ಶುಕ್ರವಾರ, ಮಾರ್ಚ್ 17, 2017

ಸಂಸಾರದಲ್ಲಿ ಹೇಗಿರಬೇಕು?
"ಸಂಸಾರದಲ್ಲಿ ನಾವು ಹೇಗಿರಬೇಕು?" ಎಂದು ಕೇಳಿದಾಗ ರಾಮಕೃಷ್ಣಪರಮಹಂಸರು ತಮ್ಮ ಉತ್ತರಗಳೊಂದಿಗೆ ಸಾಮಾನ್ಯವಾಗಿ ಕೊಡುತ್ತಿದ ನಿದರ್ಶನಗಳಿವು- "ಶ್ರೀಮಂತರ ಮನೆಯ ದಾಸಿಯ ನಿದರ್ಶನ", "ನೀರಿನಲ್ಲಿರುವ ಆಮೆಯ ನಿದರ್ಶನ", "ಸಂತೆಯಲ್ಲಿ ಅವಲಕ್ಕಿ ಮಾರುವ ಹೆಂಗಸಿನ ನಿದರ್ಶನ್ಮ", "ಕಾಡಿನಲ್ಲಿ ಪಯಣಿಸುವ ಪ್ರಯಾಣಿಕನ ನಿದರ್ಶನ" ಇತ್ಯಾದಿ. ರಾಮಕೃಷ್ಣರು ಇವುಗಳನ್ನು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು- "ಶ್ರೀಮಂತರ ಮನೆಯ ದಾಸಿಯು ಮನೆಯ ಕೆಲಸಕಾರ್ಯಗಳನ್ನೆಲ್ಲ ನಿಷ್ಟೆಯಿಂದ ಮಾಡುತ್ತಾಳೆ, ಮನೆಯ ಮಕ್ಕಳನ್ನು "ನನ್ನ ಚಿನ್ನ, ನನ್ನ ರನ್ನಎಂದು ಆಡಿಸಿ ಉಣಿಸಿ ಲಾಲನೆಪಾಲನೆ ಮಾಡುತ್ತಾಳೆ. ತನ್ನದೇ ಮನೆಯೆಂಬಂತೆ ಅಲ್ಲಿ ಓಡಾಡುತ್ತ ಕೆಲಸ ಮಾಡುತ್ತಾಳೆ. ಆದರೆ ಅವಳ ಅಂತರಂಗಕ್ಕೆ ಚೆನ್ನಾಗಿ ಗೊತ್ತುಇದಾವುದೂ ನಿಜಕ್ಕೂ ತನ್ನದಲ್ಲ ಎಂದು. ತಾನು ಇಲ್ಲಿರುವುದು ಕರ್ತವ್ಯವನ್ನು ಮಾಡುವ ಸಲುವಾಗಿ ಮಾತ್ರ, ತನ್ನ ನಿಜವಾದ ಮನೆ ದೂರದಲ್ಲಿರುವ ಗುಡಿಸಲು, ಅಲ್ಲಿ ಕೆಸರಲ್ಲಿ ಆಡಿಕೊಂದಿರುವ ಮಕ್ಕಳೆ ತನ್ನ ಮಕ್ಕಳು’ ಎಂದು”. ನಿದರ್ಶನದ ಸ್ವಾರಸ್ಯ ನೋಡಿ. ಜಗತ್ತೆಂಬ ಶ್ರೀಮಂತನ ಮನೆಯಲ್ಲಿ ನಮಗೊಂದು ಪಾತ್ರವಿದೆ, ಅದನ್ನು ಮಾಡುವ ಸಲುವಾಗಿ ಹುಟ್ಟಿಬಂದಿದ್ದೇವೆ, ಅದನ್ನು ನಿಷ್ಟೆಯಿಂದ ಅಚ್ಚುಕಟ್ಟಾಗಿ ಪೂರೈಸಿ, ವಿಧಿ ಎಂಬಶ್ರೀಮಂತ’ನ ಆಜ್ಞೆಯನ್ನು ಪಾಲಿಸಿ, ಪುಣ್ಯವೆಂಬಸಂಬಳವನ್ನು ಪಡೆದು, ಹೊರಡೆಂದಾಗ ಹೊರಟು ನಮ್ಮ ಅಂತರಂಗವೆಂಬ ನಮ್ಮ ಮನೆಯಲ್ಲಿ ವಿಶ್ರಮಿಸಬೇಕು! ಅದೇ ಸಂಸಾರದಲ್ಲಿರಲು ಬೇಕಾದ ನಯ, ಜಾಣ್ಮೆ ಎನ್ನುವುದು ಇಲ್ಲಿನ ತಾತ್ಪರ್ಯ!
ರಾಮಕೃಷ್ಣರು ಕೊಡುವ ನೀರಿನಲ್ಲಿ ಈಜುವ ಆಮೆ’ಯ ನಿದರ್ಶನ- ಆಮೆಯು ದೂರದ ದಡದ ಮರಳಲ್ಲಿ, ಹಳ್ಳ ಮಾಡಿ ಮೊಟ್ಟೆಗಳನ್ನಿಡುತ್ತದೆ. ನೀರಲ್ಲಿ ಸ್ವಚ್ಛಂದವಾಗಿ ಈಜಾಡುತ್ತ ಇದ್ದರೂ, ಅದರ ಗಮನವೆಲ್ಲ ಸತತವೂ ಮೊಟ್ಟೆಗಳ ಮೇಲೆಯೇ!" ತಾನು ಎಲ್ಲೇ ಇದ್ದರೂ ಏನೇ ಮಾಡುತ್ತಿದ್ದರೂ ಪರಮಾತ್ಮನನ್ನು ಅಥವಾ ಧ್ಯೇಯವನ್ನು ಸದಾ ಸ್ಮರಿಸಬೇಕು’.  ಎಷ್ಟೇ ಕೆಲಸಕಾರ್ಯಗಳಲ್ಲಿ ಮಗ್ನವಾಗಿದ್ದರೂ ನಮ್ಮ ಮೂಲಧ್ಯೇಯವನ್ನು ಸದಾ ಸ್ಮರಿಸುತ್ತಲೇ ಇರಬೇಕೆನುವ ಸುಂದರ ಸಂದೇಶವಿಲ್ಲಿದೆ.
ಸಂಸಾರದಲ್ಲಿರುವಾಗ ಎಚ್ಚರ ಮುಖ್ಯ. ಸುಖವು ಅಹಂಕಾರವೆಂಬ ಮತ್ತನ್ನು ಬರಿಸಿದಾಗ ಪಾಪದ ಏಟಿಗೆ ಸಿಗುತ್ತೇವೆ. ಇದಕ್ಕೆ ರಾಮಕೃಷ್ಣರು ಕೊಡುವ ನಿದರ್ಶನ – “ಸಂತೆಯಲ್ಲಿ ಅವಲಕ್ಕಿ ವ್ಯಾಪಾರಮಾಡುವ ಹೆಂಗಸನ್ನು ಒಂದು ಕಡೆ ಏತವನ್ನು ತುಳಿಯುತ್ತಿರುತ್ತಾಳೆ, ಮತ್ತೊಂದು ಕೈಯಿಂದ ಅವಲಕ್ಕಿಯನ್ನು ಗೂಟದ ಮಧ್ಯಕ್ಕೆ ತಳ್ಳುತ್ತಿರುತಾಳೆ, ಕುಟ್ಟಿದ ಅವಲಕ್ಕಿಯನ್ನು ತಳ್ಳಿತಳ್ಳಿ ಬುಟ್ಟಿಯಲ್ಲೂ ತುಂಬತ್ತಾಳೆ. ಹಸುಗೂಸನ್ನು ಸೊಂಟಕ್ಕೆ ತಗುಲಿಸಿಕೊಂಡು ಎದೆಹಾಲು ಕುಡಿಸುತ್ತಿರುತ್ತಾಳೆ, ಮಧ್ಯೆ ಬಂದ ಗಿರಾಕಿಗಳೊಡನೆ ಅವಲಕ್ಕಿ ಮಾರುತ್ತ ಚೌಕಾಸಿಯೂ ಮಾಡುತ್ತ ದುಡ್ಡು ಎಣಿಸಿಕೊಳ್ಳುತ್ತಿರುತ್ತಾಳೆ. ಆದರೆ ಇಷ್ಟೆಲ್ಲ ಮಾಡುವಾಗ, ಅವಳು ತುಂಬ ಎಚ್ಚರವಾಗಿರುವುದು ಯಾವುದರ ಬಗ್ಗೆ ಗೊತ್ತ? ಗೂಟಮ್ನಧ್ಯಕ್ಕೆ ಅವಲಕ್ಕಿ ತಳ್ಳುವ ಕೈಯ ಬಗ್ಗೆ! ಏಕೆಂದರೆ ಸ್ವಲ್ಪ ಗಮನ ಕಡಿಮೆಯಾದರು, ಯಂತ್ರದಲ್ಲಿ ತನ್ನ ಬೆರಳು ಸಿಲುಕಿ ಜಜ್ಜಿಹೋದಾವು!" ನಾವು ಕರ್ತವ್ಯಕರ್ಮಗಳ ಮಧ್ಯೇ ಬಹಳ ಎಚ್ಚರವಹಿಸಬೇಕಾದದ್ದು ಮನಸ್ಸಿನ ಬಗ್ಗೆ? ವ್ಯಾಮೋಹ, ಹಗಲಗನಸು, ಸುಖದ ಮತ್ತಿನಲ್ಲಿ ಮೈಮರೆತ ಕ್ಷಣದಲ್ಲೇ ಅಹಂಕಾರವೆಂಬ ಯಂತ್ರದೇಟು ನಮ್ಮ ಮನಕ್ಕೆ ಬಡಿದು ಪಾಪದಲ್ಲಿ ಬೀಳಿಸುತ್ತದೆ. ಅದರ ಪರಿಣಾಮವಾಗಿ ನೋವು, ಖಿನ್ನತೆಗಳು ಮುತ್ತಿಕೊಳ್ಳುತ್ತವೆ. ಹಾಗಾಗಿ ಸುಖದಲ್ಲಿ ಮೈಮರೆಯದಂತೆ ಸದಾ ಎಚ್ಚರವಾಗಿರುವುದು ಸಂಸಾರದಲ್ಲಿ ಪಾಲಿಸಬೇಕಾದ ಜಾಣ್ಮೆ.  
"ಕಾಡಿನಲ್ಲಿ ಪಯಣಿಸುವ ಪ್ರಯಾಣಿಕನ ನಿದರ್ಶನ" - ಕಾಡನ್ನು ದಾಟುವಾಗ ಮುಳ್ಳು, ಪೊದೆಗಳು, ದಟ್ಟಮರಗಳ ನಡುವೆ ಕತ್ತಲೆ, ದಾರಿಯ ಸ್ಪಷ್ಟತೆ ಇಲ್ಲದಿರುವುದು, ಕ್ರೂರಮೃಗಗಳ ಭಯ -ಇವೆಲ್ಲ ಇದ್ದದ್ದೆ! ಅದು ನಿಸರ್ಗದ ನಿಯಮ. ಅದರಲ್ಲಿ ದಾಟಿ ಹೋಗಬೇಕಾದಾಗ ಅದನ್ನೆಲ್ಲ ಎದುರಿಸಿವುದು ಅನಿವಾರ್ಯ. ರಾಮಕೃಷ್ನರು ಜಗತ್ತನ್ನು ದಟ್ಟ ಅಡವಿಗೆ ಹೋಲಿಸುತ್ತಾರೆ- ಜಗತ್ತೆಂಬ ಕಾಡಮಾರ್ಗದಲ್ಲಿ ಹಾದುಹೋಗುವಾಗ ನಮ್ಮನ್ನು ಚ್ಚುಚುವವರು, ಅಡ್ಡ ಹಾಕುವವರು, ತೊಂದರೆಕೊಡುವವರು ಎಂಬ ಮುಳ್ಳು-ಪೊದೆ-ಪ್ರಾಣಿಗಳ ಭಯ ತಪ್ಪಿದ್ದಲ್ಲ. ಮುಳ್ಳು-ಪೊದೆಯನ್ನು ಕೀಳುತ್ತ ಕತ್ತರಿಸುತ್ತ ಸಾಗುವುದು ಅಸಾಧ್ಯ. ಆದರೆ ಚಪ್ಪಲಿಯನ್ನು ಧರಿಸಿ ನಡೆದಾಗ ಮುಳ್ಳಿದ್ದರೂ ಚುಚ್ಚದು, ದುರ್ಗಮ ಮಾರ್ಗವೂ ಸುಗಮವಾಗುತ್ತದೆ. ಅಂತೆಯೇ ವೈರಾಗ್ಯವೆಂಬ ಚಪ್ಪಲಿಯನ್ನು ಧರಿಸಿ ನಡೆದಾಗ ಜಗತ್ತೆಂಬ ಕಾಡನಲ್ಲಿ ಆಗುವ ನೋವು ಕಷ್ಟಗಳು ಅಷ್ಟಾಗಿ ಅನುಭವಕ್ಕೆ ಬರುವುದಿಲ್ಲ". ನಿದರ್ಶನ ತುಂಬ ಅರ್ಥಪೂರ್ಣ. ‘ಅವರು ಹಾಗೆ ಮಾಡಿದರು, ಇವರು ಹೀಗೆ ಬೈದರು, ಅವರು ಹಾಗೆ ಮೋಸ ಗೈದರು’ ಎಂದು ಆಗಿಹೋದದ್ದನ್ನು ಲೆಕ್ಕಹಾಕುತ್ತ ವರ್ತಮಾನವನ್ನು ಹಾಳುಮಾಡಿಕೊಳ್ಳುವ ಮೂರ್ಖತನ ಹೆಚ್ಚಿನ ಜನರದ್ದು. ಆದರೆ ನಿರ್ಲಿಪ್ತಿ ಎಂಬ ಆವರಣವನ್ನು ಧರಿಸಿ ನಡೆದಾಗ, ನಮಗೆ ಜಗತ್ತಿನಿಂದ ಆಗುವ ಮಾನಾಪಮಾನಗಳ, ನಿಂದಾಸ್ತುತಿಗಳ, ಸುಖದುಃಖಗಳ ಬಗ್ಗೆ ಕಳವಳವಾಗದು. ಅದನ್ನೆಲ್ಲ ಜೀರ್ಣಿಸಿಕೊಂಡು ಮುನ್ನಡೆಯುವ ಧೈರ್ಯ-ಶಾಂತಿಗಳು ಬರುತ್ತವೆ. ಆಗುಹೋಗುಗಳ ಬಗ್ಗೆ ಕೊರಗದೆ, ಸಾಧಿಸಬೇಕಾದುದರ ಕಡೆಗೇ ಗಮನಹರಿಸಲು ಶಕ್ತವಾಗುತ್ತೇವೆ. ದೀರೋದಾತ್ತ ನಾಯಕತ್ವ ಉಳ್ಳವರು ಜಗತ್ತಿನ ದೋಷಗಳನ್ನು ಸರಿಗೈಯುವ ಛಲಬಲವನ್ನು ವ್ಯಕ್ತಪಡಿಸುವಾಗಲೂ ಇದೇ ವಿರಕ್ತಿ ಅವರಿಗೆ ಶಕ್ತಿಯಾಗುತ್ತದೆ. ಇನ್ನು ನಮ್ಮ ಸಾಮಾನ್ಯ ಜೀವನವನ್ನು ಸಾಧನೆಗಳನ್ನು ಸುಗಮವಾಗಿಸಿಕೊಳ್ಳುವಾಗಲೂ ಇದೇ ವಿರಕ್ತಿ ನಮಗೆ ನೀತಿಯಾಗಬೇಕಾಗುತ್ತದೆ.

ಆಧ್ಯಾತ್ಮಿಕ ಜೀವನವಾಗಲಿ ಪ್ರಾಪಂಚಿಕ ಸಾಧನೆಗಳಾಗಲಿ, ಒಂದು ಮಟ್ಟದ ವಿರಕ್ತಿ ಇಲ್ಲದೆ ಮನುಷ್ಯನು ಸಮಚಿತ್ತವನ್ನೂ, ಏಕಾಗ್ರತೆ ಮತ್ತು ಸಂಕಲ್ಪಶುದ್ಧಿಯನ್ನೂ ಉಳಿಸಿಕೊಳ್ಳಲಾರ. ಈ ನೀತಿಯನ್ನೇ ದೃಷ್ಟಾಂತ ಚಕ್ರವರ್ತಿಯೆನಿಸಿದ ಶ್ರೀ ರಾಮಕೃಷ್ಣಪರಮಹಂಸರು ಎಲ್ಲ ನಿದರ್ಶನಗಳ ಮೂಲಕ ಮಾರ್ಮಿಕ ತಿಳಿಸುತ್ತಿದ್ದಾರೆ. ನಿರ್ಲಿಪ್ತಿ ಎಂಬ ಮಹಾಶಕ್ತಿ ನಮ್ಮಲ್ಲಿದ್ದಾಗ, ಹೊಗಳಿಕೆಗೆ ಮೈಮರೆಯದೆ, ತೆಗಳಿಕೆಗೆ ಕಂಗೆಡದೆ, ಸುಖದುಃಖಗಳಿಗೆ ಭಾವುಕರಾಗದೆ, ಸಮಭಾವದಲ್ಲಿದ್ದು, ಕರ್ತವ್ಯೈಕ ದೃಷ್ಟಿಯಿಂದ ಕಾರ್ಯವೆಸಗುವ ಜಾಣ್ಮೆಯನ್ನು ಪಡೆಯುತ್ತೇವೆ. ಆಗ ಮಾತ್ರವೇ ನಮ್ಮನ್ನೂ ನಾವು ಗೆಲ್ಲುತ್ತೇವೆ. ಬಾಳನ್ನೂ ಗೆಲ್ಲುತ್ತೇವೆ, ಜನಮಾನಸದ ಹೃನ್ಮನಗಳನ್ನೂ ಗೆಲ್ಲಲು ಅರ್ಹರಾಗುತ್ತೇವೆ!
Published in Samyukta Karnataka news paper 2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ