ಶುಕ್ರವಾರ, ಮಾರ್ಚ್ 17, 2017

ಆತಂಕವನ್ನು ಬಿಟು ಆತ್ಮಶಕ್ತಿಸಂಪನ್ನರಾಗೋಣ ಬನ್ನಿ!
"ಅಯ್ಯೋ ನಮ್ಮ ಹೆಂಗಸರ ಪಾಡೇ ಇಷ್ಟು, ನಮ್ಮ ಇತಿಮಿತಿಗಳಲ್ಲಿ ಹೆಚ್ಚು ಏನೂ ಮಾಡೋಕಾಗೋದಿಲ್ಲ', 'ಇದು ಪುರುಷ ಪ್ರಪಂಚ, ನಾವೆಷ್ಟಾದರೂ ಹೆಣ್ಣು ಹೆಂಗಸರು', " ನಮ್ಮ ಸಮಾಜ ಹೆಣ್ಣೆಗೇ ಶತ್ರು, ಏನ್ ಮಾಡೊಕೂ ಬಿಡೊಲ್ಲ"- ಭಾವನಗಳು ತನ್ನ ಆತ್ಮಶಕ್ತಿಯನ್ನು ಮರೆತಂತಹ ಸ್ತ್ರೀಯಲ್ಲಿ ತಲೆದೋರುತ್ತವೆ. ಇನ್ನು, ಹರೆಯದ ವಯಸ್ಸಿನ ಯುವತಿ 'ತನ್ನನ್ನು' ತಾನು ಮರೆತಲ್ಲಿ, ತನ್ನ ಜೀವನೋದ್ದೇಶವನ್ನು ಕಾಣದಾದಲ್ಲಿ ಕ್ಷುಲ್ಲಕ ಬಾಧೆಗಳಿಗೂ ಕುಗ್ಗಿಹೋಗುವುದುಂಟು. 'ತನಗೆ ಮೊಡವೆಗಳು ಜಾಸ್ತಿ ಇವೆ' ಎಂದೋ, 'ಕೂದಲು ಚೆನ್ನಾಗಿಲ್ಲ' ಎಂದೋ, 'ತನ್ನ ಸೊಂಟ ತುಂಬ ದಪ್ಪ' ಎಂದೋ, 'ತನ್ನ ಮೈಮಾಟ ಆಕರ್ಷಕವಾಗಿಲ್ಲ' ಎಂದೋ, 'ತಾನು ಅಂದುಕೊಂಡಷ್ಟು ಮಾರ್ಕ್ಸ್ ಬರಲಿಲ್ಲ' ಎಂದೋ, 'ತಾನು ಬಯಸಿದ ಹುಡುಗ ತನ್ನತ್ತ ನೋಡಿ ಪ್ರತಿಸ್ಪಂದಿಸಲಿಲ್ಲ' ಎಂದೋ, 'ತನ್ನ ಗೆಳತಿಯಂತೆ ತನ್ಗೆ ಯಾವುದೋ ಅದೃಷ್ಟ ದಕ್ಕಲಿಲ್ಲವೆಂದೋ', 'ತಾನು ಬಯಸಿದ ಉಡುಪು ಧರಿಸಲು ಪೋಷಕರು ಬಿಡಲಿಲ್ಲ' ಎಂದೋ ಕೊರಕೊರಗಿ ಮಾನಸಿಕ ಒತ್ತಡದಂತಹ ಗಂಭೀರ ಸ್ಥಿತಿಗೆ ಜಾರುವ ಯುವತಿಯರಿದ್ದಾರೆ!
ಜಾಹಿರಾತುಗಳ ಕೃತಕ ಸೌಂದರ್ಯದ ಕಲ್ಪನೆಯನ್ನು ವಾಸ್ತವದಲ್ಲಿ ಹುಡುಕುವ ಇವರ ಹುಚ್ಚುತನಕ್ಕೆ ಏನು ಹೇಳೋಣ? ಮೂರು ಹೊತ್ತೂ 'ಯಾವ ಶ್ಯಾಂಪೂ, ಯಾವ ಸೋಪು, ಕ್ರೀಮ್, ಲೋಶನ್ ಗಳನ್ನು ಬಳಸಿದರೆ ನಾವು ಥಳಥಳಿಸಬಹುದು' ಎನ್ನುವ ಏಕೈಕ ಧ್ಯಾನದಲ್ಲಿ ಮೈಮರೆಯುವ ಯುವತಿಯರು 'ತಾನು ಒಂದು 'ವ್ಯಕ್ತಿ', ಒಂದು 'ಶಕ್ತಿ', 'ತಾನು ಸಾಧಿಸಬಹುದಾದದ್ದು ಬಹಳಷ್ಟು ಇದೆ' ಎನ್ನುವುದನ್ನೆಲ್ಲ ಮರೆತು, ತನ್ನನ್ನು ತಾನು ಕೇವಲ ಒಂದು ಸೊಗಸಿನ ಮುದ್ದೆ, ಒಯ್ಯಾರದ ಬೊಂಬೆ ಎಂದು ಭ್ರಮಿಸಿದಲ್ಲಿ ಆಕೆ ಏನನ್ನು ತಾನೆ ಸಾಧಿಸಲು ಸಾಧ್ಯ? ಕ್ಷಣಿಕ ಸೌಂದರ್ಯವನ್ನು ನೆಚ್ಚಿ ಬಾಳುವ ಇವರು ಮೇಲರಿಮೆನ್ನೋ ಕೀಳರಿಮೆಯನ್ನೋ ಬೆಳೆಸಿಕೊಂಡು, ಹಿಗ್ಗುತ್ತಲೋ ಕುಗ್ಗುತ್ತಲೋ ಸಮಯ ವ್ಯರ್ಥಗೊಳಿಸಿಕೊಳ್ಳುತ್ತಾರೆ
ಸ್ತ್ರೀಯ ಯಶಸ್ಸಿನ ಗುಟ್ಟು ಅವಳ ಒಳಗೇ ಇದೆ. ಹೊರಗಡೆಯ ವ್ಯಕ್ತಿಗಳನ್ನೋ, ವಸ್ತು, ಅವಕಾಶ, ಅನುಕೂಲಾದಿಗಳನ್ನೇ ನೆಚ್ಚಿ ಮುನ್ನಡೆಯುವೆನೆಂದು ಕನಸು ಕಾಣುವ ಸ್ತ್ರೀ ನಿಜಕ್ಕೂ 'ಸ್ವತಂತ್ರ ಸಾಧಕಿ'ಯಾಗಲಾರಳು. ಹಾಗೆ ನೆಚ್ಚಿದವಳು ಸುರಕ್ಷಿತಳೂ ಅಲ್ಲ, ಶಾಶ್ವತವಾದ ನೆಮ್ಮದಿಯನ್ನೂ ಪಡೆಯಲಾರಳು.
ಅಂದ, ಚೆಂದ, ಯೌವನ, ಡಿಗ್ರೀ, ಉದ್ಯೋಗ, ಹಣಗಳು ಒತ್ತಟ್ಟಿಗಿರಲಿ, ಅವುಗಳ ಪಾತ್ರ ಇದ್ದರೂ ಅದಕ್ಕೆ ಮಿತಿಯಿದೆ. ಆದರೆ ಅದೆಲ್ಲಕ್ಕಿಂತ ತನ್ನ ಆತ್ಮಬಲವನ್ನಷ್ಟೇ ನೆಚ್ಚುವ ಸರ್ವತಂತ್ರ ಸ್ವತಂತ್ರ ಭಾವ ಸ್ತ್ರೀಯಲ್ಲಿರಬೇಕು. ಏಕೆಂದರೆ ಬಾಳ ಹಾದಿಯಲ್ಲಿ ನಾವು ಅವಲಂಬಿಸುವ ವ್ಯಕ್ತಿ, ವಸ್ತು, ಅವಕಾಶಾದಿ ಮೂಲಗಳಿಂದಲೇ ದ್ರೋಹವೋ, ಸೋಲು, ಗೆಲುವು, ವಂಚನೆ, ನಿರಾಶೆ, ಅಪಹಾಸ್ಯ, ವಿರೋಧ ಮುಂತಾದವೋ ಒದಗಬಹುದು. ಆಗ ನಾವು ಕುಗ್ಗಿಹೋಗುವ ಸಾಧ್ಯತೆ ಇರುತ್ತದೆ. ಹಾಗಾದಾಗ ಸ್ತ್ರೀಯು ಗೋಳಾಡಿ, ಗೋಗರೆದು, ಕಾಡಿಬೇಡಿ ಅಥವಾ ಶಾಪಹಾಕುತ್ತ ಸೊರಗುವ ದುಃಸ್ಥಿತಿಗೆ ಇಳಿದಾಳು! ಆದರೆ ಹೊರಗಡೆಯ ಸಂದರ್ಭಗಳು ಚೆನ್ನಾಗಿ ಇರಲಿ ಇಲ್ಲದಿರಲಿ, ಸ್ತ್ರೀಯಂತೂ ತನ್ನ ಆತ್ಮಶಕ್ತಿಯನ್ನಷ್ಟೇ ನೆಚ್ಚಿ ನಡೆದಾಗ, ಆಚೆಯ ಹೊಡೆತಗಳಿಗೆ ಸೋತು ನೆಲ ಕಚ್ಚುವುದಿಲ್ಲ, ಬದಲಾಗಿ ಆತ್ಮನಿರೀಕ್ಷಣೆ ಮಾಡಿಕೊಳ್ಳುತ್ತಾಳೆ. ಮತ್ತೊಮ್ಮೆ ಮಕೊಡವಿ ಮೇಲೆದ್ದು ಸಾಧನೆಯನ್ನು ಮುಂದುವರೆಸುತ್ತಾಳೆ. ಅವರಿವರನ್ನು ಶಪಿಸುತ್ತ, ಸ್ತ್ರೀಜನ್ಮವನ್ನು ಹಳಿಯುತ್ತ, ಗೋಳಾಡಿ ಬಳಲುವ ಬದಲು, ಎಲ್ಲ ಕಷ್ಟ ನಷ್ಟ ಅವಮಾನ ನಿರಾಶೆಗಳನ್ನು ನುಂಗಿ, ಸ್ವಶಕ್ತಿಯಿಂದ ಎದ್ದು ನಿಲ್ಲುತ್ತ, ನಡೆದು ಗುರಿ ಸೇರುವ ಶಕ್ತಿಶಾಲಿನಿಯಾಗುತ್ತಾಳೆ. ಅಂತಹ ಸ್ತ್ರೀಯ ಮನಸ್ಸಿನ ಪುಟಗಳಲ್ಲಿ 'ಆತಂಕ' ಎನ್ನುವ ಶಬ್ದಕ್ಕೆ ಆಸ್ಪದವೇ ಇರದು!
ಆತಂಕ ಎನ್ನುವುದು ಆಗುವುದಾದರೂ ಯಾವಾಗ?- ಮನಸ್ಸು ತನ್ನ ಸಮತ್ವವನ್ನು, ಸ್ಥೈರ್ಯವನ್ನು ಕಳೆದುಕೊಂಡಾಗ ಅಲ್ಲವೆ
ನಾವು ಉದ್ಯಾನವನದಲ್ಲಿ ಆರಾಮವಾಗಿ ನಡೆದು ಹೋಗುವಾಗ ಸುತ್ತಲ ನಿಸರ್ಗದ ಸೊಬಗನ್ನು ಸವಿಯುತ್ತ ನಲಿಯುತ್ತೇವೆ. ಆದರೆ ಗಲಿಬಿಲಿಗೊಂಡು ತ್ವರೆಯಲ್ಲಿ ಓಡುತ್ತಿದ್ದಾಗ ನಮಗೆ ಸುತ್ತಲ ಸೌಂದರ್ಯ ಕಂಡರೂ ಕಾಣದು, ಆಸ್ವಾದ್ಯವಾಗದು. ಅಂತೆಯೇ ಮನಸ್ಸು ತಿಳಿಯೂ ವಿಶ್ರಾಂತವೂ ಆಗಿರುವಾಗ ನಮಗೆ ನಮ್ಮ ನಿಲುವಿನ ಬಗ್ಗೆ ಹಾಗೂ ಸುತ್ತಮುತ್ತಲ ಜನರ ಬಗ್ಗೆ ಹಾಗೂ ಜೀವನದ ಎಲ್ಲ ವಿವರಗಳ ಬಗ್ಗೆ ಸ್ಪಷ್ಟತೆ ಇರುತ್ತದೆ, ಸರಿಯಾದ ಸಂವೇದನೆ ಇರುತ್ತದೆ. ಆದರೆ ಆತಂಕವೆಂಬ ಗಾಳಿಗೆ ಸಿಲುಕಿದಾಗ ಅದೇ ಮನಸ್ಸು ದಿಕ್ಕುತಪ್ಪಿ ಹೊಯ್ದಾಡುತ್ತದೆ, ಧೂಳೆದ್ದಂತಾಗಿ ಅರಿವು ಅಸ್ಪಷ್ಟವೂ ಅಸ್ತವ್ಯಸ್ತವೂ ಆಗುತ್ತದೆ. ಹಾಗಾಗಿ ಆಲೋಚನೆ ಹಾಗೂ ಕಾರ್ಯವಿಧಾನಗಳು ವಿಕೃತಗೊಂಡು ಹಾಳಾಗುತ್ತವೆ. ಆತಂಕ ಎನ್ನುವುದು ಜೀವನವೆಂಬ ಆಟದಲ್ಲಿ ಹಸ್ತಕ್ಷೇಪ ಮಾಡುವ ಬಹು ದೊಡ್ಡ spoilsport ಎನ್ನಬಹುದು. ಅದಕ್ಕೆ ನಾವು ಆಸ್ಪದ ಕೊಟ್ಟಾಗಲೆಲ್ಲ ಅದು ಅನಗತ್ಯ ಭಯ, ಅಸುರಕ್ಷೆ ಹಾಗೂ ಅವಿಶ್ವಾಸಗಳನ್ನು ಮೂಡಿಸುತ್ತದೆ. ಜೀವನದ ಆಗುಹೋಗುಗಳಿಂದ ನಾವು ಕಲಿಯುತ್ತ ಶಕ್ತರಾಗುವ ಬದಲು, ಅಂಜಿ ಹಿಮ್ಮೆಟ್ಟುವಂತೆ ಮಾಡುತ್ತದೆ. ಪರಿಸ್ಥಿತಿಗೆ ತಕ್ಕಂತೆ ನಾವು ಎದ್ದು ನಿಲ್ಲುವಂತೆ ಮಾಡುವ ಬದಲು ನಮ್ಮ ಕಷ್ಟ ಸೋಲುಗಳಿಗಾಗಿ ಅವರಿವರನ್ನು ಶಪಿಸುತ್ತ, ಅದೃಷ್ಟವನ್ನು ಹಳಿಯುತ್ತ, ಜೀವನವನ್ನೇ ಭಯಂಕರ ಎಂದು ಭ್ರಮಿಸುತ್ತ ನರಳುವಂತಹ ಗೋಳಿನ ಕೂಪಕ್ಕೆ ನಮ್ಮನ್ನು ತಳ್ಳುತ್ತದೆ.
ಆತಂಕ ಎಲ್ಲರ ಜೀವನವನ್ನು ಹಾಳುಮಾಡುತ್ತದೆ. ಆದರೆ ಅದು ಸ್ತ್ರೀಯ ಜೀವನವನ್ನು ಪ್ರವೇಶಿದರಂತೂ ತೊಂದರೆ ಇನ್ನೂ ಹೆಚ್ಚು. ಏಕೆಂದರೆ ಅವಳು ಬಹುಮುಖವಾದ ದಾಯಿತ್ವಗಳನ್ನುಳ್ಳವಳು. ಅವರ ಜೀವನ ಪರಿವಾರ, ಸಮಾಜ ಮತ್ತು ವೈಯಕ್ತಿಕ ಸಾಧನೆಗಳಲ್ಲಿ ಹಂಚಿಹೋಗಿರುತ್ತದೆ. ಹಾಗಾಗಿ ಅವಳಿಗೆ ಪುರುಷನಿಗಿಂತ ಹೆಚ್ಚು ಆತ್ಮಶಕ್ತಿ ಹಾಗೂ ಆತ್ಮಸ್ಥೈರ್ಯಗಳು ಅಗತ್ಯ. ಅವಳ ಸ್ನೇಹ, ಸೌಹಾರ್ದತೆ, ಸ್ಥೈರ್ಯ ಹಾಗೂ ಕೌಶಲಗಳು ಅವಳಿಗಷ್ಟೇ ಅಲ್ಲ, ಮನೆಮಂದಿಗೂ ಹಾಗೂ ಅವಳು ಕೆಲಸ ಮಾಡುವ ಪರಿಸರಕ್ಕೂ ಸುಧೆಯೂಡುವ ಶಕ್ತಿಯಾಗಿರುತ್ತದೆ. ಹಾಗಾಗಿ ಅವಳು ಆತಂಕ, ನಿರಾಶೆ ದುಃಖಗಳಲ್ಲಿ ಮುಳುಗಿದರೆ, ಪರಿಸರವೇ ಕಳೆಗುಂದುತ್ತದೆ. ಅವಳು ಅಳುಕದೆ, ನಲುಗದೆ, ಪುಟಿಯುವ ಚೆಂಡಿನಂತೆ ಉತ್ಸಾಹಶಾಲಿನಿಯಾಗಿದ್ದರೆ ಮನೆತನ, ಪರಿಸರ ಹಾಗೂ ಅವಳ ಜೀವನವೂ ಶೋಭಾಯಮಾನವಾಗುತ್ತದೆ. 'ಸ್ತ್ರೀಯು ನಗುತಿದ್ದಲ್ಲಿ ದೇವತೆಗಳೇ ಬಂದು ನೆಲೆಸುತ್ತಾರೆ' ಎನ್ನುವ ಸನಾತನವಾಣಿಯು ಇಲ್ಲಿ ಸ್ಮರಣೀಯ!
ಹಾಗಾಗಿ, ಅಮ್ಮಂದಿರೆ, ಅಕ್ಕತಂಗಿಯರೇ, ಸ್ತ್ರೀತ್ವದ ಸಕಲ ಸತ್ವಗಳನ್ನು ಅಭಿವ್ಯಂಜಿಸುತ್ತ ಅರಳೋಣ, ಬೆಳೆಯೋಣ, ಬೆಳಗೋಣ ಬನ್ನಿ. ನಿಟ್ಟಿನಲ್ಲಿ ನಾವು ಮೊದಲು ಆತಂಕದ ಭಾವವನ್ನು ಬಿಟ್ಟು ಆತ್ಮಶಕ್ತಿಸಂಪನ್ನ ಬದುಕನ್ನು ಕಟ್ಟಿಕೊಳ್ಳೋಣ!

ಡಾ ಆರತಿ ವಿ ಬಿ
arathi.vbr@gmail.com

Publsihed in Udayavani newspaper, 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ