ಶುಕ್ರವಾರ, ಮಾರ್ಚ್ 17, 2017

ಋಷಿಪಂಚಮೀ
ಭಾದ್ರಪದ ಶುದ್ಧಪಂಚಮಿಯು (ಗಣಪತಿಹಬ್ಬದ ಮಾರನೆಯ ದಿನ) ಋಷಿಪಂಚಮಿ ಎನ್ನುವ ಆಚರಣೆಗೆ ಪ್ರಸಿದ್ಧ. ಭಾರತದ ಹಲವು ಪ್ರಾಂತಗಳಲ್ಲಿ ಹಾಗೂ ನೇಪಾಳದಲ್ಲಿ ಇದು ಪ್ರಸಿದ್ಧ ಆಚರಣೆ.
ನಾಲ್ಕುವೇದಗಳನ್ನು ತಮ್ಮ ಜ್ಞಾನದ ಬಲದಿಂದ ದಕ್ಕಿಸಿಕೊಂಡು ಮನುಕುಲಕ್ಕೆ ಧಾರೆಯೆರೆದುಕೊಟ್ಟ ಋಷಿಗಳನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುವ ದಿನ ಇದು. ಉತ್ತರದಿಕ್ಕಿನ ಧ್ರುವ ನಕ್ಷತ್ರದ ಸುತ್ತಲೂ ಸಂಚರಿಸುವ ಸಪ್ತರ್ಷಿಮಂಡಲವು ಆ ಋಷಿಗಳ ಪ್ರತ್ಯಕ್ಷಸ್ವರೂಪ ಎಮ್ದು ನಂಬುತ್ತೇವೆ.
ಉಪಾಕರ್ಮ ಹಬ್ಬದಲ್ಲಿ ಪುರುಷರಿಗೆ ಪ್ರಾಯಶ್ಚಿತ್ತ-ಋಷಿತರ್ಪಣಾದಿಗಳನ್ನು ವಿಧಿಸಿರುವಂತೆ ಋಷಿಪಂಚಮಿಯಂದು ಸ್ತ್ರೀಯರಿಗೆ ಪ್ರಾಯಶ್ಚಿತ್ತರೂಪದ ವ್ರತವನ್ನು ವಿಧಿಸಲಾಗಿದೆ.
ಯೌವನಾವಸ್ಥೆಯಲ್ಲಿದ್ದಾಗ ವಯಸ್ಸಿಗೆ ಸಹಜವಾದ ರೂಪಮದದಿಂದಲೋ, ಚಾಪಲ್ಯ ಅಥವಾ ಗರ್ವದಿಂದಲೋ, ಮುಟ್ಟಿನಕಾಲದಲ್ಲಿ ಮಾಡಿರಬಹುದಾದ ಆಚಾರೋಲ್ಲಂಘನೆಯಿಂದಲೋ ಅಥವಾ  ತಿಳಿದೋ ತಿಳಿಯದೆಯೋ ಮಾಡಿರಬಹುದಾದ ಎಲ್ಲ ಪಾಪಗಳಿಗಾಗಿಯೂ ಮನಃಪೂರ್ವಕವಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೇ ಇಲ್ಲಿನ ಉದ್ದೇಶ. ಗುರುಸ್ವರೂಪರಾದ ಋಷಿಗಳನ್ನು ಸ್ಮರಿಸಿ, ಪೂಜಿಸಿ ಕ್ಷಮೆಯನ್ನು ಯಾಚಿಸಲಾಗುತ್ತದೆ. ಆಚರಣೆಯ ಶೈಲಿಯಲ್ಲಿ ಪ್ರಾಂತೀಯ ವ್ಯತ್ಯಾಸಗಳು ಕಾಣುತ್ತವೆಯಾದರೂ, ಭಾವ ಸಮಾನವಾದದ್ದು.
ಬ್ರಾಹ್ಮೀಮುಹೂರ್ತದಲ್ಲೆದ್ದು ‘ಅಗಾಧ’ ಎನ್ನುವ ಒಂದು ಮೂಲಿಕೆಯ ೧೦೮ ಚೂರುಗಳ ಕೂರ್ಚದಿಂದ ಹಲ್ಲುಗಳನ್ನುಜ್ಜಿ ನೂರೆಂಟು ಬಾರಿ ಬಾಯನ್ನು ಮುಕ್ಕಳಿಸಿ, ಕೈಗಳನ್ನು ೧೦೮ ಬಾರಿ ತೊಳೆದು, ಪ್ರಾತರ್ವಿಧಿಗಳನ್ನು ಪೂರೈಸಿ ಸ್ನಾನ ಗೈಯಲಾಗುತ್ತದೆ (ಈ ಎಲ್ಲ ನಿಯಮಗಳನ್ನು ಈಗಿನ ಕಾಲದಲ್ಲಿ ಸಮಗ್ರವಾಗಿ ಪಾಲಿಸುವವರು ವಿರಳ) ಆಷಾಢ ಹಾಗೂ ಶ್ರಾವಣಮಾಸಗಳಲ್ಲಿ ಚಿಗುರಿ, ಬೆಳೆದು, ಭಾದ್ರಪದದಲ್ಲಿ ಹಣ್ಣಾಗುವ ಈ ಮೂಲಿಕೆಯು ಚಿಕಿತ್ಸಾತ್ಮಕ ಗುಣವುಳ್ಳದ್ದು. ಹಲ್ಲುನೋವು, ಹಲ್ಲುಗಳ ಸಡಿಲತೆ, ಕೆಮ್ಮು, ಹೊಟ್ಟೆಯುಬ್ಬರ ಇತ್ಯಾದಿ ಬಾಧೆಗಳಿಗೆ ಉತ್ತಮವಾದ ಮದ್ದಾಗಿರುವುದಲ್ಲದೆ ಇಲಿ, ಚೇಳು ಅಥವಾ ನಾಯಿ ಕಚ್ಚಿದಾಗಲೂ ಈ ಮೂಲಿಕೆಯಿಂದ ಚಿಕಿತ್ಸೆ ಮಾಡಲಾಗುತ್ತದಂತೆ. ಸರ್ವಪಾಪಶೋಧಕವೆಂದು ನಂಬಲಾದ ‘ದತಿವಾನ್’ ಎಂಬ ಗಿಡದ ಬುಡದ ಕೆಮ್ಮಣ್ಣನ್ನು ಮೈಗೆ ಲೇಪಿಸಿಕೊಂಡು ನದಿ, ಕೆರೆ ಅಥವಾ ಭಾವೀನೀರಲ್ಲಿ ಸ್ನಾನ ಮಾಡಲಾಗುತ್ತದೆ. ಸ್ನಾನಾನಂತರ ‘ಪಂಚಗವ್ಯ’ವನ್ನು ಸೇವಿಸಲಾಗುತ್ತದೆ. (ಪಂಚಗವ್ಯ ಎಂದರೆ ಹಾಲು, ಮೊಸರು, ಬೆಣ್ಣೆ, ಗಂಜಳ ಹಾಗೂ ದರ್ಭೆಗಳ ನಿರ್ದಿಷ್ಟಪ್ರಮಾಣದಲ್ಲಿ ಬೆರಸಿದ ತೀರ್ಥ). ಹೊಟ್ಟೆಯ, ಚರ್ಮದ ಹಾಗೂ ಶ್ವಾಸಕೋಶದ ಅನೇಕ ತೊಂದರೆಗಳನ್ನು ನಿವಾರಿಸುವ ಶಕ್ತಿ ಈ ಪಂಚಗವ್ಯಕ್ಕಿರುವುದು ಅನುಭವಸಿದ್ಧ.
ದೀಪ, ಕಲಶ ಹಾಗೂ ಗಣಪತಿಪೂಜೆಗಳನ್ನು ಮಾಡಿದ ಬಳಿಕ ಮರದ ಹಲಗೆಯ ಮೇಲೆ ಅಡಕೆಯ ಚೂರುಗಳನ್ನು ವೃತ್ತಾಕಾರವಾಗಿ ಜೋಡಿಸಿಟ್ಟು, ಸಪ್ತರ್ಷಿಗಳನ್ನು (ಕಾಶ್ಯಪ, ಅತ್ರಿ, ಭಾರದ್ವಾಜ, ಗೌತಮ, ಜಮದಗ್ನಿ, ವಸಿಷ್ಠ, ವಿಶ್ವಾಮಿತ್ರ) ಹಾಗೂ ವಸಿಷ್ಠಪತ್ನಿಯಾದ ಅರುಂಧತೀ ದೇವಿಯನ್ನೂ ಆವಾಹನೆ ಗೈದು ಪೂಜಿಸಿ, ಸತ್ಪಾತ್ರರಿಗೆ ಅನ್ನ, ವಸ್ತ್ರ, ಉಪಾಯನ, ದಕ್ಷಿಣೆಗಳ ದಾನ ಕೊಡಲಾಗುತ್ತದೆ. ವ್ರತಧಾರಿಣಿಯರಿಗೆ ಈ ದಿನ ಧಾನ್ಯಗಳ ಸೇವನೆ ಸರ್ವಥಾ ವರ್ಜ್ಯ. ಗಡ್ಡೆ-ಗೆಣಸು-ಹಣ್ಣುಗಳನ್ನು ಸೇವಿಸುತ್ತ ಆಚಾರಶೀಲರಾಗಿದ್ದು ಪ್ರಸನ್ನಚಿತ್ತರಾಗಿ ದಿನವನ್ನು ಕಳೆಯಬೇಕು.
ವ್ರತಕಥೆಯ ಪ್ರಕಾರ ಜಯಶ್ರೀ ಎನ್ನುವ ಸ್ತ್ರೀ ತನ್ನ ಯೌವನದ ಕಾಲದಲ್ಲಿ ಮಾಡಿದ ಅನಾಚಾರಗಳ ಪರಿಣಾಮವಾಗಿ ದುರ್ಗತಿಯನ್ನು ಪಡೆದಳಂತೆ. ಋಷಿಗಳ ಕರುಣೆಯಿಂದ ಈ ವ್ರತವನ್ನು ತಿಳಿದು ಆಚರಿಸಿ ಪಾಪಮುಕ್ತಳಾದಳಂತೆ.
ಜೈನಧರ್ಮೀಯರಿಗೂ ಋಷಿಪಂಚಮಿಯಂದು ಮೊದಲ ತೀರ್ಥಂಕರನಾದ ಋಷಭದೇವನನ್ನು (ಆದಿನಾಥ) ಪೂಜಿಸುತ್ತಾರೆ. ಶ್ವೇತಾಂಬರ ಪಂಗಡದವರು ಈ ದಿನದಂದು ‘ಪರ್ಜೂಷಣ್ ಮಹಾಪರ್ವ’ದ ಸಮಾರೋಪವನ್ನು ಆಚರಿಸಿದರೆ ದಿಗಂಬರ ಪಂಗಡದವರು ಮಹಾಪರ್ವವನ್ನು ಈ ದಿನದಿಂದ ಪ್ರಾರಂಭಿಸುತ್ತಾರೆ. ಸರ್ವಪಾಪಗಳ ಪರಯಶ್ಚಿತ್ತವೇ ಇಲ್ಲಿಯ ಉದ್ದೇಶವೂ ಆಗಿದೆ. ನೇಪಾಳ ಹಾಗೂ ಉತ್ತರಭಾರತದ ಹಲವು ಪ್ರಾಂತಗಳಲ್ಲಿ ‘ಹರ್ತಾಲಿಕ ತೀಜ್ ವ್ರತ’ದ ಮೂರುದಿವಸಗಳ ಉಪವಾಸವನ್ನು ಋಷಿಪಂಚಮಿಯ ದಿನದಂದು ಮುಗಿಸುತ್ತಾರೆ.

ಮನುಷ್ಯನ ಅಂತರಂಗ ಮಾಡಿದ ಪಾಪಗಳ ನೆನಪಿನಿಂದ ಹುಯ್ದಾಡುತ್ತಿರುತ್ತದೆ. ಹೊರಗಡೆಯ ಪ್ರಪಂಚಕ್ಕೆ ತಿಳಿಯದಿದ್ದರೂ ‘ಮನವರಿಯದ ಕಳ್ಲತನವಿಲ್ಲವಲ್ಲ’! ಹಾಗಾಗಿ ತನ್ನೊಳಗೆ ತಾನೆ ವ್ಯಥೆ ಪಡುವುದು ತಪ್ಪದು. ಪಾಪಭೀತಿಯ ಈ ಸೂಕ್ಷ್ಮ ಭಾವತರಂಗಗಳು ಒಳಗೊಳಗೇ ಕಾಡಿ, ಪೀಡಿಸಿ, ಮನಸ್ಸಂತೋಷವನ್ನು ಕುಗ್ಗಿಸುತ್ತವೆ. ಹಾಗಾಗದಿರುವಂತೆ, ಸ್ವಯಂಪ್ರೇರಣೆಯಿಂದ ಪ್ರಾಯಶ್ಚಿತ್ತವನ್ನು ಮಾಡಿಕೊಂಡು ಮನಸ್ಸನ್ನು ಹಗುರಗೊಳಿಸಿಕೊಳ್ಳಲು, ಪ್ರಸನ್ನಚಿತ್ತರಾಗಲು ಇದೊಂದು ‘ಮನೋವೈಜ್ಞಾನಿಕ ಉಪಾಯ’ ಎನ್ನಬಹುದು! ಅಂತರೀಕ್ಷಣೆ ಹಾಗೂ ಆತ್ಮಶುದ್ಧೀಕರಣವನ್ನು ಉದ್ದೇಶಿಸಿ ಸಾತ್ವಿಕ ಮನದಿಂದ ಈ ವ್ರತವನ್ನು ತಾಳುವುದರಿಂದ ಪಾಪಭೀತಿ ಕುಗ್ಗಿ, ಧರ್ಮಪ್ರಜ್ಞೆ ಜಾಗೃತವಾಗುತ್ತದೆ. ಅಂತಹ ಪ್ರಸನ್ನ ಮನೋಭೂಮಿಕೆಯಲ್ಲಿ ಮಾತ್ರವೇ ಭಾವೋನ್ನತಿ ಸಾಧ್ಯ ಅಲ್ಲವೆ?

Published in Samyukta Karnataka 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ