ಶುಕ್ರವಾರ, ಮಾರ್ಚ್ 17, 2017

ಸೊಬಗಿನ ಕುಂಕುಮ
ಹಿಂದು ಸಂಸ್ಕೃತಿಯಲಿ ಕುಂಕುಮಕ್ಕೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲಾತ್ಮಿಕ ಆಯಾಮಗಳಿವೆ.
ಸಂಕೇತಾರ್ಥ
ಹಣೆಯ ಮಧ್ಯಭಾಗದಲ್ಲಿ ಧರಿಸಲಾಗುವ ಬೊಟ್ಟು ಅಥವಾ ತಿಲಕವು (ಕುಂಕುಮ, ಗಂಧ, ಗೋಪಿಚಂದನ, ವಿಭೂತಿ, ಅಂಗಾರ ಇತ್ಯಾದಿಗಳ ನಾಮ/ ಬೊಟ್ಟು ಆಗಬಹುದು) ನಮ್ಮ ಜ್ಞಾನನಯನವನ್ನು ಸಂಕೇತಿಸುತ್ತದೆ. ಭ್ರೂಮಧ್ಯದಲ್ಲಿರುವ ಆಜ್ಞಾಚಕ್ರ/ಪದ್ಮವು (ಮೂರನೆಯ ಕಣ್ಣು ಎಂದೂ ಹೇಳುತ್ತಾರೆ) ಅರಳಿದಾಗ ಅರ್ಥಾತ್ ಜಾಗೃತ್ವಾದಾಗ ನಮ್ಮಲ್ಲಿ ಊರ್ಜಿತಜ್ಞಾನವು ಅರಳುತ್ತದೆ. ಅದನ್ನು ಬೆಳೆಸಿಕೊಂಡಾಗ ಮಾತ್ರ ನಾವು ನಮ್ಮ ಪಾಮರ ಬುದ್ಧಿಯ ಇಕ್ಕಟ್ಟಿನಿಂದ ಮೇಲೆದ್ದು ಉನ್ನತೋನ್ನತ ಸತ್ಯಗಳನ್ನು ಗ್ರಹಿಸಬಲ್ಲೆವು. ಅಂತಹ ಜ್ಞಾನನಯನವನ್ನು ಜಾಗೃತಗೊಳಿಸಿಕೊಳ್ಳುವಂತೆ ನಮಗೆ ನಾವೆ ಪ್ರೇರೇಪಿಸುವುದು ತಿಲಕಧಾರಣೆಯ ಮುಖ್ಯ ಉದ್ದೇಶ. ಕುಂಕುಮವು ಜ್ಞಾನ, ಸೌಂದರ್ಯ, ಸೌಮಂಗಲ್ಯ, ಸಮೃದ್ಧಿಗಳ ಸಂಕೇತವೂ ಹೌದು. ಅದನ್ನು ನೋಡಿದಾಕ್ಷಣ ನಮ್ಮ ಮನಸ್ಸಿಗೆ ಸಾತ್ವಿಕಭಾವ ಮೂಡುತ್ತದೆ.
ಕುಂಕುಮವು ಸ್ತ್ರೀತ್ವಮಾತೃತ್ವಗಳ ಸಂಕೇತವೂ ಹೌದು. ಸಮಾಜವನ್ನು ಪೋಷಿಸುವ ಸ್ತ್ರೀಗೆ ಆದರ ತೋರಿಸುವ ಭಾವವೇ ’ಅರಸಿನ ಕುಂಕುಮ ನೀಡುವ’ ಸಂಪ್ರದಾಯ. ಗೃಹಿಣಿಗೆ ಕೊಡುವ ’ಅರಿಸಿನ ಕುಂಕುಮ ತಾಂಬೂಲ’ಗಳು ಆಕೆಯ ಮನೆತನಕ್ಕೇ, ಸ್ತ್ರೀಕುಲಕ್ಕೇ ಹಾಗೂ ಸರ್ವಹಿತಸಾಧಕವಾದ ಕುಟುಂಬ ವ್ಯವಸ್ಥೆಗೇ ಸಲ್ಲಿಸುವ ಗೌರವ ಎಂದು.
ಕುಂಕುಮವು ಸ್ನೇಹ-ಸೌಹಾರ್ದತೆಗಳ ಸಂಕೇತವೂ ಹೌದು. ಒಕ್ಕೂಟಗಳಲ್ಲಿ ಸಮಾರಂಭಗಳಲ್ಲಿ ತಿಲಕ ಹಚ್ಚಿ ಸ್ವಾಗತಿಸುವ ಪದ್ಧತಿ ಜನಪ್ರಿಯ. ಕಾರ್ಯಾರಂಭಕ್ಕೆ, ಶುಭಕಾರ್ಯಕ್ಕೆ, ಯಾತ್ರೆಗೆ ಅಥವಾ ಸ್ಪರ್ಧೆಗೆ ಹೊರಡುವಾಗ ಮನೆಯ ಮಾನಿನಿಯರು ಗಂಡ-ಮಕ್ಕಳಿಗೂ ಸೋದರರಿಗೂ ತಿಲಕ ಹಚ್ಚಿ ಶುಭವನ್ನು ಹಾರೈಸುತ್ತಾರೆ. ಯುದ್ಧಕ್ಕೆ ತೆರಳುವ ವೀರರಿಗೆ ಮಾತೆ/ ಮಡದಿಯರು ಕುಂಕುಮದ ತಿಲಕವನ್ನಿಟ್ಟು ಜಯವನ್ನು ಕೋರುತ್ತಾರೆ. ಯುದ್ಧದ ಖಡ್ಗದಿಂದಲೇ ತಮ್ಮ ಬೆರಳ ರಕ್ತವನ್ನು ಚಿಮ್ಮಿಸಿ ಅದನ್ನೇ ತಮ್ಮ ಪತಿಪುತ್ರರಿಗೆ ತಿಲಕವನ್ನಾಗಿ ಹಚ್ಚಿ ಜಯವನ್ನು ಹಾರೈಸುತ್ತಿದ್ದ ವೀರ ಕ್ಷತ್ರಿಯರಾಣಿಯರನ್ನೂ ಇಲ್ಲಿ ನೆನೆಯಬಹುದು.
ಸರ್ವಕಾಲಿಕ ಸಾರ್ವಜನಿಕ ಪ್ರಸಿದ್ಧಿ
ಅನಾದಿಯಿಂದಲೂ ಕುಂಕುಮವನ್ನು ಅಲಂಕಾರವಾಗಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರತೀಕವಾಗಿದೆ. ಕುಲ, ಪಂಥ, ವರ್ಣ, ಆಶ್ರಮ, ಪ್ರದೇಶ, ವಯಸ್ಸು ಮುಂತಾದ ಭೇದಗಳಿಲ್ಲದೇ ಎಲ್ಲರಿಗೂ ಎಲ್ಲ ಕಾಲದಲ್ಲೂ ಬಳಕೆಯಲ್ಲಿರುವುದು ಕುಂಕುಮ. ವಿದೇಶೀ ಮತಗಳು ಕುಂಕುಮದ ಪ್ರಾಶಸ್ತ್ಯವನ್ನು ಅಳಿಸಲು ಯತ್ನಿಸಿವೆಯಾದರೂ, ವಿದೇಶೀ ಫ್ಯಾಶನ್ ಅಲೆ
ಅದನ್ನು ಸ್ವಲ್ಪ ಕುಗ್ಗಿಸಿದೆಯಾದರೂ, ಕುಂಕುಮಕ್ಕೆ ಈಗಲೂ ಭಾರತೀಯ ಸಂಸ್ಕೃತಿಯಲ್ಲಿ ಅಗ್ರಸ್ಥಾನ.
ಧಾರ್ಮಿಕ ಕಲಾಪಗಳಲ್ಲಿ ಕುಂಕುಮ
ಧಾರ್ಮಿಕ ಚಿಹ್ನೆಯಾಗಿ ಕುಂಕುಮ ಅತ್ಯಂತ ಪ್ರಶಸ್ತ. ‘ಕುಂಕುಮ ಧರಿಸದೆ ಪೂಜೆಗೇ ಕೂರುವಂತಿಲ್ಲ, ಕುಂಕುಮದ ಬಟ್ಟಲಿಲ್ಲದೆ ಪೂಜೆಗೆ ಅರ್ಥವೇ ಇಲ್ಲ’ ಎನ್ನುವಷ್ಟರ ಮಟ್ಟಿಗೆ ಕುಂಕುಮ ಮುಖ್ಯವಾದದ್ದು. ’ಹರಿದ್ರಾಕುಂಕುಮ ಚೂರ್ಣವನ್ನು ಸಮರ್ಪಿಸುವುದು ಪೂಜಾಂಗಗಳಲ್ಲೊಂದು. ಅದರಲ್ಲೂ ಕುಂಕುಮಾರ್ಚನೆ ಸ್ತ್ರೀಯರಿಗೆ ‘ತಮ್ಮದೇ ಅಧಿಕಾರ’ ಎನ್ನುವ ಹೆಮ್ಮೆಯ ಸಂಭ್ರಮದ ಪೂಜಾಂಗವಾಗಿದೆ! ಮನೆಗೆ ಹೊಸ ಬಟ್ಟೆ, ವಸ್ತು, ವಾಹನ, ಯಂತ್ರಗಳನ್ನು ತಂದಾಗ ಅರಸಿನ ಕುಂಕುಮಗಳಿಂದ ಸತ್ಕರಿಸಿ ಆ ಬಳಿಕವೇ ಬಳಸುತ್ತೇವೆ. ಕುಂಕುಮವಿಟ್ಟ ಕ್ಷಣದಲ್ಲೇ ಅದು ’ಲಕ್ಷ್ಮಿಯ ಸ್ಥಾನ’ ಎನಿಸುತ್ತದೆ. ಕುಂಕುಮವನ್ನು ಹೆಣ್ಣುಮಕ್ಕಳು ಮಾತ್ರವೇ ಧರಿಸಬೇಕೆಂದೇನಿಲ್ಲ. ಸ್ತ್ರೀಪುರುಷರಾರೂ ಬರಿಯ ಹಣೆಯಲ್ಲಿರಬಾರದೆನ್ನುವುದೇ ಸಂಪ್ರದಾಯ. ವಿಭೂತಿಯನ್ನೋ, ಕುಂಕುಮವನ್ನೋ, ಗಂಧ, ಗೋಪಿಚಂದನ, ಅಂಗಾರಾದಿಗಳ ಬೊಟ್ಟು/ನಾಮವನಾದರೂ ಧರಿಸಿರಲೇಬೇಕು. ಆದರೆ ದೈನಂದಿನ ಜೀವನದಲ್ಲು ಪಾಶ್ಚಾತ್ಯ ಉಡುಗೆಗಳಿಗೆ ಹೆಚ್ಚು ಅವಕಾಶವಾಗುತ್ತಿದ್ದಂತೆ, ’ಫ್ಯಾಶನ್’ ನೆಪದಲ್ಲಿ ಕುಂಕುಮಧಾರಣೆಯನ್ನು ಕಡಿಮೆ ಮಾಡುತ್ತ ಬಂದಿರುವ ಪುರುಷರು ಧಾರ್ಮಿಕ ಸಮಾರಂಭಗಳಲ್ಲಿ ಹಾಗೂ ಪೂಜಾದಿಕರ್ಮಗಳಲ್ಲಿ ಮಾತ್ರ ಕುಂಕುಮವನ್ನು ಧರಿಸುತ್ತಾರೆ. ಇದೀಗ ’ಕುಂಕುಮ ಧರಿಸಬಾರದೆಂ’ದು ಅಸಂಬದ್ಧ ನಿಯಮಗಳ ಮೂಲಕ ಹೆಣ್ಣುಮಕ್ಕಳನ್ನೂ ನಿರ್ಬಂಧಿಸುವ ಶಾಲಾಕಾಲೇಜುಗಳು ಹೆಚ್ಚುತ್ತಿರುವುದು ದುಃಖಕರ. ಇದನ್ನೆಲ್ಲ ನೋಡಿಯೂ ಪ್ರಶ್ನಿಸದೆ ಪ್ರತಿಭಟಿಸದೆ ಸುಮ್ಮನಿರುವ ಪೋಷಕರ ನಿರ್ಲಕ್ಷ್ಯವು ಅದಕ್ಕಿಂತ ದುಃಖತರ!
ಕುಂಕುಮವನ್ನು ಸಾಂಪ್ರದಾಯಿಕ ರಂಗೋಲಿಯಲ್ಲಿ, ಕಲಶ, ಹೊಸಿಲು, ತುಳಸಿಕಟ್ಟೆ ಹಾಗೂ ದೇವರಮೂರ್ತಿಗಳಿಗೆ ಹಚ್ಚಲು ಬಳಸುತ್ತೇವೆ. ಹಿಂದುಮನೆಯಲ್ಲಿ ಕನಿಷ್ಟ ಪಕ್ಷ ಇರಲೇ ಬೇಕಾದ ವಸ್ತುಗಳು ಅರಸಿನ ಕುಂಕುಮಗಳು. ಅವುಗಳಿಲ್ಲದೆ ಯಾವ ಶುಭಕಾರ್ಯವೂ ಇಲ್ಲ, ಧಾರ್ಮಿಕ ಕಲಾಪವೂ ಇಲ್ಲ.
ಮಧುಮಕ್ಕಳಿಗೂ, ಮಕ್ಕಳಿಗೂ ಸುಮಂಗಲಿಯರಿಗೂ ಕುಂಕುಮಾರತಿಯನ್ನೆತ್ತಿ ದೃಷ್ಟಿ ನೀವಾಳಿಸುತ್ತೇವೆ. ಮಕ್ಕಳು ಉಣ್ಣಲು ಹಠ ಮಾಡಿದಾಗ ಅನ್ನದೃಷ್ಟಿಯಾಗಿರಬಹುದೆಂದು ಬಗೆದು ಅನ್ನಕ್ಕೆ ಕುಂಕುಮವನ್ನು ಬೆರೆಸಿ ದೃಷ್ಟಿ ನೀವಾಳಿ ಸುವ ಪದ್ಧತಿ ಭಾರತದ ಅಮ್ಮಂದಿರಿಗೆ ಪರಿಚಿತ ಅಭ್ಯಾಸ.
ಅಲಂಕಾರ
ಹೆಂಗಳೆಯರ ಅಲಂಕಾರದಲ್ಲಿ ಅತಿಮುಖ್ಯವಾದದ್ದು ಕುಂಕುಮವೇ. ಬೇರಾವುದೇ ಅಲಂಕಾರ ಇರಲಿ ಇಲ್ಲದಿರಲಿ ಕುಂಕುಮವಿಲ್ಲದಿದ್ದಲ್ಲಿ ಏನೋ ಕೊರತೆ ಭಾಸವಾಗುತ್ತದೆ. ಬಡವಬಲ್ಲಿದರೆನ್ನದೇ ಎಲ್ಲರಿಗೂ ಸುಲಭವಾಗಿ ದೊರಕುವ ವಸ್ತು ಈ ಕುಂಕುಮ. ಹಣೆಬೊಟ್ಟಷ್ಟೇ ಅಲ್ಲದೆ ಕುಂಕುಮ ಚಂದನ ಅಗರು ಮುಂತಾದ ದ್ರವ್ಯಗಳನ್ನು ಬಳಸಿ ಹಣೆ ಹುಬ್ಬು ಕೆನ್ನೆ ಕೊರಳು ಬೆನ್ನು ಭುಜ ಕರಗಳ ಮೇಲೆ ಸುಂದರ ಚಿತ್ರವಿನ್ಯಾಸಗಳನ್ನು ರಚಿಸಿಕೊಳ್ಳುವ ಪ್ರಾಚೀನ ಕಾಲದ ಫ್ಯಾಶನ್ ಈಗ ಟ್ಯಾಟೂ ರೂಪದಲ್ಲಿ ಮರುಕಳಿಸುತ್ತಿದೆ. ಸುಂದರಿಯರು ತಮ್ಮ ಹಣೆ, ಕೆನ್ನೆ, ಕೊರಳು, ಬೆನ್ನು, ಭುಜಗಳ ಮೇಲೆ ಕುಂಕುಮ, ಅಗರು, ಹರಿಚಂದನಾದಿಗಳ ’ಪತ್ರಲೇಖ’ ಮಾಡಿಕೊಳ್ಳುತ್ತಿದ್ದ ಉಲ್ಲೇಖಗಳು ನಮ್ಮ ಪ್ರಾಚೀನ ಕಾವ್ಯೇತಿಹಾಸಗಳಲ್ಲಿ ಹೇರಳವಾಗಿ ಕಾಣಬರುತ್ತದೆ.
ಮದುವೆಯಾದ ಹೆಣ್ಣುಮಕ್ಕಳು ನಿರ್ದಿಷ್ಟ ಆಕಾರದಲ್ಲಿ ಕುಂಕುಮ ಧರಿಸುತ್ತಿದ್ದರು. ಶೈವಕುಲದ ಸುಮಂಗಲಿಯರು ಅಡ್ಡ ಗೆರೆಯ ಆಕಾರದಲ್ಲಿ (ಮರಾಠಿ ಹೆಂಗಸರು ಧರಿಸುವಂತೆ) ಹಾಗೂ ವೈಷ್ಣವ ಕುಲದ ಮಹಿಳೆಯರು ಉದ್ದ ತಿಲಕವನ್ನು ಧರಿಸುತ್ತಿದ್ದರು. ಅದು ಅವರವರ ಕುಲದ ಪ್ರತೀಕವೂ ಆಗಿತ್ತು. ಈಗೀಗ ಎಲ್ಲರೂ ಎಲ್ಲ ವಿನ್ಯಾಸದಲ್ಲೂ ಕುಂಕುಮವನ್ನು ಧರಿಸುವುದು ಸರ್ವೇಸಾಮಾನ್ಯ. ಪೂರ್ವ-ಪಶ್ಚಿಮ ಹಾಗೂ ಉತ್ತರಭಾರತದ ಪ್ರಾಂತಗಳಲ್ಲಿ ಸುಮಂಗಲಿಯರು ಬೈತಲೆಯ ಮಧ್ಯೆ ಸಿಂಧೂರವನ್ನು ಧರಿಸುವುದು ಪದ್ಧತಿ.
ಕುಂಕುಮದ ಮಾಡುವ ಪರಿ
ಅರಸಿನಕ್ಕೆ ಸುಣ್ಣವನ್ನೋ ನಿಂಬರಸವನ್ನೋ ಸ್ಫಟಿಕಚೂರ್ಣವನ್ನೋ ಬೆರೆಸಿ ಮನೆಮನೆಗಳಲ್ಲೂ ಕುಂಕುಮವನ್ನು ತಯಾರಿಸಿಕೊಳ್ಳುತ್ತಿದ್ದರು. ಅದೇ ಅತ್ಯುತ್ತಮ ಗುಣಮಟ್ಟದ್ದು, ತ್ವಚೆಗೂ ಸುರಕ್ಷಿತವಾದದ್ದು. ರಾಸಾಯನಿಕಗಳನ್ನು, ಕಳಪೆ ಬಣ್ಣಗಳನ್ನೂ ಹಿಟ್ಟನ್ನು ಬೆರೆಸಿ ಮಾಡುವ ಈ ಮಾರುಕಟ್ಟೆಯಲ್ಲಿ ಸಿಗುವ ಕೃತಕ ಕುಂಕುಮಗಳನ್ನು ಬಳಸುವಾಗ ಎಚ್ಚರವಹಿಸದಿದ್ದರೆ ತ್ವಚೆಗೆ ಹಾನಿಯಾದೀತು.
ಕಲೆ
ಕುಂಕುಮಧಾರಣೆಯು ಕಲಾಭಿವ್ಯಕ್ತಿಗೆ ಹೇರಳ ಅವಕಾಶ ಮಾಡಿಕೊಟ್ಟಿದೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ಬಿಂದಿಗಳ ನೂರಾರು ವಿನ್ಯಾಸಗಳನ್ನೇ ಕಂಡರೆ ಇದು ಸೊಪಷ್ಟವಾಗುತ್ತದೆ. ಜೊತೆಗೆ ಹಣೆಯ ಮೇಲೆ ಬಣ್ಣದ ದ್ರವಗಳಿಂದ ರಚಿಸುವ ಬಿಂದಿಯ ವಿನ್ಯಾಸಗಳೂ ಸರ್ಜನಶೀಲ ಕಲೆಯಾಗಿ ಬೆಳೆದುಬಂದಿದೆ. ಬಗೆಬಗೆಯ ತಿಲಕಗಳನ್ನು ತಮಗೆ ತಾವೇ ರಚಿಸಿಕೊಳ್ಳುವಲ್ಲಿ ಮನೆಮನೆಯ ಹೆಣ್ಣುಮಕ್ಕಳು ಎಲ್ಲರೂ ಕಲಾವಿದರೇ ಸರಿ.

Publsihed in Samyukta Karnataka 2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ