ಶುಕ್ರವಾರ, ಮಾರ್ಚ್ 17, 2017

ಶಾಂತಶಕ್ತಿ
ಸುಮಾರು ನೂರೈವತ್ತು ವರ್ಷದ ಹಿಂದೆ ಪಶ್ಚಿಮಬಂಗಾಳದಲ್ಲಿ ಭವ್ಯ ಬದುಕನ್ನು ನಡೆಸಿದ ಈ ಗ್ರಾಮೀಣ ಸ್ತ್ರೀ ಅಸಾಮಾನ್ಯೆ. ಐದು ವರ್ಷದ ಬಾಲಕಿಯಾಗಿದ್ದಾಗಲೆ ವಿವಾಹವಾಯಿತು. ಹಳ್ಳಿಯಲ್ಲಿ ಭೀಕರಕ್ಷಾಮ ಬಡಿದಾಗ ಏಳುವರ್ಷದ ಈ ಮುಗ್ಧೆ, ಹಸಿದ ದೀನಜನರ ಸೇವೆಯಲ್ಲಿ ತಾನಾಗಿಯೇ ತೊಡಗಿದ ದಯಾರ್ದ್ರಹೃದಯೆ. ಹದಿನೇಳರ ಯುವತಿಯಾಗಿದ್ದಾಗ ಕಾಲ್ನಡುಗೆಯ ಯಾತ್ರೆಯ ಸಂದರ್ಭದಲ್ಲಿ ಸಂಗಡಿಗರಿಂದ ಅಕಸ್ಮಾತ್ ಬೇರಾಗಿ, ಕಾಳರತ್ರಿಯಲ್ಲಿ ಅಡವಿಪ್ರದೇಶದಲ್ಲಿ ಒಬ್ಬಂಟಿಗಳಾಗಿ ದಕಾಯಿತರನ್ನು ಎದುರಿಸಬೇಕಾಗಿ ಬಂದಾಗ, ಅಂಜದೆ, ಗೋಗರೆಯದೆ ಆ ಕಟುಕರನ್ನೂ ಧೈರ್ಯ-ಚಾತುರ್ಯಗಳಿಂದ ಮನಃಪರಿವರ್ತನೆ ಗೈದುಬಂದವಳು ಈಕೆ! ಅದ್ವಿತೀಯಸಂತನ ಮಡದಿಯಾದ ಈಕೆ, ಪತಿಯ ಅಭೂತಪೂರ್ವ-ತಪಶ್ಚರ್ಯೆಗೆ, ತ್ಯಾಗ-ಸಾಧನೆಗಳ ಅಮೋಘ ಆದರ್ಶಗಳಿಗೆ ಹೆಗಲಿಗೆ ಹೆಗಲುಗೊಟ್ಟು ಸಹಕರಿಸಿದ ಉದಾರಹೃದಯೆ! ಲೌಕಿಕವೆನಿಸಿದ ಯಾವ ಸುಖ-ಸವಲತ್ತುಗಳೂ ಇಲ್ಲದೆ, ಸಂಸಾರ-ಸಂತಾನಭಾಗ್ಯಾದಿಗಳೂ ಇಲ್ಲದೆ, ದೈವೋನ್ಮಾದಲ್ಲೇ ನೆಲೆಸಿರುತ್ತಿದ್ದ ಪತಿಯೊಂದಿಗಿದ್ದಾಗ ಅನುಭವಿಸಿದ ಬಡತನ, ಅನಾರೋಗ್ಯ, ಅನಿಶ್ಚಿತತೆ ಹಾಗೂ ಮೈಮುರಿಸುವಷ್ಟು ಕೆಲಸಕಾರ್ಯಗಳ ನಡುವೆ ಎಂದೂ ಗೊಣಗಿದವಳಲ್ಲ, ನಿಟ್ಟುಸಿರುಬಿಟ್ಟವಳಲ್ಲ ಈಕೆ. ಬದಲಾಗಿ ಸ್ವಯಂಪ್ರೀತಿಯಿಂದ ನಿಃಸ್ವಾರ್ಥ ಸೇವಾದೀಕ್ಷೆಯನ್ನು ವಹಿಸಿದವಳು. ಎಂತಹ ಕಠಿಣತಮ ಪರಿಸ್ಥಿತಿಗಳಲ್ಲೂ ಸದಾ ಹಸನ್ಮುಖಿಯಾಗಿರುತ್ತಿದ್ದ ಸ್ಥಿತಪ್ರಜ್ಞೆ ಈಕೆ. ಯೋಗೀಶ್ವರನಾದ ಪತಿಯು ತಾನು ವರ್ಷಗಟ್ಟಲೆ ಗೈದ ಅಭೂತಪೂರ್ವ ಸಾಧನೆಗಳ ಸರ್ವಸಿದ್ಧಿಫಲಗಳನ್ನು ಹೆಂಡತಿಯಾದ ಈಕೆಯ ಪಾದಗಳಲ್ಲಿ ಸಮರ್ಪಿಸಿ, ಮಾತೃಸ್ಥಾನದಲ್ಲಿರಿಸಿ, ನಮಸ್ಕರಿಸಿ, ವಿದ್ಯುಕ್ತವಾಗಿ ಪೂಜಿಸಿದಾಗ ಮುಜುಗರದಿಂದಲೂ ಕುಗ್ಗದೆ, ಗರ್ವದಿಂದಲೂ ಹಿಗ್ಗದೆ, ಶಾಂತಗಂಭೀರನಿರ್ವಿಕಾರಭಾವದಿಂದ ಆ ಪೂಜೆಯನ್ನು ಅಂಗೀಕರಿಸಿ, ಆ ಯೋಗಸಿದ್ಧಿಫಲಗಳನ್ನು ಆರಾಮವಾಗಿ ಜೀರ್ಣಿಸಿಕೊಂಡು ಎಂದಿನಂತೆ ಶಾಂತ-ನಿರಾಡಂಬರ ಜೀವನವನ್ನು ಮುಂದುವರೆಸಿದ ಶಕ್ತಿಸ್ವರೂಪಿಣೀ ಈಕೆ! ತನ್ನ ಜೀವನದಲ್ಲಿ ಎಂತಹ ವಿಪರೀತದ ಪರಿಸ್ಥಿತಿ-ಘಟನಾವಳಿಗಳೇ ಬಂದುಹೋಗುತ್ತಿದ್ದರೂ ಈಕೆಯ ಸೌಮ್ಯ-ಶಾಂತ-ಸರಳ ವ್ಯಕ್ತಿತ್ವದಲ್ಲಿ ಯಾವ ಅಲ್ಲೋಲಕಲ್ಲೋಲಗಳೂ ಉಂಟಾಗಲಿಲ್ಲ! ಎಲ್ಲಕಿಂತ ಮುಕುಟಪ್ರಾಯವಾದ ವಿಷಯವೆಂದರೆ ಆಜನ್ಮವೂ ಈಕೆ ಪತಿಯೊಂದಿಗೆ ಪಾಲಿಸಿದ ಅಖಂಡಬ್ರಹ್ಮಚರ್ಯದ ಆಸಿಧಾರವ್ರ! ಯುವವಯಸ್ಸಿನಲ್ಲೇ ವಿಧೆವೆಯಾಗಿ ಹಳ್ಳಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾಗ ಕಾಮುಕನೊಬ್ಬ ಅತ್ಯಾಚಾರವೆಸಗಬಂದಾಗ, ಆತನನ್ನು ನೆಲಕ್ಕೆ ಅಪ್ಪಳಿಸಿ, ಎದೆಯ ಮೇಲೆ ಗುದ್ದಿ, ನಾಲಿಗೆ ಎಳೆದು ಕಪಾಲಮೋಕ್ಷಗೈದು, ಮೈಲಿಗಟ್ಟಲೇ ಓಡಿಹೋಗುವಂತೆ ಮಾಡಿದ ಪರಾಕ್ರಮವನ್ನು ಮೆರೆದವಳೀಕೆ! ಪತಿಯ ಅವಸಾನದ ನಂತರ, ಅಸಾಧ್ಯವೆನಿಸುವಂತಹ ಪುರಾಣೋಕ್ತ ’ಪಂಚಾಗ್ನಿತಪಸ್ಸ’ನ್ನು ಆಚರಿಸಿದ ಆತ್ಮಶಕ್ತಿಸಂಪನ್ನೆ ಈಕೆ! (ಬಿರುಬೇಸಿಗೆ ಕಾಲದಲ್ಲಿ ನಾಲ್ಕು ಕಡೆಗಳಲ್ಲಿ ಬೆಂಕಿಯನ್ನು ಉರಿಯಿಸಿಕೊಂಡು, ಮಧ್ಯದಲ್ಲಿ ಉಪವಾಸ ಕುಳಿತು ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಜಪಾನುಷ್ಠಾನವನ್ನು ಮಾಡುವ ಕಠಿಣತಮ ತಪಶ್ಚರ್ಯೆ) ಜೀವನದುದ್ದಕ್ಕೂ ಬಡತನ, ಅನಾರೋಗ್ಯ, ಅನಿಶ್ಚಿತತೆಗಳು ಕಾಡುತ್ತಲೇ ಇದ್ದರೂ ಮುಖದ ಮಂದಹಾಸವನ್ನು ಬಾಡಗೊಡದೆ, ಯಾರನ್ನೂ ಕೈಚಾಚಿ ಬೇಡದೆ, ಇತರರ ಕಣ್ಣೀರನ್ನು ಒರೆಸುತ್ತ ಬದುಕಿದ ಪರಹಿತಜೀವಿತೆ. ಜನಮಾನಸದಲ್ಲಿ ಧರ್ಮಶ್ರದ್ಧೆಯನ್ನೂ, ಸೌಹಾರ್ದತೆಯನ್ನೂ, ಸ್ವಾಸ್ಥ್ಯ-ಆರೋಗ್ಯ-ಚಿಕಿತ್ಸೆಗಳ ಜಾಗೃತಿಯನ್ನೂ, ಸೇವಾಭಾವದ ಮಕರಂದವನ್ನೂ ಸೂಸುತ್ತ ಹಳ್ಳಿಯನ್ನೂ ಜಿಲ್ಲೆಯನ್ನೂ ಸಮೃದ್ಧವೂ ಸುಸಂಸ್ಕೃತವೂ ಆಗುವಂತೆ ಮಾಡಿದ ಅಸಾಧಾರಣ ನಾಯಕಿ ಈಕೆ! ಹಳ್ಳಿಯ ಸುತ್ತುಮುತ್ತಲು ಅಬ್ಬರವೆಬ್ಬಿಸಿದ್ದ ದಕಾಯಿತರನ್ನೂ ಕೆಡುಕರನ್ನೂ ಸ್ನೇಹ-ಚಾತುರ್ಯಗಳಿಂದ ‘ಮನುಷ್ಯ’ರನ್ನಾಗಿ ಪರಿವರ್ತಿಸಿದ ಮಾಂತ್ರಿಕಶಕ್ತಿ ಈಕೆಯದು. ಜಾತಿ-ಲಿಂಗ-ಕುಲ-ಅಂತಸ್ಥುಗಳನ್ನು ಎಣಿಸದೆ ರೋಗಿಗಳನ್ನೂ ದುಃಖಿತರನ್ನೂ ದೀನರನ್ನೂ ನಿರಾಶ್ರಿತರನ್ನೂ ತನ್ನ ವಾತ್ಸಲ್ಯದ ಮಡಿಲಲ್ಲಿ ಸಲಹಿದ ಅಹೇತುಕ ಪ್ರೇಮಮೂರ್ತಿ ಈಕೆ! ಹೆಣ್ಣುಮಕ್ಕಳ ವಿದ್ಯಾಭಾಸಕ್ಕೆ ಬೆಂಬಲವನ್ನೂ, ಆಗತಾನೆ ಭಾರತದಾದ್ಯಂತ ಎದ್ದಿದ್ದ ಸ್ವಾತಂತ್ರ್ಯಚಳುವಳಿ-ರಾಷ್ಟ್ರನಿರ್ಮಾಣಗಳ ಕಾರ್ಯಕ್ಕೆ ಪ್ರೋತ್ಸಾಹವನ್ನೂ, ಸ್ವಾಮಿವಿವೇಕಾನಂದರ ನವಭಾರತನಿರ್ಮಾಣದ ಶ್ರಮಕ್ಕೆ ಭದ್ರಬುನಾದಿಯನ್ನೂ-ಸಹಕಾರವನ್ನೂ ಕೊಡುತ್ತ, ‘ಬೀದಿಯಲ್ಲಿ ವಂದೇ ಮಾತರಂ ಕೂಗಿದರೆ ಸಾಲದು, ಚರಕ ಹಿಡಿಯಿರಿ, ಬಟ್ಟೆ ನೇಯಿರಿ, ದೀನದುಃಖಿತರ ಸೇವೆ ಗೈಯಿರಿ’ ಎಂದು ಮಾರ್ಗದರ್ಶನವಿತ್ತ ವಿವೇಕಿ ಈಕೆ. ಇಷ್ಟೆಲ್ಲ ನಿರಂತರ ಸೇವಾಚಟುವಟಿಕೆಗಳ ನಡುವೆಯೂ ಲಕ್ಷಗಟ್ಟಲೇ ಜಪಾನುಷ್ಠಾನವನ್ನು ಮಾಡುತ್ತ ಆಗಾಗ ಯೋಗಸಮಾಧಿಯ ಆನಂದವನ್ನು ಸವಿಯುತ್ತಿದ್ದ ದಿವ್ಯಯೋಗಸಾಧಕಿ ಈಕೆ. ಅದೆಷ್ಟೋ ಸಿದ್ಧಿ-ಅನುಭೂತಿಗಳ, ಮಂತ್ರತಂತ್ರಗಳ ರಹಸ್ಯಗಳಲ್ಲಿ ಪ್ರವೀಣೆಯಾದ ಈಕೆ ನೂರಾರು ಸಾಧಕರಿಗೆ ಮಂತ್ರದೀಕ್ಷೆ, ಬ್ರಹ್ಮಚರ್ಯದೀಕ್ಷೆ, ಸಂನ್ಯಾಸದೀಕ್ಷೆಗಳನ್ನಿತ್ತ ಮಂತ್ರವೇತ್ತ ಮಹಾಗುರುವಾಗಿದ್ದಳು.    
ಇಷ್ಟೆಲ್ಲ ಇದ್ದ ಈಕೆಯ ವ್ಯಕ್ತಿತ್ವ ಬಹಳ ವೈಭವೋಪೇತವಾಗಿದ್ದಿರಬಹುದೆನ್ನುವಿರೋ? ಇಲ್ಲವೇ ಇಲ್ಲ! ವೃದ್ಧಾಪ್ಯವನ್ನು ಮುಟ್ಟುವವರೆಗೂ ಮುಖದ ಮೇಲಿನ ಸೆರಗನ್ನೂ ಸರಿಸಿದವಳಲ್ಲ ಈಕೆ! ಎಲ್ಲ ಸೇವೆ-ಕೈಂಕರ್ಯಗಳನ್ನು ಮಾಡಿಯೂ ಆಚೆ ಬಂದು ಕಾಣಿಸಿಕೊಂಡವಳೆ ಅಲ್ಲ! ಈಕೆ ಮಾತನಾಡುತ್ತಿದ್ದುದೇ ಬಹಳ ಕಡಿಮೆ, ಮಾತನಾಡಿದರೂ ಅದು ಪಿಸುದನಿಯಲ್ಲಿ. ಎಲ್ಲಿ ಜನರು ಗಮನಿಸುತ್ತಾರೋ ಹೊಗಳುತ್ತಾರೋ ಎಂದು ನಾಚಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಲೇ ಇರದಿದ್ದ ವಿನಮ್ರೆ. ಪ್ರಸಿದ್ಧಗುರುವಾದ ತನ್ನ ಪತಿಯ ಪಕ್ಕದಲ್ಲಿ ಕೂತು ಮೆರೆಯಲು ಬಯಸಿದವಳಲ್ಲ. ನೂರರು ಸಾಧಕರಿಗೆ ಮಾರ್ಗದರ್ಶನವೀಯುವುದರಲ್ಲೇ ತನ್ಮಯನಾಗಿದ್ದ ತನ್ನ ಪ್ರಿಯಪತಿಯ ಮುಖವನ್ನು ನೋಡಲೂ ಈಕೆ ಕೆಲವೊಮ್ಮೆ ತಿಂಗಳಗಟ್ಟಲೇ ಕಾಯಬೇಕಾಗುತ್ತಿತ್ತಂತೆ! ಪತಿಯ ಶುಶ್ರೂಷೆ, ಶಿಷ್ಯಕೋಟಿಯ ಯೋಗಕ್ಷೇಮವಿಚಾರಣೆ, ದೀನದುಃಖಿತರ ಸೇವೆ ಹಾಗೂ ಗುಪ್ತವಾದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವುದರಲ್ಲೇ ಈಕೆಗೆ ಎಲ್ಲಿಲ್ಲದ ಸಂತಸ-ಸಂತೃಪ್ತಿ. ಆಕೆಯ ಜೀವನದಲ್ಲಿ ಅಷ್ಟು ಶಕ್ತಿ, ಸತ್ವ ಹಾಗೂ ಸಿದ್ಧಿಗಳು ತುಂಬಿದ್ದರೂ, ಸದ್ದಿಲ್ಲ ಗದ್ದಲವಿಲ್ಲ, ಕಣ್ಣುಕೋರೈಸುವ ಯಾವ ವೈಭವಾಂಶವೂ ಇಲ್ಲ! ಡಿವಿಜಿರವರ ಪದ್ಯ ನೆನಪಾಗುತ್ತದೆ-
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ I
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ II
ಬೀಜ ಅಂಕುರಿಸುವಾಗ, ಮರವಾಗಿ ಬೆಳೆದು ಫಲಗಳನ್ನೀಯುವಾಗ ವನಸ್ಪತಿಯೂ ಸದ್ದೇ ಮಾಡುವುದಿಲ್ಲ! ಇನ್ನು ಅನಾದಿಯಿಂದಲೂ ಭೂಮಂಡಲವನ್ನೇ ಪೋಷಿಸುತ್ತಿರುವ ಸೂರ್ಯಚಂದ್ರರದೂ ಸದ್ದಿಲ್ಲ! ಆದರೆ ಇವುಗಳೆಲ್ಲದರ ಪ್ರಯೋಜನವನ್ನು ಪಡೆದ ಮನುಷ್ಯ ಮಾತ್ರ ಬಾಯಿಮುಚ್ಚುವುದಿಲ್ಲ! ಆ ವನಸ್ಪತಿ ಹಾಗೂ ಸೂರ್ಯಚಂದ್ರರಂತೆ ಶಾಂತವಾಗಿ ಶಕ್ತಿಯನ್ನು ಮೆರೆದ ಈ ಮಹಿಮಾನ್ವಿತೆ ಮತ್ತಾರೂ ಅಲ್ಲ, ಶ್ರೀರಾಮಕೃಷ್ಣಪರಮಹಂಸರ ಧರ್ಮಪತ್ನಿ ಶ್ರೀ ಶಾರದಾದೇವಿಯವರು. ನಾಮ-ಕುಂಕುಮಗಳ ಝಳಪನ್ನೋ, ಶಾಸ್ತ್ರವ್ಯಾಖ್ಯಾನಕೌಶಲವನ್ನೋ, ಅಭಯಹಸ್ತದ Poseನ್ನೋ ಮಾತ್ರ ನೋಡಿ ಬೆರಗಾಗುವ ಟೊಳ್ಳು ಜಿಜ್ಞಾಸುಗಳಿಗೆ ಶಾರದಾದೇವಿಯವರ ಸರಳಶಾಂತ ವ್ಯಕ್ತಿತ್ವದ ಆಳ-ಅಗಲಗಳನ್ನು ಊಹಿಸಲೂ ಸಾಧ್ಯವಿಲ್ಲ. ಜೀವನದ ಹಾಗೂ ಅಧ್ಯಾತ್ಮದ ನೈಜ ವುದ್ಯಾರ್ಥಿಗಳು ಈಕೆಯಿಂದ ಕಲಿಯಬಹುದಾದದ್ದು ಬಹಳವಿದೆ. ಅನುಪಮ ತ್ಯಾಗ-ಸೇವೆ-ನಿರ್ಲಿಪ್ತಿಗಳಿಂದ ಜನ್ಮಸಾರ್ಥಕ್ಯವನ್ನು ಪಡೆದ ಶ್ರೀಮಾತೆ ಶಾರದಾದೇವಿಯವರ ಜಯಂತಿಯನ್ನು ವಾರದ ಹಿಂದೆಯಷ್ಟೇ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆ ಕಲಿಯುಗದ ಸೀತೆಯನ್ನು ಸ್ಮರಿಸೋಣ, ಅವರ ಜೀವನಸಂದೇಶಗಳ ಸತ್ವವನ್ನು ಮನಸಾ ಗ್ರಹಿಸೋಣ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ