ಶುಕ್ರವಾರ, ಮಾರ್ಚ್ 17, 2017

ರಾಗರಾಜ ಶ್ರೀತ್ಯಾಗರಾಜ
ಸಂಗೀತವೈದುಷ್ಯವನ್ನು ಕೇವಲ ವಿದ್ವದ್ವಿಶೇಷವನ್ನಾಗಿಯಷ್ಟೇ ಉಳಿಸಿಕೊಳ್ಳದೆ ದಿವ್ಯ ಉಪಾಸನೆಯನ್ನಾಗಿ ಬಳಸಿಕೊಂಡು ಧನ್ಯತೆಯನ್ನು ಪಡೆದ ಮಹಾತ್ಮರು ಸಂತ ತ್ಯಾಗರಾಜಸ್ವಾಮಿರವರು. ಕರ್ನಾಟಸಂಗೀತ ಕ್ಷೇತ್ರಕ್ಕೆ ಇವರ ಕೊಡುಗೆ ಅಪ್ರತಿಮವಾದದ್ದು. ತಂಜಾವೂರಿನ ಕಲಾಶ್ರೀಮಂತಿಕೆಯ ಪರಿಸರದಲ್ಲಿ ಹುಟ್ಟಿಬೆಳೆದ ಇವರು ಬಾಲ್ಯದಿಂದಲೇ ಸಂಸ್ಕೃತ, ಶಾಸ್ತ್ರ, ವೇದಾಂತಗಳನ್ನು ಅಧ್ಯಯನ ಮಾಡುತ್ತ ಸೊಂಟಿ ವೇಂಕಟರಾಮಯ್ಯನವರಿಂದ ಸಂಗೀತವನ್ನು ಕಲಿತರು. ಜನರ ಮೆಚ್ಚುಗೆಗಾಗಲಿ, ರಾಜಪ್ರಶಸ್ತಿಗಳನ್ನು ಪಡೆಯುವುದಕ್ಕಾಗಲಿ ಹಣಕ್ಕಾಗಲೀ ಹಾಡದೆ, ಆತ್ಮಾನಂದಕ್ಕಾಗಿಯೂ ರಾಮನ ಒಲುಮೆಗಾಗಿಯೂ ಹಾಡಿ ತಣಿದ ಅಪರೂಪದ ವಿದ್ವಾಂಸರಿವರು. ತ್ಯಾಗರಾಜರು ತಮ ಸಮಕಾಲೀನ ಕಲಾವಿದರೊಂದಿಗೆ ಸ್ಪರ್ಧೆಗಿಳಿದವರಲ್ಲ, ಶಿಷ್ಯಸಂಪಾದನೆಯ ಗೀಳಿಗೂ ಇಳಿದವರಲ್ಲ ಅಥವಾ ಬಿರುದುಗಳಿಗಾಗಿ ಬಾಯ್ಬಿಟ್ಟವರಲ್ಲ. ಆದರೂ ಇವರ ಅದ್ವಿತೀಯ ವೈದುಷ್ಯ ಯಾವ ಪ್ರಚಾರವಿಲ್ಲದೆಯೂ ನಾಡಿನಲ್ಲೆಲ್ಲ ವಿಖ್ಯಾತವಾಯಿತು. ಮನ್ನಣೆ, ಧನಕನಕ ರಾಜಾಶ್ರಯ ಪ್ರಶಸ್ತಿಗಳು ಅಭಿಮಾನಿಗಳೂ ತಾವಾಗಿ ಅರಸಿ ಬಂದವು. ಆದರೂ ತ್ಯಾಗರಾಜರು ಈ ಯಾವುದಕ್ಕೂ ಮನಸೋಲದೆ ಬಡತನದಲ್ಲೇ ಸ್ವಾಭಿಮಾನದ ಬದುಕನ್ನು ಬಾಳುತ್ತ ಸಾಗಿದರು.
ತ್ಯಾಗರಾಜರು ಗೃಹಸ್ಥರಾದರೂ ಊಂಚವೃತ್ತಿಯ ವ್ರತಹಿಡಿದವರು. ಪ್ರತಿದಿನವೂ ಸಂಕೀರ್ತನೆಗಳನ್ನು ಮಧುರವಾಗಿ ಹಾಡುತ್ತ ಮಧುಕರಿಭಿಕ್ಷೆ ಪಡೆದು ಆ ಧಾನ್ಯಗಳನ್ನು ಬೇಯಿಸಿ ದೇವರಿಗೆ ನಿವೇದಿಸಿ ಸೇವಿಸುತ್ತಿದ್ದರು. ಅವರು ಪೂಜಿಸುತ್ತಿದ್ದ ಮೂರ್ತಿಯು ಅವರ ಪಾಲಿಗೆ ಸಾಕ್ಷಾತ್ ರಾಮನ ದಿವ್ಯಸನ್ನಿಧಿ. ರಾಮನ ಪೂಜೆ, ಜಪ, ಧ್ಯಾನ, ಕೈಂಕರ್ಯಗಳೆ ಅವರ ಉಸಿರಾಗಿದ್ದವು. ಭಾವಲೋಕದಲ್ಲಿರುತ್ತ ರಾಮನಿಗೆ ತಿನ್ನಿಸುತ್ತ, ಕುಡಿಸುತ್ತ, ತೂಗುತ್ತ, ತಾಂಬೂಲವೀಯುತ್ತ, ಚಾಮರಬೀಸುತ್ತ, ಮಲಗಿಸುತ್ತ, ಸ್ತುತಿಸುತ್ತ, ಸರಸವಾಡುತ್ತ, ಸುಖದುಃಖಗಳನ್ನು ತೋಡಿಕೊಳ್ಳುತ್ತ, ಮುದ್ದುಮಾಡುತ್ತ, ಉಪಚರಿಸುತ್ತ, ನವರಸಗಳಲ್ಲಿ ಮೀಯುತ್ತ ಮೈಮರೆತರು. ತಮ್ಮ ಭಾವಪೂರ್ಣ ಸಂಗೀತವನ್ನೇ ರಾಮನಿಗೆ ನಿವೇದಿಸುತ್ತ ಹಗಲಿರುಳೂ ರಾಮದರ್ಶನಕ್ಕಾಗಿ ಹಂಬಲಿಸುತ್ತಿದ್ದರು. ಅವರ ಪರಮಸಾತ್ವಿಕ ಜೀವನಶೈಲಿಗೆ ಪೂರ್ಣಸಹಕಾರವಿತ್ತ ಸಾಧ್ವಿ ಅವರ ಪತ್ನಿ ಪಾರ್ವತೀ. ಆದರೆ ಪ್ರಾಪಂಚಿಕ ಸ್ವಭಾವದವನಾದ ಅಣ್ಣ ಜಪ್ಯೇಸನು ಮಾತ್ರ ಇವರನ್ನು ತೀವ್ರವಾಗಿ ಹಿಂಸಿಸುತ್ತಿದ್ದ. ಆದರೂ ಉದ್ವಿಗ್ನರಾಗದೆ ಅವನ ಕಾಟವನ್ನು ಸಹಿಸುತ್ತ ಸಾಗಿದ ಶಾಂತಜೀವಿ ತ್ಯಾಗರಾಜರು. ಒಮ್ಮೆಯಂತೂ ಇವರ ರಾಮಭಕ್ತಿಯ ’ಹುಚ್ಚನ್ನು’ ಬಿಡಿಸಲು ಜಪ್ಯೇಸನು ರಾಮವಿಗ್ರಹವನ್ನೇ ನದಿಗೆ ಎಸೆದುಬಿಟ್ಟನಂತೆ! ತನ್ನ ಪ್ರಾಣಪ್ರಿಯ ಆರಾಧ್ಯಮೂರ್ತಿ ಕಾಣದಾದಾಗ ಕಣ್ಣೀರ್ಗರೆಯುತ್ತ ಚಡಪಡಿಸಿದ ತ್ಯಾಗರಾಜರು ಬೇಸಿಗೆಕಾಲದಲ್ಲಿ ನದಿನೀರು ಬತ್ತಿದಾಗ ತೀವ್ರವಾಗಿ ಹುಡುಕಾಡಿ ರಾಮನಮೂರ್ತಿಯನ್ನು ಮರಳಿ ಪಡೆದರಂತೆ. ತಾವುಂಡ ಎಲ್ಲ ನಷ್ಟಸಂಕಷ್ಟಗಳ ಕಹಿಯನ್ನು ಜೀರ್ಣಿಸಿಕೊಳ್ಳಲು ತ್ಯಾಗರಾಜರು ಮತ್ತಷ್ಟು ಅಂತರ್ಮುಖವಾಗುತ್ತ ಹೋದರು.
ಕುಲ-ಲಿಂಗ-ವಯಸ್ಸು ಭೇದಗಳಿಲದೆ ಯಾರಲ್ಲಿ ಗುಣವನ್ನು ಕಂಡರು ಮೆಚ್ಚಿ ಹೊಗಳುತ್ತಿದ್ದ ಗುಣಾನುರಾಗಿ ಇವರಾಗಿದ್ದರು. ಒಮ್ಮೆ ಅದ್ವಿತೀಯ ಹಾಡುಗಾರಿಕೆಯ ಪ್ರತಿಭೆಯನ್ನು ಮೆರೆದ ’ಮಾರನ್’ ಎಂಬ ಅಂತ್ಯಜನೊಬ್ಬನ ಸಂಗೀತಕ್ಕೆ ಮನಸೋತು ಮೆಚ್ಚಿ ’ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು" ಎಂಬ ಕೃತಿಯಿಂದ ಅಭಿನಂದಿಸಿದರಂತೆ. ಅವರ ಕಾಲದ ಕಲಾವಿದರೊಬ್ಬರು ಆನಂದಭೈರವಿ ರಾಗದಲ್ಲಿ ಕೃತಿರಚಿಸಬಾರದೆಂದು (ತನ್ಮೂಲಕ ಆ ರಾಗದಲ್ಲಿ ತ್ಯಾಗರಾಜರ ಕೀರ್ತಿ ತನ್ನನ್ನು ಮೀರಿಸದಿರಲಿ ಎಂಬ ಕಳವಳ ಆ ಕಲಾವಿದನಿಗೆ) ಕೇಳಿಕೊಂಡಾಗ ತಕ್ಷಣ ಒಪ್ಪಿ ಆ ರಾಗದಲ್ಲಿ ಕೃತಿಯನ್ನೇ ರಚಿಸದೆ ಉಳಿದ ಔದಾರ್ಯ ಅವರದು.
ತ್ಯಾಗರಾಜರ ಶಿಷ್ಯರಲ್ಲಿ ಅನೇಕರು ಸಂಗೀತದಿಗ್ಗಜರು- ಸುಂದರ ಭಾಗವತರ್, ಕೃಷ್ಣ ಭಾಗವತರ್, ರಾಮ ಐಯ್ಯಂಗಾರ್, ವೇಂಕಟರಮಣ ಭಾಗವತರ್ ಮುಂತಾದವರು. ತ್ಯಾಗರಾಜರ ಭಾವಪೂರ್ಣ ಹೃದಯದಿಂದಲೂ ವಿದ್ವತ್ಪೂರ್ಣ ಪ್ರತಿಭೆಯಿಂದಲೂ ಗಂಗಾಲಹರಿಯಾಗಿ ಹರಿದಬಂದ ಸಂಗೀತಸಿರಿಯನ್ನು ದಾಖಲೀಕರಿಸಿ ಲೋಕಕ್ಕೆ ತಲುಪಿಸಿದ ಹೆಗ್ಗಳಿಕೆ ಈ ಶಿಷ್ಯಪರಂಪರೆಗೆ ಸಲ್ಲುತ್ತದೆ. ತ್ಯಾಗರಾಜರ ಕೃತಿಗಳಲ್ಲಿ ನವರಸ,
ಭಕ್ತಿರಸ ಹಾಗೂ ಗಾನರಸಗಳ ತ್ರಿವೇಣಿಸಂಗಮವನ್ನು ಕಾಣಬಹುದು. ಇವರ ಸಾಹಿತ್ಯದಲ್ಲಿ ಸರಳಸುಂದರ ಭಾಷಾಶೈಲಿ, ಭಾವಾರ್ಥಸ್ವಾರಸ್ಯಗಳು, ಶ್ಲೇಷಾದಿ ಅಲಂಕಾರಗಳು, ಉಪಮಾನಗಳು, ವರ್ಣನೆಗಳು, ವಸ್ತು-ಕಥನಾಂಶಗಳು ಕಾಣಬರುತ್ತವೆ. ವಿದ್ವಾಂಸರಿಗೂ, ಭಕ್ತರಿಗೂ ಜನಸಾಮಾನ್ಯರಿಗೂ ಏಕಪ್ರಕಾರವಾಗಿ ರುಚಿಸುವ ಕೃತಿಗಳು ಇವರದು. ಅನೇಕ ರಾಗ-ತಾಳಗಳನ್ನೂ ಶೈಲಿಗಳನ್ನೂ ಶಬ್ದಾರ್ಥಪ್ರಯೋಗಗಳನ್ನೂ ಅಲವಡಿಸಿ ಕೃತಿರಚನೆಯ ಲೋಕದಲ್ಲೇ ನವೀನತೆಯ ಅಲೆಯನ್ನು ತಂದವರು ತ್ಯಾಗರಾಜರು. ಇವರ ಕೃತಿಗಳು ಛಂದಸ್, ಕಾವ್ಯ, ಅಲಂಕಾರ, ವೈದುಷ್ಯ, ಸರ್ಜನಶೀಲತೆಗಳಿಂದ ತುಂಬಿತುಳುಕುತ್ತವೆ. ಕರ್ನಾಟಸಂಗೀತದ ಕೃತಿಗಳ ಹಾಡುಗಾರಿಕೆಯಲ್ಲಿ ’ಸಂಗತಿ’ ಪದ್ಧತಿಗೆ ನಾಂದಿ ಹಾಕಿದವರು ತ್ಯಾಗರಾಜರು. ವಿಳಂಬಕಾಲ ಇವರ ಕೃತಿಗಳಲ್ಲೂ ಬಗೆಬೆಗೆ- ಕೃತಿಗಳು, ಪ್ರಾಚೀನವೂ ಮೆರೆತು ಹೋದಂತಹವೂ ಆದ ಅನೇಕ ರಾಗ-ತಾಳ ಪ್ರಯೋಗಗಳನ್ನು ಬೆಳಕಿಗೆ ತಂದ ಹೆಗ್ಗಳಿಕೆ ಇವರಿಗೇ ಸಲ್ಲುತ್ತದೆ. ತ್ಯಾಗರಾಜರು ದಾಸವರೇಣ್ಯರಾದ ಪುರಂದರದಾಸರನ್ನು ಮೆಚ್ಚಿ ತಮ್ಮ ಕೃತಿಗಳಲ್ಲೂ ಹೆಸರಿಸಿದ್ದಾರೆ. ವಿದ್ವದ್ವಿಶೇಷಗಳಾದ ಇವರ ಕೃತಿಗುಚ್ಛಗಳು ಹಾಗೂ ಪಂಚರತ್ನಗಳು ಮುಂತಾದವು ಸಂಗೀತವಿದ್ವಾಂಸರ ಆಸ್ತಿಗಳೆ ಆಗಿವೆ. ಇನ್ನು ಸಾಮಾನ್ಯರೂ ಸುಲಭವಾಗಿ ಕಲಿತು ಕೂಡಿ ಹಾಡಬಹುದಾದ ಉತ್ಸವಸಂಪ್ರದಾಯ, ದಿವ್ಯನಾಮಕೃತಿಗಳನ್ನೂ ರಚಿಸಿ ಪಂಡಿತಪಾಮರರೆಲ್ಲರಿಗೂ ಆಪ್ತರಾಗಿದ್ದಾರೆ ತ್ಯಾಗರಾಜರು.
ಸಂಗೀತಕಲಾಪ್ರಪಂಚಕ್ಕೆ ಅದ್ವಿತೀಯ ಯೋಗದಾನವನ್ನು ಮಾಡುತ್ತಲೇ ಅಧ್ಯಾತ್ಮದ ಶಿಖರವನ್ನೂ ಮುಟ್ಟಿದ ಅನನ್ಯಸಾಧಾರಣ ಸಂತರು ತ್ಯಾಗರಾಜರು. ಪತ್ನಿ ಪಾರ್ವತಿಯು ಮರಣಿಸಿದ ಬಳಿಕ ಸಂನ್ಯಾಸವನ್ನು ಸ್ವೀಕರಿಸಿದ ತ್ಯಾಗರಾಜರು ತಮ್ಮ ಕೊನೆಯೆ ಕಾಲವನ್ನು ತಿರುವಯ್ಯಾರಿನ ಕಾವೇರಿ ತೀರದ ಏಕಾಂತದಲ್ಲಿ ರಾಮಧ್ಯಾನದಲ್ಲಿ ಕಳೆದರು. ಅವರು ಸಮಾಧಿಹೊಂದಿದ ಸ್ಥಳದಲ್ಲಿ ಒಂದು ಸ್ಮಾರಕ-ದೇಗುಲವನ್ನು ಕಟ್ಟಿಸಿ ಅಮರರಾದವರು ಬೆಂಗಳೂರಿನ ಶ್ರೀಮತಿ ನಾಗರತ್ನಮ್ಮನವರು. 

ವೈದುಷ್ಯ-ಪ್ರತಿಭೆಗಳನ್ನು ತೋರಾಣಿಕೆಗಾಗಿ, ಹಣ-ಮನ್ನಣೆ-ಸ್ಥಾನಮಾನಗಳ ಸಂಪಾದನೆಗಾಗಿಯಷ್ಟೇ ಬಳಸುವ ಅಗ್ಗದ ಕಲಾವಿದರು ತ್ಯಾಗರಾಜರ ಜೀವನಸಂದೇಶಗಳಿಂದ ಕಲಿಯುವುದು ಬಹಳಷ್ಟಿದೆ. ಇದೇ ಜನವರೀ ತಿಂಗಳ ೧೦ನೇ ತಾರೀಕು ತ್ಯಾಗರಾಜ ಸ್ವಾಮಿಗಳ ಆರಾಧನೆಯನ್ನು ಆಚರಿಸಲಾಗುತ್ತಿದೆ. ಅವರ ತುಂಬು ಜೀವನದ ಶಾಂತಿ-ಸತ್ವಸಂಪನ್ನತೆಗಳೂ, ಕಲಾಭಿಜ್ಞತೆಯೂ ನಿಗರ್ವಭಾವವೂ ನಮಗೆಲ್ಲ ಆದ್ರಶಪ್ರಾಯವಾಗಲಿ.

Published in Samkyukta Karnataka 2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ