ಶುಕ್ರವಾರ, ಮಾರ್ಚ್ 17, 2017

ಹಬ್ಬ ಬಂತು ಹಬ್ಬ!
ಜ್ಯೋತಿರ್ಭೀಮೇಶ್ವರ ಸ್ವಾಮಿಯು ಆಷಾಢದ ಅಮಾವಾಸ್ಯೆಯನ್ನು ಬೆಳಗಿಹಬ್ಬವಾಗಿಸಿದ ಕೂಡಲೆ, ಬೆನ್ನ ಹಿಂದೆಯೇ ಹಬ್ಬಗಳ ಸಾಲು ಬಂದು ನಿಲ್ಲುತ್ತದೆ---! ನಾಗಪ್ಪನೂ, ವರಲಕ್ಷ್ಮಿಯು, ಮುದ್ದುಕೃಷ್ಣನು, ಮಂಗಳಗೌರಿಯು, ಶಿವನೂ, ವಿಷ್ಣುವೂ, ಸ್ವರ್ಣಗೌರೀ-ಗಣಪರೂ, ಕಾಳಿಯೂ, ದುರ್ಗೆಯೂ, ಸರಸ್ವತಿಯೂ----ಎಲ್ಲರೂ ಭುವಿಗಿಳಿದು ಬಂದು ಸರಣಿಯಲ್ಲಿ ಹಬ್ಬಮಾಡಿಸಿಕೊಳ್ಳುತ್ತಾರೆ. ಮನೆಮನೆಗಳಲ್ಲೂ ಬಣ್ಣದ ರಂಗವಲ್ಲಿ ತಳಿರುತೋರಣಗಳ ಕಳೆ, ಮಠಮಂದಿರಗಳಲ್ಲಿ ಉತ್ಸವ ಜಾತ್ರೆ ಅನ್ನದಾನದ ಸಂಭ್ರಮ, ಅಂಗಡಿಮಾರುಕಟ್ಟೆಗಳಲ್ಲಿ ಭಾರೀವ್ಯಾಪಾರದ ಸಡಗರ, ನಮಗೆಲ್ಲ ಹೊಸಬಟ್ಟೆ ಭೂರಿ ಔತಣ ಬಂಧುಮಿತ್ರರ ಒಡನಾಟ! ಮಕ್ಕಳಿಗೆ ರಜೆ-ಸಿಹಿತಿಂಡಿ-ಹೊಸಬಟ್ಟೆ-ಆಟಾಸಾಮಾನುಗಳು ಗಿಟ್ಟಿದ ಖುಶಿ! ಬೀದಿಚಪ್ಪರಗಳಲ್ಲಿ ಗೀತ-ನೃತ್ಯ-ನಾಟಕ-ನಲಿದಾಟದಳ ಮೇಳ!
ಪ್ರತಿವರ್ಷವೂ ಅದೇ ಹಬ್ಬ, ಅದೇ ಕಲಾಪಗಳಾದರೂ, ನಮ್ಮ ಸಂತೋಷಸಂಭ್ರಮಗಳಂತೂ ನವನವೀನವಾಗಿಯೇ ಇರುತ್ತವೆ! ಹಬ್ಬ ಎನ್ನುವುದು ಕೇವಲ ಧಾರ್ಮಿಕ ನಂಬಿಕೆಯ ಒಂದು ಆಚರಣೆಯಾಗಿದ್ದಿದ್ದರೆ, ಇಷ್ಟು ಸ್ವಾರಸ್ಯ ಇರುತ್ತಿರಲಿಲ್ಲ ಬಿಡಿ. ಆಸ್ತಿಕರಿಗೆ ಮಾತ್ರ ಅದು ರುಚಿಸುತ್ತಿತ್ತೇನೋ. ಆದರೆ ನಮ ಹಬ್ಬಗಳಲ್ಲಿ ಎಲ್ಲ ಬಗೆಯ ಜನರನ್ನೂ ತನ್ನೊಳಗೆ ಒಳಗೊಳ್ಳುವ ಶಕ್ತಿಯಿದೆ! ನಮ್ಮ ಹಿಂದು ಹಬ್ಬಗಳಲ್ಲಿ ಒಳಹೊಕ್ಕು ನೋಡಿದಾಗ ಜೀವನದ ಹಲವಾರು ಸ್ವಾರಸ್ಯಗಳನ್ನು ಒಟ್ಟಿಗೇ ಕಾಣಬಹುದು!
ದೈನಂದಿನ ಬದುಕಿನ ಏಕತಾನತೆಯನ್ನು ನೀಗಿಸಿ, ನವೋತ್ಸಾಹವನ್ನು ತುಂಬುವುದಕ್ಕೆ ಹಬ್ಬಗಳೇ ಉತ್ತಮ ಸಂದರ್ಭಗಳಿವು. ಇನ್ನು ಹೂವು-ಹಣ್ಣುವ್ಯಾಪಾರಿಗಳು, ಗ್ರಂಧಿಗೆಯ ಸಾಮಾನುಗಳನ್ನು ತಯಾರಿಸುವ ನೂರಾರು ಉದ್ಯಮಿಗಳು, ಅಡುಗೆಯವರು, ಬಳೆ ಅಂಗಡಿಯವರು, ಬಾಳೆಲೆ-ಮಾವಿನೆಲೆ ಮುಂತಾದವನ್ನು ಮಾರುವವರು, ರಂಗೋಲಿ ವ್ಯಾಪಾರಿಗಳು, ಧಾರ್ಮಿಕ ಪುಸ್ತಕವ್ಯಾಪಾರಿಗಳು, ಮಧ್ಯೆ Readymade ಕಲಶ-ಅಲಂಕಾರ-ದೇವತಾಮೂರ್ತಿಗಳನ್ನು ತಯಾರಿಸುವವರು, ----ಇವನ್ನೆಲ್ಲ ನಿರ್ವಹಿಸುವ ಮಧ್ಯವರ್ತಿಗಳು, ಎಲ್ಲರಿಗೂ ಒಳ್ಳೆ ವ್ಯಾಪಾರ! ಹಗಲೂರಾತ್ರಿ ಉಣ್ಣದೆ ಮಲಗದೆ ಬೀದ್ಗಳಲ್ಲಿ ವ್ಯಾಪಾರ ಮಾಡುತ್ತಾರೆ! ’Rate ತುಂಬನೇ ಜಾಸ್ತಿಯಾಯಿತು ರೀ….!!ಎಂದು ಗೊಣಗಾಡಿದರೂ ಅದನ್ನೆಲ್ಲ ಯಥಾಶಕ್ತಿ-ಯಥಾಪ್ರೀತಿ ಕೊಂಡು ಪೂಜೆಹಬ್ಬಗಳನ್ನು ಮಾಡುವುದಂತೂ ತಪ್ಪದು! ಹೀಗೆ ಚಿಕ್ಕ ಹಾಗೂ ದೊಡ್ಡ ಮಟ್ಟದ ವ್ಯಾಪಾರಿಗಳಿಗೆಲ್ಲ ಹಬ್ಬಗಳು ನಿಜಕ್ಕೂ ಲಕ್ಷ್ಮೀಕಟಾಕ್ಷದ ಸಂದರ್ಭಗಳು! ಗಣೇಶನಹಬ್ಬ, ನವರಾತ್ರಿ, ರಾಮನವಮಿ, ಮುಂತಾದ ಸಂದರ್ಭಗಳಲ್ಲಿ ಗೀತ-ನೃತ್ಯ-ನಾಟಕ ಕಲಾವಿದರಿಗೆ demand demand! (ಹಾಡಲು ಕುಣಿಯಲು ಬಾರದವರೂ ಕೂಡ ತಮ್ಮ ತಮ್ಮ ಬೀದಿಕೇರಿಗಳಲಿನ ಗಣಪನ ಚಪ್ಪರದೊಳಗೆ ನುಸುಳಿ Mike ಹಿಡಿದು ಒಂದಿಷ್ಟು ಗೀತ-ನೃತ್ಯಸೇವೆಮಾಡಿ, ಆಸೆ ತೀರಿಸಿಕೊಳ್ಳುತ್ತಾರೆ!) ಕಲಾವಿದರನ್ನು ಒದಗಿಸಿಕೊಡುವ Event managers, ವಾಹನಚಾಲಕರ ಜೇಬುಗಳಿಗೂ ಒಳ್ಳೆದಕ್ಷಿಣೆ ದಕ್ಕುತ್ತದೆ. ಪುರೋಹಿತರಂತೂ ಮನೆಮನೆಗಳಲ್ಲೂ, ಬೀದಿಚಪ್ಪರಗಳಲ್ಲೂ ಒಂದಾದ ಮೇಲೊಂದು ಕಡೆ ತೆರಳಿ ಪೂಜೆ ಮಾಡಿಸುತ್ತ, ದಕ್ಷಿಣೆ ಪಡೆಯುತ್ತ, ಮುಂದುವರೆಯುತ್ತಾರೆ! ಕಡಿಮೆ ದಕ್ಷಿಣೆಕೊಡಬಲ್ಲ ಚಿಕ್ಕ ಚಪ್ಪರಗಳಲ್ಲಿಮರಿಪೂಜಾರಿಗಳು ಹಾಜರಾಗಿ Profesional experience ಪಡೆಯಲು ಅವಕಾಶ ಇದ್ದೇ ಇದೆ! ಹಬ್ಬಹರಿದಿನ್ಬಗಳಲ್ಲಿ ತೀರ್ಥಕ್ಷೇತ್ರಗಳಲ್ಲಿ ಸೇರುವ ಜನಸಂದಣಿಯನ್ನು ನಿಭಾಯಿಸಲಂತೂ ಪೋಲಿಸರೇ ಬೇಕಾಗುತ್ತಾರೆ! ಅಲ್ಲಿ ನೆರೆಯುವ ಸಂತೆ-ಜಾತ್ರೆಗಳಲಿ ಊರುಕೇರಿಹಳ್ಳಿಗಳ ಸಣ್ಣ ವ್ಯಾಪಾರಿಗಳಿಗಾಗುವ ಲಾಭದ ಬಗ್ಗೆ ಮತ್ತೆ ಹೇಳಬೇಕಾಗಿಯೇ ಇಲ್ಲ!
ತಮ್ಮ ವ್ಯಾಪಾರ, ಲಾಭಗಳನ್ನು ದಾನಧರ್ಮಗಳ ಮೂಲಕ ಹಂಚಿಕೊಂಡು ಪುಣ್ಯಕ್ಕೆ convert ಮಾಡಿಕೊಳ್ಳಬಯಸುವವರು ಅನ್ನದಾನ, ವಸ್ತ್ರದಾನ, ಗೋದಾನ, ಭೂದಾನ ಹಾಗೂ ಹಲವಾರು ಸೇವಾಕಲಾಪಗಳಿಗೆ ತನು-ಮನ-ಧನಗಳಿಂದ ಸಹಾಯ ಒಡ್ದಲು ಹಬ್ಬಗಳು ಉತ್ತಮ ಸಂದರ್ಭಗಳು. ಇಂತಹ ದಾನಗಳಿಂದ ಪ್ರಯೋಜನವನ್ನು ಪಡೆಯಲು ಕಾತರರಾಗಿ queue ನಿಲ್ಲುವ ಬಡಬಗ್ಗರಿಗೂ ಸಂತಸದ ಕ್ಷಣಗಳಿವು.
ಹಬ್ಬದಂದು ಆಯಾ ದೇವತೆಯ ಸ್ವರೂಪ, ಕಥೆ, ಮಹಿಮೆಗಳನ್ನು ಹೇಳುತ್ತ ಕೇಳುತ್ತ ಓದುತ್ತ, ಧ್ಯಾನಿಸುತ್ತ ಆಸ್ವಾದಿಸುತ್ತ ಧನ್ಯತೆಯ ಭಾವವನ್ನು ಬೆಳೆಸಿಕೊಳ್ಳುವ ಭಕ್ತರ ಅಂತರಂಗದ ಲಾಭ ಎಲ್ಲಕ್ಕಿಂತ ಮಿಗಿಲಾದದ್ದು. ಹಬ್ಬದ ತಯ್ಯಾರಿ, ಸಾಮಾನು ಸಂಗ್ರಹ ಅಥವಾ ಜಪವ್ರತಾಚರಣೆಗಳು ಹಿಂದಿನ ದಿನಗಳಿಂದಲೇ ಪ್ರಾರಂಭವಾಗಿರುತ್ತದೆ. ಹಬ್ಬದಂದು ಮುಂಜಾನೆ ಬೇಗನೆ ಎದ್ದು, ಅಭ್ಯಂಗವನ್ನು ಮಾಡಿಕೊಂಡು, ಮನೆಯನ್ನು ಸಿಂಗರಿಸಿ, ನಾವೂ ಸಾಲಂಕೃತರಾಗಿ, ವ್ರತಹಿಡಿದು, ಪೂಜೆಮಾಡಿ, ಮಡಿಯಲ್ಲಿ ಮಾಡಿದ ಭಕ್ಷ್ಯಭೋಜ್ಯಗಳನ್ನು ನೈವೇದ್ಯ ಮಾಡಿ, ಸುಮಂಗಳಿಯರಿಗೆ ತಾಂಬುಲವಿತ್ತು, ಮಕ್ಕಳಿಗೆ ಕಾಣಿಕೆ ಸಿಹಿತಿನಿಸುಗಳನ್ನಿತ್ತು, ಗುರುಹಿರಿಯರಿಗೆ ವಂದಿಸಿ, ಬಂಧುಮಿತ್ರರನ್ನು ಆಹ್ವಾನಿಸಿ ಭೋಜನ-ತಾಂಬೂಲಗಳನ್ನಿತ್ತು ಅದೆಷ್ಟು ಸಂತೋಷಪಡುತ್ತೇವೆ! ಯೋಚಿಸಿ ನೋಡಿದರೆ, ಹಬ್ಬದಂದು ಬೇಗನೆ ಏಳಬೇಕು, ಮಧ್ಯಾಹ್ನದ ನಿದ್ರೆಯೂ ಗ್ಯಾರಂತಿ ಇಲ್ಲ. ಕಾಲಕಾಲದ ಕಾಫಿ, ತಿಂಡಿ, ಸೋಫಾದಲ್ಲಿ ಒರಗಿ ನೋಡುವ Breaking News, Newspaper Headlines ಎಲ್ಲವೂ ಕೈತಪ್ಪುತ್ತವೆ! ಆದರೂ ನಮಗೆ ಖುಶಿಗೇನೂ ಕಡಿಮೆ ಇಲ್ಲ! ದೇವರಧ್ಯಾನ, ಜಪ, ಉಪವಾಸದ ಗಂಭೀರಭಾವ ಹಾಗೂ ಅಡುಗೆ ಔತಣ ಬಂಧುಮಿತ್ರರ ಮಿಲನದ ಸಡಗರಗಳು ಅದೆಲ್ಲವನ್ನೂ ಮರೆಸಿಬಿಟ್ಟಿರುತ್ತದೆ! ಹೀಗೆ ತ್ಯಾಗದಲ್ಲೂ ಸುಖವನ್ನು ಅನುಭವಿಸುವ ಅಸಾಧಾರಣ ಸಂದರ್ಭಗಳು ಹಬ್ಬಗಳು.
ನಿಜ ಹಬ್ಬಗಳ ಉದ್ದೇಶವೂ ಅದೆ. ನಮ್ಮ ಹಿಂದು ಹಬ್ಬಗಳಲ್ಲಿ ವ್ರತ ಮತ್ತು ಉತ್ಸವ ಎಂಬ ಎರಡು ಭಾಗಗಳಿವೆ. ವ್ರತದ ಭಾಗದಲ್ಲಿ ಬೇಗನೆ ಏಳುವುದು, ಉಪವಾಸ, ಮಡಿ, ಮೌನ, ಪೂಜೆ, ಕೈಂಕರ್ಯ, ಸೇವೆ, ದಾನಾದಿಗಳನ್ನು ಮಾಡುವುದು ಸೇರಿವೆ. ಬಳಿಕ ಬರುವ ಉತ್ಸವಾಂಶದಲ್ಲಿ ಬಂಧುಮಿತ್ರರೊಂದಿಗೆ ಔತಣ, ಗೀತನೃತ್ಯವಿನೋದ, ಓಕಳಿ, ಹೊಸಬಟ್ಟೆಧರಿಸುವುದು, ಮನೆಮನೆಗೂ ಹೋಗಿ ತಾಂಬೂಲಕೊಡುವುದು ಕೊಳ್ಳುವುದು, ತೀರ್ಥಾಯಾತ್ರೆ, ಕಥಾಶ್ರವಣ ಇತ್ಯಾದಿಗಳು ನಮ್ಮ ಮನಸ್ಸನು ರಂಜಿಸುವ ಅರಳಿಸುವ ಸಾಧನಗಳು. ಎರಡು ಅಂಶಗಳು ಇರುವುದರಿಂದಲೇ ಆಸ್ತಿಕರೂ-ನಾಸ್ತಿಕರೂ, ಮುಗ್ಧರೂ-ಪ್ರಬುದ್ಧರೂ ಸಾಧಕರೂ-ಸಾಮಾನ್ಯರೂ, ಬಾಲಕರೂ-ವೃದ್ಧರೂ, ಬಡವರೂ ಬಲ್ಲಿದರೂ, ಸ್ತ್ರೀಯರೂ ಪುರುಷರೂ ಎಲ್ಲರೂ ಒಮ್ಮನದಿಂದ ಪಾಲ್ಗೊಂಡು ಸಂಭ್ರಮಿಸಲು ಅನುಕೂಲವಾಗಿದೆ. ಸಾವಿರಾರು ವರ್ಷಗಳ ಕಾಲ ನಿರಂತರ ಆಕ್ರಮಣ, ಮತಾಂತರ, ಶೊಷಣೆ, ಅಪಮಾನ, ಮಾನನಷ್ಟ, ಪ್ರಾಣನಷ್ಟಗಳನ್ನು ಅನುಭವಿಸಿ ಬಳಲಿದ ಹಿಂದು ಸಮಾಜವು, ಮತ್ತೆ ಮತ್ತೆ ನವಚೈತನ್ಯವನ್ನು ತಾಳಿ ಜೀವಂತವಾಗಿ ಉಳಿಯಲು ಹಬ್ಬಹರಿದಿನ್ಬಗಳೆ ಮುಖ್ಯ ಕಾರಣ ಎನ್ನುವುದರಲ್ಲಿ ಸಂದೇಹವೇ ಇಲ್ಲ!
ವರ್ಷದ ಹಬ್ಬಗಳ ಪರ್ವ ಇನ್ನೇನು ಬಂದು ಹೊಸ್ತಿಲಲ್ಲಿ ನಿಂತಿದೆ.... ನಮ್ಮ ಮನೆಮನಗಳಲ್ಲಿ ಬೀದಿಕೇರಿಗಳಲ್ಲಿ ದೇವತೆಗಳು ನಲಿದುನರ್ತಿಸಲಿದ್ದಾರೆ, ಹರಸಿ ಹಿತವೀಯಲಿದ್ದಾರೆ. ನಮ್ಮಲ್ಲಿ ಶಾಂತಿ, ಸಮೃದ್ಧಿ, ಸಂತೋಷ ಸ್ನೇಹಸೌಹಾರ್ದತೆಗಳು ನೆಲೆನಿಲ್ಲಲಿ ಎಂದು ಪ್ರಾರ್ಥಿಸೋಣ!
Author- Dr Arathi V B
Published in Sampada saalu magazine 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ