ಶುಕ್ರವಾರ, ಮಾರ್ಚ್ 17, 2017

ಅನ್ನಬ್ರಹ್ಮ
ಜೀವಾಧಾರವಾದ ಎಲ್ಲ ಬಗೆಯ ಆಹಾರ ಪದರ್ಥಗಳನ್ನೂ ’ಅನ್ನ’ ಎನ್ನುವ ಪದದಿಂದಲೇ ಶಾಸ್ತ್ರವು ಸೂಚಿಸುತ್ತದೆ. ಸಂಸ್ಕೃತಭಾಷೆಯಲ್ಲಿ ಅಕ್ಕಿಗೆ ತಂಡುಲ ಎಂದೂ, ಬೇಯಿಸಿದ ಅಕ್ಕಿಗೆ (ನಾವು ದಕ್ಷಿಣಭಾರತದಲ್ಲಿ ಅನ್ನ ಎಂದು ಕರೆಯುತ್ತೇವೆ) ’ಓದನ’ ಎಂದು ಹೆಸರು. ಭಾರತೀಯರ ಜೀವನದಲ್ಲಿ ಅಕ್ಕಿಯು ಕೇವಲ ಒಂದು ಆಹಾರ ಸಾಮಗ್ರಿಯಾಗಿರದೆ ಇನ್ನೂ ಬಹಳಷ್ಟು ಮಹತ್ವವನ್ನು ಹೊಂದಿದೆ. ಅಕ್ಕಿಯನ್ನು ಲಕ್ಷ್ಮಿಯ ವಾಸಸ್ಥಾನ ಎಂದೂ, ಸಾಕ್ಷಾತ್ ಧಾನ್ಯಲಕ್ಷ್ಮಿಯೆಂದೂ ಭಾವಿಸುತ್ತೇವೆ. ದಿನ ನಿತ್ಯದ ಪೂಜಾಕರ್ಮದಿಂದ ಹಿಡಿದು ದೊಡ್ದ ಹಬ್ಬ ಹರಿದಿನಗಳವರೆಗೂ ಎಲ್ಲ ಸಂದರ್ಭಗಳಲ್ಲೂ ಅಕ್ಕಿಯು ಮುಖ್ಯ ಪದಾರ್ಥ. ನಮ್ಮ ರಾಷ್ಟ್ರ‍ದ ರೂಪಾಯಿ ಹಾಗೂ ನಾಣ್ಯಗಳ ಮೇಲೂ ಬತ್ತದ ತೆನೆಯು ಧಾನ್ಯಸಂಪತ್ತಿನ ಸಂಕೇತವಾಗಿ ಚಿತ್ರಿಸಲಾಗುತ್ತದೆ.
 ಅಕ್ಕಿಯ ವೈಶಿಷ್ಟ್ಯವೇನೆಂದರೆ ಅದು ಹಸಿಯಾಗಿಯೂ (ಅಕ್ಕಿಯಾಗಿಯೂ) ಪಕ್ತವಾಗಿಯೂ ಪ್ರಾಶಸ್ತ್ಯವನ್ನು ಹೊಂದಿದೆ. ಅಪಕ್ತರೂಪದಲ್ಲೇ ಅಕ್ಕಿಯನ್ನು ಧಾರ್ಮಿಕ ಸಾಂಸ್ಕೃತಿಕ ಬಳಸುವುದು ಭಾರತದಾದ್ಯಂತ ಸರ್ವೇಸಾಮಾನ್ಯ ಪದ್ಧತಿ. ಸರಳಾತಿ ಸರಳವಾದ ದೇವರಪೂಜೆಯಲ್ಲೂ ಕನಿಷ್ಟ ಪಕ್ಷ ಅಕ್ಷತೆ ಕಾಳು ಹೂವು ಅಂತೂ ಇರಲೇಬೇಕು. ಇನ್ನು, ಅಕ್ಕಿ ತುಂಬಿಟ್ಟು ಅದರಲ್ಲಿ ಇತರ ಮಂಗಳದ್ರವ್ಯಗಳನ್ನು ಹಾಕಿ ಸಿದ್ಧಮಾಡಿಡುವ ’ಕಲಶ’ವು ದೇವದೇವಿಯರ ಪೂಜೆಯಲ್ಲಿ ತುಂಬ ಪ್ರಶಸ್ತ. ಇನ್ನು ಅಕ್ಕಿ ಹರಡಿದ ತಟ್ಟೆಯ ಮೇಲೆಯೇ ಕಲಶವನ್ನು ಕೂರಿಸುವುದನ್ನು ಕಾಣುತ್ತೇವೆ. ಬೇರೆ ಏನೇ ಪದಾರ್ಥ ನೈವೇದ್ಯ ಮಾಡಲಿ ಬಿಡಲಿ, ಅನ್ನ ನೈವೇದ್ಯವಿದ್ದರೇನೇ ಅದು ’ಮಹಾನೈವೇದ್ಯ’ ಎನಿಸಿಕೊಳ್ಳುತ್ತದೆ. ಪೂಜಾಂತ್ಯದಲ್ಲಿ ಪುರೋಹಿತರಿಗೆ ನೀಡುವ ಉಪಾಯನ ದಾನದಲ್ಲೂ, ಏನೇ ಇರಲಿ ಇಲ್ಲದಿರಲಿ, ಹಿಡಿ ’ಅಕ್ಕಿ’ಯಂತೂ ತಪ್ಪುವಂತಿಲ್ಲ! ಮದುವೆ ಮುಂಜಿಗಳಲ್ಲಿ ಅಕ್ಕಿಯ ಪಾತ್ರ ಬಹಳ ಮುಖ್ಯ. ಗುರುಹಿರಿಯರೂ ಆಗಂತುಕರೂ ವಧೂವರರ ಮೇಲೂ, ವಟುವಿನ ಮೇಲೂ ಅಕ್ಷತೆಕಾಳನ್ನು ಎರಚಿ ಶುಭವನ್ನು ಹಾರೈಸುತ್ತಾರೆ. ಅದಲ್ಲದೆ ಮದುವೆಯ ಸಂದರ್ಭದಲ್ಲಿ ನವವಧೂವರರು ಪರಸ್ಪರರ ಮೇಲೆ ಅಕ್ಕಿಯನ್ನು ಧಾರೆ ಎರೆಯುವ ಸಂಪ್ರದಾಯವುಂಟು. ಇದು ಆತ್ಮೀಯತೆ, ಸ್ನೇಹ ಹಾಗೂ ಮಾಂಗಲ್ಯದ ಸೂಚಕವಾದ ಸುಂದರ ಪದ್ಧತಿ. ನಿರ್ದಿಷ್ಟ ವಿನ್ಯಾಸದಲ್ಲಿ ನೆಲದ ಮೇಲೆ ಹರಡಲಾಗುವ ಅಕ್ಕಿಯನ್ನೇ ’ಸಪ್ತಪದಿ’ ವಿಧಿಗಾಗಿ ಬಾಳಸಲಾಗುತ್ತದೆ. ಉಪನಯನ ಕಾಲದಲ್ಲಿ ವಟುವು ಜೋಳಿಗೆಯನ್ನು ಹಿಡಿದು ’ಭವತಿ ಭಿಕ್ಷಾಂ ದೇಹಿ’ ಎನ್ನುತ್ತಾನೆ, ತಾಯಿ ಹಾಗೂ ಇತರ ಸ್ತ್ರೀಯರು ಅವನ ಜೋಳಿಗೆಯಲ್ಲಿ ಹಿಡಿ ಅಕ್ಕಿಯನ್ನು ಸುರಿದು ಹರಸುತ್ತಾರೆ. ಉತ್ತರ ಭಾರತದಲ್ಲಿ ವಧುವನ್ನು ಗಂಡನ ಮನೆಗೆ ಕಳುಹುವಾಗ ವಧುವು ನಾಲ್ಕಾರು ಹೆಜ್ಜೆ ಮುನ್ನಡೆದು ಅಕ್ಕಿ ಕಾಳುಗಳನ್ನು ಹಿಂದಕ್ಕೆ ಎಸೆದು ತವರು ಮನೆಯವರಿಗೆ ಶುಭವನ್ನು ಕೋರುತ್ತಾಳೆ. ತಾಯಿಯು ಆ ಕಾಳುಗಳನ್ನು ಸೆರಗಿನಲ್ಲಿ ಬಾಚಿ ಹಿಡಿದು ಮಗಳ ವಿಯೋಗವನ್ನು ನುಂಗಿಕೊಳ್ಳುವ ದೃಶ್ಯ ಹೃದಯಸ್ಪರ್ಶಿಯಾದದ್ದು. ಮಧುಮಗಳನ್ನು ಮನೆ ತುಂಬಿಸಿಕೊಳ್ಳುವಾಗ ಮನೆಯ ಮುಂಬಾಗಿಲಿನ ಹೊಸಿಲ ಮೇಲೆ ಧಾನ್ಯ ಅಳೆಯುವ ಮರದ ಪಾವಿನಲ್ಲಿ ಅಕ್ಕಿ ತುಂಬಿ, ಮಧುಮಗಳ ಬಲಗಾಲಿನಿಂದ ಒದೆಸುತ್ತಾರೆ. ಅಕ್ಕಿಕಾಳುಗಳು ಮನೆಯ ತುಂಬ ಚೆಲ್ಲಿಕೊಂಡಾಗ ’ಸಾಕ್ಷಾತ್ ಲಕ್ಷ್ಮಿಯೇ ಸಂಪತ್ತಿನ ಹೊಳೆಯನ್ನು ಹರಿಯಿಸಲು ಬರುತ್ತಿದ್ದಾಳೆ’ ಎಂದು ಭಾವಿಸಿ ಸಂಭ್ರಮಿಸುತ್ತೇವೆ. ಅಂತೆಯೇ ಗೃಹಪ್ರವೇಶ ಕಾರ್ಯಕ್ರಮದಲ್ಲೂ ಗೃಹಲಕ್ಷ್ಮಿಯು ಹೊಸಿಲ ಮೇಲಿನ ಅಕ್ಕಿಯ ಪಾವನ್ನು ಬಲಪಾದದಿಂದ ಒದ್ದು ಹೊಸಮನೆಯೊಳಗೆ ಧಾನ್ಯಸಂಪತ್ತನ್ನು ತುಂಬುತ್ತ ಪ್ರವೇಶಿಸುತ್ತಾಳೆ. ಇವೆಲ್ಲ ಅತ್ಯಂತ ಪ್ರಾಚೀನ ಪದ್ಧತಿಗಳಾಗಿದ್ದು ಇಂದಿಗೂ ಅಷ್ಟೇ ಜಪಪ್ರಿಯವಾಗಿವೆ ಎನ್ನುವುದು ಸನಾತನ ಸಂಸ್ಕೃತಿಯ ನಿತ್ಯನೂತನತೆಯ ಸಾಕ್ಷಿಯಾಗಿವೆ ಎನ್ನಬಹುದು. ಮನುಷ್ಯ ಸತ್ತಾಗ ಬಂಧುಮಿತ್ರರು ಶವದ ಬಾಯಿಗೆ ಅಕ್ಕಿಕಾಳು ಹಾಕಿ ’ಋಣ’ತೀರಿಸಿಕೊಳ್ಳುತ್ತಾರೆ.
ದಾನಗಳಲ್ಲೇ ಶ್ರೇಷ್ಟವಾದದ್ದು ಅನ್ನದಾನ. ’ಅನ್ನದಾನಕ್ಕಿಂತ ಇನ್ನು ದಾನವಿಲ್ಲ’ ಎನ್ನುವ ಮಾತು ನಮ್ಮಲ್ಲಿ ಜನಜನಿತ. ಸಂಕ್ರಾಂತಿ ಹಬ್ಬದಂದು ಧಾನ್ಯಲಕ್ಷ್ಮಿಯ ಪೂಜೆಯೇ ವಿಶೇಷ. ಅಕ್ಕಿರಾಶಿಗೆ ಹೂವಿನಲಂಕಾರ ಮಾಡಿ, ಆರತಿ ಎತ್ತಿ, ಮೊರಗಳಲ್ಲಿ ದಾನ ಕೊಟ್ಟು ಆ ಬಳಿಕ ಬಳಸಲಾಗುತ್ತದೆ. ಇಂದಿಗೂ ಇದು ನಮ್ಮ ’ಉಳುವ ಯೋಗಿ’ಗಳ ಸಂಭ್ರಮದ ವಾರ್ಷಿಕವ್ರತವಾಗಿದೆ. ಗೋಮಾತೆಗೂ, ಮನೆಬಾಗಿಲಿಗೆ ಬರುವ ಬಸವನಿಗೂ ಅಕ್ಕಿ-ಬಾಳೆಹಣ್ಣುಗಳನ್ನು ಕೊಟ್ಟು ಆದರಿಸುತ್ತೇವೆ. ಪೂಜಾಗೃಹದೊಳಗೆ ಕಲ್ಲುಚೂರ್ಣದ ರಂಗವಲ್ಲಿಯ ಬದಲು, ನೀರಲ್ಲಿ ಬೆರೆಸಿದ ಅಕ್ಕಿಹಿಟ್ಟಿನ ರಂಗವಲ್ಲಿಯನ್ನೇ ಹಾಕುವ ಪದ್ಧತಿ ಹಲವು ಮನೆತನಗಳಲ್ಲಿದೆ. ಧಾನ್ಯಗಳಿಂದ ರಚಿಸುವ ರಂಗವಲ್ಲಿಯಲ್ಲಿ ಬಣ್ಣ ಬೆರೆಸಿದ ಅಕ್ಕಿಕಾಳುಗಳನ್ನು ಕಾಣಬಹುದು.
ಪೂರ್ವಭಾರತದ ವೈಷ್ಣವರು ಒಂದು ವ್ರತವನ್ನು ಆಚರಿಸುತ್ತಾರೆ- ಮಧುಕರಿಭಿಕ್ಷೆಯಲ್ಲಿ ಪಡೆದುತಂದ ಅಕ್ಕಿಯನು ಆಸನದಲ್ಲಿ ಕುಳಿತು, ಒಂದೊಂದೇ ಅಕ್ಕಿಕಾಳನ್ನು ಪಕ್ಕಕ್ಕೆ ಸರಿಸುತ್ತ ಹರಿನಾಮಜಪವನ್ನು ಮಾಡುತ್ತಾರೆ. ಹರಿನಾಮಜಪಪೂತವಾದ ಆ ಅಕ್ಕಿಯನ್ನು ಬೇಯಿಸಿ, ನೈವೇದ್ಯ ಮಾಡಿ, ಭಾಗಶಃ ದಾನಗೈದು ಉಳಿದದ್ದನ್ನು ಉಣ್ಣುತ್ತಾರೆ. ಸಂನ್ಯಾಸ ಸ್ವೀಕರಿಸಿದ ಚೈತನ್ಯಮಹಾಪ್ರಭುಗಳ ಧರ್ಮಪತ್ನಿ ವಿಷ್ಣುಪ್ರಿಯಾದೇವಿಯು ಆಜೀವನವೂ ಈ ವ್ರತವನ್ನಾಚರಿಸಿದಳಂತೆ!
ಬೇಯಿಸಿದ ಅನ್ನವನ್ನೂ ನಾವು ಅನೇಕ ಸಂದರ್ಭಗಳಲ್ಲಿ ಬಳಸುತ್ತೇವೆ. ದೇವಸ್ಥಾನಗಳಲ್ಲಿ ಮುಖ್ಯ-ನೈವೇದ್ಯಕ್ಕಾಗಿ ಹಾಗೂ ಅಷ್ಟದಿಕ್ಕುಗಳಿಗೆ ಆಹುತಿ ಕೊಡುವುದಕ್ಕಾಗಿ ಅನ್ನವನ್ನು ಬಳಸಲಾಗುತ್ತದೆ. ಶ್ರಾದ್ಧದಲ್ಲಿ ಪಿಂಡಪ್ರದಾನ ಮಾಡುವಾಗ ಅನ್ನವೇ ಮುಖ್ಯ ಪದಾರ್ಥ. ಉತ್ತರ ಭಾರತದ ಕಾಶಿ, ಗಯಾ, ಬ್ರಹ್ಮಕಪಾಲಾದಿ ಶ್ರಾದ್ಧಕರ್ಮದ ತಾಣಗಳಲ್ಲಿ ಬೇಯಿಸಿದ ಅನ್ನದ ಬದಲು ನೆನೆಸಿದ ಅಕ್ಕಿಯನ್ನೇ ಬಳಸಿ ಶ್ರಾದ್ಧಕರ್ಮವನ್ನು ನೆರವೇರಿಸುವ ಸ್ಥಳೀಯ ಸಂಪ್ರದಾಯವಿದೆ.
ಅನ್ನ ಸೇವನೆಯು ಭಾರತದಾದ್ಯಂತ ಪ್ರಸಿದ್ಧ. ದಕ್ಷಿಣಭಾರತೀಯರಿಗಂತೂ ಅನ್ನವೇ ಮುಖ್ಯ ಆಹಾರ. ಸಾತ್ವಿಕ ಆಹಾರ ಎಂದೂ ಇದು ಮಾನ್ಯ. ಅದೆಷ್ಟೇ ಭರ್ಜರಿ ತಿಂಡಿ ತಿಂದರೂ ಪರವಾಗಿಲ್ಲ, ಆದರೆ ಅನ್ನವನ್ನು ತಿನ್ನದಿದ್ದರೆ ’ಉಪವಾಸ’ ಮಾಡಿದ ತೃಪ್ತಿ ಎಲ್ಲರಿಗೂ! ಪಾಯಸಾನ್ನ (ಹಾಲೋಗರ), ದಧ್ಯನ್ನ (ಮೊಸರನ್ನ), ಚಿತ್ರಾನ್ನ (ನಿಂಬೇಹಣ್ಣಿನ ಚಿತ್ರಾನ್ನ ಇತ್ಯಾದಿ), ಮುದ್ಗಾನ್ನ (ಬೇಳೆ-ಅನ್ನ), ಗುಢಾನ್ನ (ಬೆಲ್ಲದನ್ನ ಅಥವಾ ಸಕ್ಕರೆ ಪೊಂಗಲ್) ಮುಂತಾದ ಬಗೆಬಗೆಯ ಅನ್ನಪ್ರಕಾರಗಳು ಶತಶತಮಾನಗಳ ಹಿಂದಿನ ಆವಿಷ್ಕಾರಗಳೇ ಸರಿ. ಚಿತ್ರಾನ್ನ, ಪುಲಾವ್, ಬಗೆಬಗೆಯ ಕಲಸಿದನ್ನಗಳು, ಬಿಸಿಬೇಳೆಭಾತ್, ಪುಳಿಯೋಗರೆ, ಕದಂಬಂ, ಖಿಚಡಿ, ಪೊಂಗಲ್, ಜೀರಾ ರೈಸ್, ಫ್ರೈಡ್ ರೈಸ್, ವಾಂಗೀಭಾತ್, ತೆಂಗಿನಕಾಯಿ ಅನ್ನ, ಬೇಳೆ ಅನ್ನ, (ಮೆಂತಿಟ್ಟು ಪುಡೀ ಮುಂತಾದುವಗಳೊಂದಿಗೆ ಕಲಸಿಕೊಂಡು ತಿನ್ನುವಂತಹ) ಪುಡಿ ಅನ್ನ, ಗಂಜೀ ಊಟ, ಇತ್ಯಾದಿ ಅನ್ನಮೂಲವಾದ ಖಾದ್ಯಗಳನ್ನೆಲ್ಲ ಹೆಸರಿಸುತ್ತ ಹೋದರೆ ಪಟ್ಟಿ ಸಾಕಷ್ಟು ದೊಡ್ಡದೇ ಆಗುತ್ತದೆ. ಜೊತೆಗೆ ದೋಸೆ, ಇಡ್ಲಿ, ಚಕ್ಕುಲಿ ಮುಂತಾದವುಗಳಿಗೂ ಅಕ್ಕಿಯು ಅನಿವಾರ್ಯ ಸಾಮಗ್ರಿ. ಒಟ್ಟಿನಲ್ಲಿ ಭಾರತದ ಪಾಕಶಾಸ್ತ್ರವೈವಿಧ್ಯಕ್ಕೆ ಅಕ್ಕಿಯು ಕೊಟ್ಟ ಕೊಡುಗೆ ಬಹಳ ದೊಡ್ಡದ್ದು.

ಅಂತೂ ಅಕ್ಕಿಯು ಧನ, ಧಾನ್ಯ, ಸ್ನೇಹ, ಸಮೃದ್ಧಿ, ಶುಭ, ಆರೋಗ್ಯಗಳ ಪ್ರತಿರೂಪವಾಗಿ ನಮ್ಮ ಭಾರತೀಯರ ಜೀವನದ ಹಲವು ರಂಗಗಳನ್ನು ಪುಷ್ಟಗೊಳಿಸಿದೆ ಎನ್ನುವುದಂತೂ ನಿರ್ವಿವಾದ.
Published in Samyukta Karnataka 2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ