳುತ್ತಾರೋ’ ಎಂಬ ಎಚ್ಚರ ಎಷ್ಟು ಜನರಲ್ಲಿದೆ? ಇದ್ದಿದ್ದರೇ, ಪೂರ್ಣವಾಗಿಯಲ್ಲದಿದ್ದರೂ, ತಕ್ಕಮಟ್ಟಿಗಾದರೂ ಅದೆಷ್ಟೋ ಅಸಹಾಯಕರ ಅತ್ಯಾಚಾರವನ್ನು ತಪ್ಪಿಸಬಹುದೇನೋ!
ಆದರೆ ಬುದ್ದಿ ಹೇಳುವ ಧೈರ್ಯವನ್ನು ಇಂದಿನ ಹಿರಿಯರೂ ಕಳೆದುಕೊಳ್ಳುತ್ತಿದ್ದಾರೆ. ಹೇಳಿದರೆ ಕೇಳುವ ತಾಳ್ಮೆಯನ್ನು ಎಳೆಯರೂ ಕೈಬಿಡುತ್ತಿದ್ದಾರೆ. ’ಯಾರಿಗೇನಾದರೇನು? ‘ತಮ್ಮ Business ಚೆನ್ನಾಗಿ ನಡೆದರಾಯಿತು’ ಎಂಬ ಲೆಕ್ಕಾಚಾರದವರು ತಮ್ಮ ’ಮತಿಗೆಡಿಸುವ ಕೆಲಸವನ್ನು ಮುಂದುವರೆಸುತ್ತಲೇ ಇರುತ್ತಾರೆ.
ಒಟ್ಟಿನಲ್ಲಿ ಎಲ್ಲರಲ್ಲೂ ’ವ್ಯಷ್ಟಿ’ಯ ಲೆಕ್ಕಾಚಾರ! ಸಮಷ್ಟಿಯ ಪರಿವೇ ಇಲ್ಲ ! ’ಆದರೆ ನಮ್ಮ ’ವ್ಯಷ್ಟಿ’ಯು ’ಸಮಷ್ಟಿ’ಯಲ್ಲೇ ಆಶ್ರಯ ಪಡೆದಿದೆ. ಸಮಷ್ಟಿಯು ಕೆಟ್ಟರೆ, ವ್ಯಷ್ಟಿಯೂ ಕೆಡುತ್ತ ಹೋಗುತ್ತದೆಂಬ ತಥ್ಯ ನಮಗರಿವಾದರೆ ಒಳಿತು. ಅಲ್ಲಿಯವರೆಗೂ  ಅಪಾಯಗಳಿಗೆ ಕಡಿವಾಣ ಹಾಕುವ ಕೆಲಸ ಸುಲಭಸಾಧ್ಯವಲ್ಲ.
Dr ಆರತೀ  V B

Published in Viajayavani kannada Newspaper, March 8th 2017

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ