ಶುಕ್ರವಾರ, ಮಾರ್ಚ್ 17, 2017

ಸುಮ ಸಾಂಸ್ಕೃತಿಕ ಸೌರಭ
ಸೃಷ್ಟಿಯಲ್ಲೇ ಅತ್ಯಂತ ಸುಂದರವಾದ ವಸ್ತು ಹೂವು. ಮಾನವನು ತನ್ನ ಭಾವನೆಗಳನ್ನು ಅಭಿವ್ಯಂಜಿಸಲು, ವರ್ಣಿಸಲು ಹಾಗೂ ವ್ಯವಹಾರದಲ್ಲಿ ಬಳಸಲು ಅನಾದಿಯಿಂದಲೂ ಹೂವನ್ನು ಬಹುವಾಗಿ ಬಳಸಿದ್ದಾನೆ. ಭಾರತೀಯ ಹೃನ್ಮನಗಳಲ್ಲಂತೂ ಹೂವು ಸೌಂದರ್ಯ, ಭಕ್ತಿ, ಪಾವಿತ್ರ್ಯ, ದೈವತ್ವಗಳ ಪ್ರತೀಕವಾಗಿ ಮಾನ್ಯತೆ ಪಡೆದಿದೆ. ಹೂವಿನ ಕುರಿತಾದ ವರ್ಣನೆಗಳು, ಪದ್ಯಗಳು ಅಸಂಖ್ಯ.

ಧಾರ್ಮಿಕ ಕಲಾಪಗಳಲ್ಲಿ ಹೂವು-
ಸರಳಾತಿಸರಳ ಪೂಜೆಯೆಂದರೂ ಒಂದು ಹೂವನ್ನಾದರೂ ದೇವರಿಗೆ ಇಟ್ಟು ನಮಸ್ಕರಿಸುತ್ತೇವೆ. ಪಂಚಭೂತಾತ್ಮಕವಾದ ನಮ್ಮ ವ್ಯಕ್ತಿತ್ವವನ್ನು ದೇವರಿಗೆ ಸಮರ್ಪಿಸುವುದೇ ಪೂಜೆಯ ಮರ್ಮ. ಪೃಥ್ವೀ-ಅಪ್-ತೇಜಸ್-ವಾಯು-ಆಕಾಶಗ ಪ್ರತೀಕವಾಗಿ ಗಂಧ-ಅರ್ಘ್ಯ-ದೀಪ-ಧೂಪ ಹಾಗೂ ಹೂವುಗಳನ್ನು ಸಮರ್ಪಿಸುತ್ತೇವೆ. ಜಾತಕರ್ಮದಿಂದ ಹಿಡಿದು ಅಂತ್ಯೇಷ್ಟಿಯವರೆಗೂ ಎಲ್ಲ ಕಲಾಪಗಳಲ್ಲೂ ಹೂವು ಅಗತ್ಯ. ತುಳಸಿಗೆ, ಹೊಸಿಲಿಗೆ, ಗೋವಿಗೆ, ದೇವರಿಗೆ, ಸುಮಂಗಲಿಗೆ, ಪೂಜೆ-ತಾಂಬೂಲಗಳನ್ನು ಕೊಡುವಾಗ ಹೂವಿರಬೇಕು. ಹೂವಿನ ಸಿಂಗಾರದಿಂದ ದೇವರ ಮೂರ್ತಿ ತಕ್ಷಣ ಕಳೆಕಟ್ಟುತ್ತದೆ. ಭಕ್ತಿಯ ನವವಿಧಗಳಲ್ಲಿ ’ಅರ್ಚನೆ’ಯೂ ಒಂದು. ಪರಮಾತ್ಮನಿಗೆ ನಮ್ಮ ಭಾವಭಕ್ತಿಗಳನ್ನು ನಿವೇದಿಸಲು ಇದು ಸರಳ-ಸುಂದರ ವಿಧಾನ. ಅರ್ಚನೆಗಳಲ್ಲೆಲ್ಲ ಪುಷ್ಪಾರ್ಚನೆಯೇ ಪ್ರಧಾನ. ನಮ್ಮ ಜೀವವನ್ನೇ ಕುಸುಮವೆಂದು ಭಾವಿಸಿ ಅರ್ಪಿಸುತ್ತೇವೆ. ಲಲಿತಾಸಹಸ್ರನಾಮದಲ್ಲಿ ದೇವಿಗೆ ’ಚೈತನ್ಯಕುಸುಮಪ್ರಿಯಾ’ ಎನ್ನುವ ಹೆಸರೇ ಇದೆ. ಪೂಜೆಯಲ್ಲಿ ಹೂವು ಮುಖ್ಯ ಸಾಮಗ್ರಿ. ಸಂಕಲ್ಪ, ಪ್ರಾಣಪ್ರತಿಷ್ಠಾಪನೆ, ಧ್ಯಾನ, ಅರ್ಚನೆ ಮೊದಲಾದ ಎಲ್ಲ ಉಪಚಾರಗಳಿಗೂ ಹಾಗೂ ಕೊನೆಯಲ್ಲಿ ಮಂಗಳಾರತಿ, ಪೂಜಾಸಮರ್ಪಣೆ ಹಾಗೂ ವಿಸರ್ಜನೆಗಳಿಗೂ ಸತತವಾಗಿ ಬಳಸುವುದು ಹೂವನ್ನೇ! ಪುಷ್ಪಪೂಜೆ, ನಾಮಪೂಜೆ, ಅಂಗಪೂಜೆ, ಅಷ್ಟೋತ್ತರಶತನಾಮಾರ್ಚನೆ, ಸಹಸ್ರನಾಮಾರ್ಚನೆ ಮುಂತಾದವುಗಳಲ್ಲೂ ಪುಷ್ಪವನ್ನೇ ಸಮರ್ಪಿಸುವುದು.
ದೇವತಾರೂಪಗಳನ್ನು ನಿರ್ದಿಷ್ಟ ಹೂಗಳಿಂದ ಪೂಜಿಸುವ ಪದ್ಧತಿ ನಮ್ಮಲ್ಲಿದೆ. ದಾಸವಾಳವು ಗೌರಿಗೂ, ಕಮಲವು ಲಕ್ಷ್ಮಿಗೂ, ಮೊಲ್ಲೆಯು ಸರಸ್ವತಿಗೂ, ತುಂಬೆ ಶಿವನಿಗೂ, ಪಾರಿಜಾತವು ವಿಷ್ಣುವಿಗೂ, ಅರ್ಕ(ಎಕ್ಕ)ವು ಗಣಪತಿಗೂ ಪ್ರಶಸ್ತವೆಂದು ದಾಕ್ಷಿಣಾತ್ಯರ ನಂಬಿಕೆ. ಆದರೂ ಎಲ್ಲ ದೇವತಾರೂಪಗಳ ಪೂಜಾವಿಧಿಯಲ್ಲೂ ’ನಾನಾವಿಧ ಪರಿಮಳಪತ್ರಪುಷ್ಪ’ಗಳ ಸೇವೆ ತಪ್ಪದು.
ಉತ್ತರಭಾರತದಲ್ಲಿ ತಟ್ಟೆಯಲ್ಲಿ ಬಣ್ಣದ ಹೂವುಗಳನು ಹರಡಿಟ್ಟು, ಅದರ ಮೇಲೆ ಧೂಪ-ದೀಪ-ನೈವೇದ್ಯ-ದಕ್ಷಿಣೆಗಳನ್ನು ಸಿಂಗಾರವಾಗಿ ಜೋಡಿಸಿ ದೇವರಿಗೆ ಅರ್ಪಿಸುತ್ತಾರೆ. ದೇವಸ್ಥಾನಕ್ಕೆ ಹೋಗುವಾಗ ಒಂದು ಮೊಳ ಹೂವನ್ನಾದರೂ ಕೊಂಡೊಯ್ಯುತ್ತೇವೆ, ಹೂವಿನ ಪ್ರಸಾದವನ್ನು ಶಿರಸಾ ಧರಿಸುತ್ತೇವೆ. ಪೂಜಾಂತ್ಯದಲ್ಲಿ ದೇವರು ಬಲಗಡೆಯಿಂದ ಹೂವನ್ನು ಬೀಳಿಸಿದರೆ ನಮಗೆ ಅದೇನೋ ಧನ್ಯತಾಭಾವ! ದಾಸವಾಳ ಮುಂತಾದ ಹೂವುಗಳನ್ನೇ ದೇವತಾಪ್ರತೀಕವಾಗಿ ಇಟ್ಟು ಪೂಜಿಸುವದೂ ಉಂಟು.
ಹೊರಗಡೆಯ ಹೂವಿಗಿಂತಲೂ ನಮ್ಮ ಶ್ರದ್ಧಾಭಕ್ತಿಗಳನ್ನೇ ದೇವರು ಅಪೇಕ್ಷಿಸುವುದು ಎನ್ನುವ ಸಂದೇಶವನ್ನು ಸಾರುವ ಪುರಾಣದ ಒಂದು ಕಥೆ ಹೀಗಿದೆ- ಮಹಾವಿಷ್ಣುವು ಶಿವನನ್ನು ನೂರೆಂಟು ಕಮಲಗಳಿಂದ ಪೂಜಿಸುತ್ತಿದ್ದಾಗ ಒಂದು ಕಮಲ ಮರೆಯಾಯಿತಂತೆ. ಆಸನದಿಂದೆದ್ದರೆ ಪೂಜೆಯಲ್ಲಿ ಅಪಚಾರವಾದೀತೆಂದು ವಿಷ್ಣುವು ತನ್ನ ಕಮಲದಂತಹ ಕಣ್ಣುಗಳನ್ನೇ ಅರ್ಪಿಸಿದನಂತೆ. ಅವನ ಅನನ್ಯ ಭಕ್ತಿಗೆ ಮನಸೋತ ಶಿವನು ಆತನಿಗೆ ಸುದರ್ಶನ ಚಕ್ರವನ್ನಿತ್ತನಂತೆ! ಜನ್ಮಾಂತರಗಳಲ್ಲಿ ಉತ್ತಮ ಭಕ್ತಳಾಗಿದ್ದು ದೇವರ ಸೇವಾಭಾಗ್ಯವನ್ನು ಪಡೆಯುವ ಸಲುವಾಗಿ ’ಹೂವು ಜನ್ಮ’ ತಾಳಿದ ತುಂಬೆ ಹೂವಿನ ಜಾನಪದ ಕಥೆ ಪ್ರಸಿದ್ಧ.

ದೇವರಿಗೆ ಅರ್ಪಿಸುವ ಹೂವು
ಆಯಾ ಋತುವಿನ ಹೂವುಗಳು ಪೂಜೆಗೆ ಶ್ರೇಷ್ಠ. ಅಲಂಕಾರಕ್ಕೆ ಎಲ್ಲ ಹೂವುಗಳೂ ಒಪ್ಪುತ್ತವಾದರೂ ದೇವರಿಗೆ ಮುಡಿಸಲು ಹಾಗೂ ಅರ್ಚನೆಗೆ ಜಾಜಿ, ಮಲ್ಲಿಗೆ, ಕಮಲ, ಮಾಲತಿ, ಕದಂಬ, ಮಾಧವೀ, ಸಂಪಿಗೆ, ಅಶೋಕ, ಕರವೀರ, ಸುಗಂಧರಾಜ, ಜಪಾ, ಬಿಲ್ವ, ಪಲಾಶ, ಪಾಟಲ, ಮಂದಾರ, ಬಕುಳ, ಕುಟಜ, ಕೇತಕೀ, ಕುಮುದ ಮುಂತಾದ ಹೂವುಗಳನ್ನು ಪ್ರಶಸ್ತ ಎಂದು ಸೂಚಿಸಲಾಗುತ್ತದೆ. ಮುಳ್ಳುಗಳಿಂದ ಕೂಡಿದ, ಹುಳು ಹೊಡೆದ, ಕೊಳೆತ, ದಳಗಳು ಖಂಡವಾದ, ಮೈಲಿಗೆ ಅಂಟಿದ, ಕಾಲಿಗೆ ತಾಕಿದ, ನಲುಗಿದ, ಕೂದಲ ಸ್ಪರ್ಶವಾದ, ಮೂಸಲಾದ, ನೈರ್ಮಾಲ್ಯವಾದ, ಶವಾದಿಗಳ ಸಂಪರ್ಕಕ್ಕೆ ಬಂದ, ಮನುಷ್ಯರು ಮುಡಿದ ಹೂವುಗಳನ್ನೂ ಅಥವಾ ಕದ್ದು ತಂದ, ನೀರಲ್ಲಿ ನೆನೆದ, ತುಂಬ ಎಳೆಯ ಮೊಗ್ಗುಗಳಾದ, ಮಧ್ಯಾಹ್ನ ಕೊಯ್ದ, ಸುಗಂಧವನ್ನು ಲೇಪಿಸಲಾದ ಅಥವಾ ಗಿಡವನ್ನು ಬೇರುಸಹಿತ ಕಿತ್ತು, ಕೊಂಬೆಗಳನ್ನು ಮುರಿದು ತಂದ ಹೂವುಗಳನ್ನು ಅರ್ಪಿಸಬಾರದೆಂದು ಶಾಸ್ತ್ರವಿಧಿ. Plastic ಮುಂತಾದ ಕೃತಕ ಹೂವುಗಳು ಪೂಜೆಗೆ ಸರಿಯಾಗವು. ಬಡವರೂ ಬಲ್ಲಿದರೂ ಎಲ್ಲರೂ ಅರ್ಪಿಸಬಹುದಾದ ಪರಿಸರಪ್ರೇಮಿ ವಸ್ತು ‘ಗಿಡಿದ ಹೂವು’. ಆದರೆ ಹೂವನ್ನು ದೇವರಿಗೆ ಅರ್ಪಿಸಿ ಪುಣ್ಯಕಟ್ಟಿಕೊಳ್ಳುವ ಭರದಲ್ಲಿ ಗಿಡವನ್ನೆಲ್ಲ ಬೋಳಿಸಬರದು. ಎಲ್ಲ ಗಿಡಗಳನ್ನೂ ಸಂಪೂರ್ಣ ಖಾಲಿ ಮಾಡಿ ಪೂಜೆಗೆ ಹೂವು ಬಳಸುತ್ತಿದ್ದ ಬ್ರಹ್ಮಚಾರಿಯೊಬ್ಬನಿಗೆ ಸ್ವಾಮಿ ಬ್ರಹ್ಮಾನಂದರು(ರಾಮಕೃಷ್ಣ ಪರಮಹಾಂಸರ ಶಿಷ್ಯರು) ನಯವಾಗಿ ಕಿವಿ ಮಾತೊಂದನ್ನು ಹೇಳುತ್ತಾರೆ- "ದೇವರು ಗುಡಿಯಲ್ಲಿ ಮಾತ್ರವೇ ಇರುತ್ತಾನೇನು? ವಾಕಿಂಗ್ ಕೂಡ ಬರುತ್ತಾನೆ. ಗಿಡವನ್ನೆಲ್ಲ ಬೋಳಿಸಿಬಿಟ್ಟರೆ ಹೇಗೆ? ಎಷ್ಟು ಬೇಕೋ ಅಷ್ಟು ಹೂವನ್ನು ಮಾತ್ರ ಬಿಡಿಸಿಕೊಳ್ಳಬೇಕು". ನಾವೇ ಬೆಳೆಸಿದ ಹೂವುಗಳನ್ನು ಅರ್ಪಿಸಬೇಕೆಂದು ಶ್ರೀರಾಮಾನುಜಾಚಾರ್ಯರ ಅಪ್ಪಣೆ.
ಅಲಂಕಾರಕ್ಕೆ ಹೂವು
ಭಾರತದಲ್ಲಿ ಹೆಣ್ಣು ಮಕ್ಕಳು ಪರಿಮಳಭರಿತ ಹೂವುಗಳನ್ನು ಮುಡಿದು ನಲಿಯುತ್ತಾರೆ. ಶುಭಸಮಾರಂಭಗಳಲ್ಲಿ ಮೊಗ್ಗಿನ ಜಡೆಗಳನ್ನು ಧರಿಸುವ ಫ್ಯಾಶನ್ ಶತಮಾನಗಳಾದರೂ ಹಳೆದಾಗಿಲ್ಲ! ಪೂಜೆ ಹಾಗೂ ಶುಭಸಮಾರಂಭಗಳಲ್ಲಿ ಹೆಣ್ಣುಮಕ್ಕಳು ಹೂಮುಡಿದೇ ಕೂಡುತ್ತಾರೆ. ಹೂವಿನ ವಸ್ತ್ರಾಭರಣಗಳನ್ನು ತೊಟ್ಟು ಮೆರೆಯುತ್ತಿದ್ದ ಬೆಡಗಿಯರ ವರ್ಣನೆಗಳನ್ನು ಪ್ರಾಚೀನ ಕಾವ್ಯೇತಿಹಾಸಗಳಲ್ಲಿ ಕಾಣಬಹುದು. ಗಂಡ ಮುಡಿಸುವ ಮಲ್ಲಿಗೆ ದಿಂಡು ಮಡದಿಗೆ ಬೇರೆಲ್ಲ ಆಭರಣಗಳಿಗಿಂತಲೂ ಪ್ರಿಯ! ಪ್ರಾಚೀನ ಭಾರತದಲ್ಲಿ ಪುರುಷರೂ ಹೂವು ಮುಡಿಯುತ್ತಿದ್ದ ಉಲ್ಲೇಖಗಳಿವೆ. ಪೂಜಾಂತ್ಯದಲ್ಲಿ ಭಗವಂತನ ಪ್ರಸಾದವನ್ನು ಕಿವಿಯ ಮೇಲೆ ಇಟ್ಟುಕೊಳ್ಳುವುದು ಭಕ್ತಿ-ನಮ್ರತೆಗಳ ಪ್ರತೀಕ. ಅನ್ಯಾಯವಾಗಿ ಈ ಸುಂದರ ಪದ್ಧತಿಯನ್ನು ’ಕಿವಿ ಮೇಲ್ ಹೂವ್’ ಎಂದು ಅಪಹಾಸ್ಯ ಮಾಡುತ್ತ ಅಪಮೌಲ್ಯಗೊಳಿಸಲಾ ಗುತ್ತಿದೆ.
ಹೂವಿನ ಚಿತ್ತಾರವನ್ನು ಹೊಂದಿರದ ಭಾರತೀಯ ಸಾಂಪ್ರದಾಯಿಕ ವಸ್ತ್ರ-ಭೂಷಣ-ಶಿಲ್ಪಕಲೆ-ರಂಗವಲ್ಲಿ-ಯಂತ್ರ- ಪೀಠೋಪಕರಣ ಹಾಗೂ ಕಲಾಕೃತಿಗಳನ್ನು ಊಹಿಸಿಕೊಳ್ಳುವುದೂ ಕಷ್ಟ! ಮನೆಯಲ್ಲಿ ಹಬ್ಬಹರಿದಿನ, ಮದುವೆ, ಮುಂಜಿ ಮುಂತಾದ ಸಮಾರಂಭಗಳು ನಡೆಯುವಾಗ ಮನೆಯಂಗಳ, ಬಾಗಿಲು, ಕಿಟಕಿಗಳಿಗೂ ಚಪ್ಪರಕ್ಕೂ ಹೂಮಾಲೆ-ಹೂಗುಚ್ಛಗಳನ್ನು ಕಟ್ಟುತ್ತೇವೆ. ದೇವರ ಮಂಟಪ, ಮದುವೆಯ ಮನೆ, ಹಸೆಯ ಮಣೆ-ಮಂಟಪ, ಮಧುಮಕ್ಕಳ ಹಾಸಿಗೆ ಮುಂತಾದವುಗಳನ್ನು ಹೂಗಳಿಂದ ಭರ್ಜರಿಯಾಗಿ ಅಲಂಕರಿಸುವಲ್ಲಿ ಹಣವನ್ನು ಯಥೇಚ್ಛವಾಗಿ ವ್ಯಯಿಸುತ್ತಾರೆ ಭಾರತೀಯರು. ಮಗಳನ್ನು ಗಂಡನ ಮನೆಗೆ ಕಳುಹುವಾಗ, ಸೊಸೆಯನ್ನು ಬರಮಾಡಿಕೊಳ್ಳುವಾಗ, ನವಜಾತ ಶಿಶುವಿಗೆ ತೊಟ್ಟಿಲಶಾಸ್ತ್ರ ಮಾಡುವಾಗಲೂ ಹೂವನ್ನೇ ಹಾಸುವುದು. ಮದುವೆಯ ಮಾತುಕತೆ ನಡೆಯುವಾಗ, ವಿದ್ಯಾರಂಭ ಮಾಡುವಾಗ, ಸಭೆಸಮಾರಂಭಗಳಲ್ಲಿ ಗಣ್ಯರನ್ನು ಸ್ಮಾನಿಸುವಾಗ, ಗುಡಿ-ಮಠಗಳಿಗೆ ಕಾಣಿಕೆ ಸಲ್ಲಿಸುವಾಗ ಮಾಲೆ-ಹೂವು-ಹಣ್ಣುಗಳಿದ್ದರೇನೇ ಲಕ್ಷಣ. ನೊಂದವರಿಗೆ, ರೋಗಿಗಳಿಗೆ ಹೂಗುಚ್ಛವನ್ನು ನೀಡಿ ಶುಭಹಾರೈಸುವುದಲ್ಲದೆ ಸತ್ತವರಿಗೂ ಗೌರವ ಸೂಚಿಸಲೂ ಹೂವುಗಳೇ ಆಗಬೇಕು!
ಬಗೆಬಗೆಯ ವಿನ್ಯಾಸಗಳಲ್ಲಿ ಹಾರ, ತೋಮಾಲು, ದಿಂಡು, ಮಾಲೆಗಳನ್ನು ಕಟ್ಟುವುದು, ಮೊಗ್ಗಿನ ಜಡೆ ಹೆಣೆಯುವುದು, ಹೂಗುಚ್ಛಗಳ ಜೋಡನೆ ಮುಂತಾದವುಗಳು ಅತ್ಯುತ್ತಮ ಸರ್ಜನಶೀಲತೆಯನ್ನು ಮೆರೆಯುತ್ತ ಶತಮಾನಗಳಿಂದಲೂ ದೇಶಿ ಹಾಗೂ ವಿದೇಶೀ ಮಟ್ಟದಲ್ಲಿ ಭಾರೀ ಉದ್ಯಮವಾಗಿ ಬೆಳೆದುನಿಂತಿರುವುದು ಭಾರತೀಯರ ಪುಷ್ಪಪ್ರೇಮಕ್ಕೆ ಸಾಕ್ಷಿಯಾಗಿವೆ. ಹಬ್ಬಹರಿದಿನಗಳ ಸಂದರ್ಭದಲ್ಲಿ ಮಾರುಕಟ್ಟೆಯ ಬೀದಿಗಳಲ್ಲಿ ಎಲ್ಲೆಲ್ಲೂ ಬಣ್ಣಬಣ್ಣದ ಹೂವುಗಳ ಚೆಲುವು ಮನಸೆಳೆದರೆ ಅವುಗಳ ಪರಿಮಳವು ಮೈಮರೆಸುತ್ತದೆ.
ಪಾಶ್ಚಾತ್ಯರ ಸಾಂಸ್ಕೃತಿಕ ದಾಳಿಯೊಂದಿಗೆ ಭಾರತಕ್ಕೆ ಬಂದ ಬೆರಳೆಣಿಕೆಯ ಸದಂಶಗಳಲ್ಲಿ ಗುಲಾಬಿಯೂ ಒಂದು. ಪಾಶ್ಚಾತ್ಯರ ದೃಷ್ಟಿಯಲ್ಲಿ ಬಿಳಿಯ ಹೂವುಗಳು ಶಾಂತಿ ಸಮಾದಾನಗಳ ಪ್ರತೀಕ, ಕೆಂಪು ಹೂವು ಪ್ರೇಮದ ಪ್ರತೀಕ, ಹಳದಿ ಸ್ನೇಹ-ಸೌಹಾರ್ದತೆಗಳ ಪ್ರತೀಕವಾಗಿವೆ.
ಬಗೆ ಬಗೆಯ ನಾಡ ಹಾಗೂ ಕಾಡ ಹೂವುಗಳಿಂದ ಸೌಂದರ್ಯವರ್ಧಕಗಳನ್ನೂ, ಪರಿಮಳದ್ರವ್ಯಗಳನ್ನೂ, ಔಷಧಗಳನ್ನೂ ತಯಾರಿಸುವ ಉದ್ಯಮವು ಭಾರತದಲ್ಲಿ ಅತಿ ಪ್ರಾಚೀನ ಕಾಲದಿಂದಲೂ ಇದೆ. ಲಕ್ಷೋಪಲಕ್ಷ ಪ್ರಕಾರಗಳ ಪರಿಮಳದ್ರವ್ಯಗಳನ್ನು ತಯಾರಿಸುವ ಭಾರತವು ವಿಶ್ವದ ಪರಿಮಳದ್ರವ್ಯಗಳ ಉದ್ಯೋಗಕ್ಕೇ ಮೊದಲ ನಾಂದಿ ಹಾಡಿತೆನ್ನಬಹುದು. ಗುಲಾಬಿಯಿಂದ ಪಡೆಯಲಾಗುವ ಗುಲ್ಕನ್ ಬೆಣ್ಣೆ ಗುಲ್ಕನ್, ಪಾನ್ ಬೀಡಾಗಳಲ್ಲಿ ಸೇರಿ ಅತ್ಯಂತ ಜನಪ್ರಿಯತೆ ಪಡೆದಿದೆ. 
ಹೂವಿನ ಸಂದೇಶ-

ಸಿಕ್ಕಷ್ಟೇ ಗಾಳಿ, ಬೆಳಕು, ಮಣ್ಣು, ಅವಕಾಶಗಳನ್ನು ಬಳಸಿಕೊಂಡು, ಹೂವು ಅರಳುತ್ತದೆ. ಒಂದೇ ದಿನದ ತನ್ನ ಬಾಳಿನಲ್ಲಿ ಹೂವು ಪರಿಪೂರ್ಣವಾಗಿ ವಿಕಸಿಸುತ್ತದೆ, ತನ್ನ ಚೆಲುವು, ಸೌರಭಗಳನ್ನು ಪರರಿಗೆ ಧಾರೆ ಎರೆಯುತ್ತದೆ. ಮಾನವನು ಜೀವನದಲ್ಲಿ ಪೂರ್ಣವಿಕಾಸ ಹೊಂದಿ ಸರ್ವಜೀವರ ಹಿತಸಾಧನೆಯಲ್ಲಿ ತೊಡಗಬೇಕೆನ್ನುವುದು ಹೂವಿನ ಸಂದೇಶ. ಕಮಲವು ಕೆಸರಲ್ಲೇ ಅರಳಿ, ಅಲ್ಲೇ ಇದ್ದೂ, ಕಿಂಚಿತ್ತೂ ಮೈಲಿಗೆಯಾಗದೆ, ಒದ್ದೆಯಾಗದೆ ಪವಿತ್ರವಾಗಿರುವುದರಿಂದ ಅದು ಲಕ್ಷ್ಮಿಯ ವಾಸಸ್ಥಾನ, ಸಂಪತ್ತು, ಸಮೃದ್ಧಿ, ಸ್ನೇಹ, ಸಂತೋಷಗಳ ಪ್ರತೀಕ. ಹಾಗಾಗಿ ಅದು ನಮ್ಮ ’ರಾಷ್ಟ್ರಪುಷ್ಪ’ವಾಗಿ ಮಾನ್ಯ. ನಮ್ಮ ಹೃದಯ ಕಮಲಗಳು ಪೂರ್ಣವಾಗಿ ಅರಳಿ ಸತತವಾಗಿ ಸದ್ಗುಣಗಳ ಸೌರಭವನ್ನು ಸುತ್ತಲೂ ಸೂಸಿ ಭಗವದರ್ಪಿತವಾಗುವಂತಹ ರೀತಿಯ ಬಾಳನ್ನು ಬಾಳೋಣ.
Published in Samyukta Karnataka 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ