ಶುಕ್ರವಾರ, ಮಾರ್ಚ್ 17, 2017

ರಾಮಾಯಣದಲ್ಲಿ ಮಾತುಗಾರಿಕೆಯ ಪಾಠ

ಕಲಿಕೆ ನಮ್ಮನ್ನು ಅಕ್ಷರಸ್ಥರನ್ನಾಗಿಯಷ್ಟೇ ಮಾಡಿದರೆ ಸಾಲದು. ಅದು ನಮ್ಮ ಅಭಿವ್ಯಕ್ತಿ ಕೌಶಲವನ್ನೂ ವ್ಯವಹಾರಕೌಶಲವನ್ನೂ ವರ್ಧಿಸಬೇಕು. ನಮ್ಮ ಇಂದಿನ Rote learning ಶಿಕ್ಷಣ ಪದ್ಧತಿಯಲ್ಲಿ ಉರುಹೊಡೆಯದೆ ಏನನ್ನೂ ಸ್ವಂತ ವಾಕ್ಯಗಳಲ್ಲಿ ಅಥವ ಸ್ವಂತ ಆಲೋಚನೆಯಿಂದ ಅಭಿವ್ಯಂಜಿಸಲಾರದ ಎಳೆಯರನ್ನು ಕಂಡಾಗ ಮಾತುಗಾರಿಕೆಯ ತರಬೇತಿಯ ಕೊರತೆ ಎದ್ದು ಕಾಣುತ್ತದೆ. ಈ ಮಾತುಗಾರಿಕೆಯ ಸತ್ವಶೈಲಿಗಳು ಹೇಗಿರಬೇಕೆನ್ನುವುದನ್ನು ಅತಿಪ್ರಾಚೀನವೆನಿಸಿದ ವಾಲ್ಮೀಕಿಯ ರಾಮಾಯಣವೇ ಸ್ಪಷ್ಟವಾಗಿ ಸೂಚಿಸುತ್ತದೆ. ರಾಮಹನುಮರ ಮೊದಲ ಭೇಟಿ ಅದು. ಅಪರಿಚಿತರಾದ ರಾಮ-ಲಕ್ಷ್ಮಣರನ್ನು ಪರಿಚಯಿಸಿಕೊಳ್ಳಲು ಹನುಮಂತನೇ ಸ್ವತಃ ಮಾರುವೇಷದಲ್ಲಿ ಬಂದು ಮಾತನಾಡಿಸುತ್ತಾನೆ. ಅವನ ಮಾತಿನ ಶೈಲಿ, ಭಾಷೆಯ ಸೌಷ್ಟವ, ಧ್ವನಿ ಹಾಗೂ ಹಾವಭಾವಗಳನ್ನು ಗಮನಿಸಿ ರಾಮನು ಬೆರಗಾಗುತ್ತಾನೆ. ಅಪರಿಚಿತನಾದ ಹನುಮಂತನ ವ್ಯಕ್ತಿತ್ವ, ಬುದ್ಧಿಮತ್ತೆ, ಪಾಂಡಿತ್ಯ ಯೋಗ್ಯತೆಗಳನ್ನು ಒಮ್ಮೆಲೆ ಗುರುತಿಸಿ ಅವನ ಕುರಿತಾಗಿ ಲಕ್ಷ್ಮಣನಲ್ಲಿ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಾನೆ. ರಾಮನ ಆ ನುಡಿಗಳಲ್ಲಿ ಒಬ್ಬ ಸುಸಂಸ್ಕೃತ ವ್ಯಕ್ತಿಯ ಮಾತುಗಾರಿಕೆಯಲ್ಲಿ ಯಾವ ಲಕ್ಷಣಗಳಿರಬೇಕು, ಹಾವಭಾವಗಳು ಹೇಗಿರಬೇಕು ಮುಂತಾದವುಗಳ ಸುಂದರ ಪಾಠವೇ ನಮಗೆ ಸಿಗುತ್ತದೆ. ಸಾರ್ವಕಾಲಿಕ ಪ್ರಸ್ತುತತೆಯಿಂದ ಕೂಡಿದ ಈ ಮಾತುಗಳನ್ನು ನೋಡೋಣ-
ರಾಮ- "ಲಕ್ಷ್ಮಣ! ವಾಕ್ಯಜ್ಞನಾದ ಈ ಕಪಿವರನೊಂದಿಗೆ ಮಧುರವಚನಗಳನ್ನಾಡು. ಋಗ್ವೇದ-ಯಜುರ್ವೇದ-ಸಾಮವೇದಗಳ ಅಧ್ಯಯನದಿಂದ ಚೆನ್ನಾಗಿ ವಿದ್ವತ್ತನ್ನು ಪಡೆದವನು ಮಾತ್ರ ಇಷ್ಟು ಅದ್ಭುತವಾಗಿ ಮಾತನಾಡಲು ಸಾಧ್ಯ!" ಮಾತುಗಾರಿಕೆಗೆ ಶಾಸ್ತ್ರಪಾಕ (content knowledge) ಎಷ್ಟು ಮುಖ್ಯ ಎನ್ನುವ ಸೂಚನೆ ಇಲ್ಲಿದೆ.
ರಾಮ- "ಈತ ವ್ಯಾಕರಣಶಾಸ್ತ್ರವನ್ನು ಹಲವು ಬಾರಿ ಅಧ್ಯಯನ ಮಾಡಿದ್ದಾನೆ ಎಂಬುದೂ ಸ್ಪಷ್ಟವಾಗುತ್ತಿದೆ. ಇಷ್ಟು ದೀರ್ಘವಾಗಿ ಮಾತನಾಡಿದರೂ ಒಂದು ಅಪಶಬ್ದ ಕೇಳಿಬಂದಿಲ್ಲ!" ನುಡಿಯು ವ್ಯಾಕರಣದಿಂದ ಶುದ್ಧವೂ ಶಕ್ತವೂ ಆಗಿರಬೇಕು, ಅಸಂಬದ್ಧವಾಗಿ ಮಾತನಾಡಬಾರದು ಎನ್ನುವ ಪಾಠವಿಲ್ಲಿದೆ.
ರಾಮ- ಮಾತನಾಡುವಾಗ ಇವನ ಮುಖ, ಹಣೆ, ಹುಬ್ಬು ಮತ್ತು ಇತರ ಅಂಗಾಂಗಗಳಲ್ಲಿ ಯಾವ ದೋಷವೂ ಕಾಣಬರುತ್ತಿಲ್ಲ. ವಿಕೃತವೂ ಹಾಸ್ಯಾಸ್ಪದವೂ ಆಗಿ ಕಾಣುವ ಅಂಗಚೇಷ್ಟೆಗಳನ್ನು ಪ್ರದರ್ಶಿಸದೇ, ಯಥೋಚಿತವಾದ ಹಾವಭಾವಗಳನ್ನು (Body language) ಮಾತ್ರ ಪ್ರದರ್ಶಿಸಬೇಕು ಎನ್ನುವ ಪಾಠವಿಲ್ಲಿದೆ.
ರಾಮ- "ಈತನ ವಾಕ್ಯಗಳು ಅತಿದೀರ್ಘವಾಗಿಲ್ಲ, ಅಥವಾ ಅತಿಚಿಕ್ಕವೂ ಅಲ್ಲ. ಸುತ್ತಿಬಳಸಿ ಮಾತನಾಡುವುದಿಲ್ಲ. ಮಾತಿನ ಅರ್ಥದಲ್ಲಿ ಯಾವ ದ್ವಂದ್ವಕ್ಕೂ ಗೊಂದಲಕ್ಕೂ ಎಡೆಯಿಲ್ಲ. ಮಧ್ಯೆ ಮಧ್ಯೆ ತಡೆಗಳಿಲ್ಲದೆ ಇವನ ಮಾತು ಆಕರ್ಷಕವಾಗಿ ಸಾಗಿದೆ" ಮನಸ್ಸಿನಲ್ಲಿರುವುದನ್ನು ಅಚ್ಚುಕಟ್ಟಾದ ಭಾಷೆಯ ಚೌಕಟ್ಟಿನಲ್ಲಿ ನಿರ್ಮಿಸಿ ಸ್ಪಷ್ಟವೂ ಸ್ಫುಟವೂ ಆಗಿರುವಂತೆ ಮಂಡಿಸಬೇಕು ಎನ್ನುವ ಪಾಠವ ಇಲ್ಲಿದೆ.
ರಾಮ - ಈತನ ಧ್ವನಿ ಅತಿ ಜೋರು ಅಲ್ಲ ಅಥವಾ ಬಹಳ ದುರ್ಬಲವೂ ಅಲ್ಲ. ತುಂಬ ಹದವಾಗಿದೆ, ಕಿವಿಗಳಿಗೆ ಆಪ್ಯಾಯಮಾನವಾಗಿದೆ". ಇವೆಲ್ಲ ಸಂವಹನಕೌಶಲಕ್ಕೆ ಸಂಬಂಧಿಸಿದ ಮುಖ್ಯಪಾಠಗಳಲ್ಲವೆ?
ರಾಮನು ಹನುಮಂತನ ಮಾತನ್ನು ’ಸಂಸ್ಕಾರ-ಕ್ರಮಸಂಪನ್ನಾವಾಣೀ’ ಎಂದು ಸ್ತುತಿಸುತ್ತಾನೆ. ’ಸಂಸ್ಕಾರ’ ಎಂದರೆ ವ್ಯಾಕರಣದಿಂದ ಪರಿಷ್ಕರಣ, ’ಕ್ರಮ’ ಎಂದರೆ ಶಬ್ದ-ಉಚ್ಚಾರಗಳ ಅರಿವು. ಸ್ವರ-ವ್ಯಂಜನ-ಅಲ್ಪಪ್ರಾಣ-ಮಹಾಪ್ರಾಣಾದಿಗಳ ಪ್ರಾಣವನ್ನು ಹಿಂಡುತ್ತ, ’ಹೇಗೋ ಹೇಳಿ ಮುಗಿಸಿದರಾಯಿತು’ ಎಂಬ ಅಸಡ್ಡೆಯಿಂದ ಅಸಂಬದ್ಧವಾಗಿ ಮಾತನಾಡುವುದನ್ನೇ ’ಕ್ರಮ’ವಾಗಿಸಿಕೊಂಡಿರುವ ’ಆಧುನಿಕರು’ ಇದನ್ನು ಗಮನಿಸಬೇಕು.
ರಾಮ- ಈತನ ಮಾತಿನ ಶೈಲಿ ಅದೆಷ್ಟು ಸುಂದರ! ಇವನ ವಾಗ್ಧಾರೆಯು ತಡೆಯಿಲ್ಲದೆ ಪುಂಖಾನುಪುಂಖವಾಗಿ ಹರಿದು ಬರುತ್ತಿದೆ! ಹೃದಯವನ್ನು ಸೆಳೆಯುವ ಇವನ ಮಾತು ಕಲ್ಯಾಣೀವಾಕ್ (ಮಂಗಲಕರವಾದ ಮಾತು)
ರಾಮ- ಇವನ ಧ್ವನಿ ಹೃದಯ, ಕಂಠ ಹಾಗೂ ನೆತ್ತಿಗಳಿಂದ ಯೋಗ್ಯವಾದ ರೀತಿಯಲ್ಲಿ ಹೊಮ್ಮುತ್ತಿವೆ. (ಹಾಗಾಗಿ) ಧ್ವನಿ ಅಪೂರ್ವವೂ ಚಿತ್ತಾಕರ್ಷಕವೂ ಆಗಿದೆ. ಧ್ವನಿಸಂಬಂಧಿತವಾದ ಎಲ್ಲ ಅಂಗಗಳ ಯೋಗ್ಯ ಬಳಕೆಯಿಂದ ಮಾತ್ರ ಮಾತು ಆಳವೂ, ಸುಂದರವೂ ಪರಿಪೂರ್ಣವೂ ಆಗುತ್ತದೆ ಎನ್ನುವ ಪಾಠ ಇಲ್ಲಿದೆ.
ರಾಮ- ಕೈಯಲ್ಲಿ ಖಡ್ಗವನ್ನೇ ಎತ್ತಿಹಿಡಿದ ಶತ್ರುವಿನ ಮನಸ್ಸನ್ನು ಪರಿವರ್ತಿಸುವ ಬಲವಿದೆ ಈ ಚೆನ್ನಾದ ಮಾತುಗಳಿಗೆ! ಮಾತುಬಲ್ಲ ಚತುರರು ನಾವಾದಲ್ಲಿ ಎಂತಹ ಅನನುಕೂಲಪರಿಸ್ಥಿತಿಯಲ್ಲೂ ಗೆದ್ದುಬರಬಲ್ಲೆವು ಎನ್ನುವ ಸೂಚನೆ ಇಲ್ಲಿದೆ. ಮಾತಿನ ಬಲದಿಂದಲೇ ಜನಮಾನಸದಲ್ಲಿ ಜ್ಞಾನವನ್ನೂ ಧೈರ್ಯವನ್ನೂ ಪ್ರೇರಣೆಯನ್ನೂ ದೇಶಭಕ್ತಿಯನ್ನೂ ತುಂಬಿದ ಅಸಂಖ್ಯ ಮಹಾತ್ಮರ ಚರಿತೆಗಳ ಉದಾಹರಣೆಗಳು ನಮ್ಮ ಮುಂದಿದೆ. ಅಂತೆಯೇ ಪಾಶ್ಚಾತ್ಯವ್ಯಾಮೋಹವನ್ನೂ, ಆತಂಕವಾದಂತಹ ಭಯಂಕರ ವಿಷಯದಲ್ಲೂ ಪ್ರೀತಿಯನ್ನು ತುಂಬಿ ನರಕದತ್ತ ಯುವಮಾನಸವನ್ನು ಸೆಳೆಯುತ್ತಿರುವವರೂ ವಾಕ್ಕುಶಲರೇ!
ರಾಮ- ಇಂತಹವನು ಯಾವ ರಾಜನಿಗೆ ದೂತನಾಗುತ್ತಾನೋ, ಅಂತಹ ರಾಜನು ಏನನ್ನು ತಾನೆ ಸಾಧಿಸಲಾರ? ಅಂತಹವನ ಸಕಲ ಮನೋರಥಗಳೂ ನೆರವೇರುತ್ತವೆ. ರಾಜನೀತಿಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುವವನು ದೂತ. ಆತನ ಮಾತುಗಾರಿಕೆಯಿಂದ ಸಂಬಂಧಗಳು ಬೆಳೆಯಬಹುದು ಅಥವಾ ಮುರಿಯಬಹುದು, ಯುದ್ಧಗಳಿಂದ ಆಗಬಹುದಾದ ಪ್ರಾಣಹಾನಿ ದ್ರವ್ಯಹಾನಿ ಮಾನಹಾನಿಗಳನ್ನು ಆತ ಮಾತುಗಾರಿಕೆಯಿಂದ ತಪ್ಪಿಸಬಲ್ಲ  ಅಥವಾ ಉಂಟಾಗಿಸಬಲ್ಲ! ’ಮಾತು ನಿರ್ಮಾಣವೂ ಮಾಡುತ್ತದೆ ನಿರ್ಣಾಮವೂ ಮಾಡುತ್ತದೆ’ ಎನ್ನುವುದು ಇದಕ್ಕಾಗಿಯೇ! 
ಒಳ್ಳೆಯ ಮಾತುಗಾರನು ಒಳ್ಳೆಯ ಕೇಳುಗನೂ ಆಗಿರಬೇಕು, ಎನ್ನುವ ಸೂಚನೆ ಮುಂದೆ ಸೀತಾಮಾತೆಯ ಮಾತುಗಳಲ್ಲಿ ಸಿಗುತ್ತದೆ. ಅಶೋಕವನದಲ್ಲಿದ ಸೀತೆಗೆ ರಾವಣನಿಧನದ ವಾರ್ತೆಯನ್ನು ಹನುಮಂತ ತಿಳಿಸಿದಾಗ, ಸೀತೆ ಅವನ ವಾಗ್ಮಿತೆಯನ್ನು ಹೀಗೆಯೇ ಶ್ಲಾಘಿಸುತ್ತಾಳೆ- "ಅತ್ಯಂತ ಲಕ್ಷಣಸಂಪನ್ನವಾದ, ಮಾಧುರ್ಯಾದಿ(ಕಾವ್ಯ)ಗುಣಗಳಿಂದ ಕೂಡಿರುವ, ಬುದ್ಧಿ ಮತ್ತು ಅಂಷ್ಟಾಂಗಗಳಿಂದ ಕೂಡಿರುವ ಇಂತಹ ಅದ್ಭುತವಾದ ಮಾತುಗಳನ್ನು ನಿನ್ನಂತಹ ಯೋಗ್ಯ ಮಾತ್ರವೇ ಆಡಬಲ್ಲ!" [ ಅಷ್ಟಾಂಗಗಳೆಂದರೆ- ಶುಶ್ರೂಷಾ (ಕೇಳುವುದರಲ್ಲಿ ಆಸಕ್ತಿ-ತಾಳ್ಮೆ), ಶ್ರವಣ, ಗ್ರಹಣ, ಧಾರಣ, ಊಹಾ, ಅಪೋಹ( ಸಿದ್ಧಾಂತದ ನಿಶ್ಚಯ) ಅರ್ಥವಿಜ್ಞಾನ ಮತ್ತು ತತ್ವಜ್ಞಾನ] ಇವಿಷ್ಟೂ ಇದ್ದರೆ ಮಾತ್ರವೇ ವಾಗ್ಮಿ ಉತ್ತಮನೆನಿಸುತ್ತಾನೆ ಎಂದು ತಾತ್ಪರ್ಯ. ಈ ಎಲ್ಲ ಮಾತುಗಳಿಂದ ಹನುಮನೂ, ರಾಮಸೀತೆಯರೂ ತಮ್ಮ ಹಿರಿಯರಿಂದ ವಾಕ್ಕೌಶಲದ ಶಿಕ್ಷಣವನ್ನು ಚೆನ್ನಾಗಿ ಪಡೆದಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ.

ನಮ್ಮ ರಾಮಾಯಣ-ಮಹಾಭಾರತ-ಕಾವ್ಯ-ನಾಟಕ-ಜಾನಪದ ಸಾಹಿತ್ಯಗಳಲ್ಲಿ ಇಂತಹ ಅದೆಷ್ಟೋ ವ್ಯಕ್ತಿತ್ವಪೋಷಕವಾದ ನೀತಿಗಳು ಸಿಗುತ್ತವೆ. ಅವನ್ನೆಲ್ಲ ನಾವು ತಿಳಿದು, ನಮ್ಮ ಮಕ್ಕಳಿಗೂ ಕಲಿಸಿ ಅವರನ್ನೂ ರಾಮ-ಸೀತಾ-ಹನುಮರಂತೆ ಧೀಮಂತಸ್ತ್ರೀಪುರುಷರನ್ನಾಗಿ ರೂಪಿಸಲು ಏಕೆ ಯತ್ನಿಸುವುದಿಲ್ಲ? ಎಳೆಯರ ಶಿಕ್ಷಣದಲ್ಲಿ ಅಕ್ಷರಜ್ಞಾನ ಹಾಗೂ Marks card ಜೊತೆಗೆ ವಾಕ್ಕೌಶಲ, ಪಾಂಡಿತ್ಯ, ಸ್ವೋಪಜ್ಞತೆ, ಸ್ವತಂತ್ರ ವಿಮರ್ಶೆ (ಪಾಶ್ಚಾತ್ಯರು ಕಲಿಸಿದ್ದಲ್ಲ!) ಹಾಗೂ ದೇಶೀಯ ಸಂಸ್ಕಾರಗಳನ್ನು ಬೆಳೆಸಬೇಕು. ಆಗ ಮಾತ್ರ ನಾವು ಧೀಮಂತ ಪ್ರಜೆಗಳನ್ನು ನಿರ್ಮಿಸಿ ಭಾರತವನ್ನು ವೈಭವದ ಎತ್ತರಕ್ಕೆ ಏರಿಸಲು ಸಾಧ್ಯ.

Published in Samyukta Karnataka newspaper, 2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ